ಅಗಲಿದ ಸಾಹಿತಿ, ವಿಮರ್ಶಕ ಡಾ. ಜಿ.ಎಸ್. ಆಮೂರ

ಅಗಲಿದ ಸಾಹಿತಿ, ವಿಮರ್ಶಕ ಡಾ. ಜಿ.ಎಸ್. ಆಮೂರ

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ತಮ್ಮ ವಿಮರ್ಶಾ ಜ್ಞಾನವನ್ನು ಪಸರಿಸಿದ ಕೀರ್ತಿ ಡಾ. ಗುರುರಾಜ ಶ್ಯಾಮಾಚಾರ್ಯ ಆಮೂರ (ಜಿ. ಎಸ್. ಆಮೂರ) ಇವರಿಗೆ ಸಲ್ಲುತ್ತದೆ. ಆಮೂರರು ತಮ್ಮ ವಿಮರ್ಶಾ ಸಾಹಿತ್ಯವನ್ನು ಮೊದಲು ಪ್ರಾರಂಭಿಸಿದ್ದು ಆಂಗ್ಲ ಭಾಷೆಯಲ್ಲೇ. ಹಲವಾರು ಕನ್ನಡ ಲೇಖಕರಂತೆ ಆಮೂರರೂ ತಮ್ಮ ಸಾಹಿತ್ಯ ಕೃಷಿಯನ್ನು ಆಂಗ್ಲ ಭಾಷೆಯಲ್ಲಿ ಪ್ರಾರಂಭಿಸಿ, ನಂತರದ ದಿನಗಳಲ್ಲಿ ಕನ್ನಡಕ್ಕೆ ಹೊರಳಿದರು. ಆಮೂರರ ವಿಮರ್ಶೆ ಎಂದರೆ ಅದೊಂದು ಪರಿಪೂರ್ಣ ವಿದ್ವತ್ ಪೂರ್ಣ ಲೇಖನದಂತೆ, ಗ್ರಂಥದಂತೆ ಭಾಸವಾಗುತ್ತಿತ್ತು. ಆಮೂರರು ಬದುಕಿನ ಕೊನೆಯ ದಿನಗಳಲ್ಲಿ ಸ್ವಲ್ಪ ಆಧ್ಯಾತ್ಮದತ್ತ ಹೊರಳಿದಂತೆ ತೋರುತ್ತಿತ್ತು. ತಮ್ಮ ಕೊನೆಯ ಕಾಲದಲ್ಲೂ ದಕ್ಷಿಣಾಮೂರ್ತಿ ಸ್ತೋತ್ರ ವೇದಾಂತದ ಎರಡು ಸಾವಿರ ಪುಟಗಳ ಬೃಹತ್ ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಅಮೂಲ್ಯ ಕೊಡುಗೆಯನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ.

ಜಿ. ಎಸ್. ಆಮೂರ ಇವರು ಮೇ ೮, ೧೯೨೫ರಲ್ಲಿ ಹಾವೇರಿ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೊರಣಗಿ, ಬೊಮ್ಮನಹಳ್ಳಿ, ಕರ್ಜಗಿಯಲ್ಲಿ ಮುಗಿಸಿದರು. ನಂತರ ತಮ್ಮ ಮೆಟ್ರಿಕ್ ಶಿಕ್ಷಣವನ್ನು ಹಾವೇರಿಯ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಪೂರೈಸಿದರು. ಕಲಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಆಮೂರರು ಧಾರವಾಡದ ಕರ್ನಾಟಕ ಕಾಲೇಜಿನಿಂದ  ಬಿ.ಎ. ಆನರ್ಸ್ ಪದವಿ ಮತ್ತು ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದರು. ೧೯೬೧ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್. ಡಿ ಪದವಿ ಪಡೆದರು. ಟಿ.ಎಸ್. ಎಲಿಯಟ್ ಬಗ್ಗೆ ಅಮೇರಿಕಾದ ಕ್ಯಾಲಿಫೋರ್ನಿಯಾ ಹಾಗೂ ಯೇಲ್ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಯನ್ನು ಕೈಗೊಂಡರು. ನಂತರ ಉಪನ್ಯಾಸಕ ಹುದ್ದೆಗೆ ಸೇರಿದ ಆಮೂರರು ೧೯೬೪ರಿಂದ ನಾಲ್ಕು ವರ್ಷಗಳ ಕಾಲ ಕರ್ನಾಟಕ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದಲ್ಲಿ ಮತ್ತು ೧೯೬೮ ರಿಂದ ೧೯೮೫ರವರೆಗೆ ಔರಂಗಬಾದ್ ನ ಮರಾಠಾವಾಡಾ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಲ್ಲಿ ರೀಡರ್ ಆಗಿ, ಪ್ರೊಫೆಸರ್ ಆಗಿ ಕೊನೆಗೆ ಆ ವಿಭಾಗದ ಮುಖ್ಯಸ್ಥರೂ ಆಗಿ ನಿವೃತ್ತರಾದರು. ಕರ್ನಾಟಕದಿಂದ ಹೊರಗಡೆ ಇದ್ದ ಕಾರಣದಿಂದ ಬಹುಷಃ ಇವರು ತಮ್ಮ ಸಾಹಿತ್ಯ ಕೃಷಿಯನ್ನು ಆಂಗ್ಲಭಾಷೆಯಲ್ಲೇ ಪ್ರಾರಂಭಿಸಿರಬಹುದು ಎಂದು ಅಂದಾಜು.

ನಿವೃತ್ತಿಯ ನಂತರ ಕನ್ನಡದಲ್ಲಿ ಅನೇಕ ವಿಮರ್ಶಾ ಗ್ರಂಥಗಳನ್ನು ರಚಿಸಿದರು. ಅವರು ಕನ್ನಡ, ಇಂಗ್ಲಿಷ್, ಸಂಸ್ಕೃತ ಹಾಗೂ ಮರಾಠಿ ಭಾಷೆಯಲ್ಲಿ ಪರಿಣತಿಯನ್ನು ಹೊಂದಿದ್ದರು. ದ.ರಾ.ಬೇಂದ್ರೆ ಕುರಿತು ‘ಭುವನದ ಭಾಗ್ಯ', ಶ್ರೀರಂಗ ಸಾಹಿತ್ಯದ ಕುರಿತಾದ ‘ಆಧುನಿಕ ಕನ್ನಡ ಸಾಹಿತ್ಯದ ವಿರಾಟ್ ಪುರುಷ', ಯುಗದ ಕವಿ ಕುವೆಂಪು, ಗಿರೀಶ್ ಕಾರ್ನಾಡ್ ಹಾಗೂ ರಂಗಭೂಮಿ, ಗೋಕಾಕ್, ಯು. ಆರ್. ಅನಂತಮೂರ್ತಿ ಬಗ್ಗೆ ವಿಮರ್ಶಾತ್ಮಕ ಸಾಹಿತ್ಯ ರಚನೆ ಮಾಡಿದ್ದಾರೆ. ದ.ರಾ.ಬೇಂದ್ರೆ ಕುರಿತು ಇವರು ಬರೆದ ಭುವನದ ಭಾಗ್ಯ ಎಂಬ ವಿಮರ್ಶಾ ಕೃತಿಯು ಕನ್ನಡ ಸಾಹಿತ್ಯ ಲೋಕದ ಅದ್ಭುತ ಕೃತಿ ಎಂದೇ ಪರಿಗಣಿತವಾಗಿದೆ. ಅಧುನಿಕ ಕನ್ನಡ ಸಾಹಿತ್ಯದ ಪ್ರಕಾರಗಳ ಬಗೆಗೂ ಸಮಗ್ರ ವಿಮರ್ಶೆಯನ್ನು ಆಮೂರರು ರಚಿಸಿದ್ದಾರೆ. ಅಮೂರರ ವಿಮರ್ಶೆಯ ಕೃತಿಗಳಲ್ಲಿ ಸೈದ್ಧಾಂತಿಕ ವಿಮರ್ಶೆ ಹಾಗೂ ಪ್ರಾಯೋಗಿಕ ವಿಮರ್ಶೆಗಳೂ ಸೇರಿವೆ. ಆಮೂರರು ಕೊರಳು-ಕೊಳಲು, ಮಹಾಕವಿ ಮಿಲ್ಟನ್, ಕೃತಿ ಪರೀಕ್ಷೆ, ಭುವನದ ಭಾಗ್ಯ, ವ್ಯವಸಾಯ, ಅರ್ಥಲೋಕ, ಕನ್ನಡ ಕಥನ ಸಾಹಿತ್ಯ ದ.ರಾ.ಬೇಂದ್ರೆ, ಅಮೃತ ವಾಹಿನಿ ಮೊದಲಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಹುಯಿಲಗೋಳ ನಾರಾಯಣ ರಾಯರ ಸಮಗ್ರ ಕೃತಿಗಳು, ಶ್ರೀರಂಗ ಸಾರಸ್ವತ ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ. ನೆಹರು ಎಂಬ ಪುಸ್ತಕವನ್ನು ಅನುವಾದ ಮಾಡಿದ್ದಾರೆ. ಆಂಗ್ಲಭಾಷೆಯಲ್ಲಿ ಸುಮಾರು ೩೦ ಪುಸ್ತಕಗಳು ಹಾಗೂ ವಿಮರ್ಶಾತ್ಮಕ ಸಾಹಿತ್ಯವನ್ನು ಇವರು ಬರೆದಿದ್ದಾರೆ.

ಆಮೂರರವರದ್ದು ಶಿಸ್ತುಬದ್ಧ ಜೀವನ. ಅವರ ಈ ಶಿಸ್ತು ಬರವಣಿಕೆಯಲ್ಲೂ ಕಾಣಸಿಗುತ್ತದೆ. ಕವಿಗಳ ಕೃತಿಗಳ ಬಗ್ಗೆ ಈವರೆಗೆ ನಡೆದ ಎಲ್ಲಾ ವಿಚಾರಗಳನ್ನು ಅಮೂಲಾಗ್ರ ಸಂಶೋಧನೆಗಳ ಮೂಲಕ ಪ್ರಸ್ತುತ ಪಡಿಸುತ್ತಾರೆ. ಆತ್ಮವಿಶ್ವಾಸ ಭರಿತ ಮಾತುಗಳು, ಸಭೆಗಳಿಗೆ ಬರುವುದಾದಲ್ಲಿ ಕೆಲವೊಮ್ಮೆ ಕೋಟು, ಕೆಲವೊಮ್ಮೆ ಉದ್ದತೋಳಿನ ಶರ್ಟು, ಪ್ಯಾಂಟು ಧರಿಸಿ ಬರುತ್ತಿದ್ದರು. ಯಾವುದಾದರೂ ಭಾಷಣ ಮಾಡುವುದಿದ್ದರೆ ಅದರ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಪುಸ್ತಕಗಳ ರಾಶಿಯೇ ಇತ್ತು. ಬೇಂದ್ರೆಯವರ ಕಾವ್ಯದ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ, ಅಭಿಮಾನವಿತ್ತು.  

ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ವಿವಿಧ ಪತ್ರಿಕೆಗಳಲ್ಲಿ ಸುಮಾರು ನಾಲ್ಕು ನೂರಕ್ಕೂ ಅಧಿಕ ವಿಮರ್ಶೆಗಳು ಪ್ರಕಟವಾಗಿವೆ. ಇವರ ವಿಮರ್ಶೆಯ ಹೆಗ್ಗಳಿಕೆಯೆಂದರೆ ಅವುಗಳು ಒಂದು ಕೃತಿಯ ನೈಜ ಚಿತ್ರಣವಾಗಿರುತ್ತಿತ್ತು ಮತ್ತು ಇವರು ಬರೆದ ಯಾವ ವಿಮರ್ಶೆಗಳೂ ವಿವಾದ ಸೃಷ್ಟಿಸಿಲ್ಲ. ಇವರ ಹಲವಾರು ಕೃತಿಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಅವರು ಕೇವಲ ವಿಮರ್ಶಕರು ಆಗಿರದೆ ಸೃಜನಶೀಲ ಲೇಖಕರೂ ಆಗಿದ್ದರು. ಅವರ ಕವನ ಸಂಕಲನ ‘ಕೊರಡು ಕೊನರಿದಾಗ' ಕನ್ನಡ ಸಾಹಿತ್ಯ ಲೋಕದ ವಿಭಿನ್ನ ಕೃತಿ. ‘ನೀರ ಮೇಲಣ ಗುಳ್ಳೆ' ಇವರ ಆತ್ಮಕಥೆ. ‘ನಿಮಿತ್ತ ಅನಿಮಿತ್ತ' ಅಂಕಣ ಬರಹಗಳು.

ಆಮೂರರಿಗೆ ಎಂಬತ್ತು ವರ್ಷ ತುಂಬಿದ ಸಮಯದಲ್ಲಿ ಡಾ. ಎಸ್. ವಿದ್ಯಾಶಂಕರ್ ಹಾಗೂ ಡಾ. ಜಿ.ಎಂ. ಹೆಗಡೆ ಇವರ ಸಂಪಾದಕತ್ವದಲ್ಲಿ ‘ಸಹೃದಯ ಸಂವಾದ’ ಎಂಬ ಅಭಿನಂದನಾ ಗ್ರಂಥವನ್ನು ಹೊರತರಲಾಯಿತು. ೯೦ ವರ್ಷ ತುಂಬಿದಾಗಲೂ ಡಾ. ಜಿ. ಎಂ. ಹೆಗಡೆಯವರ ಸಂಪಾದಕತ್ವದಲ್ಲಿ ‘ಸ್ವೀಕೃತಿ' ಎಂಬ ಹೊತ್ತಿಗೆಯನ್ನು ಸಮರ್ಪಿಸಲಾಯಿತು. ೯೫ ವರ್ಷಗಳ ತುಂಬು ಜೀವನವನ್ನು ನಡೆಸಿದ ಇವರು ತಾವು ನಿಧನ ಹೊಂದುವ ಸಮಯದವರೆಗೂ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆಮೂರರಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರಶಸ್ತಿ, ಭಾರತೀಯ ಭಾಷಾ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಅವರಿಗೆ ಸಂದಿವೆ. ನಿಧನಕ್ಕೂ ಸ್ವಲ್ಪವೇ ಸಮಯ ಮೊದಲು ಕನ್ನಡ ಸಾಹಿತ್ಯ ಪರಿಷತ್ತು ಇವರಿಗೆ ‘ನೃಪತುಂಗ' ಪ್ರಶಸ್ತಿ ಘೋಷಣೆ ಮಾಡಿತ್ತು. 

ಆಮೂರರ ಅತೀದೊಡ್ಡ ಗುಣವೆಂದರೆ ಅವರು ಹೊಸ ತಲೆಮಾರಿನ ಬರಹಗಾರರನ್ನು ಹುರಿದುಂಬಿಸುತ್ತಿದ್ದರು. ಯುವಕರು ಬರೆದ ವಿಮರ್ಶೆಯನ್ನೂ ಅತ್ಯಂತ ಆಸಕ್ತಿಯಿಂದ ಓದುತ್ತಿದ್ದರು. ಅವರ ಜೊತೆ ವಿಚಾರ ವಿಮರ್ಶೆ ಮಾಡುತ್ತಿದ್ದರು. ಹಾಗಲ್ಲ, ಹೀಗೆ ಬರೆಯಬೇಕೆಂದು ಅವರನ್ನು ತಿದ್ದುತ್ತಿದ್ದರು. ಮುಂದಿನ ತಲೆಮಾರಿಗೆ ಇನ್ನಷ್ಟು ಹೊಸ ಹಾಗೂ ಉತ್ತಮ ವಿಮರ್ಶಕರು ಬರುತ್ತಾರೆ ಎಂದು ಅವರಿಗೆ ದೃಢ ನಂಬಿಕೆ ಇತ್ತು. ಆಮೂರರಿಗೆ ಮೂವರು ಪುತ್ರರು ಹಾಗೂ ಒರ್ವ ಪುತ್ರಿ ಇದ್ದಾರೆ. ಆಮೂರರ ಅಗಲುವಿಗೆಯಿಂದ ಕನ್ನಡ ವಿಮರ್ಶಾ ಜಗತ್ತು ನಿಜಕ್ಕೂ ಬಡವಾಗಿದೆ. ಅವರ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಸರಕಾರವು ಮಾಡಲಿ ಎಂಬುದೇ ನಮ್ಮ ಆಶಯ.  

ಚಿತ್ರ ಕೃಪೆ: ಪ್ರಜಾವಾಣಿ ಅಂತರ್ಜಾಲ ತಾಣ