ಅಘನಾಶಿನಿ ನದಿದಡದಲ್ಲಿ ಧ್ಯಾನ

ಅಘನಾಶಿನಿ ನದಿದಡದಲ್ಲಿ ಧ್ಯಾನ

ಮಾರ್ಚ್ 2022ರಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಹೋಗಿದ್ದ ಸಂದರ್ಭ. ಮಾರ್ಚ್ 24ರ ಗುರುವಾರ ಏರುಹಗಲು ಅಘನಾಶಿನಿ ನದಿದಡಕ್ಕೆ ಹೋಗಿದ್ದೆವು. ಸುಮಾರು ಎರಡು ತಾಸು ಅಲ್ಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ಎಲ್ಲವನ್ನೂ ಧ್ಯಾನ ಸ್ಥಿತಿಯಲ್ಲಿ ಗಮನಿಸಿದೆ. ಆಗ ಪ್ರಶಾಂತ ಪ್ರಕೃತಿಯಲ್ಲಿ ನನಗೆ ಕಂಡ ಕೆಲವು ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ನದಿದಡದಲ್ಲಿ ನಿಬ್ಬೆರಗಾಗಿಸುವ ಜೀವವೈವಿಧ್ಯ. ಮಾವು, ಕುಂಟಲ, ಉಪ್ಪಳಿಗೆ, ಪೇರಳೆ, ನೇರಳೆ; ಕೆಂಪುಕೇಪಳೆ, ಬಿಳಿಗಂಟೆ ಹೂ, ಗುಲಾಲಿ ಕಾಡು ಹೂ ಇತ್ಯಾದಿ ಹೂವಿನ ಗಿಡಗಳು; ವಿವಿಧ ಜಾತಿಯ ಹುಲ್ಲುಗಳು; ಬೆತ್ತದ ಬಳ್ಳಿ, ಮುಳ್ಳು ಬಳ್ಳಿ ಇನ್ನಿತರ ಬಳ್ಳಿಗಳು; ವಿವಿಧ ಬಿದಿರುಗಳು; ನಾಚಿಕೆಮುಳ್ಳು (ಮುಟ್ಟಿದರೆ ಮುನಿ) ಮುಂತಾದ ಮುಳ್ಳಿನ ಗಿಡಗಳು; ಸುರಹೊನ್ನೆ, ಹುನುಗಲು, ರಂಜಲು, ಬನಾಟೆ, ಬೊಟ್ಟಿ ಮೋಪಿನ ಮರಗಳು. ಅಂತೂ ಹತ್ತು ಚದರ ಮೀಟರ್ ಜಾಗದಲ್ಲಿ ಒಂದು ನೂರಕ್ಕಿಂತ ಅಧಿಕ ಜಾತಿಯ ಸಸ್ಯ ಸಂಪತ್ತು.

ಒಂದೆಡೆ ಮರವೊಂದು ಸತ್ತು, ಅದರ ಕಾಂಡವು ಮರದ ಸಮೃದ್ಧ ಬದುಕಿನ ಸ್ಮಾರಕವೆಂಬಂತೆ ನಿಂತಿತ್ತು. ಇನ್ನೊಂದೆಡೆ ಬಳ್ಳಿಯೊಂದು ಬಂಡೆಯಲ್ಲಿ ಬೆಳೆಯುತ್ತಾ  ಮುಂದಕ್ಕೆ ನದಿ ನೀರಿನೆಡೆಗೆ ಸಾಗಿತ್ತು. ಕಲ್ಲುಗಳ ಸಂದಿಗಳಲ್ಲಿ ಹಲವು ವಿಧದ ಹುಲ್ಲುಗಳು ಬೆಳೆದಿದ್ದವು. ಕೆಲವು ಹೂ ಬಿಟ್ಟು, ಬೀಜ ಕಟ್ಟಿದ್ದವು.

ನದಿದಡದಲ್ಲಿ ಮೇಯುತ್ತಿದ್ದ ಹೆಣ್ಣುಕರು (ಕಪ್ಪು ದನ) ಮತ್ತು ಮರಿಕೋಣ. ಮರಿಕೋಣದ ಕುತ್ತಿಗೆಗೆ ಕಟ್ಟಿದ್ದ ಗಂಟೆ. ಅದು ಮೇಯುವಾಗೆಲ್ಲ ಗಂಟೆಯಿಂದ ಕಣ್‌ಕಣ್ ಸದ್ದು. ಎರಡು ಬಿಳಿ ಎಗ್ರೆಟ್ ಹಕ್ಕಿಗಳು ಎಲ್ಲಿಂದಲೋ ಬಂದು ಅವುಗಳ ಪಕ್ಕದಲ್ಲಿ ಇಳಿದವು. ಹೆಣ್ಣುಕರು ಮತ್ತು ಮರಿಕೋಣ ಹೋದಲ್ಲೆಲ್ಲ ಅವನ್ನು ಈ ಹಕ್ಕಿಗಳು ಹಿಂಬಾಲಿಸಿದವು. ಸುಮಾರು ಅರ್ಧ ಗಂಟೆ ಹೊತ್ತು, ಅವುಗಳ ಎದುರು, ಹಿಂದೆ ಹಾಗೂ ಪಕ್ಕದಲ್ಲಿ ಈ ಹಕ್ಕಿಗಳು ಸುತ್ತುತ್ತಿದ್ದವು. ಕೊನೆಗೆ ಒಂದು ಎಗ್ರೆಟ್ ಹಕ್ಕಿ ಮರಿಕೋಣನ ಬೆನ್ನೇರಿ ಕುಳಿತಿತು. ನಂತರ ಒಂದೇ ನಿಮಿಷದಲ್ಲಿ ಅದು ಆಗಸಕ್ಕೆ ಹಾರಿ ಕಣ್ಮರೆಯಾಯಿತು. ಇನ್ನೊಂದು ಹಕ್ಕಿಯೂ ಅದನ್ನು ಹಿಂಬಾಲಿಸಿತು.

ಅಗೋ, ಕಣ್ಸೆಳೆಯುವ ಚಿಟ್ಟೆಯೊಂದು ಹಾರಿ ಬಂತು. "ನನ್ನ ಫೋಟೋ ತೆಗೆಯೋದಿಲ್ವಾ” ಎಂಬಂತೆ ನನ್ನಿಂದ ಒಂದಡಿ ದೂರದಲ್ಲೇ ಕುಳಿತಿತು. ಅದಲ್ಲಿ ತನ್ನ "ಸೊಂಡಿಲಿ"ನಿಂದ ಹದಿನೈದು ನಿಮಿಷ ನೀರು ಹೀರುತ್ತಿತ್ತು! ಅದರ ವಿನ್ಯಾಸವೋ! ಅಗಲಿಸಿದಾಗ ಅದರ ಕಪ್ಪು-ಬಿಳಿ ರೆಕ್ಕೆಗಳ ಅಗಲ ನಾಲ್ಕಂಗುಲ. ರೆಕ್ಕೆಗಳ ಮೇಲ್ಭಾಗದ ಮೇಲ್-ಬದಿ ಕಪ್ಪು ಬಣ್ಣ ಮತ್ತು ಕೆಳಬದಿ ಬಿಳಿ ಬಣ್ಣ. ರೆಕ್ಕೆಗಳ ಅಡಿ ಭಾಗದಲ್ಲಿಯೂ ಇದೇ ವರ್ಣ ವಿನ್ಯಾಸ; ಪ್ರತಿಯೊಂದು ರೆಕ್ಕೆಯಲ್ಲಿ ಬಿಳಿಬಣ್ಣದ ಅಂಚಿನಲ್ಲಿ ಐದು ವೃತ್ತಾಕಾರದ ಕಪ್ಪು ಚುಕ್ಕೆ ಸಾಲು ಮತ್ತು ಅವುಗಳ ಮೇಲ್-ಬದಿಯಲ್ಲಿ ನಾಲ್ಕು ತ್ರಿಕೋನಾಕಾರದ ಕಪ್ಪು ಚುಕ್ಕೆ ಸಾಲು. ಅದರ ವೈಜ್ನಾನಿಕ ಹೆಸರು: ಪಾಪಿಲಿಯೋ ಪೊಲಿಮ್‌ನೆಸ್ಟರ್

ಅರಳಿದ ಹೂಗಳ ಮಕರಂದ ಹೀರಲು ದೂರದಲ್ಲಿ ಸುತ್ತುತ್ತಿದ್ದ ಎರಡು ಬಿಳಿ ಬಣ್ಣದ ಪಾತರಗಿತ್ತಿಗಳು. ಪುಟ್ಟ ಹೂಗೊಂಚಲಿನ ಹೂಗಳ ಮಕರಂದ ಹೀರಲು ಹಾರಿ ಬಂದು ಹೂವಿನಲ್ಲಿ ಕುಳಿತ ಜೇನ್ನೊಣ. ಇಲ್ಲಿ ಪುಟ್ಟ ಹೂಗಳಿವೆ ಎಂದು ಈ ಜೇನ್ನೊಣಕ್ಕೆ ಹೇಳಿದವರು ಯಾರು ಎಂದು ಯೋಚಿಸುತ್ತಾ ಕಣ್ಣು ಹಿಗ್ಗಿಸಿ ನೋಡಿದಾಗ, ಆ ಹೂಗೊಂಚಲಿನ ಹಿಂಭಾಗದ ಕಂದು ಕಡ್ಡಿಯಲ್ಲೊಂದು ಕೊತ್ತಂಬರಿ ಗಾತ್ರದ ಕೆಂಪುಮಚ್ಚೆಯ ಜೇಡ!

ನದಿದಡಕ್ಕೆ ನಾನು ಬಂದಾಗಲೇ ಆಗಸದಲ್ಲಿ ಎರಡು ಎಗ್ರೆಟ್ ಹಕ್ಕಿಗಳು ಹಾರುತ್ತಾ ಬಂದು, ನದಿಯ ವಿರುದ್ಧ ದಡದಲ್ಲಿ ಮುನ್ನೂರು ಮೀಟರ್ ದೂರದಲ್ಲಿ ಇಳಿದು ಬೇಟೆಗಾಗಿ ಕಾದು ನಿಂತವು. ಸುಮಾರು ಒಂದು ಗಂಟೆ ಅಲುಗಾಡದೆ ಹಾಗೆಯೇ ನಿಂತಿದ್ದವು. ಅನಂತರ, ಹಾರಿ ಹೋಗಿ ಆಕಾಶದಲ್ಲಿ ಚುಕ್ಕೆಗಳಾದವು. ಕಪ್ಪುಬಿಳಿ ಬಣ್ಣದ ಪುಟ್ಟ ಹಕ್ಕಿಯೊಂದು ತಟಕ್ಕನೆ ನೀರಿನ ಮಧ್ಯೆ ಇದ್ದ ಕಲ್ಲೊಂದರಲ್ಲಿ ಬಂದು ಕುಳಿತಿತು; ಅತ್ತಿತ್ತ ಕತ್ತು ತಿರುಗಿಸಿ, ಮುಂದಿನ ಕಲ್ಲಿಗೆ, ನಂತರ ಮತ್ತೊಂದು ಕಲ್ಲಿಗೆ ಜಿಗಿಯಿತು. ನೋಡುತ್ತಿದ್ದಂತೆಯೇ ಮೇಲಕ್ಕೆ ಚಿಮ್ಮಿ ಕಾಣದಾಯಿತು. ಹಾಗೆಯೇ ಗಿಡುಗವೊಂದು ಗಗನದಲ್ಲಿ ಹಾರುತ್ತಾ ಬಂದು, ನಾನು ಕೂತಲ್ಲಿ ಒಂದು ಸುತ್ತು ಹಾಕಿ, ನಂತರ ದೂರಕ್ಕೆ ತೇಲಿ ಹೋಯಿತು.
ಅರೇ, ನನ್ನೆಡೆಗೆ ಓಡಿ ಬಂತೊಂದು ಮರಿ ಓತಿಕ್ಯಾತ! ಆರಂಗುಲ ಉದ್ದದ ಆ ಪ್ರಾಣಿಯಿಂದ ನನ್ನ ಸುತ್ತಲೂ ಹತ್ತು ನಿಮಿಷ ಹುಳಹುಪ್ಪಟೆಗಳ ಹುಡುಕಾಟ. ನಾನು ತುಸುವೇ ಮಿಸುಕಾಡಿದರೂ ತಕ್ಷಣವೇ ಕಾಣದಂತೆ ಕಲ್ಲಿನೆಡೆಯಲ್ಲಿ ಮಾಯವಾಗಿ, ಕೆಲವು ನಿಮಿಷಗಳ ನಂತರ ಅದು ಪುನಃ ಪ್ರತ್ಯಕ್ಷ.

ನೀರಿನೆಡೆಗೆ ಕಣ್ಣು ಹಾಯಿಸಿದಾಗ ನೀರು ಹಾವೊಂದು ಪುಳಕ್ಕನೆ ನೀರಿನೊಳಗಿನ ಕಲ್ಲುಗಳ ಎಡೆಯಲ್ಲಿ ಕಣ್ಮರೆ. ಪುಟ್ಟಪುಟ್ಟ ಮೀನುಗಳ ಓಡಾಟದಿಂದ ಮನಸ್ಸಿಗೆ ಮುದ. ನೂರು ಮೀಟರ್ ಓಟದ ಸ್ಪರ್ಧಿಗಳಂತೆ ಧಸಕ್ಕನೆ ಅವು ಧಾವಿಸುವ ಪರಿಯೇ ಚಂದ.

ಅಲ್ಲಿ ಇದ್ದಷ್ಟು ಹೊತ್ತು ಹರಿಯುತ್ತಿದ್ದ ನೀರಿನ ಜುಳುಜುಳು ಸದ್ದು ಮತ್ತು ನದಿಯ ಆ ಬದಿಯ ಕಾಡಿನಿಂದ ತೇಲಿ ಬರುತ್ತಿದ್ದ ಜೀರುಂಡೆಗಳ ಸದ್ದು - ಇವುಗಳಿಂದ ನನ್ನ ಧ್ಯಾನಕ್ಕೆ ಅದ್ಭುತ ಹಿಮ್ಮೇಳ.
 
ಇವಿಷ್ಟು ಅಲ್ಲಿ ನಾನು ಕಂಡ ಸಂಗತಿಗಳಾದರೆ, ನಾನು ಕಾಣದ ಸಂಗತಿಗಳು ಅಲ್ಲಿ ಸಾವಿರಾರು. ಪ್ರಕೃತಿಯ ವಿಸ್ಮಯ, ವಿವಿಧತೆ ಮತ್ತು ನಿಗೂಢತೆ ನಮ್ಮ ಅಳವಿಗೆ ಮೀರಿದ್ದು ಎಂಬ ನಿತ್ಯಸತ್ಯಕ್ಕೆ ಮಗದೊಮ್ಮೆ ಶರಣಾಗುತ್ತಾ ಮೌನದಲ್ಲಿ ಅಲ್ಲಿಂದ ಹೊರಟೆ. ಕಾಡಿನ ನಡುವಿನ ನದಿಯ ನೀರಿನ ಹರಿವಿನ ಸದ್ದು ಈಗಲೂ ದೂರದಲ್ಲೆಲ್ಲೋ ಕೇಳಿಸುತ್ತಿರುವಂತಿದೆ.

ಫೋಟೋ 1: ಮರಿಕೋಣನ ಬೆನ್ನಿನಿಂದ ಆಕಾಶಕ್ಕೆ ಹಾರಿದ ಬಿಳಿ ಎಗ್ರೆಟ್ ಹಕ್ಕಿ
ಫೋಟೋ 2: ನನ್ನೆಡೆಗೆ ಧಾವಿಸಿ ಬಂದ ಮರಿಕೋಣ
ಫೋಟೋ 3: ಸತ್ತ ಮರವೊಂದರ ಸ್ಮಾರಕದಂತೆ ನಿಂತಿರುವ ಕಾಂಡ
ಫೋಟೋ 4: ಅಘನಾಶಿನಿ ನದಿ ದಡದ ಹುಲ್ಲುಗಾವಲು
ಫೋಟೋ 5: ಕಪ್ಪು-ಬಿಳಿ ವಿನ್ಯಾಸದ ರೆಕ್ಕೆಗಳ ಚಿಟ್ಟೆ
ಫೋಟೋ 6: ನದಿ ನೀರಿನೆಡೆಗೆ ಚಾಚಿ ಬೆಳೆಯುತ್ತಿರುವ ಹುಲ್ಲು
ಫೋಟೋ 7: ಹೂಗೊಂಚಲಿನ ಪಕ್ಕದ ಕಂದುಕಡ್ಡಿಯ ಮಧ್ಯದಲ್ಲಿ ಕೆಂಪುಮಚ್ಚೆಯ ಪುಟಾಣಿ ಜೇಡ
ಫೋಟೋ 8: ಜುಳುಜುಳು ಹರಿಯುವ ಅಘನಾಶಿನಿ ನದಿ ನೀರು