ಅಕ್ರಮ ವಸತಿ ಬಡಾವಣೆಗಳಿಗೆ ಇನ್ನಾದರೂ ಕಡಿವಾಣ ಬೀಳಲಿ

ಅಕ್ರಮ ವಸತಿ ಬಡಾವಣೆಗಳಿಗೆ ಇನ್ನಾದರೂ ಕಡಿವಾಣ ಬೀಳಲಿ

ಬೆಂಗಳೂರಿನಲ್ಲಿರುವ ಬಿ ಖಾತಾ ಮನೆ ಅಥವಾ ನಿವೇಶನಗಳಿಗೆ ಎ ಖಾತಾ ಅಥವಾ ಕಾನೂನುಬದ್ಧ ಖಾತಾ ನೀಡುವ ಸಂಬಂಧ ಸಚಿವ ಸಂಪುಟ ಸಭೆ ತೆಗೆದುಕೊಂಡಿರುವ ನಿರ್ಧಾರ ರಾಜಧಾನಿಯಲ್ಲಿರುವ ಆರು ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ನಿರಾಳ ಭಾವವನ್ನು ಒದಗಿಸಿದೆ. ಆ ಖಾತವನ್ನು ಯಾವ ರೀತಿ ಪಡೆಯಬೇಕು ಎಂಬ ಬಗ್ಗೆ ಸದ್ಯದಲ್ಲೇ ನಿಯಮಾವಳಿ ಹಾಗೂ ಮೊತ್ತ ಪ್ರಕಟವಾಗಲಿದೆ ಎಂದು ಸರ್ಕಾರವೇನೋ ತಿಳಿಸಿದೆ. ಬೆಂಗಳೂರು ನಗರಪಾಲಿಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂದು ವಿಸ್ತಾರವಾದ ಬಳಿಕ ೨೦೦೯ರಿಂದ ಎ ಖಾತಾ ಹಾಗೂ ಬಿ ಖಾತಾ ಎಂಬ ವರ್ಗೀಕರಣ ಮಾಡಿಕೊಂಡು ಬರಲಾಗಿದೆ. ಇದರ ತಿರುಳು ಇಷ್ಟೇ. ಯೋಜನಾಬದ್ಧವಗಿ ನಿರ್ಮಾಣವಾಗಿಲ್ಲದ ಆಸ್ತಿಗಳಿಂದ ತೆರಿಗೆ ಸಂಗ್ರಹಿಸಿ ಸ್ಥಳೀಯಾಡಳಿತಗಳ ಆರ್ಥಿಕ ಬಲ ಹೆಚ್ಚಿಸುವ ಉದ್ದೇಶದಿಂದ ಪ್ರತ್ಯೇಕ ಪುಸ್ತಿಕೆಗಳಲ್ಲಿ ಆ ಆಸ್ತಿಗಳನ್ನು ದಾಖಲು ಮಾಡಿಕೊಂಡು ಕರ ಸಂಗ್ರಹಿಸಲು ಅಧಿಕಾರಿಗಳು ಕಂಡುಕೊಂಡ ಮಾರ್ಗವೇ ಬಿ ಖಾತಾ. ಅದು ಈಗ ಅಕ್ರಮ-ಸಕ್ರಮವಾಗುವಂತಹ ಹಂತಕ್ಕೆ ಬಂದಿದೆ.

ಆದರೆ ಈ ಬಿ ಖಾತಾ ಆಸ್ತಿಗಳು ತಲೆ ಎತ್ತಲು ಯಾರು ಕಾರಣ? ಯಾವುದೇ ನಗರ ಯೋಜನಾಬದ್ಧವಾಗಿ ಬೆಳೆಯಬೇಕು ಎಂದಾದರೆ, ಅಲ್ಲಿನ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಪಾಲನೆ ಮಾಡದ ಆಸ್ತಿ ಮಾಲೀಕರಿಗೆ ಆಗಲೇ ಬಿಸಿ ಮುಟ್ಟಿಸಿ, ಅವರು ನಿಯಮ ಪಾಲಿಸುವಂತೆ ನೋಡಿಕೊಳ್ಳಬೇಕಾದದ್ದು ಅಧಿಕಾರಿಗಳ ಆದ್ಯ ಕರ್ತವ್ಯ. ಆದರೆ ಕೆಲವು ಭ್ರಷ್ಟ ಅಧಿಕಾರಿಗಳಿಂದಾಗಿ ಈ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬುದು ಸರಕಾರಕ್ಕೂ ಸ್ಪಷ್ಟವಾಗಿ ಗೊತ್ತಿದೆ. ಅಧಿಕಾರಿಗಳ ಸಹಕಾರದಲ್ಲಿ ಕೆಲವು ಆಸ್ತಿ ಮಾಲೀಕರು ಮಾಡುವ ತಪ್ಪನ್ನೇ ಸಕ್ರಮಗೊಳಿಸುವ  ಈ ರೀತಿಯ ಪರಿಪಾಠ ನಿಯಮ ಉಲ್ಲಂಘನೆ ಮಾಡುವವರಿಗೆ ಮತ್ತಷ್ಟು ಉತ್ತೇಜನವನ್ನೇ ನೀಡುತ್ತದೆ. ಈಗ ಸರ್ಕಾರ ಬಿ ಖಾತಾ ನೀಡುವ ಮೂಲಕ ಆಸ್ತಿ ಮಾಲೀಕರನ್ನು ಸಕ್ರಮ ಮಾಡಲೇನೋ ಹೊರಟಿದೆ. ಆದರೆ ಇದೇ ಕೊನೆಯಾಗಬೇಕು. ಇನ್ನು ಮುಂದೆ ಅಕ್ರಮ ಬಡಾವಣೆ, ಮನೆಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು. ತಪ್ಪು ಮಾಡುವ ಆಸ್ತಿ ಮಾಲೀಕರು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವಾಗಬೇಕು. ಇಲ್ಲವಾದರೆ ನಗರಗಳು ಇಷ್ಟಬಂದಂತೆ ಬೆಳೆದು ಅಲ್ಲಿ ನೆಲೆಸುವ ನಿವಾಸಿಗಳ ಜತೆಗೆ ಸರ್ಕಾರಕ್ಕೂ ಸಮಸ್ಯೆ ಸೃಷ್ಟಿಯಾಗುತ್ತದೆ. ಇಂತಹ ಬಡಾವಣೆಗಳಿಗೆ ಮುಂದೊಂದು ದಿನ ಸರ್ಕಾರವೇ ಮೂಲ ಸೌಕರ್ಯ ಕಲ್ಪಿಸಬೇಕಲ್ಲವೇ?

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೯-೦೭-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ