ಅಗಲಿದ ಚಿತ್ರನಟ ‘ಸೂರ್ಮಾ ಭೋಪಾಲಿ' ಜಗದೀಪ್

ಅಗಲಿದ ಚಿತ್ರನಟ ‘ಸೂರ್ಮಾ ಭೋಪಾಲಿ' ಜಗದೀಪ್

ನೀವು ಚಲನಚಿತ್ರಗಳನ್ನು ನೋಡುವಿರಾದರೆ ನಿಮಗೆ ಈ ವಿಷಯ ತಿಳಿದೇ ಇರುತ್ತದೆ. ಕೆಲವು ಹಾಸ್ಯ ನಟರಿರುತ್ತಾರೆ ಅವರು ತೆರೆಯ ಮೇಲೆ ಬಂದ ಕೂಡಲೇ ನಮ್ಮಲ್ಲಿ ಹಾಸ್ಯ ಉಕ್ಕುತ್ತದೆ. ಅವರನ್ನು ನೋಡಿದಾಗಲೇ ಅವರ ಆಂಗಿಕ ಅಭಿನಯವೇ ನಮ್ಮನ್ನು ಹಾಸ್ಯಲೋಕಕ್ಕೆ ತೆರೆದಿಡುತ್ತೆ. ಕನ್ನಡದಲ್ಲಾದರೆ ನರಸಿಂಹರಾಜು, ದ್ವಾರಕೀಶ್ ಇವರ ಹಾಸ್ಯ ನಟನೆ ಇದಕ್ಕೆ ಉತ್ತಮ ಉದಾಹರಣೆ. ಅದೇ ಬಾಲಿವುಡ್ ಚಿತ್ರಲೋಕಕ್ಕೆ ಬಂದರೆ ಜಾನಿವಾಕರ್, ಕೇಷ್ಟೋ ಮುಖರ್ಜಿ, ಜಗದೀಪ್ ಮುಂತಾದವರ ಮುಖಗಳು ಎದುರಿಗೆ ಬರುತ್ತವೆ. ಮೊದಲಾದರೆ ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರಗಳಿಗೇ ಮೀಸಲಾದ ನಟರು ಇರುತ್ತಿದ್ದರು. ಆದರಿಂದು ಕಾಲ ಬದಲಾಗಿದೆ. ಅಂದಿನ ಕಾಲದ 70-80ರ ದಶಕದ ಖ್ಯಾತ ಹಾಸ್ಯ ನಟ ಜಗದೀಪ್ ಜುಲೈ ೮ರಂದು ನಮ್ಮನ್ನು ಅಗಲಿದ್ದಾರೆ. 

ಜಗದೀಪ್ ಹುಟ್ಟಿದ್ದು ೧೯೩೯ರ ಮಾರ್ಚ್ ೨೯ರಂದು ಮಧ್ಯಪ್ರದೇಶದಲ್ಲಿ. ಸಯ್ಯದ್ ಇಷ್ತಿಕ್ ಅಹಮದ್ ಜಾಫ್ರಿ ಎಂಬ ಬಾಲ್ಯದ ಹೆಸರು ಚಿತ್ರರಂಗಕ್ಕೆ ಬಂದ ಬಳಿಕ ಜಗದೀಪ್ ಎಂದಾಯಿತು. ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಸುಮಾರು ೪೦೦ ಚಿತ್ರಗಳಲ್ಲಿ ನಟಿಸಿರುವುದು ಸಾಮಾನ್ಯ ಸಂಗತಿಯಲ್ಲ. ಅಭಿಜ್ಞಾತ ಕಲಾವಿದರಾಗಿದ್ದ ಇವರು ತಮ್ಮ ಹಾಸ್ಯದ ಅಭಿನಯದಿಂದ ಎಲ್ಲರನ್ನೂ ನಕ್ಕು ನಗಿಸುತ್ತಿದ್ದರು. ತಮ್ಮ ಆಂಗಿಕ ಅಭಿನಯದೊಂದಿಗೆ ಕೀರಲು ಧ್ವನಿಯೊಂದಿಗೆ ನಟಿಸುತ್ತಿದ್ದ ಇವರು ಅಂದಿನ ಎಲ್ಲಾ ಖ್ಯಾತನಾಮ ನಟ-ನಟಿಯರೊಂದಿಗೆ ನಟಿಸಿದ್ದಾರೆ. 

ನಿರ್ದೇಶಕ -ನಿರ್ಮಾಪಕ ಬಿ.ಆರ್. ಚೋಪ್ರಾ ಅವರ ಅಫ್ಸಾನಾ ಚಿತ್ರದಲ್ಲಿ ಬಾಲನಟರಾಗಿ ನಟನೆಯನ್ನು ಪ್ರಾರಂಭಿಸಿದ ಜಗದೀಪ್ ಮತ್ತೆ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ‘ಅಬ್ ದಿಲ್ಲಿ ದೂರ್ ನಹೀ’ ಚಿತ್ರ ಜಗದೀಪ್ ಅವರಿಗೆ ಭಾಗ್ಯದ ಬಾಗಿಲು ತೆರೆಯಿತು. ನಂತರದ ದಿನಗಳಲ್ಲಿ ಕೆ.ಎ.ಅಬ್ಬಾಸ್ ಅವರ ಮುನ್ನಾ, ಗುರುದತ್ ಅವರ ಆರ್ ಪಾರ್, ಬಿಮಲ್ ರಾಯ್ ಅವರ ದೋ ಭೀಗಾ ಜಮೀನ್ ಹಾಗೂ ಹಮ್ ಪಂಚೀ ಏಕ್ ಡಾಲ್ ಕೆ ಚಿತ್ರಗಳು ಜಗದೀಪ್ ಅವರ ಚಿತ್ರ ರಂಗದ ಅಮೂಲ್ಯ ರತ್ನಗಳು. 'ಹಮ್ ಪಂಚೀ ಏಕ್ ಡಾಲ್ ಕೆ’ ಚಿತ್ರದಲ್ಲಿನ ಜಗದೀಪ್ ಅವರ ಅಭಿನಯವನ್ನು ಮೆಚ್ಚಿ ಕೊಂಡ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಪ್ರಶಂಸೆಯನ್ನು ವ್ಯಕ್ತ ಪಡಿಸಿ ಬಹುಮಾನ ನೀಡಿದ್ದರು. ಭಾಬಿ, ಬಿಂದಿಯಾ ಮುಂತಾದ ಚಿತ್ರಗಳಲ್ಲಿ ಪ್ರಮುಖವಾದ ಪಾತ್ರವನ್ನು ಮಾಡಿದ ಇವರು ‘ಬ್ರಹ್ಮಚಾರಿ' ಚಿತ್ರದಿಂದ ಪೂರ್ಣ ಪ್ರಮಾಣದ ಹಾಸ್ಯ ನಟರಾಗಿ ಬೆಳಕಿಗೆ ಬಂದರು.

೧೯೭೫ರಲ್ಲಿ ಬಿಡುಗಡೆಯಾಗಿ ಹಿಂದಿ ಚಿತ್ರರಂಗದಲ್ಲಿ ಇತಿಹಾಸವನ್ನೇ ನಿರ್ಮಿಸಿದ ಚಲನಚಿತ್ರ ‘ಶೋಲೆ'. ಈ ಚಿತ್ರದಲ್ಲಿ ಜಗದೀಪ್ ಅವರು ಒಂದು ಸಣ್ಣ ಪಾತ್ರವನ್ನು ಮಾಡಿದ್ದರು. ‘ಸೂರ್ಮಾ ಭೋಪಾಲಿ' ಎಂಬ ಈ ಪಾತ್ರ ಜಗದೀಪ್ ಅವರಿಗೆ ತುಂಬಾ ಹೆಸರನ್ನು ತಂದುಕೊಟ್ಟಿತು. ಮುಂದಿನ ದಿನಗಳಲ್ಲಿ ಅದೇ ಹೆಸರಿನ ಚಲನ ಚಿತ್ರವನ್ನೂ ಜಗದೀಪ್ ಅವರು ಸ್ವತಃ ಮುಖ್ಯಪಾತ್ರದಲ್ಲಿ ನಟಿಸಿ ನಿರ್ದೇಶಿಸಿದ್ದರು. ಶೆಹನ್ ಶಾ, ಫೂಲ್ ಔರ್ ಕಾಂಟೇ, ಅಂದಾಜ್ ಅಪ್ನಾ ಅಪ್ನಾ, ಚೈನಾ ಗೇಟ್, ಬಾಂಬೇ ಟು ಗೋವಾ, ಲೈಫ್ ಪಾರ್ಟ್ನರ್, ಗಲೀ ಗಲೀ ಚೋರ್ ಹೈ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಜಗದೀಪ್ ಅವರದ್ದು. ಚಿತ್ರದಲ್ಲಿ ತಮ್ಮ ಪಾತ್ರ ಎಷ್ಟೇ ಸಣ್ಣದಾಗಿದ್ದರೂ ಬೇಸರಿಸದೇ ಅದಕ್ಕೆ ನ್ಯಾಯ ಒದಗಿಸಿದ ನಟರಲ್ಲಿ ಜಗದೀಪ್ ಒಬ್ಬರು. ಇಂದಿನ ಕಾಲದ ಮಂದಿ ಜಗದೀಪ್ ಅವರನ್ನು ಮರೆತೇ ಬಿಟ್ಟಿರ ಬಹುದಾದರೂ ಅವರು ಹಾಸ್ಯ ನಟನೆಗೆ ನೀಡಿದ ಕೊಡುಗೆ ಅನನ್ಯ.

ಭಯಾನಕ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ರಾಮ್ಸೆ ಸಹೋದರರ ಹಲವಾರು ಚಿತ್ರಗಳಲ್ಲಿ ಜಗದೀಪ್ ನಟಿಸಿದ್ದಾರೆ. ಅದರಲ್ಲಿ ಪುರಾನಿ ಹವೇಲಿ ಪ್ರಮುಖವಾದದ್ದು. ಮೂರು ಮಂದಿ ಹೆಂಡತಿ ಹಾಗೂ ಆರು ಮಂದಿ ಮಕ್ಕಳನ್ನು ಹೊಂದಿದ್ದ ಜಗದೀಪ್ ಅವರ ಓರ್ವ ಪುತ್ರ ಜಾವೇದ್ ಜಾಫ್ರಿ ಚಿತ್ರರಂಗದಲ್ಲಿ ಉತ್ತಮ ನಟರಾಗಿ ಮಿಂಚುತ್ತಿದ್ದಾರೆ. ಮತ್ತೊರ್ವ ಪುತ್ರ ನಾವೇದ್ ಜಾಫ್ರಿ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಮುಂಬೈನಲ್ಲಿ ತಮ್ಮ ೮೧ನೇ ವಯಸ್ಸಿನಲ್ಲಿ ನಿಧನ ಹೊಂದಿದ ಓರ್ವ ಜನ್ಮತಃ ಕಲಾವಿದರಾದ ಜಗದೀಪ್ ಅವರಿಗೆ ಶ್ರದ್ಧಾಂಜಲಿ ಸಂದೇಶದಲ್ಲಿ ನಟ ಅನುಪಮ್ ಖೇರ್ ಹೀಗೆ ಬರೆಯುತ್ತಾರೆ’ ಭೂಮಿಯ ಮೇಲಿದ್ದ ನಕ್ಷತ್ರವೊಂದು ಆಕಾಶ ತಲುಪಿದೆ. ಒಂದು ಪಾರ್ಟಿಯಲ್ಲಿ ಅವರು ಹೇಳಿದ ಮಾತು ನನಗೆ ನೆನಪಿಗೆ ಬರುತ್ತದೆ ನಗುವುದು ಸುಲಭ ಆದರೆ ನಗಿಸುವುದು ಬಹಳ ಕಷ್ಟ ಎಂದು’. ಸತ್ಯವಾದ ಮಾತಲ್ಲವೇ? ನಮ್ಮನ್ನು ಹಲವಾರು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ನಕ್ಕು ನಗಿಸಿದ ಜಗದೀಪ್ ಎಂಬ ಕಲಾವಿದ ಅವರ ಚಿತ್ರಗಳ ಮೂಲಕ ಸದಾ ಜೀವಂತ.

 

ಚಿತ್ರ: ಶೋಲೆ ಚಿತ್ರದಲ್ಲಿ ‘ಸೂರ್ಮಾ ಭೋಪಾಲಿ’ ಪಾತ್ರದಲ್ಲಿ ಜಗದೀಪ್ (ಕೃಪೆ: ಅಂತರ್ಜಾಲ)