ಅಗಲಿದ ಹಿರಿಯ ಸಂಗೀತ ನಿರ್ದೇಶಕ - ಆರ್.ರತ್ನಂ
ಮೂಲತಃ ಚೆನ್ನೈ ನವರಾಗಿದ್ದ ಸಂಗೀತ ನಿರ್ದೇಶಕ ಆರ್. ರತ್ನಂ ಅವರು ಜನವರಿ ೯, ೨೦೨೧ರಂದು ನಿಧನಹೊಂದಿದರು. ಸುಮಾರು ೯೭ ವರ್ಷ ವಯಸ್ಸಿನ ಇವರಿಗೆ ಕನ್ನಡ ಭಾಷೆ ಮತ್ತು ಸಿನೆಮಾ ರಂಗವೆಂದರೆ ಅಪಾರ ಪ್ರೀತಿ. ಸಾಯುವ ಸಮಯದಲ್ಲೂ ತಮ್ಮ ಅಂತ್ಯಕ್ರಿಯೆಯನ್ನು ಕರ್ನಾಟಕದಲ್ಲೇ ನಡೆಸಬೇಕು ಎಂದು ಹೇಳಿದ ಹಿರಿಯ ಜೀವವನ್ನು ನಾವಿಂದು ನೆನೆದು ಶೃದ್ಧಾಂಜಲಿ ಸಲ್ಲಿಸಲೇ ಬೇಕು.
ಜೀವ ರತ್ನ ಎಂಬುವುದು ಇವರ ಮೂಲ ಹೆಸರಾಗಿದ್ದರೂ ಚಿತ್ರರಂಗದಲ್ಲಿ ಇವರು ಆರ್. ರತ್ನಂ ಎಂದೇ ಖ್ಯಾತಿ ಪಡೆದವರು. ಚಿತ್ರರಂಗದಲ್ಲಿ ರತ್ನಂ ಅವರು ನಟರಾಗಿಯೇ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತಮಿಳು ಚಿತ್ರ ‘ದಾನಶೂರ ಕರ್ಣ’ದಲ್ಲಿ ಪ್ರಥಮವಾಗಿ ಅಭಿನಯಿಸಿದರು. ಆ ಚಿತ್ರದಲ್ಲಿ ಇವರದ್ದು ವೃಷಕೇತು ಪಾತ್ರ. ನಂತರದ ದಿನಗಳಲ್ಲೂ ನಟನೆಗೆ ಇವರಿಗೆ ವಿಫುಲವಾದ ಅವಕಾಶಗಳು ಬರುತ್ತಿದ್ದರೂ, ಅವರನ್ನು ಸಂಗೀತ ಸೆಳೆಯುತ್ತಿತ್ತು. ನಟನೆ ಹಾಗೂ ಸಂಗೀತ ನಿರ್ದೇಶನ ಇವೆರಡರಲ್ಲಿ ಗೆದ್ದದ್ದು ಸಂಗೀತವೇ. ನಂತರದ ದಿನಗಳಲ್ಲಿ ರತ್ನಂ ಅವರು ಸಂಗೀತ ನಿರ್ದೇಶಕರಾಗಿ ತಮ್ಮ ಕಾರ್ಯವನ್ನು ಮುಂದುವರೆಸಿದರು. ಮೊದ ಮೊದಲಿಗೆ ಸಹಾಯಕ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
೧೯೬೧ರಲ್ಲಿ ತೆರೆ ಕಂಡ ‘ಚಕ್ರವರ್ತಿ ತಿರುಮಲ' ಚಿತ್ರಕ್ಕೆ ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡುವ ಮೂಲಕ ರತ್ನಂ ಅವರು ಪೂರ್ಣ ಪ್ರಮಾಣದಲ್ಲಿ ಸಂಗೀತ ನಿರ್ದೇಶಕರಾದರು. ೧೯೬೫ರಲ್ಲಿ ಇವರು ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಸದ್ಗುರು ನಿರ್ದೇಶನದ ‘ ಮನೆ ಕಟ್ಟಿ ನೋಡು' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಚಿತ್ರರಂಗದ ಬಾಗಿಲು ಇವರಿಗೆ ತೆರೆದುಕೊಂಡಿತು. ನಂತರದ ದಿನಗಳಲ್ಲಿ ಹಲವಾರು ಚಿತ್ರಗಳಿಗೆ ಸಂಗೀತ ನೀಡಿದರು. ಅವುಗಳಲ್ಲಿ ಪ್ರಮುಖವಾದವುಗಳು ಕಪ್ಪುಬಿಳುಪು, ಭಲೇ ಜೋಡಿ, ಚದುರಂಗ, ನಮ್ಮ ಊರು, ಪೂರ್ಣಿಮಾ, ಹೊಯ್ಸಳ, ಮಹಾ ತಪಸ್ವಿ, ಪದವೀಧರ ಇತ್ಯಾದಿ.
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು.., ಹೋಗದಿರಿ ಸೋದರರೇ..., ಆಲಿಸು ಓ ಇನಿಯಾ..., ಬೆಳೆದಿದೆ ನೋಡು ಬೆಂಗಳೂರು ನಗರ.. ಮುಂತಾದ ಸುಪರ್ ಹಿಟ್ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ ಕೀರ್ತಿ ರತ್ನಂ ಅವರಿಗೆ ಸಲ್ಲುತ್ತದೆ. ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು... ಈಗಲೂ ಕ್ಲಾಸಿಕ್ ಹಾಡು ಎಂದೇ ಖ್ಯಾತಿ ಪಡೆದಿದೆ. ತಮಿಳು ಭಾಷಿಕರಾಗಿದ್ದರೂ ರತ್ನಂ ಅವರಿಗೆ ಕನ್ನಡದ ಮೇಲೆ ಅಪಾರ ಮಮತೆ. ಇವರು ಕನ್ನಡ, ತಮಿಳು, ತೆಲುಗು ಸೇರಿದಂತೆ ಸುಮಾರು ೭೦ ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಆ ಸಮಯದಲ್ಲಿ ತಯಾರಾಗುತ್ತಿದ್ದ ಚಲನ ಚಿತ್ರಗಳ ಸಂಖ್ಯೆಯೂ ಬೆರಳೆಣಿಕೆಯಷ್ಟು. ಆದರೂ ರತ್ನಂ ಅವರು ೭೦ ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿರುವುದು ಒಂದು ದೊಡ್ಡ ಸಾಧನೆಯೇ ಸರಿ.
ಹಿರಿಯ ನಟ ರಾಜೇಶ್ ಅವರ ಪ್ರಕಾರ ರತ್ನಂ ಅವರ ಸಂಗೀತದಲ್ಲಿ ಒಂದು ರೀತಿಯ ಮ್ಯಾಜಿಕ್ ಇತ್ತು. ಅವರು ಸಂಗೀತ ನಿರ್ದೇಶನ ಮಾಡಿದ ‘ನಮ್ಮೂರು’ ಚಿತ್ರದ ಹಾಡುಗಳನ್ನು ಕೇಳಿದಾಗಲೆಲ್ಲಾ ಮನಸ್ಸು ಭಾವುಕವಾಗುತ್ತದೆ ಎನ್ನುತ್ತಾರೆ. ನಾರಾಯಣ್ ಎಂಬವರು ಈ ಚಿತ್ರದ ನಿರ್ದೇಶಕರು. ಆ ಸಮಯ ಚೆನ್ನೈ ನಲ್ಲಿ ಸಂಗೀತ, ಹಾಡುಗಳನ್ನು ರೆಕಾರ್ಡ್ ಮಾಡಿಸಿ ರತ್ನಂ ಅವರು ನಾರಾಯಣ್ ಅವರಿಗೆ ಕಳಿಸುತ್ತಿದ್ದರಂತೆ. ಆದರೆ ನಿರ್ದೇಶಕರಿಗೆ ಯಾವುದೂ ಇಷ್ಟವಾಗದ ಕಾರಣ, ಅವರೇ ನೇರವಾಗಿ ಚೆನ್ನೈಗೆ ಹೋಗಿ ರತ್ನಂ ಸಂಗಡ ಕೂತು ಸಂಗೀತ ಕಂಪೋಸ್ ಮಾಡಿಸಿದರಂತೆ. ಈ ಘಟನೆಗಳನ್ನು ನಟ ರಾಜೇಶ್ ಸ್ಮರಿಸಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ರತ್ನಂ ಅವರು ಪುಟ್ಟಣ್ಣ ಕಣಗಾಲ್ ಜೊತೆ ಸಹಾ ಕೆಲಸ ಮಾಡಿದರು. ಆದರೆ ಆರೋಗ್ಯದ ಸಮಸ್ಯೆ ಪದೇ ಪದೇ ಕಾಡತೊಡಗಿದಾಗ ಚೆನ್ನೈಗೆ ಮರಳಿದರು. ನಂತರದ ದಿನಗಳಲ್ಲಿ ಹೊಸ ಹೊಸ ಸಂಗೀತ ನಿರ್ದೇಶಕರು ಬರತೊಡಗಿದಾಗ, ರತ್ನಂ ಅವರಿಗೆ ಅವಕಾಶಗಳು ಕಮ್ಮಿ ಆದವು. ಕೊನೆಗೊಮ್ಮೆ ಅವರು ಸಂಗೀತ ನಿರ್ದೇಶನದಿಂದಲೇ ವಿಮುಖರಾದರು.
ರತ್ನಂ ಅವರ ಶಿಷ್ಯ ಹಾಗೂ ಸಂಗೀತ ನಿರ್ದೇಶಕರಾದ ಕೆ.ಎಂ.ವೆಂಕಟಸುಬ್ಬಯ್ಯನವರು ಇವರನ್ನು ಅಸೌಖ್ಯದ ಸಮಯದಲ್ಲಿ ಹಾಗೂ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ತಮ್ಮ ತಂದೆಯ ಸ್ಥಾನ ನೀಡಿ ಉಪಚರಿಸಿದರು. ತಮ್ಮ ಮನೆಯಲ್ಲೇ ಇರಿಸಿಕೊಂಡರು. ರತ್ನಂ ಅವರ ಗೌರವಾರ್ಥ ೨೦೦೯ರಲ್ಲಿ ಅಮೃತಹಳ್ಳಿಯಲ್ಲಿ ಸಂಗೀತ ರತ್ನ ವಿದ್ಯಾಲಯವನ್ನು ಸ್ಥಾಪಿಸಿದರು. ಆ ಸಮಯ ಈ ವಿದ್ಯಾಲಯವನ್ನು ಎಸ್.ಪಿ.ಬಾಲಸುಬ್ರಮಣ್ಯಂ ಅವರು ಉದ್ಘಾಟಿಸಿದ್ದರು. ಈ ಮೂಲಕ ವೆಂಕಟಸುಬ್ಬಯ್ಯನವರು ತಮ್ಮ ಗುರುಗಳಿಗೆ ಉತ್ತಮವಾದ ಗುರುದಕ್ಷಿಣೆಯನ್ನು ನೀಡಿದರು. ಇದರಿಂದಾಗಿ ಹಲವರು ಮಕ್ಕಳು ಈ ವಿದ್ಯಾಲಯದಲ್ಲಿ ರತ್ನಂ ಅವರಿಂದ ಸಂಗೀತ ಕಲಿತರು.
ರತ್ನಂ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಾಗರ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳು ದೊರೆತಿವೆ. ಸ್ವರ ಸಾಮ್ರಾಟ್, ಕಲಾರತ್ನ, ಸಂಗೀತ ಕಲಾನಿಧಿ ಮುಂತಾದ ಬಿರುದುಗಳೂ ಇವರ ಮುಡಿಯೇರಿದೆ. ಎಲ್ಲೋ ಒಂದು ಕಡೆ ಕನ್ನಡ ಚಿತ್ರರಂಗ ಇವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೋ ಎಂದು ಭಾಸವಾಗುತ್ತದೆ. ಆದರೆ ಹೊಸ ನೀರು ಹರಿಯುವ ಸಮಯದಲ್ಲಿ ಹಳೆಯ ಪೀಳಿಗೆ ನಿಧಾನವಾಗಿ ನೇಪಥ್ಯಕ್ಕೆ ಸರಿಯುವುದು ಸಹಜವೇ ಅಲ್ಲವೇ? ಇಂದು ರತ್ನಂ ಅವರು ನಮ್ಮ ಜೊತೆಗಿಲ್ಲ. ಆದರೆ ಅವರು ಸಂಗೀತ ನಿರ್ದೇಶನ ನೀಡಿದ ಹಾಡುಗಳು ಸದಾಕಾಲ ಅವರ ಹೆಸರನ್ನು ಅಮರರನ್ನಾಗಿಸುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ.
ಚಿತ್ರ ಕೃಪೆ: ವಿಜಯ ಕರ್ನಾಟಕ ಜಾಲ ತಾಣ