ಅಕ್ಷರಗಳ ಮಾಂತ್ರಿಕ ರವಿ ಬೆಳಗೆರೆಯ ನೆನಪಿನಲ್ಲಿ…

ಅಕ್ಷರಗಳ ಮಾಂತ್ರಿಕ ರವಿ ಬೆಳಗೆರೆಯ ನೆನಪಿನಲ್ಲಿ…

ಇಂದು ಬೆಳಿಗ್ಗೆ ಏಳುವಾಗಲೇ ನನ್ನ ಪಾಲಿಗೆ ಶುಕ್ರವಾರ ‘ಬ್ಲ್ಯಾಕ್ ಫ್ರೈಡೇ' ಆಗಿತ್ತು. ಕನ್ನಡದ ಖ್ಯಾತ ಪತ್ರಕರ್ತ, ಲೇಖಕ, ನಿರೂಪಕ ರವಿ ಬೆಳಗೆರೆಯವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಮನಸ್ಸಿಗೆ ತುಂಬಾನೇ ಖೇದವಾಯಿತು. ಒಬ್ಬ ಲೇಖಕನಾಗಿ ನಾನು ಅವರ ಬರಹಗಳನ್ನು ತುಂಬಾ ಮೆಚ್ಚಿ ಕೊಂಡಿದ್ದೇನೆ. ಅವರ ಬಗೆಗಿನ ಬಹಳಷ್ಟು ವಿವರಗಳು ದೃಶ್ಯ ಮಾಧ್ಯಮದಲ್ಲಿ ಇವತ್ತು ದಿನವಿಡೀ ತೋರಿಸುವುದರಿಂದ ನಾನು ಅಧಿಕವಾಗಿ ಹೇಳಲೇನೂ ಹೋಗುವುದಿಲ್ಲ. ನನ್ನ ಅವರ ನಡುವಿನ ಸಣ್ಣಗಿನ ಒಡನಾಟದ ಬಗ್ಗೆ ಒಂದೆರಡು ಮಾತುಗಳನ್ನು ಬರೆಯಲಷ್ಟೇ ಈ ಲೇಖನ ಮುಡಿಪು.

ಅದು ೧೯೯೬ನೇ ವರ್ಷ ಇರಬೇಕು. ನಾನು ಪದವಿಯಲ್ಲಿ ಕಲಿಯುತ್ತಿದ್ದ ಸಮಯ. ಯಾಕೋ ಮನೆಯಲ್ಲಿ ಕುಳಿತು ಬೋರ್ ಆಯಿತೆಂದು ಪುಸ್ತಕದ ಅಂಗಡಿಗೆ ಹೋಗಿ ಮೊದಲ ಬಾರಿಗೆ ‘ಹಾಯ್ ಬೆಂಗಳೂರು' ಎಂಬ ಕಪ್ಪು ಸುಂದರಿಯನ್ನು ಮನೆಗೆ ತೆಗೆದುಕೊಂಡು ಬಂದೆ. ಅದಕ್ಕಿಂತ ಮೊದಲು ನಾನು ಅದನ್ನು ಗಮನಿಸಿರಲಿಲ್ಲವೆಂದಲ್ಲ. ಟ್ಯಾಬಲಾಯ್ಡ್ ಪತ್ರಿಕೆಗಳು ಕೇವಲ ಕ್ರೈಂ ಹಾಗೂ ರಾಜಕೀಯ ಸುದ್ದಿಗಳನ್ನಷ್ಟೇ ನೀಡುತ್ತವೆ ಎಂಬ ಪೂರ್ವಾಗ್ರಹ ಪೀಡಿತನಾಗಿದ್ದ ನಾನು ಆ ಬಗೆಯ ಪತ್ರಿಕೆಯನ್ನು ಗಮನಿಸಿದ್ದು ಕಮ್ಮಿಯೇ. ಕಾಲೇಜಿನಲ್ಲಿ ‘ಲಂಕೇಶ್ ಪತ್ರಿಕೆ' ಬರುತ್ತಿತ್ತು. ಅದರಲ್ಲಿಯ ಕೆಲವು ಕಾಲಂ ಮತ್ತು 'ತುಂಟಾಟ' ಖುಷಿಕೊಡುತ್ತಿತ್ತು. ಹೀಗೆ ಮನೆಗೆ ಬಂದ ‘ಹಾಯ್ ಬೆಂಗಳೂರು' ಕಳೆದವಾರದ ಸೃಷ್ಟಿ ೧೨೮೨ ಯವರೆಗೆ ಅಂದರೆ ಸುಮಾರು ೨೫ ವರ್ಷಗಳ ಕಾಲ ನನ್ನ ಆತ್ಮೀಯ ಬಂಧುವಾಗಿಯೇ ಉಳಿದಿತ್ತು. ಇತ್ತೀಚೆಗೆ ನಾನು ಅದರಲ್ಲಿ ಕೇವಲ ಖಾಸ್ ಬಾತ್ ಮಾತ್ರ ಓದುತ್ತಿದ್ದೆ. ಉಳಿದ ರಾಜಕೀಯ, ಕ್ರೈಂ ಸಂಗತಿಗಳು ನನಗೆ ಆಸಕ್ತಿ ಕುದುರಿಸುತ್ತಿರಲಿಲ್ಲ. ಇರಲಿ. ನಾನು ಅಂದು ತೆಗೆದುಕೊಂಡು ಬಂದ ಸಂಚಿಕೆ ‘ಹಾಯ್'ನ ಒಂದು ವರ್ಷ ತುಂಬಿದ ನಂತರದ ಮೊದಲ ಸಂಚಿಕೆ. ೨೫ ನೇ ಸೃಷ್ಟಿ ಇರಬೇಕು ಎಂದು ನನ್ನ ಅನಿಸಿಕೆ. ಅದರಲ್ಲಿ ಪತ್ರಿಕೆಯ ಮೊದಲ ವಾರ್ಷಿಕೋತ್ಸವದ ಬಗ್ಗೆ ಮಾಹಿತಿ ಇತ್ತು. ಅಲ್ಲಿಂದ ನಮ್ಮ ಒಡನಾಟ ಪ್ರಾರಂಭವಾಯಿತು.

ನಾನು ‘ಹಾಯ್'ಗೆ ಬರೆದದ್ದು ಕಮ್ಮಿಯೇ. ಒಂದೆರಡು ಸಣ್ಣ ಬರಹಗಳು ಹಾಗೂ ಓ ಮನಸೇ.. ಪತ್ರಿಕೆಯಲ್ಲಿ ಒಂದು ಬರಹ ಬರೆದಿದ್ದೆ.  ಆದರೆ ರವಿ ಬೆಳಗೆರೆ ಜೊತೆ ಸ್ವಲ್ಪ ಒಡನಾಟ ಇತ್ತು. ೯೦ರ ದಶಕದಲ್ಲಿ ವಾಟ್ಸಾಪ್, ಟ್ವಿಟರ್ ಮೊದಲಾದವುಗಳು ಇರಲಿಲ್ಲ. ಒಮ್ಮೆ ಬೆಳಗೆರೆಯವರ ಇ ಮೈಲ್ ಸಿಕ್ಕಿತು. ಅದನ್ನು ಬಳಸಿಕೊಂಡು ನಾನು ಅವರಿಗೆ ಇಂಗ್ಲೀಷ್ ನಲ್ಲಿ ಮೈಲ್ ಮಾಡಿದ್ದೆ. ನಾನು ಕನ್ನಡ ಮಾಧ್ಯಮ ವಿದ್ಯಾರ್ಥಿ, ನನ್ನ ಇಂಗ್ಲೀಷ್ ಭಾಷೆ ಚೆನ್ನಾಗಿಲ್ಲ ಎಂದು ಬರೆದುದಕ್ಕೆ, ಅವರು ನಿನ್ನ ಇಂಗ್ಲೀಷ್ ‘fairly good’ ಎಂದು ಬರೆದದ್ದು ಈಗಲೂ ನೆನಪಿದೆ. ಆ ಮೈಲ್ ನ ಪ್ರಿಂಟ್ ತೆಗೆದಿಟ್ಟಿದ್ದೆ. 

ಪದವಿ ಮುಗಿಸಿ ನಾನು ‘ಸುಜಾತ ಸಂಚಿಕೆ' ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದಾಗ ವೆನಿಲ್ಲಾ ಬೆಳೆಗೆ ಬಂಗಾರದ ದರ ಬಂದ ಸಮಯದಲ್ಲಿ ನಾವು ಪತ್ರಿಕೆಯಲ್ಲಿ ಅದರ ಫೋಟೋ ಮತ್ತು ಮಾಹಿತಿ ಹಾಕಿದ್ದೆವು. ನಾವು ಪ್ರಕಟಿಸಿದ ವೆನಿಲ್ಲಾ ಗಿಡ, ಹೂವಿನ ಫೋಟೋವನ್ನು ‘ಹಾಯ್'ನ ಒಂದು ವರದಿಯಲ್ಲಿ ಬಳಸ ಬಹುದೇ ಎಂದು ಕೇಳಲು ಕರೆ ಮಾಡಿದ್ದು ನೆನಪಿದೆ. ಆಗೆಲ್ಲಾ ಗೂಗಲ್ ಹುಡುಕಾಟ ಅಷ್ಟು ಖ್ಯಾತಿ ಪಡೆದಿರಲಿಲ್ಲ.  

ನಂತರ ಅವರ ಭೇಟಿಯಾದದ್ದು ಆಳ್ವಾಸ್ ನುಡಿಸಿರಿಯಲ್ಲಿ. ವರ್ಷ ನನಗೆ ಸರಿಯಾಗಿ ನೆನಪಿಲ್ಲ. ಆದರೆ ಆ ವರ್ಷ ಡಾ. ಕಲ್ಬುರ್ಗಿಯವರು ಸಮ್ಮೇಳನಾಧ್ಯಕ್ಷರಾಗಿದ್ದರೆಂದು ನೆನಪು. ಅಂದು ರವಿ ಬೆಳಗೆರೆಯವರು ಉಪನ್ಯಾಸ ಇತ್ತು. ಅದಕ್ಕಾಗಿ ನಾನು 'ಪ್ರೆಸ್ ಪಾಸ್' ಪಡೆದುಕೊಂಡು ಮುಂದಿನ ಸೀಟುಗಳಲ್ಲಿ ಕುಳಿತುಕೊಂಡು ಅವರ ಮಾತುಗಳನ್ನು ಕೇಳಿದ್ದೆ. ಅವರ ಮೊನಚಾದ, ಹರಿತವಾದ, ಮಾಹಿತಿ ಪೂರ್ಣ ಮಾತುಗಳು ಈಗಲೂ ನನ್ನ ಮನಸ್ಸಿನಲ್ಲಿವೆ. ಅಂದು ನಾನು ಅವರ ಜೊತೆ ಜಾಸ್ತಿ ಮಾತನಾಡಲು ಆಗದೇ ಕೇವಲ ಹಾಯ್ ಬಾಯ್ ಗಷ್ಟೇ ಸೀಮಿತವಾಗಿತ್ತು. ನಂತರ ನಾನು ಅವರನ್ನು ಪ್ರತ್ಯಕ್ಷವಾಗಿ ಕಾಣದೇ ಇದ್ದರೂ ಅವರ ಪತ್ರಿಕೆ, ಪುಸ್ತಕಗಳನ್ನು ಓದುತ್ತಾ ಬೆಳೆದಿದ್ದೇನೆ. ಅವರ ಬರವಣಿಗೆಯ ಶೈಲಿ ಅದ್ಭುತ. ಓದಲು ಆಸಕ್ತಿ ಇಲ್ಲದವನನ್ನೂ ಓದುವಂತೆ ಮಾಡುತ್ತದೆ. ಅವರೊಬ್ಬರು ದಣಿವರಿಯದ ಬರಹಗಾರರು. ಬದುಕಿನ ಕೊನೆಯ ವರ್ಷಗಳಲ್ಲಿ ಮಾತ್ರ ತುಂಬಾನೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೊದಲಿನ ರೀತಿ ಮಾತುಗಳು ಹೊರಳುತ್ತಿರಲಿಲ್ಲ. 

ಇತ್ತೀಚೆಗೆ ವಾಟ್ಸಾಪ್ ಮೂಲಕ ಸಂಪರ್ಕದಲ್ಲಿದ್ದರು. ಆದರೆ ಲಾಕ್ ಡೌನ್ ಸಮಯದಲ್ಲಿ ಮಾತ್ರ ಯಾವುದೇ ರೀತಿಯ ಸಂಪರ್ಕ ಮಾಡದೇ ಸುಮ್ಮನಿದ್ದರು. ಈ ನಡುವೆ ಅವರ ಆರೋಗ್ಯ ಕೆಡುತ್ತಿದೆ ಎಂಬ ಸುದ್ದಿ ಇತ್ತು. ಆದರೆ ಹೃದಯಾಘಾತವಾಗಿ ನಮ್ಮನ್ನಗಲಿ ಹೋಗುತ್ತಾರೆ ಎಂದು ಅನಿಸಿಯೇ ಇರಲಿಲ್ಲ. ಹಲವಾರು ಪುಸ್ತಕಗಳು ಹೊರಬರಲು ಬಾಕಿ ಇತ್ತು. ಸುಮಾರು ೮೦ ಪುಸ್ತಕಗಳನ್ನು ಅವರು ಈಗಾಗಲೇ ಬರೆದು ಪ್ರಕಟಿಸಿದ್ದಾರೆ. ಹಳೆಯ ಪ್ರತಿಗಳು ಮುಗಿದ ಪುಸ್ತಕಗಳನ್ನು ಮರು ಮುದ್ರಿಸಿ ಎಂದು ನಾನು ಅವರಲ್ಲಿ ಬೇಡಿಕೆ ಇಟ್ಟಾಗ ಬಹುಬೇಗನೇ ಹೊರ ತರುವೆ ಎಂದು ಬರೆದಿದ್ದರು. ವಾಟ್ಸಾಪ್ ನಲ್ಲಿ ಯಾವುದೇ ಮಾಹಿತಿ ಕೇಳಿದಾಗಲೂ ಚುಟುಕಾಗಿ ಉತ್ತರ ನೀಡುತ್ತಿದ್ದರು. ಬಹುಷಃ ಅವರ ಅಗಲುವಿಕೆ ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಆದರೆ ಅವರು ಬಿಟ್ಟು ಹೋದ ಪುಸ್ತಕಗಳು ಅವರನ್ನು ಸದಾ ನೆನೆಯುವಂತೆ ಮಾಡಲಿದೆ ಎಂಬುದು ನನ್ನ ಅಚಲವಾದ ನಂಬಿಕೆ. ಅವರ ಮಕ್ಕಳು ಬಹುಷಃ ಅವರ ಪ್ರಕಟವಾಗದೇ ಉಳಿದ ಬರವಣಿಗೆಯನ್ನು ಪುಸ್ತಕ ರೂಪದಲ್ಲಿ ಹೊರತರಬಹುದು ಎಂಬ ಆಶಾಭಾವನೆ ನನ್ನದು. 

ರವಿ ಬೆಳಗೆರೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುವೆ. ರವಿ ಬೆಳಗೆರೆ ಹುಟ್ಟಿದ್ದು ಮಾರ್ಚ್ ೧೫, ೧೯೫೮ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ್ದರು. ಅವರ ಮಾತೃ ಭಾಷೆ ತೆಲುಗು ಆದರೂ ಕನ್ನಡ ಭಾಷೆಯ ಮೇಲೆ ಅವರಿಗೆ ತುಂಬಾನೇ ಹಿಡಿತ ಇತ್ತು. ಬಿ ಎ ಪದವಿ ಮುಗಿಸಿ ನಂತರ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಸ್ವಲ್ಪ ಸಮಯ ಕಾಲೇಜು ಉಪನ್ಯಾಸಕರಾಗಿ, ಸಿನೆಮಾ ಟಾಕೀಸಿನಲ್ಲಿ ಟಿಕೇಟ್ ಹರಿಯುವ ಹುಡುಗನಾಗಿ, ಲಾಡ್ಜ್ ನಲ್ಲಿ ರೂಂ ಬಾಯ್ ಆಗಿ, ಹಾಲು ಮಾರುವವನಾಗಿ, ಹಲವಾರು ಪತ್ರಿಕೆಗಳ ಸಂಪಾದಕ, ಉಪಸಂಪಾದಕ, ವರದಿಗಾರನಾಗಿ ಕೆಲಸ ಮಾಡಿದ್ದಾರೆ. ಅವರೇ ಬರೆದುಕೊಂಡಂತೆ ಅವರು ಸ್ವಲ್ಪ ಸಮಯ ನಕ್ಸಲ್ ಸಂಪರ್ಕದಲ್ಲಿದ್ದರಂತೆ. ದೇವರನ್ನು ಹುಡುಕಿಕೊಂಡು ಹಿಮಾಲಯಕ್ಕೂ ಹೋಗಿದ್ದರು. ‘ಬಳ್ಳಾರಿ ಪತ್ರಿಕೆ' ಮಾಡಿದ್ದರು. ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರುವಾಗ ಕೇವಲ ೨೩ ವರ್ಷ. ವಿವಾಹ ಎಂಬ ಪುಸ್ತಕದ ಅನುವಾದಕ್ಕಾಗಿ ಅವರಿಗೆ ಈ ಪ್ರಶಸ್ತಿ ಒಲಿದು ಬಂತು.

೧೯೯೫ರಲ್ಲಿ ಹಾಯ್ ಬೆಂಗಳೂರು ಪತ್ರಿಕೆ ಪ್ರಾರಂಭಿಸಿದರು. ಈ ಟ್ಯಾಬಲಾಯ್ಡ್ ಪತ್ರಿಕೆ ಅವರ ಕೈ ಹಿಡಿಯಿತು. ಯುವ ಮನಸ್ಸುಗಳಿಗಾಗಿ ‘ಅಚ್ಚರಿ’ ಎಂಬ ಪತ್ರಿಕೆ ತಂದಿದ್ದರು. ಆದರೆ ಒಂದೇ ಸಂಚಿಕೆಗೆ ಅದು ಕಣ್ಣು ಮುಚ್ಚಿತು. ನಂತರ ‘ಓ ಮನಸೇ..' ತಂದರು. ಯುವಕ ಯುವತಿಯರು ಮುಗಿಬಿದ್ದು ಓದ ತೊಡಗಿದರು. ಹಲವಾರು ದೇಶ ಸುತ್ತಿದರು. ಸಿನೆಮಾದಲ್ಲಿ ನಟಿಸಿದರು. ಸಂಭಾಷಣೆ ಬರೆದರು. ‘ಕ್ರೈಂ ಡೈರಿ' ಎಂಬ ಸರಣಿಯನ್ನು ಪ್ರಾರಂಭಿಸಿದರು. ಈ ಟಿವಿಗಾಗಿ ಅವರು ‘ಎಂದೂ ಮರೆಯದ ಹಾಡು' ಎಂಬ ಕಾರ್ಯಕ್ರಮ ಮಾಡಿಕೊಟ್ಟರು. ಇದೊಂದು ಮಾಸ್ಟರ್ ಪೀಸ್. ಈಗಲೂ ಇದು ಅಂತರ್ಜಾಲ ತಾಣದಲ್ಲಿ ಸಿಗುತ್ತದೆ. ಯೂಟ್ಯೂಬ್ ಚಾನೆಲ್ ನಲ್ಲಿ ಮಾಹಿತಿಯನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರು. ಪ್ರಾರ್ಥನಾ ಎಂಬ ಶಾಲೆಯನ್ನು ಕಟ್ಟಿ ಅದ್ಭುತ ರೀತಿಯಲ್ಲಿ ಬೆಳೆಸಿದರು. ಈ ಶಾಲೆ ಈಗ ಬೆಂಗಳೂರಿನ ಪ್ರತಿಷ್ಟಿತ ಶಾಲೆಗಳಲ್ಲಿ ಒಂದು. ಅವರ ಮಗ ಕರ್ಣ ಹಾಗೂ ಸೊಸೆ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ರವಿ ಬೆಳಗೆರೆಯವರು ಹುಟ್ಟುವಾಗಲೇ ಅವರ ತಂದೆ, ತಾಯಿಯನ್ನು ಬಿಟ್ಟು ಹೋಗಿದ್ದರು. ಆದುದರಿಂದ ಅವರು ತಾಯಿಯ ಆರೈಕೆಯಲ್ಲಿ ಬೆಳೆದರು. ತಾಯಿ ಖ್ಯಾತ ಕವಿಯತ್ರಿ ಬೆಳಗೆರೆ ಪಾರ್ವತಮ್ಮ, ನಡೆದಾಡುವ ಸಂತ ಎಂದೇ ಖ್ಯಾತಿ ಪಡೆದಿದ್ದ ಬೆಳಗೆರೆ ಕೃಷ್ಣ ಶಾಸ್ತ್ರಿ ಇವರ ಸೋದರ ಮಾವ. ಬಾಲ್ಯದಿಂದಲೇ ಸಾಹಿತ್ಯದ ವಾತಾವರಣದಲ್ಲಿ ಬೆಳೆದ ರವಿ ಬೆಳಗೆರೆಯವರು ಮೊದಲಿ ಸಣ್ಣ ಕಥೆಗಳನ್ನು ಬರೆಯುತ್ತಿದ್ದರು. ನಂತರ ಇತಿಹಾಸ, ಪ್ರೇಮ, ಯುದ್ಧ, ಭಯೋತ್ಪಾದನೆ, ಸಿನೆಮಾ ಹೀಗೆಲ್ಲಾ ಹಲವಾರು ವಿಷಯಗಳ ಬಗ್ಗೆ ಬರೆದರು. ಅವರ ಜೀವನದ ಬಗ್ಗೆಯೇ ಬರೆದ ಖಾಸ್ ಬಾತ್ ನಿಜಕ್ಕೂ ಉತ್ತಮ ಕೃತಿ. ‘ಬಾಟಂ ಐಟಂ’ ಸಹ ಉತ್ತಮ ಓದು. ಪ್ರೇಮಿಗಳಿಗೆ ಅವರು ಬರೆದ ‘ಲವಲವಿಕೆ’ ಒಂದು ಅಪ್ಪಟ ಪ್ರೇಮ ಗ್ರಂಥ.

ಕಾರ್ಗಿಲ್ ಯುದ್ಧ, ಪುಲ್ವಾಮಾ ದಾಳಿಯ ಸಮಯಗಳಲ್ಲಿ ಆ ಸ್ಥಳಗಳಿಗೇ ಹೋಗಿ ವರದಿಗಾರಿಕೆ ಮಾಡಿದ್ದರು. ಇವರು ಕಾರ್ಗಿಲ್ ನಲ್ಲಿ ಹದಿನೇಳು ದಿನ, ಹಿಮಾಲಯನ್ ಬ್ಲಂಡರ್, ಮುಸ್ಲಿಂ, ಇಂದಿರೆಯ ಮಗ ಸಂಜಯ, ಗಾಂಧಿ ಹತ್ಯೆ ಮತ್ತು ಗೋಡ್ಸೆ, ಬ್ಲ್ಯಾಕ್ ಫ್ರೈಡೇ, ಡಯಾನಾ, ನೀನಾ ಪಾಕಿಸ್ತಾನ?, ಅವನೊಬ್ಬನಿದ್ದ ಗೋಡ್ಸೆ, ಮೇಜರ್ ಸಂದೀಪ್ ಹತ್ಯೆ ಮುಂತಾದ ಐತಿಹಾಸಿಕ ಕಾದಂಬರಿಗಳೂ, ಗೋಲಿಬಾರ್, ಅರ್ತಿ, ಮಾಂಡೋವಿ, ಮಾಟಗಾತಿ, ಸರ್ಪ ಸಂಬಂಧ, ಹೇಳಿ ಹೋಗು ಕಾರಣ, ನೀ ಹಿಂಗೆ ನೋಡ ಬೇಡ ನನ್ನ, ಗಾಡ್ ಫಾದರ್ ಮೊದಲಾದ ಕಾದಂಬರಿಗಳೂ, ಖಾಸ್ ಬಾತ್ ನ ೧೨ ಸರಣಿಗಳು, ಬಾಟಂ ಐಟಮ್ ನ ೯ ಸರಣಿಗಳು, ವಿವಾಹ, ನಕ್ಷತ್ರ ಜಾರಿದಾಗ, ಟೈಂಪಾಸ್, ರಾಜ ರಹಸ್ಯ ಮೊದಲಾದ ಅನುವಾದ ಬರಹಗಳೂ, ಪ್ಯಾಸಾ, ಸಂಜಯ, ಪಾಪದ ಹೂವು ಪೂಲನ್, ಕಲ್ಪನಾ ವಿಲಾಸ, ಚಲಂ ಮೊದಲಾದ ಜೀವನ ಕಥನಗಳೂ ಸೇರಿದಂತೆ ಸುಮಾರು ೮೫ ಪುಸ್ತಕಗಳನ್ನು ಬರೆದಿದ್ದಾರೆ. ಮನಸೇ,, ಕನಸೇ.. ಒಲವೇ.. ಎಂಬ ಮೂರು ಆಡಿಯೋ ಸಿಡಿಗಳನ್ನೂ ಹೊರತಂದಿದ್ದಾರೆ. ವಿಜಯ ಕರ್ನಾಟಕ, ವಿಶ್ವವಾಣಿ ಸೇರಿದಂತೆ ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. 

ಕರ್ಮವೀರ ಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ಪಾಪಿಗಳ ಲೋಕದಲ್ಲಿ...ಬರಹ ಅದರ ಪ್ರಸಾರವನ್ನು ಆ ಸಮಯದಲ್ಲಿ ದ್ವಿಗುಣಗೊಳಿಸಿತ್ತು. ಕ್ರೈಂ ಮಾತ್ರವಲ್ಲದೇ ಎಲ್ಲಾ ಪ್ರಕಾರಗಳಲ್ಲೂ ಇವರ ಲೇಖನಿ ಚಲಿಸಿದೆ. ರವಿ ಬೆಳಗೆರೆಯವರ ಬಗ್ಗೆ ಬರೆಯಲು ಹಲವಾರು ವಿಷಯಗಳಿವೆ. ಅವರ ವೈಯಕ್ತಿಕ ಬದುಕು, ಕ್ರೈಂ ಲೇಖನಗಳು ಇವೆಲ್ಲದ್ದರ ಬಗ್ಗೆ ಏನೇ ಅಪಸವ್ಯಗಳಿರಲಿ, ಅವರ ಬರವಣಿಗೆಯ ಶೈಲಿಯನ್ನು ಮೆಚ್ಚದವರು ಕಮ್ಮಿ. ಇವರು ಪ್ರಕಟಿಸುವ ಪ್ರತೀ ಪುಸ್ತಕದಲ್ಲಿ ‘ಅಫಿಡವಿಟ್ಟು' ಪ್ರಕಟಿಸುತ್ತಿದ್ದರು. ಇದು ಕನ್ನಡವೂ ಸೇರಿದಂತೆ ಎಲ್ಲಾ ಪುಸ್ತಕ ಲೋಕದಲ್ಲಿ ಹೊಸತನ ಎಂದು ಒಮ್ಮೆ ‘ಔಟ್ ಲುಕ್'ಪತ್ರಿಕೆ ಬರೆದಿತ್ತೆಂದು ನನ್ನ ನೆನಪು. ಎರಡು ಪತ್ನಿಯರು, ನಾಲ್ಕು ಮಂದಿ ಮಕ್ಕಳು ಇರುವ ಕುಟುಂಬ ಇವರದ್ದು. ಉಳಿದಂತೆ ಅವರೇ ಹೇಳಿದಂತೆ 'ನಾನು ನಿಮ್ಮಂತೆಯೇ ಮನುಷ್ಯ : ಕೊಂಚ ಚಿಲ್ರೆ, ಕೊಂಚ ಗಟ್ಟಿ.

ರವಿ ಬೆಳಗೆರೆಯವರಿಗೆ ೫೦ ವರ್ಷ ತುಂಬಿದಾಗ ಅವರ ಒಡನಾಡಿಗಳು ಅವರ ಬಗ್ಗೆ ಬರೆದು ಅರ್ಪಿಸಿದ ಪುಸ್ತಕ ‘ಫಸ್ಟ್ ಹಾಫ್' . ಈ ಪುಸ್ತಕಕ್ಕೆ ಪ್ರೀತಿಯಿಂದ ಅವರು ಹಸ್ತಾಕ್ಷರ ಮಾಡಿ ನನಗೆ ಕಳಿಸಿಕೊಟ್ಟಿದ್ದರು. ಇದೆಲ್ಲಾ ಇಂದು ಅವರು ನಮ್ಮ ಜೊತೆಗಿಲ್ಲದ ಸಂದರ್ಭದಲ್ಲಿ ನೆನಪಾಗುತ್ತಿದೆ. ನೆನಪುಗಳಿಗೆ ಸಾವಿಲ್ಲ. ಆದರೆ ಅಕ್ಷರ ದೊರೆಯೇ, ನೀವು ಇಷ್ಟು ಬೇಗ ಮರಳಲಾರದ ಲೋಕಕ್ಕೆ ತೆರಳಬಾರದಿತ್ತು...

ಚಿತ್ರ ಕೃಪೆ: ಅಂತರ್ಜಾಲ ತಾಣ