ಅಗೋನಿಬೋರಾ: ಅಕ್ಕಿ ನೆನಸಿಟ್ಟರೆ ಅನ್ನವಾಗುವ ಭತ್ತದ ತಳಿ

ಅಗೋನಿಬೋರಾ: ಅಕ್ಕಿ ನೆನಸಿಟ್ಟರೆ ಅನ್ನವಾಗುವ ಭತ್ತದ ತಳಿ

ನೋಡನೋಡುತ್ತಿದ್ದಂತೆಯೇ ನೀರಿನಲ್ಲಿ ನೆನೆ ಹಾಕಿದ ಆ ಅಕ್ಕಿ ಕಾಳುಗಳು ಮೆದುವಾಗಿ ಅನ್ನವಾಗಿದ್ದವು! ಇಂತಹ ಅಕ್ಕಿಯ ಬಗ್ಗೆ ಗೋಪಾಲ್ ಶರ್ಮ ಕೇಳಿದ್ದರು. ಆದರೆ ಈಗ ಅವರ ಕಣ್ಣೆದುರೇ ಈ ವಿಸ್ಮಯ ನಡೆದಿತ್ತು - ಅಕ್ಕಿ ಬೇಯಿಸದಿದ್ದರೂ ಅದು ಅನ್ನವಾಗಿ ಉಣ್ಣಲು ತಯಾರಾಗಿತ್ತು.

ಆ ಭತ್ತದ ತಳಿಯ ಹೆಸರು ಅಗೊನಿಬೋರಾ. ಇದರ ಕಾಳುಗಳನ್ನು ಬೇರೆ ಭತ್ತದ ತಳಿಗಳ ಕಾಳುಗಳ ಜೊತೆಗಿಟ್ಟರೆ ವ್ಯತ್ಯಾಸ ಕಾಣಿಸುವುದಿಲ್ಲ. ಇದರ ಅಕ್ಕಿ ಕಾಳಿನ ಉದ್ದ ಇತರ ಅಕ್ಕಿ ಕಾಳುಗಳಂತೆ 5.85 ಮಿಮೀ ಮತ್ತು ಅಗಲ 2.12 ಮಿಮೀ. ಇದರ ಸಸಿಗಳ ಎತ್ತರ 90 ಸೆಮೀ. ಅರೆಬೆಂದ ಅಗೊನಿಬೋರಾ ಅಕ್ಕಿ ಕಾಳುಗಳ ಬಣ್ಣ ನಸು ಹಳದಿ. ಇತರ ಅಕ್ಕಿ ತಳಿಗಳಂತೆ ಇದರ ಪ್ರೊಟೀನ್ ಪ್ರಮಾಣ ಶೇಕಡಾ 7.65.

ಒರಿಸ್ಸಾದ ಕಟಕ್‌ನಲ್ಲಿರುವ ಕೇಂದ್ರ ಅಕ್ಕಿ ಸಂಶೋಧನಾ ಸಂಸ್ಥೆಯ ಮುಖ್ಯ ವಿಜ್ನಾನಿ ಗೋಪಾಲ ಶರ್ಮರು ಅಕ್ಕಿ ತಳಿಗಳ ಅಧ್ಯಯನದಲ್ಲಿ ನಿರತ. ಅವರು 2007ರಲ್ಲಿ ಅರುಣಾಚಲ ಪ್ರದೇಶಕ್ಕೆ ಹೋಗಿದ್ದು, ಆಗ ಅಸ್ಸಾಂನ ಶೋನಿತ್‌ಪುರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಉಳಿಯುವ ಸಂದರ್ಭ ಬಂದಿತ್ತು. ಅಲ್ಲಿ ಅವರಿಗೆ ಬೆಳಗ್ಗೆಯ ಉಪಾಹಾರವಾಗಿ ನೀಡಿದ್ದು ಇದೇ ಅಗೋನಿಬೋರಾ ತಳಿಯ ಅನ್ನವನ್ನು.  ಅವರು ಅದರ ಬೀಜ ಕೇಳಿದಾಗ, ಒಬ್ಬ ರೈತ ಕೆಲವು ಕಾಳುಗಳನ್ನು ಕೊಟ್ಟರೂ, ಅವುಗಳ ಗುಣಮಟ್ಟ ಚೆನ್ನಾಗಿರಲಿಲ್ಲ. ಅದೇನಿದ್ದರೂ, ಆ ಅಕ್ಕಿ ಕಾಳುಗಳನ್ನು ನೀರಿನಲ್ಲಿ ನೆನಸಿಟ್ಟರೆ ಅನ್ನವಾಗುತ್ತವೆ ಎಂಬ ಸಂಗತಿಯ ಬಗ್ಗೆ ಅಧ್ಯಯನ ಮಾಡಲೇ ಬೇಕೆಂದು ಅವರು ನಿರ್ಧರಿಸಿದರು.

ಕೇಂದ್ರ ಅಕ್ಕಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಿಂದ ಅಗೋನಿಬೋರಾದ ಸಂಶೋಧನೆಗೆ ಒಪ್ಪಿಗೆ ಸಿಕ್ಕಿತು. ಅಸ್ಸಾಮಿನ ಟಿಟಬಾರ್ ಪ್ರಾದೇಶಿಕ ಸಂಶೋಧನಾ ಕೇಂದ್ರದಿಂದ ಅಗೋನಿಬೋರಾ ಅಕ್ಕಿ ತಳಿಯ ಬೀಜಗಳನ್ನು ಕಟಕ್ ಸಂಸ್ಥೆ ತರಿಸಿಕೊಂಡಿತು. ಅಲ್ಲಿ ಇದರ ಕ್ಷೇತ್ರ ಪ್ರಯೋಗಗಳು ಶುರುವಾದದ್ದು 2008ರಲ್ಲಿ.

ಅಗೋನಿಬೋರಾ ಭತ್ತದ ತಳಿಯ ಈ ಬೆರಗಿನ ಗುಣಕ್ಕೆ ಕಾರಣವೇನು? ಇದರ ಅಕ್ಕಿಯಲ್ಲಿ ಅಮಿಲೋಸ್ (ಅಕ್ಕಿಗೆ ಗಡಸುತನ ನೀಡುವ ಶರ್ಕರಪಿಷ್ಟ) ಪ್ರಮಾಣ ತೀರಾ ಕಡಿಮೆ. ಅಂದರೆ ಶೇ.4.2 (ಇತರ ಭತ್ತದ ತಳಿಗಳಲ್ಲಿ ಅಮಿಲೋಸ್ ಪ್ರಮಾಣ        ಶೇ. 20ರಿಂದ ಶೇ. 25). ಹಾಗಾಗಿ, ಇದರ ಅಕ್ಕಿಯನ್ನು 45 ನಿಮಿಷ ನೀರಿನಲ್ಲಿ ನೆನಸಿಟ್ಟರೆ ಅದು ಮೆದುವಾಗಿ ತಿನ್ನಲು ರೆಡಿ. ಉಗುರು ಬೆಚ್ಚಗಿನ ನೀರಿನಲ್ಲಿ ನೆನಸಿಟ್ಟರಂತೂ ಕೇವಲ 15 ನಿಮಿಷಗಳಲ್ಲೇ ಅನ್ನ ತಯಾರು!

ಅಗೋನಿಬೋರಾ ಭತ್ತದ ತಳಿ ಬೆಳೆಸಲು ವಿಶೇಷ ಮುತುವರ್ಜಿ ಬೇಕಾಗಿಲ್ಲ ಎಂದು ಕಟಕ್ ಸಂಸ್ಥೆಯ ಪ್ರಯೋಗಗಳು ತೋರಿಸಿ ಕೊಟ್ಟಿವೆ. ಇದು 145 ದಿನಗಳಲ್ಲಿ ಕಟಾವಿಗೆ ಬರುವ ತಳಿ. ಭತ್ತದ ತಳಿಗಳ ಸರಾಸರಿ ಇಳುವರಿ ಭಾರತದಲ್ಲಿ ಹೆಕ್ಟೇರಿಗೆ 2.2 ಟನ್. ಅಗೋನಿಬೋರಾದ ಇಳುವರಿ ಇದಕ್ಕಿಂತ ಜಾಸ್ತಿ, ಅಂದರೆ ಹೆಕ್ಟೇರಿಗೆ 4.5 ಟನ್. ಈ ಬೆರಗಿನ ತಳಿಯ ಬಗ್ಗೆ ಇನ್ನಷ್ಟು ಸಂಶೋಧನೆಗಳನ್ನು ನಡೆಸಬೇಕಾಗಿದೆ.

ಅಗೋನಿಬೋರಾ ಭತ್ತದ ತಳಿ ಪರಿಸರಸ್ನೇಹಿ ಎಂಬುದಂತೂ ಖಂಡಿತ. ಯಾಕೆಂದರೆ ಇದರ ಅಕ್ಕಿ ಬೇಯಿಸಿ ಅನ್ನ ಮಾಡಲು ಇಂಧನವೇ ಬೇಕಾಗಿಲ್ಲ!  

ಫೋಟೋ: ಭತ್ತದ ಸಸಿ, ಭತ್ತ ಮತ್ತು ಅಕ್ಕಿಯ ಸಾಂದರ್ಭಿಕ ಚಿತ್ರ … ಕೃಪೆ: ಫ್ರೀಪಿಕ್.ಕೋಮ್