ಅಘನಾಶಿನಿಯ ಒಡಲೊಳಗೆ ಐಗಳ ಕುರ್ವೆ
“ಪಟಗಾರ ಮಾಸ್ತರ್ರು ಉಪ್ಪು ತಂದವ್ರೆ, ಬೇಕಾದವರೆಲ್ಲಾ ಬನ್ನಿ, ಇವತ್ತು ಬಿಟ್ರೆ ಇನ್ನು ಆರು ತಿಂಗಳು ಈಕಡಿಗೆ ಬರೂದಿಲ್ವಂತೆ”
ಇಪ್ಪತ್ತೈದು ವರ್ಷಗಳ ಹಿಂದೆ ಈ ನಡುಗಡ್ಡೆಗೆ ಭೇಟಿ ನೀಡಿದಾಗ ಕೇಳಿಬಂದ ಮೊದಲ ಕೂಗು ಇದು. ನೀರ ನಡುವೆ ಇರುವ ಊರು. ಇಡೀ ಊರಲ್ಲಿ ಎಲ್ಲಿ ಅಗೆದರೂ ಸಿಗೋದು ಉಪ್ಪುನೀರು. ಆದರೆ ಉಪ್ಪು ಬೇಕೆಂದರೆ ಪಡಪಾಟಲು ಪಡಬೇಕಿತ್ತು!
ಇಂಥ ವಿಚಿತ್ರ ಊರಿನ ಪರಿಚಯವಾದುದೇ ವಿಚಿತ್ರ ಸಂದರ್ಭದಲ್ಲಿ. ಕುಮಟಾ - ಗೋಕರ್ಣ ಹೆದ್ದಾರಿಯಲ್ಲಿ ಕೋಡ್ಕಣಿ ಎಂಬ ಹಳ್ಳಿಗೆ ನೆಂಟರ ಮನೆಗೆ ಹೋಗಿದ್ದಾಗ ಬೆಳಿಗ್ಗೆ ಹಾಲು ಕೊಡಲು ಹಾಲುಗಲ್ಲದ ಹುಡುಗಿಯೊಬ್ಬಳು ಬಂದಿದ್ದಳು. ಅವಳ ಕೈಯಲ್ಲಿ ಒಂದು ಬಿಂದಿಗೆ. ಕೇಳಿದರೆ ನೀರಿಗೆ ಎಂದಳು, ಹೊಸಬರನ್ನು ಕಂಡು ನಾಚಿ ನೀರಾಗಿ. ‘ನಿಮ್ಮೂರಲ್ಲಿ ನೀರಿಗೇಕೆ ಕೊರತೆ’ ನಾನು ಕುತೂಹಲದಿಂದ ಕೇಳಿದೆ. ‘ಅಲ್ಲಿರೋದು ಉಪ್ಪುನೀರು, ಹೀಗಾಗಿ ನಾವು ಕುಡಿಯುವ ನೀರನ್ನು ಕೋಡ್ಕಣಿಯಿಂದ ಒಯ್ಯುತ್ತೇವೆ’ ಹುಡುಗಿ ದೃಢವಾಗಿ ನುಡಿದಳು. ನೀರನಡುವೆ ಇದ್ದೂ ತೊಟ್ಟು ಕುಡಿಯುವ ನೀರಿಗೆ ಪರದಾಡುವ ಈ ನಡುಗಡ್ಡೆಯ ಪರಿಚಯವಾದುದು ಹಾಗೆ. ಆ ಊರಿನ ಹೆಸರು ಐಗಳ ಕುರ್ವೆ. ಕರಾವಳಿಯಲ್ಲಿ ಕುರ್ವೆ ಎಂದರೆ ನಡುಗಡ್ಡೆ ಎಂಬ ಅರ್ಥ.
ಮಾವಿನ ಕುರ್ವೆ, ಪಾವಿನ ಕುರ್ವೆ...... ಉತ್ತರ ಕನ್ನಡದಲ್ಲಿ ಕುರ್ವೆಗಳು ಬಹಳಷ್ಟಿವೆ. ಜಲಪಾತಗಳ ಜಿಲ್ಲೆಯೆಂದು ಕರೆಸಿಕೊಳ್ಳುವ ಉತ್ತರ ಕನ್ನಡ, ನಡುಗಡ್ಡೆಗಳ ಜಿಲ್ಲೆ ಕೂಡಾ. ಯಾಕೆಂದರೆ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುವ ಇಲ್ಲಿಯ ನದಿಗಳು ಸಮುದ್ರ ಸೇರುವ ಧಾವಂತದಲ್ಲಿ ಅನೇಕ ನಡುಗಡ್ಡೆಗಳನ್ನು ಸೃಷ್ಟಿಸಿವೆ. ಸಹಸ್ರಾರು ವರ್ಷಗಳಿಂದ ಈ ನಡುಗಡ್ಡೆಗಳಲ್ಲಿ ಜನ- ಜಾನುವಾರುಗಳ ಬದುಕು ಅರಳಿವೆ. ಕೃಷಿ ಚಿಗುರಿದೆ. ಅಂಥ ಒಂದು ನಡುಗಡ್ಡೆ ಐಗಳಕುರ್ವೆ- ಕುಮಟಾ ತಾಲೂಕಿನಲ್ಲಿ ಕೋಡ್ಕಣಿ ಪಂಚಾಯತಕ್ಕೆ ಸೇರಿರುವ ಊರು.
ಸುಮಾರು ಇನ್ನೂರು ಮನೆಗಳಿರುವ ಇಲ್ಲಿನ ಮೂಲನಿವಾಸಿಗಳು ಪಟಗಾರರು ಮತ್ತು ಹರಿಕಂತರು. ಅಘನಾಶಿನಿ ನದಿ ಸಮುದ್ರ ಸೇರುವ ಸನಿಹವೇ ಈ ನಡುಗಡ್ಡೆಯನ್ನು ಸೃಷ್ಟಿಸಿದೆ. ಹೀಗಾಗಿ ಸಮುದ್ರದ ಭರತದ ಸಮಯ ಅಂದರೆ ಸಮುದ್ರ ಉಕ್ಕೇರುವ ಸಮಯದಲ್ಲಿ ಸಮುದ್ರದ ನೀರು ನದಿಯೊಳಕ್ಕೆ ನುಗ್ಗಿ ಅನೇಕ ಕಿಲೋಮೀಟರುಗಳಷ್ಟು ಒಳಕ್ಕೆ ಹೋಗುವುದರಿಂದ ಇಲ್ಲಿಯ ನೀರು ಉಪ್ಪಾಗುತ್ತದೆ.
ಮಳೆಗಾಲದಲ್ಲಿ ಸವಳು ಅಂದರೆ ಕಡಿಮೆ ಉಪ್ಪಿನದಾದರೆ ಬೇಸಿಗೆಯಲ್ಲಿ ಇಲ್ಲಿನ ನೀರು ಕುಡಿಯಲಾಗದು. ಹೀಗಾಗಿ ಅಗಾಧ ಜಲರಾಶಿಯ ನಡುವೆಯೇ ಇದ್ದರೂ ಐಗಳ ಕುರ್ವೆಗೆ ಕುಡಿಯುವ ನೀರೇ ಸವಾಲಿನದು. ಹಿಂದೆಲ್ಲ ಮನೆಯಿಂದ ನದಿದಾಟಿ ಶಾಲೆಗೆ ಅಥವಾ ಕೆಲಸಕ್ಕೆ ಹೋಗುವವರೆಲ್ಲರೂ ಮನೆಯಿಂದ ಹೊರಡುವಾಗ ಒಂದು ಕೊಡ ಹಿಡಿದುಕೊಂಡು ಹೋಗುವುದು ಹಾಗೂ ವಾಪಸ್ಸು ಬರುವಾಗ ಸಿಹಿನೀರನ್ನು ಹಿಡಿದುಕೊಂಡು ದೋಣಿದಾಟಿ ಬರುವುದು ಅನಿವಾರ್ಯವಾಗಿತ್ತು. ಯಾಕೆಂದರೆ ಈ ಊರಿಗೆ ಹೋಗುವಾಗ ಕೋಡ್ಕಣಿಯಿಂದ ಅಘನಾಶಿನಿ ನದಿ ದಾಟಲೇ ಬೇಕು. ಈಗ ಪರಿಸ್ಥಿತಿಯಲ್ಲಿ ಅಲ್ಪ ಬದಲಾವಣೆಯಾಗಿದೆ. ಏನೆಂದರೆ ಪಂಚಾಯತಿಯವರು ಕೊಳಾಯಿ ಹಾಕಿದ್ದಾರೆ. ಪ್ರತಿ ಮನೆಗೆ ದಿನಕ್ಕೆ ಐದಾರು ಬಿಂದಿಗೆ ನೀರು ಕೊಳಾಯಿಯಲ್ಲಿ ಬರುತ್ತದೆ. ಹೊರಗಿಂದ ತರುವ ದುಸ್ಸಾಹಸ ಸ್ವಲ್ಪ ಕಡಿಮೆಯಾಗಿದ್ದು ಐಗಳ ಕುರ್ವೆಯ ಬದುಕು ಸುಧಾರಿಸಿದೆ!
ಹೌದು, ಹಿಂದೆ ಇಲ್ಲಿ ಅಂಗಡಿಯಿರಲಿಲ್ಲ. ಬೆಂಕಿಪೊಟ್ಟಣ ಬೇಕೆಂದರೂ ಹೊಳೆದಾಟಿ ಕೋಡ್ಕಣಿಗೆ ಹೊಗಬೇಕಿತ್ತು. ಈಗ ನಡುಗಡ್ಡೆಯಲ್ಲಿ ಎರಡು ಅಂಗಡಿಗಳಾಗಿದ್ದಾವೆ ತುರ್ತಿಗೆ ಬೇಕಾದ ಸಾಮಾನುಗಳು ಸಿಗುತ್ತವೆ. ನೀರು ಸಿಗದಿದ್ದರೂ ಕೋಲಾ ಬೇಕಷ್ಟು ಸಿಗುತ್ತವೆ. ನಾವು ದಾಟಿದ ದೋಣಿಯಲ್ಲಿ ಪೆಪ್ಸಿಕೋಲಾದ ದೊಡ್ಡ ಕ್ರೇಟ್ಗಳಿದ್ದವು. ಜೊತೆಗೆ ಹೆಂಗಸರು ದೂರ ಕಾಡಿಗೆ ಹೋಗಿ ತಂದ ಉರುವಲು ಸೌದೆಗಳಿದ್ದವು.
ಅವೆಲ್ಲವನ್ನು ದೋಣಿಯಲ್ಲಿ ಸಾಗಿಸುವುದು ಹೊಸಬರು ನಮಗೆ ಕಷ್ಟವೆನಿಸಿದರೂ ಆ ಹೆಂಗಳೆಯರಿಗೆ ಏನೂ ಅನಿಸಲಿಲ್ಲ. ಐಗಳ ಕುರ್ವೆಯಲ್ಲಿ ಸಮೃದ್ಧ ತೆಂಗಿದೆ. ಭತ್ತ ಚೆನ್ನಾಗಿ ಬೆಳೆಯುತ್ತದೆ. ಕರಾವಳಿಯ ಯಾವುದೇ ಊರಿನ ಹಾಗೆ ಮಾವು ಗೇರು ಹೇರಳವಾಗಿದೆ. ಮಗೇಕಾಯಿ, ಸೌತೇಕಾಯಿ, ಕೆಂಪು ಹರಿವೆ, ಬದನೆ ಮುಂತಾಗಿ ತರಕಾರಿ ಯತೇಚ್ಛವಾಗಿ ಬೆಳೆಯುತ್ತದೆ. ಇಲ್ಲಿ ಕೆಲವು ವರ್ಷಗಳ ಹಿಂದೆ ದೇವಾಲಯವನ್ನೂ ಕಟ್ಟಲಾಗಿದೆ. ಹಿಂದೆಲ್ಲ ಮರಳು ಗುಡ್ಡೆಯಲ್ಲಿ ನಡೆಯುವುದೇ ಕಷ್ಟವಾಗುತ್ತಿತ್ತು.
ಈಗ ರಸ್ತೆಗೆ ಇಂಟರ್ ಲಾಕ್ ಟೈಲುಗಳನ್ನು ಹಾಕಿ ಸುಂದರ ಗೊಳಿಸಲಾಗಿದೆ. ನಡಿಗೆಯೂ ಸುಲಭವಾಗಿದೆ. ನದಿಯ ಮೇಲಿಂದ ಹಾದು ಕರೆಂಟು ಬಂದಿದ್ದು ಗುಂಡಿ ಒತ್ತಿದರೆ ಝಗ್ಗನೆ ಬೆಳಕಾಗುತ್ತದೆ, ಏಳನೇ ತರಗತಿಯ ವರೆಗೆ ಶಾಲೆಯಿದ್ದು ಹೈಸ್ಕೂಲಿಗೆ ದೋಣಿದಾಟಿ ಮಕ್ಕಳು ಕೋಡ್ಕಣಿಗೆ ಹೋಗುತ್ತಾರೆ.
ಅನೇಕರು ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಕುಮಟಾ ಗೋಕರ್ಣ ಮುಂತಾದ ಊರುಗಳಿಗೆ ದಿನಾ ಕೆಲಸದ ಮೇಲೆ ಹೋಗುವ ನೌಕರಸ್ತರು ಅನೇಕರಿದ್ದಾರೆ. ಅಂದರೆ ..... ಐಗಳ ಕುರ್ವೆಯ ಬದುಕು ಸುಧಾರಿಸಿದೆ. ಹಿಂದಿಗಿಂತ ಸುಖಮಯವಾಗಿದೆ. ಇದೀಗ ಮೂರುಕೋಟಿ ವೆಚ್ಚದಲ್ಲಿ ಸೇತುವೆ ಕಟ್ಟಲಿಕ್ಕೆ ಟೆಂಡರ್ ಆಗಿದ್ದು ಎರಡು ವರ್ಷದಲ್ಲಿ ಸೇತುವೆ ತಲೆಯೆತ್ತಿದರೆ ಐಗಳ ಕುರ್ವೆಯ ಬದುಕೇ ಬದಲಾಗಲಿದೆ. ಜೊತೆಗೆ ಈಗ ಎಲ್ಲೆಲ್ಲೂ ಮರಳಿಗೆ ತತ್ವಾರವಾಗಿ ಗೃಹ ನಿರ್ಮಾಣ ಕಾಮಗಾರಿಗಳು ಕುಂಟುತ್ತಿರುವಾಗ ಐಗಳ ಕುರ್ವೆಯಲ್ಲಿ ಅಘನಾಶಿನಿಯ ಒಡಲಿಂದ ಅಗೆದ ಮರಳು ದೂರದೂರಕ್ಕೆ ಅಧಿಕೃತ ಹಾಗೂ ಅನಧಿಕೃತವಾಗಿ ಸಾಗುತ್ತಿದ್ದು ಅಘನಾಶಿನಿಯ ಒಡಲು ಆಳವಾಗುತ್ತಿರುವುದು ಇತ್ತೀಚಿನ ಬೆಳವಣಿಗೆ.
ಆದರೆ... ಇಷ್ಟು ವರ್ಷಗಳಲ್ಲಿ ಆಗಿರುವ, ಹೇಳಲೇ ಬೇಕಾದ ಇನ್ನೊಂದು ಬದಲಾವಣೆಯೆಂದರೆ ಹೊಸ ಹುಡುಗರು ಎಲ್ಲಾ ಬೆಂಗಳೂರಿನ ಬಸ್ಸು- ರೈಲು ಹತ್ತಿ ಹೋಗುತ್ತಿದ್ದು ಇಲ್ಲಿ ಮುದುಕರು ಮಾತ್ರ ಉಳಿಯುವವರು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸೇತುವೆ ಬಂದಮೇಲಾದರೂ ಅವರು ಮರಳಿ ಊರಿಗೆ ಬರುವರೇ ಕಾದು ನೋಬೇಕಷ್ಟೇ.