ಅಗ್ನಿಪಥ: ಪೂರ್ವಗ್ರಹ ಪೀಡಿತ ಮನಸ್ಥಿತಿ ಬೇಡ
ಯಾವುದೇ ಒಂದು ಹೊಸ ಪ್ರಯೋಗ ಮಾಡುವುದಕ್ಕೂ ಮೊದಲೇ ಅದರ ಬಗ್ಗೆ ಆರೋಪ ಹೊರಿಸುವುದು ಪೂರ್ವಗ್ರಹ ಪೀಡಿತ ಮನಸ್ಥಿತಿ. ಈ ಪೂರ್ವಗ್ರಹ ಪೀಡಿತ ಮನಸ್ಥಿತಿಯು ಪ್ರಯೋಗಶೀಲತೆಗೆ ಆಸ್ಪದ ಕೊಡುವುದಿಲ್ಲ. ಅಗ್ನಿಪಥ ಯೋಜನೆ ವಿಚಾರದಲ್ಲಿ ಪ್ರತಿ ಪಕ್ಷಗಳು ಈ ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದ ವರ್ತಿಸುತ್ತಿದ್ದು, ಕೇಂದ್ರ ಸರಕಾರ ಮಾಡಲು ಹೊರಟಿರುವ ಹೊಸ ಪ್ರಯೋಗವೊಂದಕ್ಕೆ ಅಡ್ಡಗಾಲು ಹಾಕುತ್ತಿದೆ. ಅಗ್ನಿಪಥ ಯೋಜನೆ ಏನು, ಅದರ ಕಾರ್ಯವೈಖರಿ ಹೇಗೆ ಎಂಬುದು ಅರ್ಥವಾಗುವುದಕ್ಕಿಂತ ಮೊದಲೇ ಯೋಜನೆ ಕುರಿತು ಆಕ್ಷೇಪ ವ್ಯಕ್ತಪಡಿಸಿ, ದೇಶಾದ್ಯಂತ ದೊಂಬಿ ಎಬ್ಬಿಸಲಾಗುತ್ತಿದೆ. ಈ ಯೋಜನೆಯಲ್ಲಿ ಸೇನೆಗೆ ಸೇರಿದವರಿಗೆ ಉದ್ಯೋಗ ಭದ್ರತೆ ಇರುವುದಿಲ್ಲ ಎಂದು ಪ್ರತಿಪಕ್ಷಗಳು ಬಿಂಬಿಸುತ್ತಿವೆ. ಮೊದಲನೇಯದಾಗಿ ಸೇನೆಗೆ ಸೇರುವುದು ಒಂದು ಉದ್ಯೋಗವಲ್ಲ. ಅದು ರಾಷ್ಟ್ರಭಕ್ತಿಯನ್ನು ಒಳಗೊಂಡ ಸೇವೆ. ಅದನ್ನು ಉದ್ಯೋಗ ಎನ್ನುವ ರೀತಿಯಲ್ಲಿ ನೋಡುವುದು ಸರಿಯಲ್ಲ. ಉದ್ಯೋಗ ಎಂದು ನೋಡಿದರೆ ಅದರ ಮೌಲ್ಯ ಕಡಿಮೆಯಾಗುತ್ತದೆ. ನಮ್ಮ ದೇಶದಲ್ಲಿ ಸಾಮಾಜಿಕವಾಗಿ ಸೈನಿಕರಿಗೆ ವಿಶೇಷವಾದ ಗೌರವವಿದೆ. ಅವರು ದೇಶಸೇವೆ ಮಾಡುತ್ತಾರೆ ಎಂಬ ಕಾರಣದಿಂದಲೇ ಅವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವಾದರಗಳು ಇರುತ್ತವೆಯೇ ಹೊರತು, ಉದ್ಯೋಗ ಮಾಡುತ್ತಾರೆ ಎಂಬುದಕ್ಕಲ್ಲ. ಎರಡನೇಯದಾಗಿ, ತರಬೇತಿ ನೀಡದೆಯೇ ಯುವಕರನ್ನು ಯುದ್ಧಕ್ಕೆ ಬಿಡುತ್ತಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ ಅದು ಸಂಪೂರ್ಣ ಸುಳ್ಳು. ಮೊದಲ ಬ್ಯಾಚ್ ನಲ್ಲಿ ಒಟ್ಟು ಸೇನೆಯಲ್ಲಿ ಅಗ್ನಿವೀರರ ಪ್ರಮಾಣ ಶೇ ೩ ರಷ್ಟು ಮಾತ್ರ ಇರಲಿದೆ. ಉಳಿದ ಶೇ ೯೭ರಷ್ಟು ಜನರು ಅನುಭವಿಗಳೇ ಇರುತ್ತಾರೆ. ಶೇ ಮೂರರಷ್ಟು ಅಗ್ನಿವೀರರು ಒಂದು ವರ್ಷಕ್ಕೂ ಹೆಚ್ಚು ಅವಧಿ ತರಬೇತಿ ಪಡೆಯಲಿದ್ದಾರೆ. ತರಬೇತಿ ಪಡೆದು ಹೊರಗೆ ಬರುವ ಶೇ. ೭೫ರಷ್ಟು ಜನರು ಪೋಲೀಸ್ ಇಲಾಖೆ, ಬ್ಯಾಂಕ್, ರೈಲ್ವೇ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಗೆ ಹೋಗುವಂತಹ ಅವಕಾಶಗಳ ಹೆಬ್ಬಾಗಿಲನ್ನೇ ಈ ಯೋಜನೆ ತೆರೆಯುತ್ತದೆ. ಮುಖ್ಯವಾಗಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಿವೃತ್ತಿ ಆದಷ್ಟು ಜನರನ್ನು ಭರ್ತಿ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ನಿವಾರಣೆಯಾಗುತ್ತದೆ. ಹೀಗಾಗಿ ಪ್ರತಿಪಕ್ಷಗಳು ಅಗ್ನಿಪಥ ಯೋಜನೆ ಕುರಿತು ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬರಬೇಕು.
ಕೃಪೆ: 'ವಿಶ್ವವಾಣಿ' ಪತ್ರಿಕೆ, ಸಂಪಾದಕೀಯ, ದಿ: ೨೨-೦೬-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ