ಅಗಮ್ಯ

ಅಗಮ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಪೂರ್ಣಿಮಾ ಮಾಳಗಿಮನಿ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. 140.00, ಮುದ್ರಣ: 2022

ಹಿರಿಯ ನಾಗರೀಕರ ಇಳಿಗಾಲದ ಬದುಕನ್ನು ಕುರಿತು ಹೇಳುವ ಈ ಕಾದಂಬರಿ, ಹೆತ್ತವರನ್ನು ಕಾಡಿಸಿ ಪೀಡಿಸಿ ಕಣ್ಣೀರು ಹಾಕಿಸುವ ಹಳೆಯ ಸಿನಿಮಾವಾಗಬಹುದಾದಂತಹ ಲಕ್ಷಣಗಳಿದ್ದರೂ ಅದನ್ನು ಹಾಗಾಗದಂತೆ ತಡೆಯಲು ಇಲ್ಲಿ ಹಲವಾರು ಅಂಶಗಳಿವೆ. ಮುಖ್ಯವಾಗಿ ಪ್ರೇಮಕಥೆ. ಅದು ಹದಿಹರೆಯದ್ದಲ್ಲ; ಪ್ರೌಢಾವಸ್ಥೆಯದ್ದು, ಗಾಢವಾದದ್ದು ಮತ್ತು ಕೊನೆಯಲ್ಲಿ ಬರುವ ಅನಿರೀಕ್ಷಿತ ತಿರುವು. ಈ ಎರಡು ಅಂಶಗಳು ಇಡೀ ಕಾದಂಬರಿಯ ಹೈಲೈಟ್ಸ್. ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿಯವರ 'ಅಗಮ್ಯ' ಕಾದಂಬರಿಯ ಬಗ್ಗೆ ನನ್ನ ಅನಿಸಿಕೆ ನಿಮಗಾಗಿ..

ಮೊನ್ನೆಯಷ್ಟೇ ಕುಟುಂಬ ಸಮೇತ ಪ್ರವಾಸ ಮುಗಿಸಿ ಬಂದು ವಾರದಿಂದ ಬಾಕಿಯಿದ್ದ ಆಫೀಸ್ ಕೆಲಸದ ಒತ್ತಡದಲ್ಲಿದ್ದವನಿಗೆ ರಿಲೀಫ್ ಕೊಟ್ಟ ವರ್ಷದ ಮೊದಲ ಪುಸ್ತಕವಿದು. ಓದಿ ಮುಗಿಸಿದ ಬಳಿಕ ರಿಲೀವ್ಡ್ ಆದ ಫೀಲಿಂಗ್.

ಕಾದಂಬರಿ ಪ್ರಸ್ತುತ ಸಮಾಜದಲ್ಲಿನ ಅನೇಕ ಸಮಸ್ಯೆಗಳನ್ನು, ಸಂಬಂಧಗಳ ಶಿಥಿಲತೆಯನ್ನು, ಅದಕ್ಕೆ ಕಾರಣವಾಗಬಲ್ಲ ಅನೇಕ ಅಂಶಗಳನ್ನು, ಮುಖ್ಯವಾಗಿ ಹಿರಿಯ ನಾಗರೀಕರು ಬದುಕಿನ ಸಂಧ್ಯಾಕಾಲದಲ್ಲಿ ಅನುಭವಿಸುತ್ತಿರುವ ತುಮುಲ, ತವಕ, ತಲ್ಲಣ, ಅಭದ್ರತೆ, ಅನಿಶ್ಚಿತೆಗಳನ್ನು, ನಗರೀಕರಣ ಮತ್ತು ಔದ್ಯೋಗಿಕ ಒತ್ತಡಗಳು ತಂದಿಟ್ಟ ಸಂದಿಗ್ದತೆಗಳ ಕುರಿತಾಗಿ ಹೇಳುತ್ತದೆ.

ಕೂಡು ಕುಟುಂಬ ವ್ಯವಸ್ಥೆ ಸರಿದು ಕ್ಯೂಬಿಕಲ್ ಫ್ಯಾಮಿಲಿ ಸಿಸ್ಟಂ ಮುನ್ನೆಲೆಗೆ ಬರುತ್ತಿರುವ ಈ ದಿನಗಳಲ್ಲಿ ಸಂಬಂಧಗಳು ತನ್ನ ಮೂಲಭೂತ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಮನುಷ್ಯ ತನ್ನೆದುರಿರುವ ಸಹಜ ಗಮ್ಯವನ್ನು ಮೀರಿ ಅಗಮ್ಯದತ್ತ ಸಾಗುತ್ತಿರುವುದೇ ಇದಕ್ಕೆ ಕಾರಣ. ಅಗಮ್ಯ ಎಂದರೇ ತಲುಪದಿರುವುದು, ಸೇರಲಾಗದ್ದು ಎನ್ನುವ ಅರ್ಥ ಬರುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಕಾದಂಬರಿಯಲ್ಲಿ ಬರುವ ಪ್ರತಿಯೊಬ್ಬರೂ ಗಮ್ಯವೆಂದುಕೊಂಡು ಅಗಮ್ಯದತ್ತ ಸಾಗುವವರೇ. ತನ್ನ ಉದ್ದೇಶ ಮತ್ತು ಹಿತಚಿಂತನೆಗೋಸ್ಕರ ಹೆತ್ತವರನ್ನು, ಬಂಧು ಬಾಂಧವರನ್ನು ಮತ್ತು ಸಮಾಜವನ್ನು ದೂರಗೊಳಿಸುವ ಯುವ ಜನತೆಯ ಪಯಣ ಮತ್ತು ಹೆತ್ತ ಮಕ್ಕಳಿಂದಲೇ ಅವಕೃಪೆ ಮತ್ತು ತಿರಸ್ಕಾರಕ್ಕೊಳಗಾಗಿ ದಿಕ್ಕೆಟ್ಟ ಹಿರಿಯ ಜೀವಗಳ ಭವಿಷ್ಯದ ಪಯಣ.. ಎಲ್ಲವೂ ಇಲ್ಲಿ ಅಗಮ್ಯವಾದುದೇ ಆಗಿದೆ. ಇಲ್ಲಿ ಯಾವುದೂ ನಿಶ್ಚಿತವಲ್ಲ. ತೀರವನ್ನು ತಲುಪಲು ತಿರುವುಗಳನ್ನು ದಾಟಬೇಕೆನ್ನುವುದು ನಿಶ್ಚಿತವಾದರೂ, ಅಸಲಿಗೆ, ತೀರವಿರುವುದೇ? ಎನ್ನುವ ಸಂದೇಹವೂ ಬಾರದಿರದು.

ಹಿರಿಯ ನಾಗರೀಕರ ಇಳಿಗಾಲದ ಬದುಕನ್ನು ಕುರಿತು ಹೇಳುವ ಈ ಕಾದಂಬರಿ, ಹೆತ್ತವರನ್ನು ಕಾಡಿಸಿ ಪೀಡಿಸಿ ಕಣ್ಣೀರು ಹಾಕಿಸುವ ಹಳೆಯ ಸಿನಿಮಾವಾಗಬಹುದಾದಂತಹ ಲಕ್ಷಣಗಳಿದ್ದರೂ ಅದನ್ನು ಹಾಗಾಗದಂತೆ ತಡೆಯಲು ಇಲ್ಲಿ ಹಲವಾರು ಅಂಶಗಳಿವೆ. ಮುಖ್ಯವಾಗಿ ಪ್ರೇಮಕಥೆ. ಅದು ಹದಿಹರೆಯದ್ದಲ್ಲ; ಪ್ರೌಢಾವಸ್ಥೆಯದ್ದು, ಗಾಢವಾದದ್ದು ಮತ್ತು ಕೊನೆಯಲ್ಲಿ ಬರುವ ಅನಿರೀಕ್ಷಿತ ತಿರುವು. ಈ ಎರಡು ಅಂಶಗಳು ಇಡೀ ಕಾದಂಬರಿಯ ಹೈಲೈಟ್ಸ್.

ನಗರ ಜೀವನದ ದಟ್ಟ ಚಿತ್ರಣ ಕಟ್ಟಿಕೊಡುವ ಕಾದಂಬರಿ ಕೆಲವು ಕಡೆ ಅತಿಯಾದ ವಿವರಗಳಿಂದ ಇಡಿಕಿರಿದಿದೆ. ಘಟನೆಗಳನ್ನು ಲಿಂಕ್/ಸಿಂಕ್ ಮಾಡಲು ಲೇಖಕಿ ಬಳಸಿರುವ ಪ್ರಜ್ಞಾಪ್ರವಾಹ ಮತ್ತು ಅಸಂಗತ ತಂತ್ರದ ನಡುವೆಯೂ ಇದೊಂದು ಉತ್ತಮ ಕಾದಂಬರಿಯಾಗಿ ನಿಲ್ಲುತ್ತದೆ. ಕಾದಂಬರಿಯ ವಸ್ತು ವಿಸ್ತಾರವಾದದ್ದು, ಗಂಭೀರವಾದದ್ದು ಮತ್ತು ಅದನ್ನು ಅಷ್ಟೇ ಗಹನವಾಗಿ ಲೇಖಕಿ ಪೂರ್ಣಿಮಾ ಅವರು ಪ್ರಸ್ತುತಿಪಡಿಸಿದ್ದಾರೆ.

ತಾವು ಹೆತ್ತು ಸಾಕಿ ಸಲಹಿ ಬೆಳೆಸಿದ ಮಕ್ಕಳ ಹಿಡಿ ಪ್ರೀತಿಗಾಗಿ ಹಂಬಲಿಸುವ ದಯಾಹೀನ ಸ್ಥಿತಿ ಜಗತ್ತಿನ ಯಾವ ತಂದೆತಾಯಿಗೂ ಬಾರದಿರಲಿ. ಆ ನಿಟ್ಟಿನಲ್ಲಿ ಯುವ ಜನರನ್ನು ಜಾಗೃತಗೊಳಿಸುವತ್ತ ಈ ಕಾದಂಬರಿ ಸಾಗಲಿ ಎನ್ನುವ ಆಶಯ ನನ್ನದು.

- ಮೋಹನ್ ಕುಮಾರ್ ಡಿ ಎನ್