ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಬರಹ

ಈ ವಾರ ಮಾರುಕಟ್ಟೆಗೆ ಬಂದಿರುವ ನನ್ನ " ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? " ಎಂಬ ಪುಸ್ತಕದ ಕೆಲವು ಭಾಗಗಳು.

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿ" ಹೊಸ ಕನ್ನಡ"ವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.

ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.

ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು " ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ." ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.

ಒಟ್ಟಿನಲ್ಲಿ ಭಾಷಾಪ್ರೇಮ ಭಾಷಾನೀತಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ತಮಿಳು ಭಾಷಿಗರು ನಮಗಾಗಲೀ ಯಾರಿಗೇ ಆಗಲೀ ಆದರ್ಶ ಅಥವಾ ಮಾದರಿ ಆಗಬಾರದು.ಶಾಸ್ತ್ರೀಯ ಭಾಷೆಯ ವಿಚಾರದಲ್ಲಿ ಮತ್ಸರದಿಂದ ಕನ್ನಡಕ್ಕೆ ಆ ಸ್ಥಾನಮಾನ ಸಿಗಬಾರದೆಂದು ನ್ಯಾಯಾಲಯದಲ್ಲಿ ಕೂಡ ಪಿತೂರಿ ಮಾಡುವ ಮನೋಭಾವ ತಮಿಳರದ್ದು. ಅದು ಒಬ್ಬ ವ್ಯಕ್ತಿಯ ವೈಯಕ್ತಿಕ ತೆವಲೇನೂ ಅಲ್ಲ ಅನ್ನುವುದು ಯಾರಿಗಾದರೂ ಅರ್ಥವಾದೀತು.ತಮಿಳನ್ನು ಮಾದರಿಯಾಗಿ ಇಟ್ಟುಕೊಳ್ಳುವ ಡಾ.ಡಿ.ಎನ್.ಎಸ್. ಅಲ್ಲಿ ಉಚ್ಚಾರಣೆಗೂ ಬರಹಕ್ಕೂ ಇರುವ ವ್ಯತ್ಯಾಸಗಳನ್ನು ತೊಂದರೆದಾಯಕ ಎಂದುಕೊಳ್ಳುವುದಿಲ್ಲ.ತಮಿಳಿನಲ್ಲಿ ಕನ್ನಡದ ಹಾಗೆ ಸ್ಪೆಲ್ಲಿಂಗ್ ಸಮಸ್ಯೆ ಇಲ್ಲ ಎಂದು ತಪ್ಪಾಗಿಯೆ ಹೇಳುತ್ತಾರೆ. ಹಾಗೆ ನೊಡಿದರೆ ಮಾತಾಡಿದಂತೆ ಬರೆಯ ಬೇಕಾದರೆ ತಮಿಳಿನಲ್ಲಿ ಇನ್ನೂ ಅನೇಕ ಅಕ್ಷರಗಳನ್ನು ಸೇರಿಸಬೇಕಾಗುತ್ತದೆ. ಉಚ್ಚಾರವೈವಿಧ್ಯವಿದ್ದು ಅಕ್ಷರಗಳ ಸಂಖ್ಯೆ ಕಡಿಮೆಯಿದ್ದಷ್ಟೂ ಸ್ಪೆಲ್ಲಿಂಗ್ ಸಮಸ್ಯೆ ಹೆಚ್ಚು ಎನುಉವುದು ನಮಗೆ ಇಂಗ್ಲಿಷನ್ನು ನೋಡಿಯಾದರೂ ಅರ್ಥವಾಗಬೇಕು. ಕನ್ನಡದಲ್ಲಿರುವ ಕೆಲವು ಅಕ್ಷರಗಳನ್ನು ತೆಗೆದುಹಾಕುವುದರಿಂದ ಇಂದು ಮೇಲ್ವರ್ಗದವರು ಬರಹಮೂಲಕ ಪಡೆಯುತ್ತಿರುವ ಸೌಲಭ್ಯವನ್ನು ಕೆಳವರ್ಗದವರೂ ಪಡೆಯುವಂತಾಗುತ್ತದೆ ಎನ್ನುವುದು ಡಾ. ಡಿ.ಎನ್.ಎಸ್. ನಿಲುವು.ಆದರೆ ಅವರೇ ಬರೆದ ವಾಕ್ಯ ಈ ಮುಂದಿನದು-" ಬೇರೆ ಭಾಷೆಯ ಲಿಪಿ ಕಲಿಯಬೇಕೆಂದರೆ ಕೆಲವೇ ತಾಸುಗಳಲ್ಲಿ ಕಲಿಯಬಹುದು." ಅವರೇ ಹೇಳುವ ಮುಂದಿನ ಮಾತುಗಳನ್ನು ಗಮನಿಸಿ.-" ತೆಲುಗು ಭಾಷೆಯನ್ನು ಕಲಿಯಬೇಕೆಂಬ ಇಚ್ಛೆಯುಳ್ಳ ಕನ್ನಡಿಗನು ಅರ್ಧಗಂಟೆಯೊಳಗೆ ಅದರ ಲಿಪಿಯನ್ನು ಕೈವಶ ಮಾಡಿಕೊಳ್ಳಬಲ್ಲನು." ಇನ್ನೊಂದು ಕಡೆ ಅವರು ಹೇಳುವ ಮಾತುಗಳನ್ನು ನೋಡಿ-" ನಿಜಕ್ಕೂ ಒಂದು ಭಾಷೆಯನ್ನು ಕಲಿಯುವ ಅವಶ್ಯಕತೆ ಬಂದರೆ ಚೀನೀ ಭಾಷೆಗಿರುವಂಥ ಅತೀ ಕ್ಲಿಷ್ಟವಾದ ಲಿಪಿಯನ್ನೂ ಜನ ಅರಗಿಸಿಕೊಂಡಾರು.ಬೇಡವಾಗಿರುವ ಭಾಷೆಯ ಲಿಪಿ ಸಮಾನವಾಗಿದ್ದರೂ ಒಂದೇ ವಿಭಿನ್ನವಾಗಿದ್ದರೂ ಒಂದೇ."

ಡಾ.ಡಿ.ಎನ್.ಎಸ್. ಅವರ ವಾದದಲ್ಲಿರುವ ವೈರುಧ್ಯವನ್ನು ಗುರುತಿಸುವುದು ಕಷ್ಟವಲ್ಲ. ಅವರೆನ್ನುವಂತೆ ಅವರ "ಹೊಸ ಬರಹವನ್ನು ಓದಿ ಅಭ್ಯಾಸವಾದವರಿಗೆ ಹಳೆ ಬರಹಗಳಲ್ಲಿರುವ ಗ್ರಂಥಗಳನ್ನು ಓದಲು ಜಾಸ್ತಿ ಕಷ್ಟವಾಗಲಾರದು. ಒಂದೆರಡು ಗಂಟೆಗಳಲ್ಲೇ ಅವರು ಅದನ್ನು ಸಾಧಿಸಿಕೊಳ್ಳಬಲ್ಲರು." ಹಾಗಿದ್ದರೆ ಈಗಿರುವ ಹಳೆ ಬರಹ ಕಲಿಯಲು ಕಷ್ಟವೆಂದು ಅವರು ಹೇಗೆ ತೀರ್ಮಾನಿಸುತ್ತಾರೆ? ಕೆಳವರ್ಗಗಳಿಗೆ ಕಲಿಕಾಸಾಮರ್ಥ್ಯ ಇಲ್ಲ ಎನ್ನುವ ಡಾ.ಡಿ.ಎನ್.ಎಸ್. ರ ಪರೋಕ್ಷ ನಂಬಿಕೆಯೇ ಪ್ರಶ್ನಾರ್ಹವಾದುದು.

ವರ್ಗ ಪ್ರಜ್ಞೆ ಅತಿ ಹೆಚ್ಚಾಗಿರುವ ಕೇರಳದಲ್ಲಿ ಅಕ್ಷರಗಳ ಸಂಖ್ಯೆ ತುಂಬ ಜಾಸ್ತಿ. ಅಲ್ಲಿ ಅಕ್ಷರಸ್ತರ ಪ್ರಮಾಣ ತಮಿಳುನಾಡಿಗೆ ಹೋಲಿಸಿದರೆ ತುಂಬ ಹೆಚ್ಚು.ಕಲೆ- ಸಾಹಿತ್ಯದಲ್ಲೂ ಕೇರಳ ತಮಿಳುನಾಡಿಗಿಂತ ತುಂಬ ಮುಂದಿದೆ. ಕೆಳವರ್ಗದವರು ಶಾಲೆಗೆ ಹೋಗುವುದರಿಂದ ಮತ್ತು ಬರಹ ಕಲಿಯುವುದರಿಂದ ವಂಚಿತರಾಗಿದ್ದರೆ ಅದಕ್ಕೆ ಭಾಷೇತರವಾದ ಸಾಮಾಜಿಕ-ಆರ್ಥಿಕ ಕಾರಣಗಳಿವೆ.ಕನ್ನಡದಲ್ಲಿ ಮೂವತ್ತೊಂದೇ ಅಕ್ಷರಗಳಾದರೆ ಕೆಳವರ್ಗದ ಕೀಳರಿಮೆ ಕಡಿಮೆಯಾದೀತು ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ.ವಾಸ್ತವವಾಗಿ ಇದರಿಂದ ಮತ್ತಷ್ಟು ಕೀಳರಿಮೆಯಾದೀತು.ಮೂವತ್ತೊಂದು ಅಕ್ಷರದವರು ಐವತ್ತೊಂದು ಅಕ್ಷರ ತಿಳಿದವರ ಎದುರು ಮತ್ತಷ್ಟು ಕುಬ್ಜರಾಗಬೇಕಾದೀತು.

ಒಟ್ಟಿನಲ್ಲಿ ಡಾ. ಡಿ.ಎನ್.ಎಸ್. ಯೋಜನೆಯು, "ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಸುಲಭ ಉಪಾಯವೆಂದರೆ ಬಡತನ ರೇಖೆಯನ್ನೇ ಸ್ವಲ್ಪ ಕೆಳಗೆ ಮಾಡುವುದು" ಎನ್ನುವಂತಿದೆ. ಚರ್ಚೆಗೆ ಸ್ವಾಗತ. ಇತಿ, ಅಜಕ್ಕಳ ಗಿರೀಶ.