ಅಕ್ಷರಗಳೊಂದಿಗೆ ಅಕ್ಕರೆಯ ಯಾನ

ಅಕ್ಷರಗಳೊಂದಿಗೆ ಅಕ್ಕರೆಯ ಯಾನ

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ಮೇ, ೨೦೦೬

ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದ ಬಿಡಿ ಬರಹಗಳ ಸಂಗ್ರಹವೇ ‘ಅಕ್ಷರಗಳೊಂದಿಗೆ ಅಕ್ಕರೆಯ ಯಾನ'. ಈ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ ಅವರ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಇವೆ. ಕೆಲವೊಂದು ಲೇಖನಗಳು ಈಗಲೂ ಪ್ರಸ್ತುತವೆನಿಸುತ್ತವೆ. ಸಾಹಿತಿ ಮನು ಬಳಿಗಾರ್ ಅವರು ತಮ್ಮ ಮುನ್ನುಡಿಯಾದ ‘ಎದೆಯಾಳದ ಎರಡು ಮಾತು' ಇದರಲ್ಲಿ ವಿಶ್ವೇಶ್ವರ ಭಟ್ ಹಾಗೂ ಅವರ ಬರಹಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. 

ಅವರು ಒಂದೆಡೆ ಬರೆಯುತ್ತಾರೆ “ಹಲವಾರು ರಾಷ್ಟ್ರಗಳನ್ನು ಸುತ್ತಾಡಿ ಬಂದಿರುವ ವಿಶ್ವೇಶ್ವರ ಭಟ್ ರು ತಮಗೆ ಹಿಡಿಸಿದ ಅಲ್ಲಿಯ ವ್ಯಕ್ತಿಗಳು, ಊರು, ಘಟನೆ ಇತ್ಯಾದಿಗಳ ಬಗ್ಗೆ ಸಾಂದರ್ಭಿಕ ಟಿಪ್ಪಣಿಗಳನ್ನು ಮಾಡಿ ತಂದಿರುವುದರ ಫಲವಾಗಿ ವೇಲ್ಸ್ : ಕಾಸಲ್ ಗಳ ತವರೂರು ಹಾಗೂ ಹೇ-ಆನ್-ವೇಯ್ ಗಳು ಮೂಡಿ ಬಂದಿವೆ. ಬ್ರಿಟನ್ನಿನ ವೇಲ್ಸ್ ಪ್ರಾಂತದಲ್ಲೆಲ್ಲಾ ಹರಡಿಕೊಂಡಿರುವ ಹೇರಳ ಸಂಖ್ಯೆಯ ಕಾಸಲ್ ಗಳು- ಸುತ್ತಲೂ ಕೋಟೆಯಿಂದಾವರಿಸಿದ ಹಳೆಯ ಕಾಲದ ಅರಮನೆಯಂತಹ ಭವ್ಯ ಬಂಗಲೆಗಳು ಬೆಳೆದು ಬಂದ ಬಗೆ, ಅವುಗಳ ರಚನೆ, ವಿನ್ಯಾಸ, ಒಳಗಿನ ಅಲಂಕಾರ, ಝಗಮಗಿಸುವ ಒಳಾಂಗಣ ವೈಭವಯುತ ಸಾಮಾನು ಸರಂಜಾಮುಗಳು ನಾಟಕೀಯವಾಗಿ ನಮ್ಮೆದುರು ಪ್ರದರ್ಶಿಸಲ್ಪಟ್ಟಿವೆ. ಕಾಸಲ್ ಗಳ ಕತೆ ಹೇಳುತ್ತಾ ಅವು ಪ್ರತಿಷ್ಟೆಯ ಸಂಕೇತವೆಂದು ಅವುಗಳನ್ನು ಕರೆದು, ಅಲ್ಲಿಂದ ತಿರುಗಿ ಬರುವಾಗ ತಮ್ಮೊಡನೆ ತಂದ ಅಮೋಘ ಅನುಭವ ಹಾಗೂ ಒಂದಷ್ಟು ಇತಿಹಾಸವನ್ನು ಇಲ್ಲಿ ಓದುಗರಿಗೂ ಉಣಬಡಿಸಲಾಗಿದೆ.”

“ಈ ಪುಸ್ತಕದ ಒಟ್ಟು ೨೭ ಲೇಖನಗಳಲ್ಲಿ ಎಂಟು ವ್ಯಕ್ತಿಗಳಿಗೆ ಸಂಬಂಧಿಸಿದವುಗಳಾಗಿವೆ. ವಾಜಪೇಯಿ, ವೈ ಎನ್ ಕೆ, ಡಯಾನಾ, ಕೆ.ಶ್ಯಾಮ ರಾವ್, ಪಿ.ಸಿ.ಸರ್ಕಾರ್, ರಸ್ಕಿನ್ ಬಾಂಡ್, ರಜನೀಶ್, ಮ.ರಾಮಮೂರ್ತಿಗಳ ಮೇಲೆ ಕಾಲಕಾಲಕ್ಕೆ ಬರೆದ ಸಮಯೋಚಿತ ಲೇಖನಗಳು" ಎಂದಿದ್ದಾರೆ.

ಶ್ರೀಲಂಕಾ ಪ್ರವಾಸದ ಬಗ್ಗೆ ಬರೆದ ಶ್ರೀಲಂಕಾ ಡೈರಿ, ಇಂಗ್ಲೆಂಡ್ ಹೋದಾಗ ತಮ್ಮ ಮಿತ್ರ 'ಹಾಯ್ ಬೆಂಗಳೂರು' ಸಂಪಾದಕರಾದ ರವಿ ಬೆಳಗೆರೆಯವರಿಗೆ ಇಂಗ್ಲೆಂಡ್ ನ ವಿಶೇಷತೆಗಳ ಬಗ್ಗೆ ಬರೆದ ಪತ್ರ, ಕೋಲ್ಕತ್ತಾಗೆ ೩೦೦ ವರ್ಷ ತುಂಬಿದ ಬಗ್ಗೆ ಲೇಖನ, ಇಂಡಿಯನ್ ಏರ್ ಲೈನ್ಸ್ ಬಗ್ಗೆ ಮಾಹಿತಿ, ಆಕ್ಸ್ ಫರ್ಡ್ ನ ಮದ್ಯದ ಅಂಗಡಿಗಳ ಬಗ್ಗೆ, ಖಾಸಗಿ ಲೋಕಕ್ಕೆ ಕಂಪ್ಯೂಟರ್ ಎಂಬ ರಾಕ್ಷಸ ದಾಳಿ ಇಟ್ಟ ಬಗ್ಗೆ ಎಲ್ಲಾ ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ. ಬಹಳಷ್ಟು ಮಾಹಿತಿಗಳು ಈಗಲೂ ಪ್ರಸ್ತುತವಾಗಿವೆ. ಕೆಲವು ಲೇಖನಗಳನ್ನು ಓದುವಾಗ ಅಂದಿನ ಕಾಲದ ವಿಷಯಗಳೂ ದೊರೆಯುತ್ತವೆ.

ಲೇಖಕ ವಿಶ್ವೇಶ್ವರ ಭಟ್ ಅವರು ತಮ್ಮ ಎರಡು ಮಾತಿನಲ್ಲಿ ಈ ಪುಸ್ತಕದ ಬಗ್ಗೆ ಚುಟುಕಾದ ವಿವರಗಳನ್ನು ನೀಡಿದ್ದಾರೆ. ಅಲ್ಲಿ ಇಲ್ಲಿ ಕಳೆದುಹೋಗದಿರಲಿ ಎಂದು ಕೆಲವೊಂದು ಲೇಖನಗಳನ್ನು ಸೇರಿಸಿದ ಬಗ್ಗೆಯೂ ಬರೆದಿದ್ದಾರೆ. ಅವರ ಪ್ರಕಾರ “ಪತ್ರಿಕೋದ್ಯಮದ ಅಂಗಳದಲ್ಲಿ ಕಾಲೂರುತ್ತಿದ್ದ ದಿನಗಳವು. ವಿಶೇಷ, ವಿಭಿನ್ನವಾಗಿ ಕಂಡಿದ್ದನ್ನೆಲ್ಲ ನುಡಿಚಿತ್ರವಾಗಿ, ಲೇಖನವಾಗಿ ಬರೆಯುವ ಉತ್ಸಾಹ, ವಸ್ತು, ವಿಷಯ ಹಾಗೂ ವ್ಯಕ್ತಿ ಅದೆಷ್ಟೇ ದೂರದಲ್ಲಿರಲಿ ಭೇಟಿ ಮಾಡಿ, ಮಾತಾಡಿ, ಬರೆದು ಪ್ರಕಟಿಸುವ ತನಕ ಸಮಾಧಾನವಿರುತ್ತಿರಲಿಲ್ಲ. ಒಂದು ನುಡಿಚಿತ್ರಕ್ಕಾಗಿ ನೂರಾರು ಕಿ.ಮೀ.ದೂರ ಹೋಗಿದ್ದುಂಟು. ಕೆಲವು ಸಲ ಏನೂ ಸಿಗದೇ ಬರಿಗೈಲಿ ಬಂದಿದ್ದುಂಟು. ಬೇಸರವಾಗುತ್ತಿರಲಿಲ್ಲ. ಬೇಟೆ ಸಿಗದಿದ್ದರೂ ಬೇಟೆಯಾಡಿ ಬಂದ ಸಂತಸ ಮನದಲ್ಲಿ ಹಿಳ್ಳೊಡೆದಿರುತ್ತಿತ್ತು. ಒಂದು ನುಡಿಚಿತ್ರವಾಗಬಹುದಾದ ವಸ್ತುವಿದೆಯೆಂಬ ಸಣ್ಣ ಸುಳಿವು ಸಿಕ್ಕರೆ ಸಾಕು, ಕೆಮರಾ ಹೆಗಲಿಗೇರಿಸಿಕೊಂಡು ಹೊರಟು ಬಿಡುತ್ತಿದ್ದೆ. ವಾಪಾಸು ಬರುವುದು ಯಾವಾಗ ಎಂಬುದೂ ಗೊತ್ತಿರುತ್ತಿರಲಿಲ್ಲ."

ಸುಮಾರು ೧೮೫ ಪುಟಗಳಿರುವ ಈ ಪುಸ್ತಕವನ್ನು ವಿಶ್ವೇಶ್ವರ ಭಟ್ ಅವರು ಆಕಾಶ್ ಎಂಬವರಿಗೆ ಅರ್ಪಿಸಿದ್ದಾರೆ. ಮಾಹಿತಿಪೂರ್ಣ ಬರಹಗಳು ಆಗಿರುವುದರಿಂದ ಒಮ್ಮೆ ಓದಲು ಅಡ್ಡಿ ಇಲ್ಲ.