ಅಗಲಿದ ಗ್ರಾಮಾಭಿವೃದ್ಧಿಯ ಹರಿಕಾರ ಕೆ. ಎಂ. ಉಡುಪ
ಕೃಷಿಗೆ ಸಾಲ ಕೊಡುವುದು ರಿಸ್ಕ್ ಎಂಬುದು ೧೯೭೦ರ ದಶಕದ ತನಕ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯವನ್ನೇ ಬದಲಾಯಿಸಿ, ಎಲ್ಲ ಬ್ಯಾಂಕುಗಳೂ ಕೃಷಿಗೆ ಸಾಲ ಕೊಡುವಂತಾದ ಪರಿವರ್ತನೆಯಲ್ಲಿ ಮಹತ್ತರ ಪಾತ್ರ ವಹಿಸಿದವರು ಕೆ.ಎಂ. ಉಡುಪರು.
೨೭ ಜುಲಾಯಿ ೨೦೧೯ರಂದು ನಮ್ಮನ್ನು ಅಗಲಿದ ಕಾರ್ಕಡ ಮಂಜುನಾಥ ಉಡುಪರೊಂದಿಗೆ ೧೯೭೭-೭೮ರಲ್ಲಿ ಸುಮಾರು ಒಂದು ವರುಷ ನನ್ನ ಒಡನಾಟ. ಆಗಿನ ಕೆಲವು ನೆನಪುಗಳೊಂದಿಗೆ ಅವರಿಗೆ ನುಡಿನಮನ ಈ ಬರಹ.
ಬೆಂಗಳೂರಿನ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಜೂನ್ ೧೯೭೭ರಲ್ಲಿ ಕೃಷಿ ಪದವಿ ಪಡೆದು ಅಡ್ಡೂರಿಗೆ ಹಿಂತಿರುಗಿದ್ದೆ. ಸಿಂಡಿಕೇಟ್ ಕೃಷಿ ಪ್ರತಿಷ್ಠಾನದ ಸೂತ್ರಧಾರಿ ಕೆ.ಎಂ. ಉಡುಪರು ನನ್ನ ಕೆಲವು ಕನ್ನಡ ಬರಹಗಳನ್ನು ಗಮನಿಸಿದ್ದರು. “ಮಣಿಪಾಲಕ್ಕೆ ಬನ್ನಿ, ಫೌಂಡೇಷನಿನಲ್ಲಿ ಕೆಲಸ ಮಾಡಿ. ಫೌಂಡೇಷನಿನ ಮಾಸಪತ್ರಿಕೆ ಕೃಷಿಲೋಕವನ್ನು ಇನ್ನೂ ಚೆನ್ನಾಗಿ ಮಾಡಿ” ಎಂದು ಕರೆಸಿಕೊಂಡರು.
ಪ್ರತಿಷ್ಠಾನದ ನೂರಾರು ಕೃಷಿ ವಿಚಾರ ವಿನಿಮಯ ಕೇಂದ್ರಗಳ, ಜ್ಯೂನಿಯರ್ ಕಾಲೇಜುಗಳ ಯುವ ಕೃಷಿಕರ ಸಂಘಗಳ, ಬಾರ್ಕೂರು, ತೆಂಕಕಾರಂದೂರು ಮತ್ತು ವರ್ಕಾಡಿ ಫಾರ್ಮ್ ಕ್ಲಿನಿಕ್ಗಳ ಮೇಲುಸ್ತುವಾರಿ ಮತ್ತು “ಕೃಷಿಲೋಕ” ಮಾಸಪತ್ರಿಕೆಯ ತಯಾರಿ – ಇವು ಅಲ್ಲಿ ನನ್ನ ಮುಖ್ಯ ಕೆಲಸಗಳು. ಹಲವಾರು ಕೃಷಿ ವಿಚಾರ ವಿನಿಮಯ ಕೇಂದ್ರಗಳು ಹಾಗೂ ಫಾರ್ಮ್ ಕ್ಲಿನಿಕ್ಗಳಿಗೆ ಭೇಟಿ ನೀಡಿದ ನನಗೆ ಗ್ರಾಮೀಣ ಭಾರತದ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಸಿಕ್ಕಿತು. ಈ ಕಲಿಕೆಯ ಅವಕಾಶ ಒದಗಿಸಿದವರು ಕೆ.ಎಂ. ಉಡುಪರು. ಮುಂದೆ, ಕಾರ್ಪೊರೇಷನ್ ಬ್ಯಾಂಕಿನಲ್ಲಿ ಕೃಷಿ ಅಧಿಕಾರಿಯಾದ ನಂತರ, ನನ್ನ ವೃತ್ತಿ ಜೀವನದುದ್ದಕ್ಕೂ ಅದರಿಂದ ಸಹಾಯವಾಯಿತು.
ಪ್ರತಿ ತಿಂಗಳೂ “ಕೃಷಿಲೋಕ”ದ ಸಂಚಿಕೆಗಳನ್ನು ರೂಪಿಸುವಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಸಿಂಡಿಕೇಟ್ ಕೃಷಿ ಪ್ರತಿಷ್ಠಾನ ತೊರೆದ ನಂತರವೂ ಕೆ.ಎಂ. ಉಡುಪರೊಂದಿಗೆ ಹಾಗೂ “ಕೃಷಿಲೋಕ” ಪತ್ರಿಕೆಯೊಂದಿಗೆ ನನ್ನ ಸಂಬಂಧ ಮುಂದುವರಿಯಿತು. ೧೯೭೭ – ೧೯೮೫ರ ಅವಧಿಯಲ್ಲಿ “ಕೃಷಿಲೋಕ”ದಲ್ಲಿ ನನ್ಣ ೧೨೫ ಬರಹಗಳು ಪ್ರಕಟವಾದವು. ಅವು ನನ್ನ ಕೃಷಿ ಬರವಣಿಗೆಗೆ ಭದ್ರ ಬುನಾದಿ ಒದಗಿಸಿದವು. ಇಂತಹ ಅವಕಾಶ ನೀಡಿದ ಕೆ.ಎಂ. ಉಡುಪರನ್ನು ಮರೆಯಲಾಗದು.
ಅದೊಂದು ದಿನ ಬಹಳ ಸಂಭ್ರಮದಿಂದ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿಯ “ಕೃಷಿ ಆರ್ಥಿಕ ವಿಭಾಗ” ಪ್ರವೇಶಿಸಿದರು ಕೆ.ಎಂ. ಉಡುಪರು. ಹಿರಿಯ ಅಧಿಕಾರಿ ಅಂಬಸ್ತರನ್ನು ಉದ್ದೇಶಿಸಿ, ಉತ್ಸುಕ ಸ್ವರದಲ್ಲಿ (ಇಂಗ್ಲಿಷಿನಲ್ಲಿ) ಘೋಷಿಸಿದರು: “ಕೇವಲ ಅರ್ಧ ಎಕ್ರೆಯಲ್ಲಿ ಸಮಗ್ರ ಕೃಷಿ ಪದ್ಧತಿಯಲ್ಲಿ ಕೃಷಿ ಮಾಡಿ ಗಣನೀಯ ಲಾಭ ಗಳಿಸಬಹುದು ಎಂಬ ನಮ್ಮ ಸಿದ್ಧಾಂತಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ.” ಯಾಕೆಂದರೆ, ಅಂದಿನ “ಫೈನಾನ್ಸಿಯಲ್ ಎಕ್ಸ್ಪ್ರೆಸ್” ಇಂಗ್ಲಿಷ್ ಪತ್ರಿಕೆಯಲ್ಲಿ ಆ ಬಗ್ಗೆ ಅವರ ಲೇಖನ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿತ್ತು.
ಸಿಂಡಿಕೇಟ್ ಕೃಷಿ ಪ್ರತಿಷ್ಠಾನದ ೧೯೭೭-೭೮ರ ವಾರ್ಷಿಕ ವರದಿ ರಚಿಸಬೇಕಾಗಿತ್ತು. ಕಚೇರಿಯಲ್ಲಿ ಕೆಲಸದ ಒತ್ತಡವಿದ್ದ ಕಾರಣ, ಮಂದರ್ತಿಯ ತಮ್ಮ ಮನೆಗೇ ಭಾನುವಾರ ಬರಹೇಳಿದರು. ಅಲ್ಲಿ, ಯಾವುದೇ ಕಾಗದಪತ್ರಗಳನ್ನು ಪರಿಶೀಲಿಸದೆ, ನೆನಪಿನ ಬಲದಿಂದಲೇ ಅವರು ವಾರ್ಷಿಕ ವರದಿ ಹೇಳುತ್ತಾ ಹೋದಂತೆ ನಾನು ಬರೆದುಕೊಂಡೆ. ಅವರ ಕೆಲಸದ ತಾದಾತ್ಮ್ಯಕ್ಕೆ ಇದೊಂದು ಉದಾಹರಣೆ.
ಕೆ.ಎಂ. ಉಡುಪರ ಜನನ ಕಾರ್ಕಡದಲ್ಲಿ ೨೨ ಆಗಸ್ಟ್ ೧೯೩೮ರಂದು. ತಂದೆ ವಾಸುದೇವ, ತಾಯಿ ಲಕ್ಷ್ಮೀದೇವಿ. ಮಂದಾರ್ತಿ ಶಾಲೆಯಲ್ಲಿ ಅವರ ಪ್ರಾಥಮಿಕ ಶಿಕ್ಷಣ, ಕೋಟದಲ್ಲಿ ಹೈಸ್ಕೂಲು ಶಿಕ್ಷಣ. ಬಳಿಕ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಓದಿದರು. ನಂತರ ಹೆಬ್ಬಾಳದ ಕೃಷಿ ವಿದ್ಯಾಲಯದಲ್ಲಿ ಕಲಿತು, ಬಿ.ಎಸ್ಸಿ.(ಕೃಷಿ) ಪದವೀಧರರಾದರು. ಅನಂತರ ಕಟಕ್ನ ಕೇಂದ್ರೀಯ ಸಂಸ್ಥೆಯಲ್ಲಿ ಭತ್ತದ ಕೃಷಿ ಬಗ್ಗೆ ಸ್ನಾತಕೋತ್ತರ ಡಿಪ್ಲೋಮಾ ಪೂರೈಸಿದರು. ೧೯೫೯ರಿಂದ ೧೯೬೫ರ ತನಕ ಕೃಷಿ ಇಲಾಖೆಯಲ್ಲಿ ಭತ್ತದ ಬೆಳೆಯ ಸಂಶೋಧನಾ ಅಧಿಕಾರಿಯಾಗಿದ್ದರು.
ಸಿಂಡಿಕೇಟ್ ಬ್ಯಾಂಕಿನಲ್ಲಿ: ಮಣಿಪಾಲದ ನೇತಾರ ಟಿ.ಎ. ಪೈ ಅವರ ಆಹ್ವಾನದ ಮೇರೆಗೆ ೧೯೬೫ರಲ್ಲಿ ಸಿಂಡಿಕೇಟ್ ಬ್ಯಾಂಕ್ ಸೇರಿದರು ಕೆ.ಎಂ. ಉಡುಪರು. ಆಗ ಕೃಷಿಗೆ ಮತ್ತು ಕೃಷಿಕರಿಗೆ ಯಾವುದೇ ಬ್ಯಾಂಕ್ ಸಾಲ ನೀಡುತ್ತಿರಲಿಲ್ಲ. ಆದರೆ, ಕೃಷಿಕರಿಗೆ ಸಾಲ ನೀಡಿಕೆ ಗ್ರಾಮೀಣ ಅಭಿವೃದ್ಧಿಗೆ ಪೂರಕವೆಂಬುದು ಟಿ.ಎ. ಪೈಗಳ ಚಿಂತನೆ. ಅದಕ್ಕಾಗಿ, ಸಿಂಡಿಕೇಟ್ ಬ್ಯಾಂಕಿನಲ್ಲಿ ಕೃಷಿ ಆರ್ಥಿಕ ವಿಭಾಗ ಆರಂಭಿಸಿ, ಕೆ.ಎಂ. ಉಡುಪರಿಗೆ ಅದನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿದರು. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು ಉಡುಪರು.
ರೈತರಿಗೆ ಸುಲಭ ಸಾಲ ಯೋಜನೆಗಳು, ಸಣ್ಣ ಹಿಡುವಳಿಗಳ ಅಭಿವೃದ್ಧಿಗೆ ಸಮರ್ಥ ನಿರ್ವಹಣಾ ಯೋಜನೆಗಳು, ಗೋಬರ್ ಅನಿಲ ಸ್ಥಾವರಗಳ ನಿರ್ಮಾಣಕ್ಕೆ ಸಾಲ ಸೌಲಭ್ಯ, ಬ್ಯಾಂಕಿನಲ್ಲಿ ಸಮಗ್ರ ಗ್ರಾಮೀಣಾಭಿವೃದ್ಧಿ ಶಾಖೆಗಳ ಸ್ಥಾಪನೆ, ಸಿಂಡಿಕೇಟ್ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರಗಳು, ಯುವ ಕೃಷಿಕರ ಸಂಘಗಳು ಹಾಗೂ ಫಾರ್ಮ್ ಕ್ಲಿನಿಕ್ಗಳ ಸ್ಥಾಪನೆ – ಇವು ನಮ್ಮ ದೇಶದ ಕೃಷಿ ಆರ್ಥಿಕ ರಂಗದಲ್ಲಿ ಕೆ.ಎಂ. ಉಡುಪರು ಉಳಿಸಿ ಹೋಗಿರುವ ಕೆಲವು ಶಾಶ್ವತ ಹೆಜ್ಜೆ ಗುರುತುಗಳು.
ಮನೆಗಳಿಗೆ ಸೌರಬೆಳಕು: ಸಿಂಡಿಕೇಟ್ ಬ್ಯಾಂಕಿನಲ್ಲಿದ್ದಾಗಲೇ ಐದು ವರುಷ ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಕೆ.ಎಂ. ಉಡುಪರು. ಈ ಅವಧಿಯಲ್ಲಿ ಅವರ ದೊಡ್ಡ ಸಾಧನೆ: ಸಾವಿರಾರು ಮನೆಗಳಿಗೆ ಬೆಳಕು ನೀಡಿದ್ದು. ಇದರ ಹಿನ್ನೆಲೆ ಹೀಗಿದೆ: ಸೌರಶಕ್ತಿ ಕ್ರಾಂತಿಯ ಹರಿಕಾರ ಹರೀಶ್ ಹಂದೆ ಅವರು ಮನೆಗಳಲ್ಲಿ ಸೌರವಿದ್ಯುತ್ ಘಟಕಗಳನ್ನು ಅಳವಡಿಸಲು ಸಾಲ ನೀಡಬೇಕೆಂದು ಹಲವು ಬ್ಯಾಂಕುಗಳನ್ನು ವಿನಂತಿಸಿದ್ದರು. ಯಾರೂ ಈ ವಿನಂತಿಗೆ ಸ್ಪಂದಿಸದ ಸಂದರ್ಭದಲ್ಲಿ, ಕೆ.ಎಂ. ಉಡುಪರು ಮಲಪ್ರಭಾ ಗ್ರಾಮೀಣ ಬ್ಯಾಂಕಿನಿಂದ ಸೌರವಿದ್ಯುತ್ ಘಟಕಗಳಿಗೆ ಸಾಲ ನೀಡುವ ದಿಟ್ಟ ನಿರ್ಧಾರ ಕೈಗೊಂಡರು. ಇದು, ಈ ಯೋಜನೆಯನ್ನು ಇತರ ಎಲ್ಲ ಬ್ಯಾಂಕುಗಳು ಜ್ಯಾರಿ ಮಾಡಲು ನಾಂದಿಯಾಯಿತು.
ಭಾರತೀಯ ವಿಕಾಸ ಟ್ರಸ್ಟಿನ ಮುಂಚೂಣಿಯಲ್ಲಿ: ಕೆ.ಎಂ. ಉಡುಪರು ಸಿಂಡಿಕೇಟ್ ಬ್ಯಾಂಕಿನಿಂದ ನಿವೃತ್ತರಾಗಿ, ದಿ. ಟಿ.ಎ. ಪೈಗಳು ಸ್ಥಾಪಿಸಿದ್ದ ಮಣಿಪಾಲ - ಪೆರಂಪಳ್ಳಿಯ ಭಾರತೀಯ ವಿಕಾಸ ಟಸ್ಟನ್ನು ಸೇರಿದ್ದು ೧೯೯೬ರಲ್ಲಿ. ಅನಂತರ ಅದರ ಮೆನೇಜಿಂಗ್ ಟ್ರಸ್ಟಿಯಾಗಿ ಕೊನೆಯುಸಿರಿನ ತನಕ ಅದನ್ನು ಉಡುಪರು ಮುನ್ನಡೆಸಿದರು. ಕೃಷಿ, ಹೈನುಗಾರಿಕೆ, ಸೌರವಿದ್ಯುತ್, ಕೌಶಲ್ಯ ತರಬೇತಿ ಮತ್ತು ಸ್ವ-ಉದ್ಯೋಗ – ಇವುಗಳ ಮೂಲಕ ಗ್ರಾಮೀಣ ಅಭಿವೃದ್ಧಿ ಸಾಧಿಸುವ ಕನಸನ್ನು ಸಾಕಾರಗೊಳಿಸಲು ತನ್ನ ನಿವೃತ್ತ ಜೀವನವನ್ನೇ ಮುಡಿಪಾಗಿಟ್ಟರು. ಭಾರತೀಯ ವಿಕಾಸ ಟಸ್ಟ್ ಮೂಲಕ ದೇಶದಾದ್ಯಂತ ಸುಮಾರು ೧,೦೦೦ ತರಬೇತಿ ಶಿಬಿರ ಮತ್ತು ಕಾರ್ಯಾಗಾರ ನಡೆಸಿದರು. ೧೫,೦೦೦ ಮಿಕ್ಕಿ ಬ್ಯಾಂಕ್ ಮೆನೇಜರರಿಗೆ ಸೌರಶಕ್ತಿ ಘಟಕ ಬಗ್ಗೆ ತರಬೇತಿ ಒದಗಿಸಿದರು.
ಭಾರತಿಯ ವಿಕಾಸ ಟ್ರಸ್ಟ್ ಜೊತೆಗೆ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳಾದ ರುಡ್ಸೆಟ್ ಆಡಳಿತ ಮಂಡಲಿ, ಸಿಂಡಿಕೇಟ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ – ಇತ್ಯಾದಿ ಹಲವು ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ನಿಸ್ವಾರ್ಥ ಸೇವೆಯ ಮೂಲಕ ತಮ್ಮ ಛಾಪು ಮೂಡಿಸಿದ ಮರೆಯಲಾಗದ ಸಾಧಕರು ಕೆ.ಎಂ. ಉಡುಪ.