ಅಕ್ಷರ ಪಾಂಡಿತ್ಯದ ಭೂತ !

ಅಕ್ಷರ ಪಾಂಡಿತ್ಯದ ಭೂತ !

ಜಾತಿ ಭೂತದಂತೆ ನಮ್ಮ ದೇಶದಲ್ಲಿ ಮತ್ತೊಂದು ಭೂತವಿದೆ, ಅದು ಅಕ್ಷರ ಪಾಂಡಿತ್ಯದ ಭೂತ. ಇಲ್ಲೂ ಸಹ ವರ್ಣಭೇದ ನೀತಿ ಇದೆ. ಅತಿ ಪಾಂಡಿತ್ಯ, ಪಾಂಡಿತ್ಯ, ಅಕ್ಷರಸ್ಥ, ಅನಕ್ಷರಸ್ಥ. ಅತಿ ಪಾಂಡಿತ್ಯವಿರುವವರು ಯಾವುದೇ ಕಾರಣಕ್ಕೂ ಕೆಳಗಿನ 3 ಸ್ತರದವರನ್ನು ಸಹಿಸುವುದಿಲ್ಲ. ಪಾಂಡಿತ್ಯವಿದ್ದವರು ಅಕ್ಷರಸ್ಥರನ್ನು ಒಂದಿಂಚು ಕೆಳಗಿರಿಸಿಯೇ ಮಾತನಾಡಿಸುತ್ತಾರೆ. ಇನ್ನು ಇವರಲ್ಲಿ ಅಕ್ಷರ ಬಲ್ಲವರು ಅನಕ್ಷರಸ್ಥರನ್ನು ತೀರ ನಿಕೃಷ್ಟರನ್ನಾಗಿ ಕಾಣುತ್ತಾರೆ. 

ಪ್ರತಿನಿತ್ಯವೂ ನಮ್ಮ ಬದುಕಿನಲ್ಲಿ ಸೂಕ್ಷ್ಮವಾಗಿ ನಮಗರಿವಿಲ್ಲದಂತೆಯೇ ಇದನ್ನು ಅನುಭವಿಸುತ್ತಿರುತ್ತೇವೆ. ಆದರೆ ಇದು ಎಷ್ಟು ಸೂಕ್ಷ್ಮವೆಂದರೆ ನಮಗೇ ಅರಿವಿಗೆ ಬರಲಾರದಷ್ಟು. ಹೀಗಾಗಿ ಇದು ಅಷ್ಟು ದೊಡ್ಡ ಸಮಸ್ಯೆಯಾಗಿ ಕಾಣುವುದಿಲ್ಲ. ಆದರೆ ಇದು ಎಲ್ಲೆಡೆಯೂ ಆಳುತ್ತಿರುತ್ತದೆ. ನಮ್ಮೊಳಗೂ ಅಂಟಿಕೊಂಡಿರುತ್ತದೆ. ಅಕ್ಷರಸ್ಥರಾದ ನಾವು ಯಾರೇ ಅನಕ್ಷರಸ್ಥರೊಂದಿಗೆ ದೈನಂದಿನ ಬದುಕಿನಲ್ಲಿ ಹೇಗೆ ವ್ಯವಹರಿಸುತ್ತಿರುತ್ತೇವೆ ಎಂದು ನೆನಪಿಸಿಕೊಂಡರೆ ಸಾಕು ಈ ಸೂಕ್ಷ್ಮ ಗೊತ್ತಾಗಿಬಿಡುತ್ತದೆ. ಕೆಲವೊಮ್ಮೆ ನಮಗರಿವಿಲ್ಲದಂತೆಯೇ ಅನಕ್ಷರಸ್ಥರ ಮುಗ್ಧತೆಯನ್ನು ಹಾಸ್ಯ ಮಾಡುತ್ತಿರುತ್ತೇವೆ. ನಗರ, ಮಹಾನಗರ ಪ್ರದೇಶಗಳಲ್ಲಿ ಇದು ಕಂಡುಬರುತ್ತದೆ. ಟಿವಿ ಮಾಧ್ಯಮಗಳಲ್ಲಿಯೂ ಈ ಕಾಯಿಲೆ ಇತ್ತೀಚೆಗೆ ಹೆಚ್ಚಾಗಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಉದ್ದೇಶಪೂರ್ವಕವಾಗಿಯೇ ಅವರ ಮುಗ್ಧತೆ, ಅವರ ತಿಳುವಳಿಕೆ ಇರದ ಮಾತು ಎಲ್ಲವೂ ಹಾಸ್ಯಕ್ಕೆ ವಸ್ತುವಾಗಿ ಅದನ್ನು ಉದ್ದೇಶಪೂರ್ವಕವಾಗಿಯೇ ಮತ್ತೆ ಮತ್ತೆ ಕೇಳಿ ನಗುವುದು ಪಿಡುಗಾಗಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಈ ಪಿಡುಗು ತಪ್ಪಿದ್ದಲ್ಲ. ಇಲ್ಲಿಯೂ ಅತಿ ಪಾಂಡಿತ್ಯವಿರುವವರು ತಾವು ಹಾಕುವ ಸ್ಟೇಟಸ್ ಅಥವಾ ಬರಹಗಳಿಗೆ ಬರುವ ಕಮೆಂಟ್ ಗಳಿಗೆ ಅಪ್ಪಿ ತಪ್ಪಿಯೂ ಉತ್ತರಿಸುವುದಿಲ್ಲ. ಕೊನೆಗೆ ಬರಹಗಳಿಗೆ ಕೊಡುವ ಕಮೆಂಟ್ ಗಳನ್ನು ಲೈಕ್ ಮಾಡುವ ಸೌಜನ್ಯವನ್ನೂ ತೋರುವುದಿಲ್ಲ. ಕಮೆಂಟ್ ಗಳನ್ನು ಮಾಡುವವರು ಇವರ ಕಣ್ಣಿನಲ್ಲಿ ನಿಕೃಷ್ಟರಾಗಿ ಕಾಣುವುದೇ ಇದಕ್ಕೆ ಕಾರಣ. ಇದಕ್ಕೆ ಅಪವಾದವೆಂಬಂತಹವುಗಳೂ ಇವೆ. (ಹಾಗಂತ ಎಲ್ಲರೂ ಹೀಗೇ ಅಂತಲ್ಲ. ಕೆಲವರಿಗೆ ಸಮಯದ ಅಭಾವವೋ, ಮತ್ತೊಂದೋ ಕಾರಣವಾಗಿರಲೂಬಹುದು). ಆದರೆ ಈ ಎಲ್ಲದರ ಹಿಂದೆ ನಮ್ಮೊಳಗಿನ ಅಕ್ಷರಸ್ಥರೆಂಬ ಪಾಂಡಿತ್ಯದ ಅಹಂ ಖಂಡಿತ ಕೆಲಸ ಮಾಡುತ್ತಲೇ ಇರುತ್ತದೆ. 

ಅಕ್ಷರಸ್ಥರಲ್ಲೂ ಮತ್ತೆ ಬಲಪಂಥೀಯ, ಎಡಪಂಥೀಯ ಎಂಬ ಭೇದಗಳು. ಈ ಎರಡೂ ಗುಂಪುಗಳು ಒಂದನ್ನೊಂದು ಸೇರುವುದೇ ಇಲ್ಲ. ಒಂದು ಸ್ಟೇಟಸ್ ಇದೆ ಅಂದರೆ ಈ ಎರಡೂ ರೀತಿಯ ಕನ್ನಡಕದಿಂದ ನೋಡುವವರೇ ಹೆಚ್ಚು. ಇವನು ಬಲಪಂಥೀಯನೋ, ಎಡಪಂಥೀಯನೋ ಎಂದು ನಿರ್ಧರಿಸುವದರ ಮೂಲಕ ಕಮೆಂಟ್ ಗಳು, ವಾದಗಳು ನಿರ್ಧರಿತವಾಗುತ್ತ ಹೋಗುತ್ತವೆ. ಹೀಗಾದಾಗ ಸತ್ಯ ಎಲ್ಲೋ ಸತ್ತುಹೋಗಿಬಿಟ್ಟಿರುತ್ತದೆ. ಅಹಂ ಮಾತ್ರ ವಿಜೃಂಭಿಸುತ್ತಿರುತ್ತದೆ. ಇದು ವಿಚಿತ್ರವೆನಿಸಬಹುದಾದರೂ ನಿಜ. 

ಈ ಸಮಾನತೆ ಇಲ್ಲದ ತಾರತಮ್ಯ ನೀತಿಯಿಂದಾಗಿಯೇ ಅನಕ್ಷರಸ್ಥರು ತಮ್ಮ ಮಕ್ಕಳಾದರೂ ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲೇರಲಿ ಪಾಂಡಿತ್ಯ ಗಳಿಸಲಿ, ಅವರಂತೆಯೇ ಆಗಲಿ ಎಂಬ ಹಪಾಹಪಿಗೆ ಒಳಗಾಗುತ್ತಾರೆ. ಇದನ್ನು ಚೆನ್ನಾಗಿ ಅರಿತ ಶಿಕ್ಷಣ ಸಂಸ್ಥೆಗಳು ಸಹ ಚೆನ್ನಾಗಿ ಹಣದ ಸುಲಿಗೆ ಮಾಡುತ್ತವೆ. ಇವೆಲ್ಲ ಒಂದಕ್ಕೊಂದು ತಳಕು ಹಾಕಿಕೊಂಡ ಸಮಸ್ಯೆಗಳಾಗಿವೆ. 

ಹೀಗಾಗಿಯೇ ಈ ಭೂತ ಎಲ್ಲರಲ್ಲೂ ಆಳವಾಗಿ ಬೇರು ಬಿಟ್ಟಿರುವುದು. ಶತಮಾನಗಳ ಕಾಲದಿಂದಲೂ ಜಾತಿಗಂಟಿಕೊಂಡಂತೆಯೇ ಈ ಅಕ್ಷರ ಭೂತವೂ ಅಂಟಿಕೊಂಡು ಬಂದಿದೆ. ಸೂಕ್ಷ್ಮವಾಗಿ ಯೋಚಿಸಿ ನೋಡಿ ನಿಮಗೇ ಗೊತ್ತಾಗುತ್ತೆ

-ಸಿದ್ಧರಾಮ ಕೂಡ್ಲಿಗಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ