ಅಕ್ಷಯ ತೃತೀಯದ ಶುಭದಿನದಂದು…

‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು. ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು.
ವೈಶಾಖೇ ಶುಕ್ಲಪಕ್ಷೇತು ತೃತೀಯಾ ರೋಹಿಣೀಯುತಾ/
ವಿನಾಪಿ ರೋಹಿಣೀ ಯೋಗಾತ್ ಪುಣ್ಯಕೋಟಿಪ್ರದಾ ಸದಾ//
ವೈಶಾಖ ಮಾಸದ, ಶುಕ್ಲಪಕ್ಷದ ತದಿಗೆ ದಿನವೇ ‘ಅಕ್ಷಯ ತೃತೀಯ’. ಈ ದಿನ ಯಾವ ಕೆಲಸಕ್ಕೆ ಕೈಹಾಕಿದರೂ, ಪ್ರಾರಂಭಿಸಿದರೂ ಅದು ಅಕ್ಷಯವಾಗುತ್ತದೆ, ಯಶಸ್ವಿಯಾಗಿ ನೆರವೇರುವುದು ಎಂಬ ನಂಬಿಕೆ. ಮಂಗಳಕರವಾದ ಕಾರ್ಯಕ್ಕೆ ಪ್ರಶಸ್ತವಾದ ದಿನ. ಇಷ್ಟಾರ್ಥ ಈಡೇರುತ್ತದೆ ಎನ್ನುತ್ತಾರೆ ಹಿರಿಯರು. ಮನುಜ ಕುಲಕ್ಕೆ ಅತ್ಯಂತ ಶುಭಪ್ರದವಾದ ದಿನ. ಕೃತಯುಗದ ಆರಂಭ ದಿನ ಅಂತಲೂ ಕೇಳಿದ್ದೇವೆ.ಹಲವು ಮಹಾಪುರುಷರು ಉದಿಸಿದ ದಿನವೂ ಆಗಿದೆಯಂತೆ.'ರಾಜನ್ಯರಿಪು ಪರಶುಧರನ ಜನನಿಯ ನಾಡು' ಎಂಬಂತೆ ನಮ್ಮ ಕನ್ನಡನಾಡಿನ ಪರಶುಧರ "ಪರಶುರಾಮ"ರ ಜನ್ಮ ದಿನವಂತೆ.ಹಿಂದೂ ಧರ್ಮವನ್ನು ಬಾನೆತ್ತರಕ್ಕೇರಿಸಿ ಹಾರಿಸಿದ, ಛತ್ರಪತಿ ಶಿವಾಜಿ ಮಹಾರಾಜರು ಉದಿಸಿದ ದಿನ.
'ಮಹಾಭಾರತ 'ರಚಿಸಲು ಪ್ರಾರಂಭ ಮಾಡಿದ ದಿನ. ಇದೇ ದಿನ 'ಲೋಕಮಾತೆ ಸೀತೆ 'ಅಗ್ನಿಪರೀಕ್ಷೆಗೆ ಒಳಗಾಗಿ ಪರಿಶುದ್ಧತೆಯನ್ನು ಪ್ರಕಟಪಡಿಸಿ, ಪ್ರಭು ಶ್ರೀ ರಾಮಚಂದ್ರ ಮರಳಿ ಸೀತಾಮಾತೆಯನ್ನು ಸ್ವೀಕರಿಸಿದ ದಿನವೆಂದು ರಾಮಾಯಣದಲ್ಲಿ ಓದಿದ್ದೇವೆ. ಬಲರಾಮ ಜಯಂತಿ ಇದೇ ದಿನವಂತೆ. ಮಹಾಭಾರತದ ಒಂದು ಪ್ರಸಂಗದಲ್ಲಿ ಕೌರವನ ಆಣತಿಯಂತೆ ತನ್ನ ಶಿಷ್ಯರೊಡಗೂಡಿ ಬಂದ ದೂರ್ವಾಸರಿಗೆ, ಧರ್ಮದ ಸಾಕಾರ ಮೂರ್ತಿ ಧರ್ಮರಾಯನು ಸಂಕಟದಿಂದ ತತ್ತರಿಸಿದಾಗ, ದ್ರೌಪದಿಯ ಮನೋರಥದ ಅರಿವನ್ನು ಅರ್ಥೈಸಿದ ಭಗವಾನ್ ಶ್ರೀ ಕೃಷ್ಣ ಒಲಿದು,ಒಂದು ಅಗುಳು ಅನ್ನವನ್ನು ಅಕ್ಷಯಪಾತ್ರೆಯೊಳಗೆ 'ಅಕ್ಷಯವಾಗಿಸಿ' ನೀಡಿ ಹರಸಿದ ಶುಭದಿನ ಈ ದಿನವಂತೆ. ಕುಬೇರ ಅಷ್ಟ್ಯೆಶ್ವರ್ಯಕ್ಕಾಗಿ ಶ್ರೀ ಲಕ್ಷ್ಮೀ ದೇವಿಯನ್ನು ಪೂಜಿಸಿದ ದಿನ. ವರಾಹ ನರಸಿಂಹ ಸ್ವಾಮಿ ಮೂಲ ವಿಗ್ರಹ ದರುಶನ ಮಾಡಿದ ದಿನವೆಂದೂ ಪ್ರತೀತಿ ಇದೆ. ಭಕ್ತ ಸುಧಾಮ ಬಡವನಾದರೂ, ಬಹಳ ಹೃದಯ ಶ್ರೀಮಂತಿಕೆ ಇದ್ದ ಸಂಭಾವಿತ, ಆತ ತನ್ನ ಬಾಲ್ಯದ ಗೆಳೆಯ ಶ್ರೀ ಕೃಷ್ಣನಿಗೆ ಮುಷ್ಟಿ ಅವಲಕ್ಕಿಯ ಗಂಟನ್ನು ನೀಡಿದ ದಿನವಂತೆ.ಬಡತನ ದೂರವಾಗಿ ಅಕ್ಷಯವಾಯಿತಂತೆ. ಪವಿತ್ರಳಾದ ಗಂಗಾಮಾತೆ ಭೂಸ್ಪರ್ಶ ಮಾಡಿದ ದಿನ.
ಗಂಗಾಸ್ನಾನ ಮಾಡಲು ಈ ದಿನ ಅತ್ಯಂತ ಪವಿತ್ರವಂತೆ. ಭಗವಾನ್ ಶ್ರೀಕೃಷ್ಣನಿಗೆ ಈ ದಿನ ಪೂಜೆ, ನೈವೇದ್ಯ, ಅರ್ಚನೆ ವಿಶೇಷವಂತೆ. ನೂತನ ಮನೆಯ ಪ್ರವೇಶಕ್ಕೆ, ಹೊಸ ವೃತ್ತಿಯ ಆರಂಭಕ್ಕೆ ಶುಭದಿನವಂತೆ. ಇನ್ನೊಂದೆಡೆ ಅಳಿದ ಹಿರಿಯರಿಗೆ ತರ್ಪಣ ಮಾಡಿ, ಪಿಂಡಪ್ರದಾನ ಮಾಡಬಹುದೆಂದು ಉಲ್ಲೇಖವಿದೆ. ವಚನಗಳ ಹರಿಕಾರ, ಕಾಯಕವೇ ಕೈಲಾಸವೆಂದು ಸಾರಿದ ಅಣ್ಣ ಬಸವಣ್ಣನವರ ಜಯಂತಿ ಇದೇ ದಿನ. ಒಟ್ಟಿನಲ್ಲಿ ಪುರಾಣದ ಕಾವ್ಯ, ಇತಿಹಾಸ ಓದಿದಾಗ ಸಿಗುವಂಥ ಮಾಹಿತಿ ಇದಾಗಿದೆ, ಈ ದಿನದ ವಿಶೇಷತೆಯಾಗಿದೆ.
ಜೈನ ಧರ್ಮದಲ್ಲಿ ಜೈನಮುನಿಗಳಿಗೆ ಆಹಾರ ಪಾನೀಯಗಳನ್ನು ದಾನ ಮಾಡಿದರೆ ಬಹಳ ಪುಣ್ಯವಂತೆ. ಅದು ಅತ್ಯಂತ ಅತಿಶಯವಾದ ಕೆಲಸವಂತೆ. ಅತಿಶಯವೇ ಅಕ್ಷಯವಾಗಿ ಪುಣ್ಯ ಸಂಪಾದನೆಗೆ ಕಾರಣ. ಜೈನ ತೀರ್ಥಂಕರರಾದ ವೃಷಭನಾಥ ಸ್ವಾಮಿಯವರು ಉಪವಾಸ ಮಾಡಿ, ಮೊದಲು ಆಹಾರ(ಪಾರಣಾ)ವಾದ ದಿವಸ ವೈಶಾಖ ಶುಕ್ಲ ತೃತೀಯ ದಿನದಂದು. ಇದೇ ‘ಅಕ್ಷಯ ತೃತೀಯ’. ಜೈನ ಮುನಿಗಳಿಗೆ ಕಬ್ಬಿನ ಹಾಲು ನೀಡುವುದರಿಂದ ಸುಖ ಸಮೃದ್ಧಿ, ಧನಧಾನ್ಯಾದಿಗಳ ಅಕ್ಷಯವಾಗುತ್ತದೆ ಎನ್ನುತ್ತಾರೆ, ನಂಬಿಕೆ ಸಹ.
ಈ ದಿನ ಮನೆಗಳಿಗೆ ವಸ್ತುಗಳನ್ನು ತಂದರೆ ಒಳ್ಳೆಯದಂತೆ. ನಾವು ದಾನ ಸಹ ಮಾಡಬೇಕು. ಪುಣ್ಯಸ್ನಾನವನ್ನು ಪವಿತ್ರ ನದಿಗಳಲ್ಲಿ ಮಾಡಬಹುದು. 'ಅಕ್ಷಯ ತೃತೀಯಾ ಮಹಾತ್ಮೆ'ಯನ್ನು ಓದಿಸಬಹುದು. ಇದು ಆಸ್ತಿಕರ ನಂಬಿಕೆ. ಮಹಾಲಕ್ಷ್ಮೀ ಮಾತೆ ಈ ದಿನ ಭೂಸಂಚಾರಕ್ಕೆ ಬರುತ್ತಾಳೆ, ಬಂದವಳು ಮನೆಯ ಈಶಾನ್ಯ ಕೋನದಲ್ಲಿ ಕುಳಿತುಕೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ಶುಭ, ಸುಖ, ಸಮೃದ್ಧಿಯ ಸಂಕೇತವಾಗಿ ಭಗವಾನ್ ವಿಷ್ಣು ಮತ್ತು ಮಹಾಲಕ್ಷ್ಮೀ ದೇವಿಯ ಆರಾಧನೆ ಮಾಡುವುದು ಇದೇ ದಿನದ ಮಹಾವಿಶೇಷ.
ಈ ಬಗ್ಗೆ ಒಂದು ಪುರಾಣ ಹಿನ್ನೆಲೆಯಿದೆ. ಶಾಕಲ ನಗರದಲ್ಲಿ ಸತ್ಯವಾದಿಯಾದ, ಶ್ರದ್ಧಾ-ಭಕ್ತಿ ಉಳ್ಳವನಾದ, ಧರ್ಮಪಾಲನೆಂಬ, ಬಡವನಾದ ವೈಶ್ಯನಿದ್ದ. ನಿತ್ಯ ಉಪವಾಸವೇ ಎನುವಂತಿತ್ತು ಅವನ ಬದುಕು. ಮನೆಯವರ ವಿರೋಧದ ನಡುವೆ ಅಕ್ಷಯ ತೃತೀಯಾ ವ್ರತವನ್ನು ಶ್ರದ್ಧೆಯಿಂದ ಮಾಡಿದ. ಧಾನ್ಯಗಳನ್ನು ಕೊಡದಲ್ಲಿ ತುಂಬಿ ದಾನ ಮಾಡಿದ. ಇದರಿಂದ ಆತನ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು. ಮುಂದಿನ ಜನ್ಮದಲ್ಲಿ ಕುಶಾವತಿ ಪಟ್ಟಣದ ಅರಸು ಕುಲದಲ್ಲಿ ಜನಿಸಿ, ರಾಜನಾಗಿ, ಭೋಗ-ಭಾಗ್ಯವನ್ನು ಅನುಭವಿಸಿದನಂತೆ.
ಈ ದಿನ ನಮ್ಮ ಮನೆಗಳಿಗೆ ಅತ್ಯಂತ ಅಮೂಲ್ಯವಾದ ೭ ವಸ್ತುಗಳನ್ನು ತಂದರೆ ತುಂಬಾ ಒಳ್ಳೆಯದು ಹೇಳುತ್ತಾರೆ. ಮಣ್ಣಿನ ಕಳಸ, ಶಂಖ, ಕವಡೆ(ಹಳದಿಬಣ್ಣದ), ತೆಂಗಿನಕಾಯಿ, ಲಕ್ಷ್ಮೀ ಚರಣ ಪಾದುಕೆಗಳು, ಲೋಹದ ಆಮೆ, ಕೊಳಲು ಇದೇ ೭ ವಸ್ತುಗಳು.
ಅಕ್ಷಯ ತೃತೀಯ ದಿನದಂದು "ಹಳದಿ ಲೋಹ" ಖರೀದಿಸಿದರೆ ಒಳ್ಳೆಯದು ಎಂದು ಪ್ರತೀತಿ ಇದೆ. ಪುರಾಣ ಕಾವ್ಯಗಳಲ್ಲಿ ಇದಕ್ಕೆ ಥಳಕು ಹಾಕಿದ್ದಾರೆ. ಚಿನ್ನ ಎನ್ನುವುದು ಒಂದು ಆಭರಣವಾಗಿ ಬಳಕೆ. ಇನ್ನೊಂದು ಕಷ್ಟ ಕಾಲದಲ್ಲಿ ನಮಗೆ ಆಧಾರ, ಕೈ ಹಿಡಿದು ಕಾಪಾಡುತ್ತದೆ. ಇತ್ತೀಚೆಗೆ ಇದನ್ನೇ ಬಂಡವಾಳ ಮಾಡಿಕೊಂಡು ಎಲ್ಲಾ ಬಂಗಾರದ ಅಂಗಡಿಗಳೂ ಆಮಿಷಗಳನ್ನು ಒಡ್ಡುವುದು ಕಳೆದ ೪-೫ ವರ್ಷಗಳಿಂದ ಕಂಡು ಬರುತ್ತದೆ. ಇದು ವ್ಯಾಪಾರ ವ್ಯವಹಾರದ ಜಾಣ್ಮೆಯಿರಬಹುದು.ಈ ಮಾನಸಿಕ ತುಮುಲ,ವ್ಯವಸ್ಥೆಗಳಲ್ಲಿ ಏರುಪೇರು,ಕಡಿಬಡಿ ಸಂಸ್ಕೃತಿಯಿಂದ ಹೊರಬರೋಣ. ಸೌಹಾರ್ದತೆ, ಮಾನವತ್ವದ ಬೆಳಕು ಬೀರೋಣ. ಏನೇ ಇರಲಿ ಅದು ಅವರವರ ಚಾಕಚಕ್ಯತೆ. ನಮ್ಮ ಹತ್ತಿರ ಹಣವಿದೆಯೋ ತರುವ, ಇಲ್ಲದಿದ್ದರೆ ಏನಾದರೂ ಮನೆಯಲ್ಲಿದ್ದ ಆಹಾರ ಧಾನ್ಯಗಳನ್ನು, ವಸ್ತುಗಳನ್ನು, ದಾನಮಾಡುವ. ‘ಅಕ್ಷಯ ತೃತೀಯ’ ವನ್ನು ಇದ್ದುದರಲ್ಲಿಯೇ ಆಚರಿಸಿ ಸಂಭ್ರಮಿಸೋಣ. ನಮ್ಮಲ್ಲಿರುವ ದುರ್ಗುಣಗಳನ್ನು ಕ್ಷಯವಾಗಿಸೋಣ. ಉತ್ತಮತೆಯನ್ನು ಮೈಗೂಡಿಸಿಕೊಳ್ಳೋಣ.
ಮನೆಯ ಸುತ್ತಮುತ್ತ,ತಾರಸಿಯ ಮೇಲೆ ಕುಡಿಯುವ ನೀರು, ಅಕ್ಕಿ, ಧಾನ್ಯಗಳನ್ನು ಇಡೋಣ. ಪಕ್ಷಿಗಳು ಸಂತಸದಿಂದ ಬಂದು ತಿನ್ನಲಿ. ‘ಅಕ್ಷಯ ತೃತೀಯ’ ಎಲ್ಲರಿಗೂ ಸುಖ -ಶಾಂತಿ-ಸಮೃದ್ಧಿಯನ್ನು, ಸ್ನೇಹ-ಸಂಪತ್ತು-ಪ್ರೀತಿ-ವಿಶ್ವಾಸಗಳನ್ನು ಮೂಡಿಸಿ ಅಕ್ಷಯವಾಗಲಿ ಎಂಬ ಹಾರೈಕೆ. ಎಲ್ಲರಿಗೂ ಶುಭವಾಗಲಿ. ಸರ್ವೇ ಜನಾಃ ಸುಖಿನೋ ಭವಂತು’
(ಆಧಾರ)
-ರತ್ನಾ ಕೆ.ಭಟ್ ತಲಂಜೇರಿ,ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ