ಅಕ್ರಮ ಬಯಲಿಗೆ

ಅಕ್ರಮ ಬಯಲಿಗೆ

ರಾಜ್ಯದ ಎಲ್ಲ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗಳಲ್ಲಿರುವ ಬೆರಳಚ್ಚುಗಾರರ (ಡಾಟಾ ಎಂಟ್ರಿ ಅಸಿಸ್ಟೆಂಟ್) ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಇಲ್ಲದ ಹೊರಗುತ್ತಿಗೆ ನೌಕರರ ನೇಮಕಾತಿ ಕುರಿತಂತೆ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಈಗ ಎಚ್ಚೆತ್ತುಕೊಂಡಿದೆ. ಈ ಹುದ್ದೆಗಳಿಗೆ ನಿಯಮಾನುಸಾರ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿ ಅರ್ಹ ಅಭ್ಯರ್ಥಿಗಳನ್ನು ನೇಮಕಗೊಳಿಸಲು ಆದೇಶಿಸುವ ಮೂಲಕ ತಡವಾಗಿಯಾದರೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಪ್ರತಿ ಜಿಲ್ಲೆಯಲ್ಲಿ ಎರಡರಂತೆ ೫೦ಕ್ಕೂ ಅಧಿಕ ಬೆರಳಚ್ಚುಗಾರರ ಹುದ್ದೆಗಳಿಗೆ ಹೊರಗುತ್ತಿಗೆ ನೌಕರರನ್ನು ರಾಜ್ಯಾದ್ಯಂತ ನೇಮಕ ಮಾಡಿಕೊಳ್ಳಲಾಗಿತ್ತು. ಟೈಪಿಸ್ಟ್ ಹುದ್ದೆಗಳ ನೇಮಕಾತಿಗೆ ಕನ್ನಡ, ಇಂಗ್ಲೀಷ್ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಪಾಸಾಗಿರಬೇಕೆಂಬ ನಿಯಮವಿದೆ. ಆದರೆ, ಟೈಪಿಸ್ಟ್ ಹುದ್ದೆಗಳಿಗೆ ನೇಮಕವಾದ ಬಹುತೇಕರು ಈ ಪರೀಕ್ಷೆಗಳನ್ನು ಪಾಸು ಮಾಡಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಹಣ ಪಡೆದು ಅನರ್ಹರಿಗೆ ಕೆಲಸ ಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ಒತ್ತಾಯಿಸಲಾಗಿತ್ತು. ಅಕ್ರಮ ನೇಮಕಾತಿಯಿಂದ ವಿದ್ಯಾರ್ಹತೆ ಹೊಂದಿರುವ ಅರ್ಹರಿಗೆ ಉದ್ಯೋಗ ಕೈತಪ್ಪಿದೆ. ಆದ್ದರಿಂದ ರಾಜ್ಯ ಪರೀಕ್ಷಾ ಮಂಡಳಿಯಿಂದ ಮತ್ತೆ ಪರೀಕ್ಷೆ ನಡೆಸಬೇಕು. ನೋಂದಾಯಿತ ವಾಣಿಜ್ಯ ವಿದ್ಯಾಶಾಲೆಗಳಲ್ಲಿ ಕಲಿತು ಅಂಕಪಟ್ಟಿ ಪಡೆದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಬೇಕು ಎಂಬ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಟೈಪಿಂಗ್ ಸಂಸ್ಥೆಗಳಿಂದ ದೂರುಗಳು ಸಲ್ಲಿಕೆಯಾಗಿದ್ದವು. ಈ ಆರೋಪಗಳ ಸತ್ಯಾಸತ್ಯತೆ ತಿಳಿಯಲು ದಾಖಲಾತಿಗಳ ಪರಿಶೀಲನೆ ಕಾರ್ಯವನ್ನು ಇಲಾಖೆ ಕೈಗೊಂಡಿತ್ತು. ನೇಮಕಗೊಂಡಿರುವ ಬಹುತೇಕರಿಗೆ ಶೈಕ್ಷಣಿಕ ಅರ್ಹತೆ ಇಲ್ಲವೆಂಬ ಸಂಗತಿ ಈ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿತು. ಈ ಹಿನ್ನಲೆಯಲ್ಲಿ ಈಗ ಈ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಆಹ್ವಾನಿಸಲು ನಿರ್ಧಾರ ಕೈಗೊಳ್ಳಲಾಗಿದೆ. 

‘ಹೊರಗುತ್ತಿಗೆ ನೇಮಕ ಅಕ್ರಮ' ಎಂಬ ಶೀರ್ಷಿಕೆಯಡಿ ಕಳೆದ ಮಾರ್ಚ್ ೨೭ರಂದು ‘ವಿಜಯವಾಣಿ' ಪ್ರಕಟಿಸಿದ ವಿಶೇಷ ವರದಿಯನ್ನು ಗಂಭೀರವಾಗಿ ಪರಿಗಣಿಸಿ ದಾಖಲಾತಿ ಪರಿಶೀಲಿಸಿದ್ದರಿಂದ ಅಕ್ರಮ ವಿಚಾರ ಬಹಿರಂಗಕ್ಕೆ ಬಂದಿದೆ ಎಂಬುದು ಈಗ ಸರ್ವವೇದ್ಯ. ನೇಮಕಾತಿಯಲ್ಲಿನ ಅನ್ಯಾಯವನ್ನು ಬೆಳಕಿಗೆ ತಂದ ಪತ್ರಿಕೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಹಾಗೂ ಹುದ್ದೆಯ ಅರ್ಹ ಆಕಾಂಕ್ಷಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಟೈಪಿಸ್ಟ್ ಹುದ್ದೆಗಳಿಗೆ ನಿಯಮಾನುಸಾರ ಅರ್ಜಿ ಆಹ್ವಾನಿಸಿ, ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಹೊರಗುತ್ತಿಗೆ ನೌಕರರನ್ನು ಪೂರೈಸುವ ಸ್ಟಾಟೆಜಿಕ್ ಔಟ್ ಸೋರ್ಸಿಂಗ್ ಸರ್ವೀಸ್ ಪ್ರೈವೇಟ್ ಲಿಮಿಡೆಡ್ ಗೆ ಈಗ ನಿರ್ದೇಶನಾಲಯದ ನಿರ್ದೇಶಕ ಎನ್. ಮಾಧುರಾವ್ ಆದೇಶಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ನೇಮಕಾತಿ ಅನ್ಯಾಯ ಸರಿಪಡಿಸಲು ಮತ್ತೆ ಅರ್ಜಿ ಕರೆದರೆ ಸಾಲದು. ಏಕೆಂದರೆ, ಈ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿ ನೇಮಕಾತಿ ಮಾಡಿರುವುದು ಈಗ ಸಾಬೀತಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿರುವ ಕಂಪೆನಿಯಿಂದ ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂಬ ಆರೋಪ ಕೂಡ ಇದೆ. ಹೀಗಾಗಿ, ಈ ಆಪಾದನೆ ಕುರಿತು ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆಯನ್ನು ಸರ್ಕಾರ ಕೈಗೊಳ್ಳುವ ಮೂಲಕ ಭ್ರಷ್ಟರಿಗೆ ಶಿಕ್ಷೆ ನೀಡುವ ಅಗತ್ಯವಿದೆ. ಹೀಗಾದರೆ ಮಾತ್ರ ಶಿಕ್ಷೆಯ ಭೀತಿಯಿಂದ ಇಂತಹ ಭ್ರಷ್ಟಾಚಾರವನ್ನು ಭವಿಷ್ಯದಲ್ಲಿ ನಿಗ್ರಹಿಸಲು ಸಾಧ್ಯ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೯-೦೭-೨೦೨೩ 

 ಚಿತ್ರ ಕೃಪೆ: ಇಂಟರ್ನೆಟ್ ತಾಣ