ಅಕ್ರಮ - ಭ್ರಷ್ಟ ಹಣದ ಭವಿಷ್ಯ.. ಭಾಗ - 2

ಅಕ್ರಮ - ಭ್ರಷ್ಟ ಹಣದ ಭವಿಷ್ಯ.. ಭಾಗ - 2

(ನಿನ್ನೆಯ ಲೇಖನದಿಂದ ಮುಂದುವರಿದಿದೆ )

ಕಪ್ಪುಹಣ ಮತ್ತು ಭ್ರಷ್ಟ ಹಣ ಎಂದು ಭಾವಿಸಲಾದ ಲೆಕ್ಕಕ್ಕೇ ಸಿಗದ ಹಣದ ಮೇಲೆ ದಾಳಿಮಾಡಿದಾಗ ಸಿಗುವ ಹಣ ಒಡವೆ ಆಸ್ತಿಗಳ ಗತಿ ಏನಾಗುತ್ತದೆ, ಸರ್ಕಾರಕ್ಕೆ ನೇರ ಸೇರುತ್ತದೆಯೇ, ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆಯೇ ಎಂಬ ಅನುಮಾನ ಬಹುತೇಕ ಜನಸಾಮಾನ್ಯರಿಗೆ ಇದೆ. ಕಾನೂನು ಏನು ಹೇಳುತ್ತದೆಯೋ ಅದು ಬೇರೆ. ಆದರೆ ವಾಸ್ತವದಲ್ಲಿ ಶೇಕಡ  80% ಆಗಬಹುದಾದ ವಾಸ್ತವ ರೀತಿನೀತಿಗಳು ಹೀಗೇ ಇರುತ್ತದೆ.

ಉದಾಹರಣೆಗೆ, ಒಬ್ಬರ ಮೇಲೆ ದಾಳಿ ಮಾಡಿದಾಗ 20 ಕೋಟಿ ಹಣ,10 ಕೆ ಜಿ ಚಿನ್ನ, 30 KG ಬೆಳ್ಳಿ, ಒಂದಷ್ಟು ಜಮೀನಿನ ದಾಖಲೆ ಪತ್ರಗಳು ಸಿಗುತ್ತವೆ ಎಂದಿಟ್ಟುಕೊಳ್ಳಿ. ಆಗ  ಅಧಿಕಾರಿಗಳು ಅದನ್ನು ಸಂಪೂರ್ಣ ವಶಪಡಿಸಿಕೊಳ್ಳುತ್ತಾರೆ. ಆ ಸನ್ನಿವೇಶದಲ್ಲಿ  ವ್ಯಕ್ತಿಯ ಬಂಧನ ಆಗಬಹುದು ಅಥವಾ ಆಗದೆಯೂ ಇರಬಹುದು.  ಸ್ವಲ್ಪ ದಿನಗಳ ನಂತರ ಅವರಿಗೆ ನಿಮ್ಮ ಬಳಿ ಇದ್ದ ಅಷ್ಟೂ ವಸ್ತುಗಳಿಗೆ ವಿವರಣೆ ಸಹಿತ ದಾಖಲೆ ಒದಗಿಸಿ ಎಂದು ನೋಟೀಸ್ ಕೊಡುತ್ತಾರೆ. ಆಗ ಆತ ಮಾಡುವ ಮೊದಲ ಕೆಲಸ ಒಬ್ಬ ಒಳ್ಳೆಯ CA ( Chartered accountant - Auditor  ) ಗೆ ಈ ನೋಟಿಸ್ ಪ್ರತಿ ಕೊಟ್ಡು ದಯವಿಟ್ಡು ಈ ಸಂಕಷ್ಟದಿಂದ ಹೇಗಾದರೂ  ಪಾರು ಮಾಡಿ.ನಿಮಗೆ ದೊಡ್ಡ ಮೊತ್ತದ Fees ಕೊಡುತ್ತೇನೆ ಎಂದು ದಂಬಾಲು ಬೀಳುತ್ತಾನೆ. ಆಗ CA ತಕ್ಷಣಕ್ಕೆ ನೋಟಿಸ್ ಕೂಲಂಕುಶವಾಗಿ ಪರಶೀಲಿಸಿ ಅಸ್ಪಷ್ಟ - ಗೊಂದಲದ - ಚಾಣಾಕ್ಷ ಉತ್ತರ ನೀಡಿ ದಾಖಲೆ ಒದಗಿಸಲು ಸಮಯಾವಕಾಶ ಪಡೆಯುತ್ತಾರೆ. ಆ ನೋಟಿಸಿನಲ್ಲಿ 100/150 ಇತರ ಪ್ರಶ್ನೆಗಳೂ ಇರುತ್ತವೆ.

ಒಂದು ವೇಳೆ ಇತರ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ಬಂಧನವಾಗಿದ್ದರೆ ಒಬ್ಬ ಪ್ರಖ್ಯಾತ ಕ್ರಿಮಿನಲ್ ವಕೀಲರನ್ನು ನೇಮಿಸಿಕೊಂಡು ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಇಲ್ಲಿಂದ ಆ ಭ್ರಷ್ಟನ ನಿಜವಾದ ದಂಡಯಾತ್ರೆ ಪ್ರಾರಂಭವಾಗುತ್ತದೆ. INCOME TAX DEPARTMENT ಅಥವಾ ತನಿಖಾ  ತಂಡದಲ್ಲಿ ಇರಬಹುದಾದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾರು ಯಾರು, ಅವರ ಹೆಸರು - ಹುದ್ದೆ - ಪೋನ್ ನಂಬರ್ ಮತ್ತು ಯಾರಿಗೆ ಯಾರಿಂದ ಹೇಳಿಸಬೇಕು ಎಂಬ ಮಾಹಿತಿ ಲೆಕ್ಕಪರಿಶೋಧಕರಿಂದ ಪಡೆಯುತ್ತಾನೆ. ನಂತರ ಅವರನ್ನು ಸಂಪರ್ಕಿಸುವ Link ಗಳಿಗಾಗಿ ಬೇಟೆ ಪ್ರಾರಂಭವಾಗುತ್ತದೆ.                                

ಅಧಿಕಾರಿ ನಮ್ಮ ಪರಿಚಿತರ ಸಂಬಂಧಿಯೇ, ನಮ್ಮ ಜಾತಿಯವನೇ, ನಮ್ಮ ಧರ್ಮದವನೇ, ನಮ್ಮ ಭಾಷೆಯವನೇ, ನಮ್ಮ ಊರಿನ ಕಡೆಯವನೇ ಅಥವಾ ಇನ್ಯಾರಾದರು ರಾಜಕಾರಣಿಗಳ ಜೊತೆ ಸಂಪರ್ಕದಲ್ಲಿ ಇದ್ದಾನೆಯೇ ಇತ್ಯಾದಿ ಇತ್ಯಾದಿ ಕುಲಗೋತ್ರಗಳನ್ನು ಜಾಲಾಡುತ್ತಾನೆ. ಈ ಮಧ್ಯೆ ನೋಟಿಸ್ ನೀಡಿರುವ ಮತ್ತು ಆತನ ಮೇಲಾಧಿಕಾರಿ ಕಡು ಭ್ರಷ್ಟನೋ - ಸ್ವಲ್ಪ ಭ್ರಷ್ಟನೋ ಅಥವಾ ಸ್ಟಿಕ್ಟ್ ಆಗಿರುವ ಪ್ರಾಮಾಣಿಕನೋ, ಹೊಸ ಅಧಿಕಾರಿಯೋ ಅಥವಾ ಹಳಬನೋ  ಎಂದೂ CA ಮುಖಾಂತರ ಪತ್ತೆ ಹಚ್ಚಲಾಗುತ್ತದೆ.

ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಅಧಿಕಾರಿಯೇ ಏನಾದರೂ ಒಂದು ಉಪಾಯ ಸೂಚಿಸಿ ಸಣ್ಣ ಪ್ರಮಾಣದ ದಂಡ ಹಾಕಿ ಒಂದಷ್ಟು ಲಂಚದ ಹಣ ಪಡೆದು ಕೇಸ್ ಮುಗಿಸುವ ಸಾಧ್ಯತೆ ಇದೆಯೇ ಎಂದೂ ಪ್ರಯತ್ನಿಸಲಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಕಾಲ ಕೇಸನ್ನು ನಾನಾ ಕಾರಣಗಳಿಂದ ಮುಂದೂಡಲು ಸತತವಾಗಿ ಪ್ರಯತ್ನಿಸಲಾಗುತ್ತದೆ.                       

ಸಾಮಾನ್ಯವಾಗಿ ಈ ಹಂತದಲ್ಲೇ ಬಹಳಷ್ಟು ಕೇಸುಗಳು Seattle ಆಗುತ್ತವೆ. ಸ್ವಲ್ಪ ಹೆಚ್ಚು COMPLICATED ಇದ್ದಲ್ಲಿ ಎರಡು ಮೂರನೆಯ ಹಂತ ಮತ್ತು ಕೊನೆಗೆ TRIBUNAL ವರೆಗೂ ಸಾಗುತ್ತದೆ. ಅಲ್ಲಿಂದ ಮತ್ತೆ ಸಂಬಂಧ ಪಟ್ಟ ಇಲಾಖೆಗೆ Refer ಆಗುತ್ತದೆ. ಈ ಹಂತದಲ್ಲಿ ಬಹುತೇಕ ಮುಗಿಯುತ್ತದೆ. ಅಲ್ಲೂ ತೊಂದರೆಯಾದರೆ ವಕೀಲರ ನೆರವಿನಿಂದ ಹೈಕೋರ್ಟು, ಸುಪ್ರೀ೦ಕೋರ್ಟ್ ವರೆಗೂ ಎಳೆದಾಡಲಾಗುತ್ತದೆ. ಅಷ್ಟೊತ್ತಿಗಾಗಲೇ 5/6/7 ವರ್ಷ ಕಳೆದಿರುತ್ತದೆ. ಅಲ್ಲಿ ಇವನಿಗೆ ಶಿಕ್ಷೆಯಾಗುವ ಸಾಧ್ಯತೆ ಬಹಳ ಕಡಿಮೆ. ಈವರೆಗೆ ಅಂತಹ ಹೆಚ್ಚಿನ ಉದಾಹರಣೆಗಳೇ ಇಲ್ಲ. ನಿನ್ನೆಯ ಲೇಖನ ಓದಿದ ಗೆಳೆಯರು ನೀಡಿದ ಮಾಹಿತಿಯ ಪ್ರಕಾರ ಇಂತಹ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಆಗಿರುವ ನ್ಯಾಯಾಲಯದ ತೀರ್ಪಿನ ಶಿಕ್ಷೆಯ ಪ್ರಮಾಣ ಕೇವಲ ಶೇಕಡಾ 0.5% ರಷ್ಟು ಮಾತ್ರ.                         

ಇದು GROUND REALITY. ಎಲ್ಲಾ ಘಟನೆಗಳು ಇದೇ ರೂಪದಲ್ಲಿ ಇರುತ್ತವೆ ಎಂದೇನೂ ಇಲ್ಲ. ಕೆಲವೊಂದು ವ್ಯತ್ಯಾಸಗಳು ಇರಬಹುದು. ಆದರೆ ಸಾರಾಂಶ ಮತ್ತು ಫಲಿತಾಂಶ ಹೀಗೆಯೇ ಇರುತ್ತದೆ. ದಾಳಿಯಾದ ತಕ್ಷಣ ಅವನ ಕಥೆ ಮುಗಿಯಿತು, ಆತ ಬಲೆಗೆ ಬಿದ್ದ ಆ ಹಣ ನಮಗೇ ಸೇರಿತು ಎಂದು ಸಾರ್ವಜನಿಕರು ಸಂಭ್ರಮಿಸದಿರಿ. ಈ ವ್ಯವಸ್ಥೆ ಅಷ್ಟು ಸುಲಭವಾಗಿಲ್ಲ. ಭ್ರಷ್ಟಗೊಂಡ ಮನಸುಗಳ ಮಧ್ಯೆ ಕಾನೂನು ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಭ್ರಷ್ಟಾಚಾರಿಗಳಿಗೆ  ಈ ವ್ಯವಸ್ಥೆಯಲ್ಲಿ ರಾಜಕಾರಣಿಗಳು, ಕೋಟ್ಯಾಧಿಪತಿಯಾಗಳ ಲಿಂಕ್ ಗಳು, ಅವರ Contacts ಗಳು, ಖತರನಾಕ್ ಐಡಿಯಾಗಳು, ಕಬಂಧ ಬಾಹುಗಳು, ಪ್ರಖ್ಯಾತ CA/LAWYER ಗಳ ಚಾಣಾಕ್ಷ ನಡೆಗಳು, ಕಾನೂನಿನ Weakness ಗಳ ಬೃಹತ್ ಜಾಲವೇ ಇದೆ.

ಈ ವಾಸ್ತವ ನಿಮ್ಮ ಮುಂದಿಡುತ್ತಿದ್ದೇನೆ. ಇಡೀ ವ್ಯವಸ್ಥೆಯನ್ನು - ಜನಗಳ ಮನಸ್ಥಿತಿಯನ್ನು - ಅವರ ಭಾವನೆಗಳನ್ನು - ಚಿಂತನೆಗಳನ್ನು - ಸಮಾಜವನ್ನು ಒಟ್ಟಾರೆಯಾಗಿ ಎಲ್ಲಾ ಕಡೆಯಿಂದಲೂ ಪರಿವರ್ತಿಸುವ ಕೆಲಸವಾಗದೆ ಕೇವಲ ಕಾನೂನುಗಳಿಂದ ಬದಲಾವಣೆ ಸಾಧ್ಯವಿಲ್ಲ. ಈಗ ಯೋಚಿಸುವ ಸರದಿ ನಮ್ಮದು. ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸುವ ಹೊಣೆ ಎಲ್ಲರದು. ಆ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ…

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ