ಅಗ್ನಿ ಚಾಮುಂಡಿ/ ಮುಕಾಂಬಿ ಗುಳಿಗ (ಭಾಗ 2)

ಭೂತಾರಾಧನೆ ತುಳುನಾಡಿನ ವಿಶಿಷ್ಟ ಆರಾಧನಾ ಪದ್ಧತಿ. ಯಕ್ಷಗಾನಕ್ಕೆ ಕೂಡ ಮೂಲವಾಗಿರಬಹುದಾದ ಭೂತಾರಾಧನೆ ಒಂದು ಧಾರ್ಮಿಕ ರಂಗಭೂಮಿ ಕೂಡಾ. ಈ ಬಗ್ಗೆ ನನಗೆ ತೀವ್ರ ಕುತೂಹಲ ಆಸಕ್ತಿ. ತುಳು ಸಂಸ್ಕೃತಿ ಜಾನಪದ ಭೂತಾರಾಧನೆಗಳ ಕುರಿತಾದ ತೀವ್ರ ಸೆಳೆತದ ಕಾರಣದಿಂದ ಸಂಶೋಧನಾತ್ಮಕ ಅಧ್ಯಯನವನ್ನು ಮುಂದುವರಿಸುವ ಸಲುವಾಗಿಯೇ ಬೆಳ್ಳಾರೆಗೆ ಬಂದ ನನಗೆ ಬೆಳ್ಳಾರೆಯ ಸ್ಥಳ ದೈವ ಮಹಾಲಿಂಗೇಶ್ವರ ದೇವಾಲಯದ ಉತ್ಸವ ಸಂದರ್ಭದಲ್ಲಿ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತಕ್ಕೆ ಆರಾಧನೆ ಇರುವುದು ತಿಳಿಯಿತು. ಈ ಭೂತ ಬೆಂಕಿಯನ್ನು ತಿನ್ನುತ್ತದೆ ಇದಕ್ಕೆ ಬೆಂಕಿಯೇ ಆಹಾರ ಎಂಬ ನಂಬಿಕೆ ಅಲ್ಲಿ ಪ್ರಚಲಿತವಿತ್ತು. ಆ ತನಕ ನಾನು ಅಗ್ನಿ ಚಾಮುಂಡಿ ಗುಳಿಗನ ಹೆಸರನ್ನು ಕೂಡಾ ಕೇಳಿರಲಿಲ್ಲ. ಅದರ ಕುರಿತಾದ ಪ್ರತೀತಿ ಇನ್ನಷ್ಟು ಕುತೂಹಲ ಉಂಟು ಮಾಡಿತು. ಈ ಬಗ್ಗೆ ದೇವಳದ ಅರ್ಚಕರಲ್ಲಿ ಹಾಗೂ ಸ್ಥಳೀಯರಲ್ಲಿ ವಿಚಾರಿಸಿದೆ. ಆಗ "ಈ ದೈವಕ್ಕೆ ಅಗ್ನಿ ಬಹಳ ಪ್ರಿಯ. ಅಗ್ನಿಯೇ ಅದರ ಆಹಾರ. ಆದ್ದರಿಂದ ಇದನ್ನು ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ಅಷ್ಟ ಮಂಗಳ ಪ್ರಶ್ನೆಯಲ್ಲಿ ಕಂಡು ಬಂದಿದೆ" ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದರು. ಭೂತ ಕುರಿತು ಮಾಹಿತಿ ಭೂತ ಕೋಲ ಕಟ್ಟುವ ಕಲಾವಿದರಿಗೆ ತಿಳಿದಿರುತ್ತದೆ. ಅವರು ಹೇಳುವ ಪಾಡ್ದನದಲ್ಲಿ ಭೂತದ ಕಥೆ ಇರುತ್ತದೆ. ಆ ತನಕ ಅಗ್ನಿ ಚಾಮುಂಡಿ ಗುಳಿಗ ಎಂಬ ಭೂತದ ಹೆಸರನ್ನು ನಾನು ಕೇಳಿರಲಿಲ್ಲ. ಹಾಗಾಗಿ ಡಾ || ಚಿನ್ನಪ್ಪ ಗೌಡರ ,ಡಾ. ವಿವೇಕ ರೈಗಳ ಪುಸ್ತಕದಲ್ಲಿನ ಭೂತಗಳ ಪಟ್ಟಿಯನ್ನು ನೋಡಿದೆ, ಅಲ್ಲೂ ಈ ಭೂತದ ಹೆಸರು ಇರಲಿಲ್ಲ.
ತುಳುನಾಡಿನ ಭೂತಗಳು ಮಖ್ಯವಾಗಿ ಮೂರು ವಿಧ. ಒಂದು ಮಾನವ ಮೂಲದ ದೈವಗಳು. ಕೊರಗ ತನಿಯ, ಕೋಟೆದ ಬಬ್ಬು, ಮುಕಾಂಬಿ ಗುಳಿಗ, ಬಬ್ಬರ್ಯ ,ಕೋಟಿ ಚೆನ್ನಯ, ಮುದ್ದ ಕಳಲ ಮೊದಲಾದ ಭೂತಗಳು ಈ ವರ್ಗದಲ್ಲಿ ಬರುತ್ತವೆ. ಎರಡನೆಯ ವರ್ಗ ಪ್ರಾಣಿ ಮೂಲ ದೈವಗಳು ಪಂಜುರ್ಲಿ, ಪಿಲಿ ಭೂತ , ಮೊದಲಾದವು ಈ ವರ್ಗದಡಿಯಲ್ಲಿ ಸೇರುತ್ತವೆ. ಮೂರನೆಯ ವರ್ಗ ಪುರಾಣ ಮೂಲ ದೈವಗಳು ರಕ್ತೇಶ್ವರಿ ,ಗುಳಿಗ, ಧೂಮಾವತಿ(ಜುಮಾದಿ), ಚಾಮುಂಡಿ ಮೊದಲಾದ ಭೂತಗಳು ಈ ವರ್ಗದಲ್ಲಿ ಸೇರುತ್ತವೆ.
ಅಗ್ನಿ ಚಾಮುಂಡಿ ಗುಳಿಗ ಕೂಡಾ ಒಂದು ಪುರಾಣ ಮೂಲ ದೈವ ಇರಬಹುದು ಎಂದು ನಾನು ಭಾವಿಸಿದೆ. ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ ಚಾಮುಂಡಿ, ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಚಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ ‘ಚಾಮುಂಡಿ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿ. ಆದ್ದರಿಂದ ಅಗ್ನಿಚಾಮುಂಡಿ ಭೂತದ ಬಗ್ಗೆ ಅಧ್ಯಯನಮಾಡುವುದಕ್ಕಾಗಿ ಈ ಭೂತದ ನೇಮದಂದು ಕ್ಯಾಮೆರಾ ಮತ್ತು ರೆಕಾರ್ಡರ್ ಹಿಡಿದುಕೊಂಡು ಹೋದೆ. ರಾತ್ರಿ ಊಟದ ನಂತರ ಅಗ್ನಿ ಚಾಮುಂಡಿ ಭೂತದ ನೇಮ ಇತ್ತು.ಮಧ್ಯಾಹ್ನ ೨ ಗಂಟೆ ಹೊತ್ತಿಗೆ ಬಂದ ಭೂತಕೋಲ ಕಟ್ಟುವ ಕಲಾವಿದ ಬಾಬು ಅರಂಬೂರು ಅವರು ಭೂತಕೋಲ ಕಟ್ಟಲು ಬೇಕಾದ ಪರಿಕರಗಳನ್ನು ಸಿದ್ಧಮಾಡುತ್ತಿದ್ದರು. ಮೊದಲೇ ನನಗೆ ಅವರ ಪರಿಚಯ ಇತ್ತು.
ನಾನು ಹೋದಾಗ ನನಗೆ ಬೇಕಾದ ಮಾಹಿತಿಗಳನ್ನು ನೀಡಿದರು. ಭೂತಕೋಲ ಕಟ್ಟುವ ಕಲಾವಿದರು ಭೂತಕೋಲ ಕಟ್ಟಲು (ವೇಷ ಹಾಕಲು )ಸುರು ಮಾಡಿದ ಮೇಲೆ ಬೇರೆ ಯಾವುದೇ ವಿಚಾರಗಳನ್ನು ಮಾತಾಡುವುದಿಲ್ಲ.ಅವರಿಗೆ ಸಮಯವೂ ಇರುವುದಿಲ್ಲ. ಭೂತಕೋಲ ಕಟ್ಟಿ ಸಿದ್ಧವಾಗಲು ಸುಮಾರು ೩-೪ ಗಂಟೆ ಸಮಯ ಬೇಕಾಗುತ್ತದೆ. ಮೊದಲು ಒಡೆಯನಿಂದ ಭೂತಕೋಲ ಕಟ್ಟಲು ಆಣತಿ ಪಡೆದು ಎಣ್ಣೆ ಬೂಲ್ಯ ಪಡೆದು ಸ್ನಾನಮಾಡಿ ಬರುತ್ತಾರೆ. ಎಣ್ಣೆ ಬೂಲ್ಯ ಪಡೆಯುವಾಗ ದೈವಸ್ಥಾನದ ಎದುರು ನಿಂತು ದೈವದ ಎದುರು ನೇಮವನ್ನು ಯಾವುದೇ ಅಡ್ಡಿ ಆತಂಕ ಬಾರದಂತೆ ನೆರೆವೇರಿಸಿಕೊಡು ಎಂದು ಅರಿಕೆ ಮಾಡುತ್ತಾರೆ. ಆಗ ದೈವದ ಕಥಾನಕವನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ. ಅಗ್ನಿ ಚಾಮುಂಡಿ ಗುಳಿಗ ಉಗ್ರ ಸ್ವಭಾವದ ದೈವ. ಈ ದೈವದ ಆವೇಶ ಪೂರಿತ ಅಟ್ಟಹಾಸ ಉಗ್ರ ನರ್ತನ ನೋಡುಗರ ಎದೆ ಕಂಪಿಸುವಂತೆ ಮಾಡುತ್ತದೆ.
ಮಾನವ ಮೂಲದ ಈ ದೈವದ ಉಗ್ರ ಅಭಿನಯ ,ಆಕ್ರೋಶ ,ಅಟ್ಟಹಾಸಗಳು ದೈವತ್ವ ಪ್ರಾಪ್ತಿಗೆ ಮೊದಲು ನಡೆದ ಅನ್ಯಾಯದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿದೆ. ಮುಖಕ್ಕೆ ಅರದಲ ಹಚ್ಚಿ ಮೇಲೆ ಇಟ್ಟ ಬಿಳಿಬಣ್ಣದ ಚುಕ್ಕಿ, ಹಳದಿ ಬಣ್ಣದ ಗೆರೆಗಳು. ತುಟಿಯ ಮೇಲಿನ ಗುಲಾಬಿವರ್ಣದ ಗೆರೆಗಳು ಈ ಭೂತದ ಮುಖವರ್ಣಿಕೆಯಲ್ಲಿದ್ದು ಭೂತಕ್ಕೆ ಒಂದು ವಿಶಿಷ್ಟ ಕಳೆಯನ್ನು ತಂದು ಚಾಮುಡಿ ಗುಳಿಗ ಬೆಂಕಿಯನ್ನು ಪ್ರವೇಶ ಮಾಡುವಾಗ ಮೈ ರೋಮಾಂಚನಗೊಳ್ಳುತ್ತದೆ. ಇತರ ಭೂತಗಳಂತೆ ಆಳೆತ್ತರದ ಅಣಿ ಇರುವುದಿಲ್ಲ, ಅದರ ಬದಲಿಗೆ ಕಲಾತ್ಮಕವಾಗಿ ತಯಾರಿಸಿದ ತೆಂಗಿನ ತಿರಿಯ ತಲೆ ಪತ್ತವಿರುತ್ತದೆ. ಅಲ್ಲಿ ರೆಕಾರ್ಡಿಂಗ್ ಗೆ ಏನೂ ತೊಂದರೆ ಆಗಲಿಲ್ಲ. ಸ್ಥಳೀಯರು ಹಾಗೂ ಭೂತ ಕಟ್ಟಿದ ಕಲಾವಿದ ಬಾಬು ,ಕಾಂತು ಹಾಗೂ ಅವರ ಕುಟುಂಬದ ಸದಸ್ಯರು ಎಲ್ಲರು ಪೂರ್ಣ ಸಹಕಾರ ನೀಡಿದರು. ಇದರಿಂದಾಗಿ ಅವರು ಹೇಳುವ ಆ ಭೂತದ ಪಾಡ್ದನವನ್ನು ರೆಕಾರ್ಡ್ ಮಾಡಿದೆ. ಇದರಿಂದಾಗಿ ಮೂಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಗುಳಿಗ ಎಂದು ಕರೆದು ಅಲ್ಲಿ ಆರಾಧಿಸುತ್ತಿದ್ದಾರೆ. ಎಂದು ನನಗೆ ಅಲ್ಲಿ ತಿಳಿದು ಬಂತು. ಅಗ್ನಿ ಚಾಮುಂಡಿ ಗುಳಿಗ ನೇಮದ ವಿಧಾನಗಳು, ಅಗ್ನಿ ಚಾಮುಂಡಿಯ ಮುಖಮರ್ಣಿಕೆ ಹಾಗೂ ನೇಮದ ಸಂದರ್ಭದಲ್ಲಿ ಹೇಳುವ ಪಾಡ್ದನಗಳಿಂದ ಮುಕಾಂಬಿ ಗುಳಿಗನನ್ನೇ ಅಗ್ನಿ ಚಾಮುಂಡಿ ಎಂದು ಕರೆಯುತ್ತಾರೆ ಎಂದು ನನಗೆ ಸ್ಪಷ್ಟವಾಗಿ ಗೊತ್ತಾಯಿತು.
ಮುಕಾಂಬಿ ಎಂಬ ಬ್ರಾಹ್ಮಣ ಕನ್ಯೆಗೆ ಬಹಳ ಎಳೆಯದರಲ್ಲಿಯೇ ವಾಸಲ್ಲ ಭಟ್ಟರೊಂದಿಗೆ ವಿವಾಹವಾಗುತ್ತದೆ. ವಿವಾಹವಾದ ತುಸು ಸಮಯದಲ್ಲಿ ಬರ ಬಂದು ಬಡತನ ಆವರಿಸಿ ಶಾಂತಿ ಪೂಜೆಗಾಗಿ ಕೇರಳಕ್ಕೆ ಹೊರಡುತ್ತಾರೆ. ಕೇರಳಕ್ಕೆ ಹೋಗುವಾಗ ಮಡದಿ ಮುಕಾಂಬಿ ಜೇವಿನ ಹತ್ತಿರ ತಂದೆ ಮನೆಗೆ ಹೋಗಲು ತಿಳಿಸಿದಾಗ ಅವಳು ತಂದೆ ಮನೆಗೆ ಹೋಗಲೊಪ್ಪದೆ ಹಠಮಾಡಿ ವಾಸುಲ್ಲ ಭಟ್ಟರೊಂದಿಗೆ ಬರುತ್ತಾಳೆ. ಕಷ್ಟ ಬಂದಾಗ ಗಂಡನ ಕೈ ಬಿಡಬಾರದೆಂದು, ನಾನು ಜೊತೆಗೆ ಬರುತ್ತೇನೆ ಎಂದು ಮೂಕಾಂಬಿ ಜೇವು ಹಠ ಹಿಡಿಯುತ್ತಾಳೆ.
ಓಹೋಯೆ ಮುಕಾಂಬಿ ಜೇವೆ ಈ ಕೇಂಡಾನ
ಯಾನಾಂಡ ಪೋಪೆ ತೆನ್ಕಾಯಿ ಸಾಂತಿ ಪೂಜೆಗ್
ಈಯಾಂಡ ನಿನ್ನಪ್ಪೆನಡೆ ಪೊವೊಡಿಯಾ
ಯಾನಾಂಡ ಪೋವಾಯೆ ಕೇಂಡಾರ
ಈರೆ ಕೈಪತ್ತಿ ದೋಸೊಗು ಬೆರಿ ಬುಡಯೆಂದಳ್
ಕನ್ನಡ ಅನುವಾದ:
ನಾನಾದರೂ ಹೋಗುವೆ ತೆಂಕು ಶಾಂತಿ ಪೂಜೆಗೆ
ನೀನಾದರು ನಿನ್ನ ತಾಯಿ ಮನೆಗೆ ಹೋಗಬೇಕು
ನಾನಾದರು ಹೋಗಲಾರೆ ಕೇಳಿದಿರಾ
ನಿಮ್ಮ ಕೈ ಹಿಡಿದ ದೋಷಕ್ಕೆ ಬೆನ್ನು ಬಿಡಲಾರೆ, ಎಂದಳು.
ಅದು ಹೆಂಗಸು ಹೋಗಬಾರದ ರಾಜ್ಯ. ಒಂದು ಬಳ್ಳ ಬತ್ತಕ್ಕೆ ತಲೆ ಕಡಿಯುವ ಜನರು ಅವರು. ನೀನು ಬರಬೇಡ, ನಿನ್ನ ತಂದೆ ಮನೆಯಲ್ಲಿ ಬಿಟ್ಟು ಹೋಗುತ್ತೇನೆ ಎಂದು ಗಂಡ ವಾಸುಭಟ್ಟರು ಹೇಳುತ್ತಾರೆ. ಆಗ ಮುಕಾಂಬಿ ಜೇವು ಮದುವೆಯ ನಂತರ ಬಡತನವಿದ್ದರೂ, ಸಿರಿತನವಿದ್ದರೂ ಹೆಣ್ಣಿಗೆ ಗಂಡನ ಮನೆಯೇ ಸರಿ ಎಂದು ವಾದಿಸುತ್ತಾಳೆ.
ಮದಿಮೆ ಆಪುನೆಕ್ ದುಂಬು ಮದಿಮಯ
ಅಪ್ಪೆ-ಅಮ್ಮೆ ಇಲ್ಲುದ ಪೇರುನುಪ್ಪು ಆವುಯೆ
ಮದಿಮೆ ಆಯಿಬೊಕ್ಕ ಕಂಡನಿ ಇಲ್ಲ್‌ದ
ಕಣನೀರ್‌ನುಪ್ಪು ಆವುಯೆ
ಈರೆನ ಒಟ್ಟುಗು ಬರ್ಪೆಂದಲ್ ಮುಕಾಂಬಿ
ಕನ್ನಡ ಅನುವಾದ :
ಮದುವೆ ಆಗುವುದಕ್ಕೆ ಮೊದಲು ಮದುಮಗ
ತಾಯ್ತಂದೆಗಳ ಮನೆಯ ಹಾಲನ್ನವಾದೀತು
ಮದುವೆಯಾದ ಮೇಲೆ ಗಂಡನ ಮನೆಯ
ಕಣ್ಣೀರು ಅನ್ನವೂ ಆದೀತು
ನಿಮ್ಮೊಂದಿಗೆ ಬರುವೆನೆಂದಳು ಮುಕಾಂಬಿ
ಆಗ ಗಂಡ ವಾಸುಭಟ್ಟರು
ಈಲ ಬರಡ ಮುಕಾಂಬಿಯೆ ನಿನನ್ ಬುಡಯೆ ಜೇವೆ
ಇತ್ತ್ಂಡ ನಿಕ್ಕ್‌ಲ ಎಂಕ್‌ಲ ಒಂದು ಬೂಡು ಕೇಂಡಾನ
ಸೈತ್ಂಡ ನಿಕ್ಕ್‌ಲ ಎಂಕ್‌ಲ ಒಂಜಿ ಕಾಟಂದೆರ್
ಕನ್ನಡ ಅನುವಾದ:
ನೀನು ಬರಬೇಡ ಮುಕಾಂಬಿ ನಿನ್ನನ್ನು ಕೈ ಬಿಡುವುದಿಲ್ಲ ನಾನು
ಇದ್ದರೆ ನಿನಗೆ ನನಗೆ ಒಂದು ಬೀಡು
ಸತ್ತರೆ ನಿನಗೆ ನನಗೆ ಒಂದು ಚಿತೆ
(ಇನ್ನೂ ಇದೆ) -ಡಾ.ಲಕ್ಷ್ಮೀ ಜಿ ಪ್ರಸಾದ್, ಕಾಸರಗೋಡು