ಅಗಲಿದ ಚೇತನ

ಅಗಲಿದ ಚೇತನ

ಬರಹ

ಅಗಲಿದ ಚೇತನ.
ಅಪಾರಜ್ಞಾನ, ಅಷ್ಟೇ ಸೌಜನ್ಯತೆ, ಸರಳ ನೇರ ನಡೆ ನುಡಿ ಇವೆಲ್ಲವನ್ನೂ ಒಟ್ಟುಗೂಡಿಸಿದಾಗ ಎದ್ದು ಕಾಣುವ ರೂಪವೇ ಹಿರಿಯ ಸಾಹಿತಿಗಳಲ್ಲೊಬ್ಬರಾದ ಶ್ರೀಯುತ ಎಚ್.ಎಸ್.ಕೃಷ್ಣಸ್ವಾಮಿಯವರು. ಅಂಕಣಕಾರರೆಂದೇ ಖ್ಯಾತಿ ಹೊಂದಿರುವ ಅವರು ಈಗ 29ನೇ ತಾರೀಕು ಇನ್ನಿಲ್ಲವಾದರು ಎಂದು ತಿಳಿದಾಗ ಮನಸ್ಸಿಗೆ ಉತ್ತಮವಾದುದೇನನ್ನೋ ಕಳೆದುಕೊಂಡ ಭಾವ. 1920ರ ಆಗಸ್ಟ್ 20ರಂದು ಜನಿಸಿದ ಅವರು 2008ರ ಅದೇ ಆಗಸ್ಟ್ 29ರಂದು ನಮ್ಮನ್ನೆಲ್ಲಾ ಅಗಲಿದ್ದಾರೆ.
ಖ್ಯಾತ ಅರ್ಥಶಾಸ್ತ್ರಜ್ಞರಾದ ಇವರು ಅನೇಕ ದಿನಪತ್ರಿಕೆಗಳು ವಾರ ಪತ್ರಿಕೆಗಳಲ್ಲಿ ವಾಣಿಜ್ಯ, ವ್ಯಕ್ತಿವಿಷಯಕ್ಕೆ ಸಂಬಂಧಪಟ್ಟ ಅಂಕಣಗಳನ್ನು ಬರೆಯುವ ಮೂಲಕ ಜನಪ್ರಿಯರಾದರು. ಸುಧಾ ವಾರ ಪತ್ರಿಕೆಯಲ್ಲಿ 36 ವರ್ಷ ಒಂದು ವಾರವೂ ತಪ್ಪದೇ ವ್ಯಕ್ತಿ ವಿಶೇಷ ಅಂಕಣ ಬರೆದು ಅನೇಕ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಸಿದ್ದರು. ‘ಕನ್ನಡದಲ್ಲಿ ವಿಡಂಬನಾ ಸಾಹಿತ್ಯ’ ಎಂಬ ಇವರ ವಿಮರ್ಶನಾತ್ಮಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‍ನ ‘ಭಾಸ್ಕರರಾವ್ ಸ್ಮಾರಕ’ ಬಹುಮಾನ ಲಭಿಸಿದೆ.ಹಾಗೆಯೇ ವಾಣಿಜ್ಯ ಹಾಗೂ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಹಾಗೆ ‘ನಮ್ಮ ಅಭಿವೃದ್ದಿ ಯೋಜನೆ’ ಕೃತಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಲಭಿಸಿದೆ. ಇವರ ಪ್ರಭಂದಗಳಲ್ಲಿ ಪ್ರಭುದ್ದತೆ, ಚಿಂತನೆ, ಅಧ್ಯಯನಶೀಲತೆ ಹಾಗೂ ಕಾವ್ಯ ಗುಣಗಳನ್ನು ಕಾಣಬಹುದು ಎಂದು ಡಾ.ದೇ.ಜವರೇಗೌಡರು ಹೇಳಿದ್ದಾರೆ. ಇವರು ಕೆಲವು ಕಾದಂಬರಿಗಳು ಸಹಾ ಬರೆದಿದ್ದಾರೆ.
ಇವರನ್ನು ಕವಿ ಚನ್ನವೀರಕಣವಿಯವರು ಸಾಹಿತ್ಯ ಲೋಕದ ಸವ್ಯ ಸಾಚಿ ಎಂದಿದ್ದಾರೆ. ಹಾಗೆಯೇ ಕವಿ ದೊಡ್ಡ ರಂಗೇಗೌಡರು ಇವರ ಸಾಹಿತ್ಯ ಭೂಮಿ ತೂಕದ ಸಾಹಿತ್ಯ ಎಂದೇ ವರ್ಣಿಸಿದ್ದಾರೆ.

‘ಬದುಕು ಬೆಳಕು’ ‘ಈ ತರಹದ ವ್ಯಕ್ತಿಗಳು’ ‘ಬೆಳಕು ಚೆಲ್ಲಿದ ಬದುಕು’ ಮತ್ತು ‘ಮಾನ್ಯರು ಸಾಮಾನ್ಯರು’ ಮುಂತಾದವು ಅವರ ವ್ಯಕ್ತಿಚಿತ್ರಣದ ಕೃತಿಗಳು.
ಪ್ರಶಸ್ತಿಯನ್ನು ಹುಡುಕಿಕೊಂಡು ಹೋದವರಲ್ಲ ಇವರು, ಆದರೂ ಈ ಕೆಳಗಿನ ಪ್ರಶಸ್ತಿಗಳು ಇವರದ್ದಾಗಿವೆ.
1980ರಲ್ಲಿ ಕನ್ನಡ ಸಾಹಿತ್ಯ ಅಕಡಮಿ ಪ್ರಶಸ್ತಿ,
1986ರಲ್ಲಿ ಕನ್ನಡ ಪತ್ರಿಕಾ ಅಕಡಮಿ ಪ್ರಶಸ್ತಿ,
1997ರಲ್ಲಿ ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ,
1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
1999ರಲ್ಲಿ ವಿಶ್ವ ಮಾನವ ಪ್ರಶಸ್ತಿ ಪಡೆದಿದ್ದಾರೆ.
ಇಷ್ಟೆಲ್ಲ ಜ್ಞಾನ ಪಡೆದ ಪ್ರತಿಭಾವಂತರಾದರೂ ಸಾಮಾನ್ಯ ಜನರ ಜೊತೆನೂ ಸಹಜವಾಗಿ ಬೆರೆತು ಮಾತನಾಡುವ ಅವರ ಸ್ವಭಾವ ನಿಜಕ್ಕೂ ಅತ್ಯಂತ ಖುಷಿ ಕೊಡುವಂತಹದ್ದು.ಇಲ್ಲಿ ನನ್ನ ಸ್ವಂತ ಅನುಭವ ಒಂದನ್ನು ಹೇಳಲು ಬಯಸುತ್ತೇನೆ. ನನ್ನವರು ಸಹಾ economics professor ಆದ ಕಾರಣವೋ ಏನೋ ಅವರಿಗೆ ಎಚ್ಚೆಸ್ಕೆಯವರ ನಿಕಟ ಸಂಪರ್ಕವಿತ್ತು. ತುಂಬಾ ಪರಿಚಯವಿದ್ದ ಕಾರಣ ಒಮ್ಮೆ ಶಿವಮೊಗ್ಗೆಯಲ್ಲಿ state bank of Indiaದವರು ಏರ್ಪಡಿಸಿದ್ದ bankingಗೆ ಸಂಬಂಧಪಟ್ಟ ಪದಗಳಿಗೆ ಸಮಾನವಾದ ಕನ್ನಡ ಪದಗಳ ನಿಘಂಟು ತಯಾರಿಸುವ ಉದ್ದೇಶದಿಂದ ಒಂದು ಕಮ್ಮಟ ನಡೆಯಿತು. (ಅವರು ಇಂತಹ ಕಮ್ಮಟಗಳಲ್ಲಿ ಪಡೆದ ಅನುಭವಗಳನ್ನು ‘ಕಮ್ಮಟದ ಕಿಡಿಗಳು’ ಎಂಬ ಅಂಕಣಗಳನ್ನೂ ಬರೆದಿದ್ದಾರೆ.) ಆಗ ಅವರು ನಮ್ಮ ಮನೆಗೆ ಬಂದು ಉಳಿದಿದ್ದರು. ನಾನು ಮಾಡಿದ ಅಡಿಗೆಯನ್ನೂ ಪ್ರೀತಿಯಿಂದ ಊಟ ಮಾಡಿ ಸಂತೋಷದಿಂದ ನಮ್ಮೊಂದಿಗೆ ಮಾತನಾಡಿದ ಆ ಸೌಜನ್ಯ ನಿಜಕ್ಕೂ ನನಗೆ ಬೆರಗು ತರಿಸಿತ್ತು. ಒಬ್ಬ ಅತಿ ಮೇದಾವಿ ವ್ಯಕ್ತಿಯೊಬ್ಬರು ನಮ್ಮಂತಹ ಸಾಮಾನ್ಯ ಜನರ ಜೊತೆ ಯಾವುದೇ ಜಂಬವಿಲ್ಲದೇ ಬೆರೆತ ರೀತಿ ನಿಜಕ್ಕೂ ಖುಷಿ ಕೊಟ್ಟಿತು.
ನಾನು ಮಾತಿನ ಮದ್ಯೆ ಏನೋ ಹೇಳುವಾಗ ‘jack of all but master of none' ಎಂದು ಹೇಳಿದೆ. ಆಗ ಅವರು "ನೀವು ಕೊರಗ ಬೇಕಾದ ಅವಶ್ಯಕತೆಯೇ ಇಲ್ಲಮ್ಮ. master of one or many ಆಗಿ ಅಥವಾ ಬಿಡಿ jack of all ಇರಲೇಬೇಕಮ್ಮ. ಅದು ನಿಜಕ್ಕೂ ಒಳ್ಳೇದು ಎಲ್ಲಾವಿಚಾರಗಳ ಬಗ್ಗೆಯು ಸ್ವಲ್ಪವಾದರೂ knowledge ಇದ್ದರೆ ಯಾರಾದರೂ ಆ ವಿಚಾರಗಳ ಬಗ್ಗೆ ಮಾತನಾಡಿದಾಗ ಎರಡು ಕಿವಿ ತೆರೆದಿಟ್ಟುಕೊಂಡಿದ್ದರೆ ಸಾಕು ತಾನೇ ಆ ವಿಚಾರಗಳ ಬಗ್ಗೆ ಅರಿವು ಹೆಚ್ಚಾಗುತ್ತದೆ. ಅದಕ್ಕೆ ನನ್ನ ಹೇಳಿಕೆ ಎಂದರೆ we maybe master of one or none or many but it is better to be jack of all." ಎಂದರು. ಅದು ಇವತ್ತಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಅವರನ್ನು ನೆನಪು ಮಾಡಿಕೊಂಡರೆ ಸಾಕು ಆದಿನದ ಅನುಭವ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಪತ್ರಕರ್ತರೆಂದರೆ ಅವರಿಗೆ ಬಹಳ ಅಭಿಮಾನ.ಎರಡು ವರ್ಷಗಳ ಹಿಂದೆ ಅವರ ಹೆಸರಿನಲ್ಲಿ ಪತ್ರಕರ್ತರಿಗೆ ಪ್ರಶಸ್ತಿ ಸ್ಥಾಪನೆ ಮಾಡಿದಾಗ ಅವರು, "ನನ್ನ ಮನವಿ ಒಂದೇ. ಈ ಪ್ರಶಸ್ತಿ ಪುರಸ್ಕಾರವನ್ನು ಅರ್ಧಕ್ಕೆ ನಿಲ್ಲಿಸಬೇಡೀಪ್ಪ. ಮುಂದುವರೆಸಿಕೊಂಡು ಹೋಗಿ" ಎಂದಿದ್ದರು.
ಡಾ.ಎಚ್ಚೆಸ್ಕೆಯವರ 89ನೇ ಜನ್ಮದಿನದ ಶುಭ ಹಾರೈಕೆ ‘ಸಮಾರಂಭದಲ್ಲಿ’ ಎಚ್ಚೆಸ್ಕೆಯವರ ‘ಸಮಗ್ರ ಪ್ರಬಂಧ’ ಬಿಡುಗಡೆ ಮಾಡಿದ ಡಾ.ದೇ.ಜವರೇಗೌಡಅವರು, "ಸಾಧಾರಣ ಬರಹಗಾರರ ಸಾಹಿತ್ಯ ಹೆಚ್ಚಿನ ಕಾಲ ನಿಲ್ಲುವುದಿಲ್ಲ. ಅವು ಕಾಲಾಂತರದಲ್ಲಿ ನಶಿಸಿ ಹೋಗುತ್ತವೆ. ಆದರೆ ಎಚ್ಚೆಸ್ಕೆ ಅವರು ಕನ್ನಡನಾಡು ನುಡಿ, ಪರಂಪರೆಗೆ ಸಂಬಂಧಿಸಿದಂತೆ ಅಮೂಲ್ಯ ಕಾಣಿಕೆ ನೀಡಿದಾರೆ. ಹಾಗಾಗಿ ಇವರ ಕೃತಿಗಳು ಅಜರಾಮರ." ಎಂದರು. "ಕನ್ನಡ ವಿಶ್ವಕೋಶ ಸಂಪುಟಗಳಿಗೆ ಅಪಾರವಾಗಿ ದುಡಿದಿದ್ದಾರೆ. ನನ್ನ ಒಂದು ಕೈಯಾಗಿದ್ದ ಜಿ.ಟಿ. ನಾರಾಯಣರಾವ್ ನನ್ನ ಬಿಟ್ಟು ಹೋಗಿಬಿಟ್ಟರು. ಇವರನ್ನಾದರೂ ಜೋಪಾನ ಮಾಡಿಕೊಳ್ಳಬೇಕು. ನನ್ನನ್ನು ಏಕಾಂಗಿ ಮಾಡಬೇಡಿ" ಎಂದೂ ನುಡಿದಿದ್ದರಂತೆ.ಆದರೆ ಜವರೇಗೌಡರನ್ನು ಏಕಾಂಗಿ ಮಾಡಿದ್ದಲ್ಲದೇ ನಮ್ಮನ್ನೆಲ್ಲಾ ಅಗಲಿ ಹೋಗಿ ಸಾಹಿತ್ಯ ಲೋಕಕ್ಕೂ ಅಪಾರ ನಷ್ಟ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರೋಣ.