ಅಗಲಿಕೆಯ ನೋವು

ಅಗಲಿಕೆಯ ನೋವು

ಬರಹ

ಅಗಲಿಕೆಯ ನೋವೇನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಆದರೂ, ದೂರದ ದಿಗಂತದತ್ತ ದ್ರಷ್ಟಿ ಹಾಯಿಸಿ ತನ್ನೆಲ್ಲ ವೇದನೆಯ ಮರೆಯುವ ವಿಪಲ ಪ್ರಯತ್ನ ಮಾಡುತ್ತಿದ್ದಳು. ಕಾರ್ಮೋಡ ಕರಗಿ ಮಳೆಯಾಗಿ, ಭೂಮಿ ತಾಯ ಮಡಿಲು ನೀರಾಗಿ ಹರಿದು, ಆಗಸ ತಿಳಿಯಾದರೂ ಶಾಂತಮ್ಮನ ಕಣ್ಣೀರು ಬತ್ತಿರಲಿಲ್ಲ. ಬುದ್ದಿ ಬಂದಾಗಿನಿಂದ ಆತ್ಮೀಯರೆನಿಸಿಕೊಂಡವರ ವಿಯೋಗದ ನೋವನುಂಡು ಬದುಕಿದ ಜೀವವದು. ಸದಾ ಕುಡಿದು ಮನೆಗೆ ಬರುತಿದ್ದ ಅಪ್ಪ, ಅಪ್ಪನ ಏಟು ತಿಂದೂ ಆತನ ಸೇವೆ ಮಾಡುತ್ತಾ ಒದ್ದೆ ಸೆರಗಿನ ಜೊತೆ ಬದುಕುತಿದ್ದ ಅಮ್ಮ. ಆಗೆಲ್ಲ ಅರ್ಥವಾಗದ ಬದುಕಿನ ಅರ್ಥ ಹುಡುಕುವ ಎಳೆ ಜೀವವಾಗಿತ್ತದು. ಅಜ್ಜಿಯ ಸಾಂಗತ್ಯ ಇಲ್ಲದಿರುತ್ತಿದ್ದರೆ ಮೊಗ್ಗಲ್ಲೇ ಮುರುಟಿ ಹೋದ ಹೂವಗಿರುತ್ತಿದ್ದಳೇನೊ!

ತೀರ ಬಡತನದ ಬದುಕಾಗಿರಲಿಲ್ಲ ಶಾಂತಮ್ಮನ ಬಾಲ್ಯ. ಹಾಕಲು ಮೈ ತುಂಬ ಬಟ್ಟೆ, ಊಟಕ್ಕೆ ಹೊಟ್ಟೆ ತುಂಬ ಅನ್ನ, ಮಲಗಲು ಕೈ ಕಾಲು ಚಾಚಿದರೂ ಮಿಕ್ಕುವಷ್ಟು ಜಾಗವಿರುವ ಮನೆಗೇನು ತೊಂದರೆ ಇರಲಿಲ್ಲ. ಬಡತನಕ್ಕೆ ಮನೆ ತುಂಬ ಮಕ್ಕಳು, ಮೈ ತುಂಬ ಸಾಲ ಎಂಬ ಸಮಸ್ಯೆಯೂ ಇರಲಿಲ್ಲ. ಶಾಂತಿಯ ಇಲ್ಲದಿರುವಿಕೆ ಬಿಟ್ಟರೆ ಬೇರೆ ಯಾವ ಬಡತನವಿರಲಿಲ್ಲ.

ಜೂನ್ ತಿಂಗಳ ದಿಡೀರ್ ಮಳೆಗೆ ಸಿಕ್ಕಿ ಚಳಿ ಜ್ವರಕ್ಕೆ ಸಿಕ್ಕ ಅಜ್ಜಿಯ ಆರೋಗ್ಯ ಆಕೆಯನ್ನು ತಿರುಗಿ ಬಾರದ ಲೋಕಕ್ಕೆ ಕೊಂಡೊಯ್ಯುವಲ್ಲಿಗೆ ಕೊನೆಗೊಂಡಿತು. ಅಜ್ಜಿಯ ಸಾವು ಶಾಂತಮ್ಮನ ಬಾಲ್ಯದ ಮೇಲೆ ಅನುಭವಿಸಲಾರದಷ್ಟು ಪರಿಣಾಮ ಬೀರಿತ್ತು. ಒಂದಷ್ಟು ದಿನ ಮರಿಗುಬ್ಬಿಯಂತೆ ಮೂಲೆ ಸೇರಿ ಕೂತ ಪುಟ್ಟ ಹುಡುಗಿಗೆ ಕಳೆದುಕೊಂಡ ಅಜ್ಜಿಯ ಮಮತೆಯ ಅವಶ್ಯಕತೆ ಇತ್ತು. ಮೊದ ಮೊದಲು ಅಳುವ ಹುಡುಗಿಯ ನಿರ್ಲಕ್ಷಿಸುತಿದ್ದ ಅಮ್ಮ, ಕರುಳ ಕುಡಿಯ ನೋವಿನ ಪರಿದಿಯೊಳಗೆ ಬರತೊಡಗಿದಳು. ಅಜ್ಜಿಯ ಮಮತೆಯ ಜೊತೆಗೆ ತಾಯ ಒಲವು, ಪ್ರೀತಿ ಶಾಂತಮ್ಮನಿಗೆ ತುಸು ವಿಳಂಬವಾದರು, ತನ್ನ ತಾಯಿಯಿಂದಲೇ ದೊರಕಿತು. ಅಪ್ಪ ಕುಡುಕನಾದರೂ, ತಾಯಿಗೆ ಕಷ್ಟ ಕೊಡುತ್ತಿದ್ದರೂ, ಶಾಂತಮ್ಮನಿಗೆ ಯಾವುದೇ ಕಷ್ಟ ಕೊಡುತ್ತಿರಲ್ಲ, ಹಾಗೆ ಪ್ರೀತಿಯೂ ಸಿಗುತ್ತಿರಲಿಲ್ಲ.

ಇನ್ನೇನು ಕಾಲೇಜ್ ಮೆಟ್ಟಿಲೇರಿ ಬದುಕಿನಲ್ಲೊಂದು ಮಹತ್ವದ ಮೆಟ್ಟಿಲನೇರುವ ತವಕದಲ್ಲಿರುವಾಗಲೇ ಬರಸಿಡಿಲಿನಂತೆ ಮತ್ತೊಂದು ಆಘಾತ. ಶಾಂತಮ್ಮನಿಗಾಗಿ ತುಡಿಯುತ್ತಿದ್ದ ಅವಳಮ್ಮನ ಬದುಕಿಗೊಂದು ತಿಲಾಂಜಲಿ ಇಟ್ಟಿದ್ದ ಯಮರಾಜ. ಅಜ್ಜಿಯು ಸತ್ತಾಗ ಅಜ್ಜಿ ಇನ್ನಿಲ್ಲ ಅನ್ನುವ ನೋವೊಂದೆ ಕಾಡಿದ್ದರೆ, ಅಮ್ಮ ಸತ್ತಾಗ ಅಗಲಿಕೆಯ ನೋವಿನ ಜೊತೆ ಮುಂದೇನು ಅನ್ನುವ ಪ್ರಶ್ನೆ ಶಾಂತಮ್ಮನ ಬಲವಾಗಿ ಕಾಡಿತ್ತು. ಮುಂದುವರಿಸಲಾಗದ ಕಾಲೇಜು, ಹಿಂಸಿಸಲು ಯಾರೂ ಸಿಗದಿರುವ ಅಪ್ಪ, ಎಲ್ಲ ಗೊಂದಲಮಯವಾಗಿತ್ತು ಬದುಕು. ಅಪ್ಪ ಸೋತ ಸೈನಿಕನಂತೆ ದಿನೇ ದಿನೇ ಸೊರಗಿಹೊಗುತಿದ್ದ. ಮನೆಯ ಕೆಲಸ, ಅಪ್ಪನ ಆರೈಕೆಯಲ್ಲೆ ಮುಂದಿನ ಬದುಕು ಕಳೆದು ಹೋಗುತಲಿತ್ತು.

ಶಾಂತಮ್ಮನ ತಂದೆಯ ದೂರದ ಸಂಬಂದದ ಹುಡುಗನೊಬ್ಬ ಆಕೆಯನ್ನು ಮದುವೆಯಾಗಲು ಮುಂದಾದಾಗ ಮದುವೆಯ ಬಗ್ಗೆ ಯಾವುದೇ ಕಲ್ಪನೆ ಇರದ ಶಾಂತಮ್ಮ ಒಪ್ಪಿಗೆಯ ತಲೆಯಾಡಿಸಿದ್ದಳು. ಮುಂದೆ ಮದುವೆ, ಮತ್ತೆರಡೆ ತಿಂಗಳಲ್ಲಿ ಅವಳಪ್ಪನ ಸಾವು, ಶಾಂತಮ್ಮನಿಗೆ ಸಂತೋಷಪಡಲು, ದುಃಖಪಡಲು ಅವಕಾಶವೀಯಲೇ ಇಲ್ಲ. ಇದ್ದ ಒಂದೇ ಕೊಂಡಿ ಕಳಚಿ ಬಿದ್ದ ನೋವನ್ನು ಹೇಗೆ ಸಹಿಸಬೇಕೆಂಬ ಜಂಜಾಟದಲ್ಲೇ ದಿನದೂಡಿದಳವಳು.

ಮದುವೆಯಾಗಿ ಗಂಡನ ಮನೆ ಸೇರಿದ ಶಾಂತಮ್ಮನಿಗೆ ಅತ್ತೆಯ ಕಿರುಕುಳವಿರಲಿಲ್ಲ. ಗಂಡನ ಮುದ್ದು ಮಡದಿಯಾಗಿ, ಅತ್ತೆಯ ಪ್ರೀತಿಯ ಸೊಸೆಯಾಗಿ ಸಂಸಾರವನ್ನು ನಿಭಾಯಿಸುತಿದ್ದಳು ಶಾಂತಮ್ಮ. ಮಿಲಿಟರಿಯಲ್ಲಿ ಕೆಲಸ ಮಾಡುತಿದ್ದ ಶಾಂತಮ್ಮನ ಗಂಡ ಮದುವೆಯಾಗಿ ಮೂರನೆ ತಿಂಗಳಿಗೆ ಗಡಿನಾಡಿನತ್ತ ಪಯಣ ಬೆಳೆಸಬೇಕಾಯ್ತು. ಮತ್ತದೇ ಅಗಲಿಕೆಯ ನೋವು. ಆದರೂ, ಗಂಡ ತಿರುಗಿ ಬರುವರು ಎಂಬ ಅವಳ ಆಸೆ, ಈ ಅಗಲಿಕೆಯನ್ನು ಸಹಿಸುತಿತ್ತು. ವರ್ಷವೊಂದಕ್ಕೆ ಮೂರು ತಿಂಗಳು ಗಂಡನ ಸನಿಹ, ಮಿಕ್ಕಿದ ಒಂಬತ್ತು ತಿಂಗಳು ಗಂಡನಿಂದ ದೂರ ಇರುವ ವಿರಹ, ಶಾಂತಮ್ಮನಿಗೆ ಅಭ್ಯಾಸವಾಗಿತ್ತು. ಅಗಲಿಕೆಯ ನೋವು ಅವಳ ಬದುಕಿನ ಒಂದು ಭಾಗವಾಗಿತ್ತು.

ಮದುವೆಯಾಗಿ ಎರಡನೆ ವರ್ಷಕ್ಕೆ ಅತ್ತೆಯ ಕೈಗೆ ಸುಂದರವಾದ ಒಂದು ಗಂಡು ಮಗುವನ್ನಿತ್ತಿದ್ದಳು ಶಾಂತಮ್ಮ. ಮಗುವಿನ ಲಾಲನೆ, ಪಾಲನೆ ಮಾಡುವದರಲ್ಲಿ ಶಾಂತಮ್ಮನ ಮನೆ, ಮನಸ್ಸು ನಂದನವನವಾಗಿತ್ತು. ಕುಲಪುತ್ರನಿಗೆ ಸಂದೀಪ ಎಂದು ನಾಮಕರಣ ಮಾಡಿಸಿದಳು ಶಾಂತಮ್ಮ. ಮಗನಿಗೆ ಐದು ವರ್ಷ ಮುಗಿಯುವುದರಲ್ಲಿ ಶಾಂತಮ್ಮನ ಗಂಡ ಮಿಲಿಟರಿ ಸರ್ವಿಸ್ ಮುಗಿಸಿ ವಾಪಾಸಾಗಿದ್ದ.

"ಶಾಂತೂ" ಎಂದು ಕೂಗುತ್ತಿರುವ ಗಂಡನ ಕೂಗಿಗೆ, ವಾಸ್ತವಕ್ಕೆ ಇಳಿದು ಬಂದಳು ಶಾಂತಮ್ಮ. ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಒದ್ದೆಯಾಗಿದ್ದ ಕಣ್ಣುಗಳಿಗೆ ತನ್ನ ಸೆರಗನೊತ್ತಿಕೊಂಡಳು.
"ಯಾಕೆ, ನಮ್ಮದಲ್ಲದ್ದರ ಬಗ್ಗೆ ಇನ್ನೂ ಕೊರಗುತಿದ್ದಿಯಾ ಶಾಂತೂ?" ಗಂಡನ ಸಾಂತಾನ್ವದ ನುಡಿ.
"ಇದ್ದ ಒಂದೇ ಕರುಳ ಬಳ್ಳಿ, ಹೆತ್ತವರನ್ನು ಬಿಟ್ಟು ಹೋದ ಮಾತ್ರಕೆ ನಮ್ಮದಲ್ಲದೇ ಹೊಗುವನೇನ್ರಿ?".
"ನಿನ್ನ ಪ್ರಶ್ನೆಯೇ ನಿನಗೆ ಉತ್ತರ. ಹೆತ್ತವರನ್ನು ತ್ಯಜಿಸಿ ಹೋದವನ ಬಗ್ಗೆ ಯೋಚಿಸಿದರೆಷ್ಟು, ಬಿಟ್ಟರೆಷ್ಟು!".

ಶಾಂತಮ್ಮನ ಗಂಡನಿಗೂ ಮಗನ ನಡವಳಿಕೆಯಿಂದ ಮನಸ್ಸಲ್ಲಿ ಗಾಡವಾದ ಗಾಯ ಮಾಡಿತ್ತು. ಮನಸ್ಸಿಗಾದ ನೋವಿಂದ ಹೆಚ್ಚಾಗಿ, ಪತ್ನಿಯನ್ನು ಸಮಾಧಾನ ಮಾಡುವುದೇ ಸ್ವಲ್ಪ ಕಷ್ಟಕರವಾದ ಕೆಲಸವಾಗಿತ್ತವನಿಗೆ. ಇರುವನೊಬ್ಬನೇ ಮಗನೆಂದು ತನ್ನೆಲ್ಲ ಪ್ರೀತಿಯ ಧಾರೆಯೆರೆದು ಬೆಳೆಸಿ, ವಿಪರೀತವಾಗಿ ಹಚ್ಚಿಕೊಂಡಿದ್ದಳು ಶಾಂತಮ್ಮ. ಮಗನನ್ನು ಮನೆಯಿಂದ ನೂರು ಕಿ.ಮಿ ದೂರವಿರುವ ಹಾಸ್ಟೆಲಿನಲ್ಲಿರಿಸಿ ಕಾಲೇಜಿಗೆ ಸೇರಿಸುವಾಗಲೇ, ಅವನನ್ನು ಬಿಟ್ಟಿರಬೇಕಲ್ಲ ಎಂದು ಹಲುಬಿದ್ದಳು. ತಿಂಗಳಿಗೆ ಎರಡು ಸಾರಿ ಮನೆಗೆ ಬರುತ್ತಿದ್ದರೂ, ಪ್ರತಿಸಾರಿ ಅವನು ತಿರುಗಿ ಹೋಗುವಾಗ ಜೋಲು ಮುಖ ಹಾಕಿ ಮಗನು ಹೋಗುವ ದಾರಿಯ ನೋಡುತ್ತಾ ನಿಲ್ಲುತ್ತಿದ್ದಳು. ಅವಳ ಬದುಕಿನಲ್ಲಿ ಮಗ ಮತ್ತು ಗಂಡ ಬಿಟ್ಟರೆ ಬೇರೆ ಯಾವುದಕ್ಕೂ ಆಸ್ಪದವಿರಲಿಲ್ಲವೆಂಬಂತಿತ್ತು.

ನಿದ್ದೆಯ ಮಡಿಲಿಗೆ ಜಾರಬೇಕೆಂಬ ಶಾಂತಮ್ಮನ ಇಚ್ಚೆಗೆ ವಿರುದ್ದವಾಗಿ, ನಿದ್ರಾದೇವಿ ಅವಳ ತೋಳತೆಕ್ಕೆಯಿಂದ ಹೊರಜಾರುತಿತ್ತು. ಮನೆಯಿಂದ ದೂರ ಸರಿದಿದ್ದ ಮಗ, ಮನಸ್ಸಿಂದ ಕೂಡ ದೂರ ಸರಿಯುವನೆಂಬ ಕಲ್ಪನೆಯೇ ಇರದ ಶಾಂತಮ್ಮ ನಿಶಬ್ದವಾಗಿ ಕಣ್ಣಿರು ಹಾಕಹತ್ತಿದಳು. ಮನಸ್ಸು ಬೇಡ ಬೇಡವೆಂದರೂ ಹಿಡಿತಕ್ಕೆ ಸಿಗದೇ ಕಳೆದು ಹೋದ ದಿನಗಳ ಬೆನ್ನಕ್ಕಿತು. ಇಂಜಿನಿಯರಿಂಗ್ ಮುಗಿಸಿದ ಸಂದೀಪ್ ಬಹುರಾಷ್ಟಿಯ ಕಂಪೆನಿ ಸೇರಿಕೊಂಡ. ಮೊದಲೇ ಬುದ್ದಿವಂತನಾಗಿದ್ದ ಸಂದೀಪನಿಗೆ ಒಂದೇ ವರ್ಷದಲ್ಲಿ ಅಮೇರಿಕಾ ಹೋಗುವ ಅವಕಾಶ ದೊರಕಿತು. ಶಾಂತಮ್ಮನಿಗೆ ಇಷ್ಟವಿಲ್ಲದಿದ್ದರೂ, ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಒಲ್ಲದ ಮನಸ್ಸಿಂದ ಒಪ್ಪಿದ್ದಳಾಕೆ. ಪ್ರ್‍ಈತಿಯಿಂದ ಸಾಕಿದ ಬೆಳೆಸಿದ ಮಗ ಅಮೇರಿಕ ಹೊರಟು ನಿಂತಾಗ ಮತ್ತದೇ ಅಗಲಿಕೆಯ ನೋವು.

ಮೊದಮೊದಲು ವಾರಕ್ಕೊಮ್ಮೆ ಫೋನ್ ಕರೆ ಮಾಡುತಿದ್ದ ಮಗ, ದಿನ ಕಳೆದಂತೆ ಕೆಲಸದ ಒತ್ತಡವೆಂಬ ಕಾರಣ ಹೇಳಿಕೊಂಡು ತಿಂಗಳಿಗೊಮ್ಮೆ ಮಾಡುತ್ತಿದ್ದ. ಹಾಗೂ ಹೀಗೂ ಎರಡು ವರ್ಷ ಕಳೆದ ನಂತರ ಊರಿಗೆ ಬಂದ ಮಗ ಜೊತೆಗೊಂದು ಹುಡುಗಿಯನ್ನ ಕರೆತಂದಿದ್ದ! ಶಾಂತಮ್ಮ ವಿಚಾರಿಸುವ ಮೊದಲೇ, ಈಕೆ ನನ್ನ ಹೆಂಡತಿ ಎಂದು ಪರಿಚಯಿಸಿದ. ಹೆತ್ತಮ್ಮನ ಒಂದು ಮಾತೂ ಕೇಳದೆ ಮಗ ಮಾಡಿಕೊಂಡ ಮದುವೆಯನ್ನ ಒಪ್ಪಿಕೊಳ್ಳುವುದು ಕಷ್ಟವಾಗಿತ್ತು ಗಂಡ ಹೆಂಡತಿ ಇಬ್ಬರಿಗೂ. ಒಪ್ಪಿಕೊಳ್ಳುತ್ತಿರಲ್ಲಿಲ್ಲ ಎಂದಲ್ಲಾ, ಮಗ ತಾನು ಈಕೆಯನ್ನ ಮದುವೆ ಅಗಬೇಕೆಂದಿದ್ದೇನೆ ಎಂದು ಒಂದು ಮಾತು ಹೇಳಿದ್ದರೆ ಸಂತೋಷದಿಂದ ಒಪ್ಪುತಿದ್ದಳು ಶಾಂತಮ್ಮ. ಪರಿಸ್ಥಿತಿಯ ಅರ್ಥ ಮಾಡಿಕೊಳ್ಳದ ಮಗ, ಅರ್ಥ ಮಾಡಿಸುವ ಗೋಡವೆಗೂ ಹೋಗದೆ ಹೆಂಡತಿಯನ್ನು ಕರೆದುಕೊಂಡು ಮನೆ ಬಿಟ್ಟು ಹೊರಟು ಹೋದ!

ಮಗ ಮನೆ ಬಿಟ್ಟು ಹೋಗುವ ಮಾತು ತೆಗೆದಾಗ, ಅಡವುಗಚ್ಚಿದ್ದ ದುಃಖವನ್ನೆಲ್ಲಾ ಹೊರಹಾಕಿ ಅವನನ್ನು ತಡೆಯೋ ಪ್ರಯತ್ನ ಮಾಡುತ್ತಿದ್ದಳು. ನಿರ್ಲಿಪ್ತತೆಯಿಂದ ನಿಂತ ಗಂಡನನ್ನು ಗೋಗರೆದು, ಮಗನ ಮನಸ್ಸನು ಬದಲಾಯಿಸಲು ಕೇಳಿಕೊಳ್ಳುತ್ತಿದ್ದಳು ಶಾಂತಮ್ಮ. ಮಗ ಅಪ್ಪ-ಅಮ್ಮನ ಧೈನ್ಯತೆಯ ಪರಿದಿಗೆ ಬೀಳದೇ, ತಾನು ಕರೆತಂದಿರುವ ಹೆಂಡತಿ ಮತ್ತು ತಂದಿರುವ ಬ್ಯಾಗ್ ಹೆಗಲಿಗೇರಿಸಿಕೊಂಡು ಹೊರ ನಡೆದ. ಶಾಂತಮ್ಮನ ಗಂಡ ಬಾಡಿಹೋದ ಮುಖಯನ್ನು ಹೊತ್ತು ಒಳ ನಡೆದ, ಬರಸಿಡಿಲಿಗೆ ಧರೆಗುರುಳಿದ ಮರವಿನೋಪಾದಿ ಶಾಂತಮ್ಮ ಅಂಗಳಕ್ಕುರುಳಿದಳು. ಹಡೆದ ಮಗನ ವರ್ತನೆ ಆಕೆಯ ಮನಸ್ಸನ್ನು ಗಾಡವಾಗಿ ನೋಯಿಸಿತ್ತು. ಅದೆಷ್ಟು ಸಮಯ ಹಾಗೆ ಬಿದ್ದಿದ್ದಳೊ, ಸ್ವಲ್ಪ ಸಮಯದ ನಂತರ, ಆಕೆಯ ಗಂಡ ಅವಳನ್ನು ಸಮಾಧಾನ ಮಾಡಿಸುತ್ತ ಒಳಗೆ ನಡುಮನೆಯಲ್ಲಿ ಮಲಗಿಸಿದ. ಗಂಡ-ಹೆಂಡರಿಗಿಬ್ಬರಿಗೂ ಉಪವಾಸವೇ ಊಟ ಆದಿನ.

ಗಂಡನ ಇರುವಿನ ಮುಂದೆ ತನ್ನ ನೋವನ್ನು ಮರೆಯುವ ವಿಪಲ ಪ್ರಯತ್ನ ಮಾಡುತಿದ್ದಳು. ಹಣೆ ಸವರುತ್ತಾ ತನ್ನ ಸಮಾಧಾನ ಮಾಡುವ ಗಂಡನತ್ತ ಆಕೆಯ ಮನಸ್ಸು ವಾಲಹತ್ತಿತು. ಮನಸ್ಸಲ್ಲೇನೋ ಒಂದು ದ್ರಡ ನಿರ್ಧಾರ, ಉಕ್ಕಿ ಬಂದ ದುಃಖವನ್ನೆಲ್ಲ ಹೊರಹಾಕಿ, ಮಳೆ ನಿಂತ ಶುಭ್ರ ಆಕಾಶದಂತೆ ಪ್ರಸನ್ನಳಾದಳು ಶಾಂತಮ್ಮ. ಅಗಲಿಕೆಯ ನೋವೆನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಗಂಡನನ್ನು ಹೊರತು ಪಡಿಸಿ, ಮುಂದೆ ತನ್ನನ್ನು ಅಗಲುವ ಜೀವ ಇನ್ನಾವುದೂ ಉಳಿದಿಲ್ಲ ಅನ್ನುವ ಸತ್ಯ ಅವಳರಿವಿಗೆ ಬಂತು. ಸುಮಂಗಲಿಯಾಗಿ ಸಾಯುವ ವರ ಕೊಡಪ್ಪಾ ಎಂದು ಕಾಣದ ದೇವರ ಪ್ರಾಥಿಸುತ್ತಾ, ಗಟ್ಟಿ ಮನಸ್ಸು ಮಾಡಿ, ಗಂಡನ ತೊಡೆಯ ಮೇಲೆ ನಿದ್ದೆಗೆ ಜಾರಿದಳು.