ಅಗ್ನಿ ಪರ್ವತಗಳ ನಿರ್ಮಾಣವಾದದ್ದು ಹೇಗೆ?
ಈಗಾಗಲೇ ನೀವು ಪರ್ವತಗಳ ರಚನೆ, ನಿರ್ಮಾಣದ ಬಗ್ಗೆ ಲೇಖನವನ್ನು ಓದಿರುವಿರಿ. ಒರೋಜಿನಿಕ್ ಚಲನೆಯ ಕಾರಣದಿಂದ ಪರ್ವತಗಳ ಜನನವಾಗಿದೆ ಎಂದು ತಿಳಿದಿರಿ. ಜನನದ ಬಳಿಕ ಮರಣವಿಲ್ಲವೇ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಸಾಮಾನ್ಯವಾಗಿ ಏಳಬಹುದು. ನಮಗೆಲ್ಲಾ ಹೇಗೆ ಹುಟ್ಟು- ಸಾವು ಇದೆಯೋ ಹಾಗೆಯೇ ಪರ್ವತಗಳಿಗೂ ಇದೆ. ಜೀವವಿಲ್ಲದ ಪರ್ವತಗಳು ಸಾಯುವುದಾದರೂ ಹೇಗೆ ಅಂತೀರಾ? ಪ್ರಪಂಚದಲ್ಲಿರುವ ಸಾವಿರಾರು ಸಣ್ಣ-ದೊಡ್ದ ಪರ್ವತಗಳು ಹುಟ್ಟುತ್ತಿರುವಂತೆ ಸಾಯುತ್ತಲೂ ಇವೆ. ಒಂದು ಪರ್ವತ ನಿರ್ಮಾಣವಾಗಲು ನೂರಾರು ವರ್ಷಗಳು ತೆಗೆದುಕೊಳ್ಳುತ್ತದೆಯೋ ಹಾಗೆಯೇ ಸಾಯಲೂ ಅಷ್ಟೇ ವರ್ಷಗಳು ಬೇಕಾಗುತ್ತವೆ. ಇದೊಂದು ನಿರಂತರ ಪ್ರಕ್ರಿಯೆ ಎನ್ನುತ್ತಾರೆ ವಿಜ್ಞಾನಿಗಳು.
ನಾವು ಬದುಕಿರುವ ಸಮಯದಲ್ಲಿ ನಮಗೆ ಪರ್ವತಗಳ ಹುಟ್ಟು ಹಾಗೂ ಸಾವಿನ ಅರಿವಾಗುವುದಿಲ್ಲ. ಅದು ನಿಧಾನ ಪ್ರಕ್ರಿಯೆ. (ನಗರೀಕರಣದ ನೆಪದಲ್ಲಿ ಗುಡ್ಡಗಳನ್ನು ಅಗೆದು ಕಟ್ಟಡಗಳನ್ನು ಕಟ್ಟಿದರೆ ಮಾತ್ರ ನಮಗೆ ಗುಡ್ಡ ಮಾಯವಾದ ಸಂಗತಿ ಕೂಡಲೇ ಗೊತ್ತಾಗುತ್ತದೆ). ಜಲಜ ಪದರಗಳು ಹಾಗೂ ಲಾವಾ ಪದರಗಳು ಮಡಿಕೆಗಳಾಗುವುದರಿಂದಲೂ ಪರ್ವತಗಳು ಹುಟ್ಟುತ್ತವೆ.
ಶಿಲೆ ಅಥವಾ ಖನಿಜಗಳಲ್ಲಿ ಮೂರು ಬಗೆ ಇದೆ. ಅಗ್ನಿ ಶಿಲೆ, ಜಲಜ ಶಿಲೆ ಹಾಗೂ ರೂಪಾಂತರ ಶಿಲೆ. ಅಗ್ನಿ ಶಿಲೆಗಳ ಮೂಲ ಭೂಗರ್ಭದ ಆಳದಿಂದ ಕುದಿಯುತ್ತಾ ಬರುವ ಮ್ಯಾಗ್ಮಾ ರಸ ಅಥವಾ ಲಾವಾ ರಸ. ದಪ್ಪವಾದ ಗಂಜಿಯಂತಿರುವ ಇದನ್ನು ಒಂದು ರೀತಿಯ ಶಿಲಾಪಾಕ ಎಂದು ಕರೆಯಬಹುದು. ಯಾವ ಶಿಲೆಯು ದ್ರವರೂಪದಲ್ಲಿರುವಾಗಲೇ ರೂಪುಗೊಳ್ಳುವುದೋ ಅದು ಅಗ್ನಿ ಶಿಲೆ. ಭೂ ಕವಚದ ಶೇ ೯೫ ಭಾಗ ಅಗ್ನಿಶಿಲೆಯಿಂದ ಆಗಿದೆ. ಈ ಶಿಲೆಯಿಂದಲೇ ಉಳಿದ ಬಗೆಗಳಾದ ಜಲಜ ಶಿಲೆ ಹಾಗೂ ರೂಪಾಂತರ ಶಿಲೆಗಳ ನಿರ್ಮಾಣವಾಗಿವೆ. ಭೂಮಿಯ ಕೇಂದ್ರ ಭಾಗದಲ್ಲಿ ಕುದಿಯುತ್ತಿರುವ ಮ್ಯಾಗ್ಮಾರಸ ಭೂಮಿಯ ಒಳಭಾಗದ ಪದರಗಳಲ್ಲಿರುವ ಬಿರುಕುಗಳಿಗೆ ಹರಿದು ಅಲ್ಲಿ ತಂಪಾಗಿ ಅಗ್ನಿಶಿಲೆಗಳಾಗುತ್ತವೆ. ಇವಕ್ಕೆ ಇಂಟ್ರೂಸಿವ್ ಅಗ್ನಿ ಶಿಲೆಗಳೆಂದು ಹೆಸರಿಸಲಾಗಿದೆ. ಆಮೇಲೆ, ಮ್ಯಾಗ್ಮಾದಲ್ಲಿರುವ ಅಪಾರವಾದ ಶಾಖ ಮತ್ತು ಒತ್ತಡವು ತಾನು ಭೂಪದರದ ಮೇಲ್ಭಾಗಕ್ಕೆ ಬರುವ ದಾರಿಯಲ್ಲಿರುವ ಶಿಲಾಪದರಗಳು ಚಲಿಸುವಂತೆ, ಬಿರುಕು ಬಿಡುವಂತೆ ಮಾಡುತ್ತದೆ. ಹೀಗೆ ಕುದಿಯುತ್ತಿರುವ ಮ್ಯಾಗ್ಮಾ ಹೊರ ವಾತಾವರಣಕ್ಕೆ ಬಂದಾಗ ಅದು ಲಾವಾ ರಸ ಎನಿಸಿಕೊಳ್ಳುತ್ತದೆ. ಭೂಮಿಯ ಮೇಲ್ಪದರದ ಮೇಲೆ ನಿಧಾನವಾಗಿ, ವಿಸ್ತಾರವಾಗಿ ಹರಡುತ್ತಾ ಹೋಗುತ್ತದೆ. ಆಗ ಇದನ್ನು ಲಾವಾ ಪದರ ಎನ್ನುತ್ತಾರೆ. ಇದು ದೀರ್ಘ ಕಾಲದ ಬಳಿಕ ಲಾವಾಶಿಲೆಗಳಾಗಿ ಪರಿವರ್ತಿತವಾಗುತ್ತವೆ.
ಇದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ದಖ್ಖನ್ ಪ್ರಸ್ಥಭೂಮಿ. ಭೂ ವಿಜ್ಞಾನಿಗಳು ಇವುಗಳನ್ನು ಡೆಕ್ಕನ್ ಟ್ರ್ಯಾಪ್ಸ್ ಎಂದು ಕರೆದಿದ್ದಾರೆ. ಇದು ಸುಮಾರು ಹತ್ತು ಸಾವಿರ ಅಡಿಗಳವರೆಗೆ ಎತ್ತರವಾಗಿದೆ. ಅಂದಮೇಲೆ ಭೂಮಿಯ ಒಳಭಾಗದಿಂದ ಹೊರಭಾಗಕ್ಕೆ ಬಿರುಕುಗಳಲ್ಲಿ ಹರಿದುಬಂದಿರುವ ಮ್ಯಾಗ್ಮಾರಸದ ಬೃಹತ್ ಪ್ರಮಾಣವನ್ನು ಊಹಿಸುವುದಕ್ಕೂ ಅಸಾಧ್ಯ ಅಲ್ಲವೇ? ಒಂದೊಂದು ಸಲ ಮ್ಯಾಗ್ಮಾ ಹೊರಗೆ ಹರಿದು ಬರುವಾಗ ಒಂದೊಂದು ಪದರ ನಿರ್ಮಾಣವಾಗುತ್ತದೆ. ನಮ್ಮ ದಕ್ಷಿಣ ಭಾರತ ಹಲವಾರು ಪದರಗಳ ನಿರ್ಮಾಣ. ಕೊಲಂಬಿಯಾ ಪ್ರಸ್ಥಭೂಮಿಯೂ ಇದೇ ರೀತಿಯಲ್ಲಿ ನಿರ್ಮಾಣವಾಗಿದೆ.
ಈ ಮ್ಯಾಗ್ಮಾ ಅಥವಾ ಲಾವಾರಸದ ಕಾರಣದಿಂದಲೇ ಅಗ್ನಿ ಪರ್ವತಗಳು ಹುಟ್ಟುತ್ತವೆ. ಇವುಗಳೂ ಸಹಜವಾಗಿಯೇ ನಿರ್ಮಾಣವಾದ ಬೆಟ್ಟ ಅಥವಾ ಪರ್ವತಗಳೇ ಆಗಿವೆ. ಆದರೆ ಇವುಗಳ ತುದಿ ಮಾತ್ರ ಶಂಕುವಿನಂತೆ ಕೋನಾಕೃತಿಯಲ್ಲಿ ಇರುತ್ತದೆ. ಭೂ ಪದರದೊಳಗಿನಿಂದ ರೂಪುಗೊಂಡ ಕೊಳವೆಯ ಸುತ್ತ ಉಂಟಾಗಿರುವ ಪರ್ವತ ಎಂದು ಹೇಳಬಹುದೇನೋ? ಅತ್ಯಂತ ಅಧಿಕ ಶಾಖವಿರುವ ಭೂಮಿಯ ಒಳ ಕೇಂದ್ರ ಮತ್ತು ನಾವು ವಾಸ ಮಾಡುವ ಭೂಮಿಯ ಹೊರಭಾಗವನ್ನು ಅಗ್ನಿ ಪರ್ವತಗಳು ಒಂದುಗೂಡಿಸುತ್ತವೆ. ಈ ರೀತಿ ನಿರ್ಮಾಣವಾದ ಕೊಳವೆಯಾಕೃತಿಗೆ ‘ವೆಂಟ್' ಎಂದು ಕರೆಯುತ್ತಾರೆ. ಇದರ ಮುಖಾಂತರವೇ ಸಾವಿರಾರು ಡಿಗ್ರಿಗಳ ಉಷ್ಣಾಂಶವಿರುವ ಮ್ಯಾಗ್ಮಾ ಅಥವಾ ಲಾವಾರಸ ಕುದಿಯುತ್ತಾ ಕೆಂಪು ವರ್ಣದಲ್ಲಿ ಹೊರಕ್ಕೆ ಚಿಮ್ಮುತ್ತದೆ. ಹೀಗೆ ಹೊರ ಚಿಮ್ಕಿದ ಲಾವಾರಸವು ನಿಧಾನವಾಗಿ ಪರ್ವತದಿಂದ ಕೆಳಗೆ ಇಳಿಜಾರಿನಲ್ಲಿ ಹರಿಯುತ್ತದೆ. ಹೀಗೆ ಪದೇ ಪದೇ ಚಿಮ್ಮುವ ಲಾವಾರಸವು ಪರ್ವತದ ತಳಭಾಗಕ್ಕೆ ಹರಿದು ಅಲ್ಲಿ ಸಂಗ್ರಹವಾಗುತ್ತದೆ. ನಿಧಾನವಾಗಿ ಒಣಗುತ್ತದೆ. ಪರ್ವತಕ್ಕೆ ಶಂಕುವಿನ ಮೊನೆಯಾಕಾರವನ್ನು ಒದಗಿಸಿಕೊಡುತ್ತದೆ.
ಅಗ್ನಿಪರ್ವತದಿಂದ ಹೊರಗೆ ಹರಿಯುವ ಲಾವಾರಸದಲ್ಲಿ ಸಿಲಿಕಾ (SiO2) ಎಂಬ ರಾಸಾಯನಿಕ ಸಂಯೋಜನೆಯ ಅಂಶವಿರುವುದರಿಂದ ನೀರಿನಂತೆ ಬೇಗನೇ ಹರಿಯುವುದಿಲ್ಲ. ಒಂದು ರೀತಿಯಲ್ಲಿ ಉರಿಯುತ್ತಿರುವ ಕ್ಯಾಂಡಲ್ ನಿಂದ ಕೆಳಗಿಳಿಯುವ ಮೇಣದ ಹಾಗೆ ನಿಧಾನವಾಗಿ ಹರಿಯುತ್ತದೆ. ಹೀಗೆ ಕ್ಯಾಂಡಲ್ ನಿಂದ ಹೊರ ಹರಿದ ಮೇಣ ಅದರ ತಳಭಾಗದಲ್ಲಿ ಗುಪ್ಪೆಯಾಗಿ ನಿಲ್ಲುತ್ತದೆ. ಅಧಿಕ ಹೊತ್ತು ಕ್ಯಾಂಡಲ್ ಉರಿಯುತ್ತಿದ್ದರೆ ಅದು ಇರಿಸಿದ ಜಾಗದಲ್ಲೆಲ್ಲಾ ಈ ದ್ರವರೂಪದ ಮೇಣವು ಹರಿದು ಬಿಡುತ್ತದೆ. ನಂತರ ನಿಧಾನವಾಗಿ ಗಟ್ಟಿಯಾಗುತ್ತದೆ. ಇದೇ ರೀತಿ ಲಾವಾರಸ ನಿಧಾನವಾಗಿ ಪರ್ವತದ ತಳಭಾಗಕ್ಕೆ ಹರಿದು, ನಂತರ ಗಟ್ಟಿಯಾಗುತ್ತದೆ.
ದಕ್ಷಿಣ ಅಮೇರಿಕಾದ ಆಂಡಿಸ್ ಪರ್ವತ ಶ್ರೇಣಿಯಲ್ಲಿರುವ ಚಿಂಬರೋಜೊ ಅಗ್ನಿ ಪರ್ವತ ಲಾವಾರಸ ಹೊರ ಚಿಮ್ಮುವಿಕೆಗೆ ಬಹಳ ಖ್ಯಾತಿಯನ್ನು ಪಡೆದಿದೆ. ಅಗ್ನಿ ಪರ್ವತಗಳ ನಿರಂತರ ಚಟುವಟಿಕೆಗಳಿಂದ ಹೊರಹೊಮ್ಮಿದ ಲಾವಾರಸಗಳಿಂದ ಆಕಾರ ತಾಳಿದ ಪರ್ವತವನ್ನು ಕೋನಾಕಾರದ ಅಗ್ನಿ ಪರ್ವತಗಳು ಅಥವಾ ವಾಲ್ಕಾನಿಕ್ ಕೋನ್ ಎಂದು ಕರೆಯುತ್ತಾರೆ. ಇನ್ನೊಂದು ಬಗೆಯ ಪದರವಾದ ಜಲಜ ಪದರಗಳು ಸವೆಯುವ ಕ್ರಿಯೆಗೆ ಒಳಗಾಗಿ ಪರ್ವತಗಳ ತುದಿ ಗುಂಬಜ್ ಅಥವಾ ಡೂಮ್ ರೀತಿಯ ಆಕಾರವನ್ನು ಪಡೆಯುತ್ತದೆ. ಚೂಪಾದ ಶಿಖರಕ್ಕೆ ಬುಟ್ಟಿಯೊಂದನ್ನು ಮುಚ್ಚಿದ ರೀತಿ ಕಾಣಿಸುತ್ತದೆ.
ನಾವು ತಿನ್ನುವ ಬನ್ ಆಕಾರದಲ್ಲಿರುವ ಡೂಮ್ ಗೆ ಲ್ಯಾಕೊಲಿತ್ ಡೂಮ್ ಎಂದು ಕರೆಯುತ್ತಾರೆ. ಉತ್ತರ ಅಮೇರಿಕಾದ ದಕ್ಷಿಣ ಉಟ್ಟಾ ಎಂಬ ಪ್ರದೇಶದಲ್ಲಿ ಹೆನ್ರಿ ಎಂಬ ಹೆಸರಿನ ಪರ್ವತವಿದೆ. ಇದು ಲ್ಯಾಕೊಲಿತ್ ಡೂಮ್ ಪರ್ವತಕ್ಕೆ ಉದಾಹರಣೆಯಾಗಿದೆ. ಮುಂದಿನ ದಿನಗಳಲ್ಲಿ ಪರ್ವತಗಳ ರಚನೆಯ ವಿನ್ಯಾಸ ಹಾಗೂ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳುವ.
(ಮಾಹಿತಿ ಆಧಾರ: ಕನ್ನಡ ಸಾಹಿತ್ಯ ಪರಿಷತ್ತು ಇವರ ‘ಪರ್ವತಗಳು' ಪುಸ್ತಕ)
ಚಿತ್ರದಲ್ಲಿ : ೧. ಲಾವಾ ರಸವನ್ನು ಹೊರಕ್ಕೆ ಚಿಮ್ಮುತ್ತಿರುವ ಅಗ್ನಿ ಪರ್ವತ ೨. ಚಿಂಬರೋಜೊ ಅಗ್ನಿ ಪರ್ವತದ ವಿಹಂಗಮ ನೋಟ
ಚಿತ್ರ ಕೃಪೆ: ಅಂತರ್ಜಾಲ ತಾಣ