ಅಜಬಿರು

ಅಜಬಿರು

ಪುಸ್ತಕದ ಲೇಖಕ/ಕವಿಯ ಹೆಸರು
ತೀರ್ಥರಾ‌ಮ ವಳಲಂಬೆ
ಪ್ರಕಾಶಕರು
ಯಾನ ಪ್ರಕಾಶನ, ಮಂಗಳೂರು
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ : ೨೦೧೫

ಮೊದಲೇ ಹೇಳಿಬಿಡುತ್ತೇನೆ. ನಾನು ಆಸ್ತಿಕ. ನಾನು ಬರೆಯ ಹೊರಟಿರುವುದು ಆಸ್ತಿಕರೊಬ್ಬರು ಬರೆದ ಕಾದಂಬರಿ ರೂಪದ ಜಿಜ್ಞಾಸೆಯ ಬಗ್ಗೆ. ಹಾಗಾಗಿ ಇದೆಲ್ಲ ಕಸ ಅನ್ನುವವರು ಮುಂದೆ ಓದುವುದು ಬೇಡ.  

ತುಳುನಾಡಿನ ದೈವಾರಾಧನೆ ನಮಗೆ ನಂಬಿಕೆಯ ಪ್ರಶ್ನೆ. ಹೊರಗಿನವರಿಗೆ ಕೌತುಕ, ತಮಾಷೆಯ ವಸ್ತು. ಈ ಪುಸ್ತಕದ ಕತೆ ಸರಳ. ಕಂಪೆನಿಯೊಂದು ಸ್ವಾಧೀನಪಡಿಸಿಕೊಂಡ ಜಾಗದ ವಿರುದ್ಧ ಅವರಿಗೆ ಪರಿಹಾರ ಕೊಡಿಸಲು ಹೋರಾಟ ಮಾಡುವ ಹೋರಾಟಗಾರನೊಬ್ಬ ಅಪಘಾತಕ್ಕೀಡಾಗಿ ಸಾವಿಗೀಡಾಗುತ್ತಾನೆ. ಸಾವಿನ ರಾತ್ರಿಯವರೆಗೆ ಅವನ ಜೊತೆ ಇದ್ದ ಗೆಳೆಯನಿಗೆ ಇದು ಕೊಲೆಯೆಂಬ ಸಂಶಯವಿದೆ. ಆದರೆ ಸಾಕ್ಷಿಗಳಿಲ್ಲ. ಸತ್ತವನ ಸಾವಿನ ವಿಧಿ ಜರುಗುವಾಗ ಒಬ್ಬ ಯುವಕನ‌ ಮೈ ಮೇಲೆ ಸತ್ತವನು ಬಂದಂತಾಗುತ್ತದೆ. ಅದು ತಾತ್ಕಾಲಿಕ. ಯಾರು ಎಂದು ಕೇಳಿದಾಗ ನಾನು ಅಜಬಿರು ಅನ್ನುವ ಉತ್ತರ ಸಿಗುತ್ತದೆ. ಹಾಗೇ ಈ ಗೆಳೆಯ ಇದರ ಹಿಂದಿನ ರಹಸ್ಯ ಪತ್ತೆ ಮಾಡಲು ಹೊರಡುತ್ತಾನೆ. ಆ ಅನ್ವೇಷಣೆಯೇ ಕತೆ.

ಇಲ್ಲಿ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಶ್ನೆ ಮಾಡಲಾಗಿದೆ. ಅಂಜನ ಎಂದರೇನು? ಸಾವಿನ‌ ಬಳಿಕ ಬದುಕು ಇದೆಯೇ? ದೈವಾರಾಧನೆ ಮಾಡುವುದರ ಉದ್ದೇಶ ಏನು? ದೈವ ಮೈ ಮೇಲೆ ಬರುವುದು ಎಂದರೆ ಏನು?  ನಾವು ಯಾಕೆ ಪೂಜೆ ಮಾಡಬೇಕು? ಕರ್ಮ ಫಲ, ವಿಧಿ, ಸೂಕ್ಷ್ಮ ಶರೀರ ಹೀಗೆ. ನಮ್ಮ ಆಸ್ತಿಕ ಮನಸ್ಸಿಗೆ (ಆಸ್ತಿಕ ಅನ್ನುವುದನ್ನು ನಂಬದವರು ಇನ್ನೊಮ್ಮೆ ಓದಿಕೊಳ್ಳಿ) ತೃಪ್ತಿಯಾಗುವ ಹಲ ವಿಶ್ಲೇಷಣೆಗಳಿವೆ.

ಪುಸ್ತಕದಲ್ಲಿನ‌ ಒಂದು ಕೊರತೆ ಎಂದರೆ ಲೇಖಕರು ಬರೆಯುವಾಗ ಭವಿಷ್ಯತ್ ಕಾಲದ ಬಳಕೆ ಅತಿಯಾಗಿ ಮಾಡುತ್ತಾರೆ. (ಉದಾಹರಣೆಗೆ ಹೋಗಿದ್ದ, ಹೋದ ಅನ್ನುವುದನ್ನು ಹೋಗುತ್ತಾನೆ ಅನ್ನುವುದು) ಇದೊಂದು ತರಹ ಕಿರಿಕಿರಿಯಾದರೂ ಪುಸ್ತಕ ಕೊಡುವ ತೃಪ್ತಿಯ ಮುಂದೆ ಇದು ಗೌಣವಾಗುತ್ತದೆ.

ನಿಮ್ಮ ಕುತೂಹಲಕ್ಕೆ ಇದರಲ್ಲಿನ ಒಂದು ಸಂಭಾಷಣೆಯ ಸಾಲು "ಸತ್ತ ಒಳ್ಳೆಯ ಆತ್ಮಗಳೆಲ್ಲ ದೈವ ಯಾಕೆ ಆಗುವುದಿಲ್ಲ. ಇತ್ತೀಚಿನ‌ ನೂರಿನ್ನೂರು ವರ್ಷಗಳಲ್ಲಿ ಸತ್ತ ಅದೆಷ್ಟೋ ಮಹಾನ್ ಸಾಮಾಜಿಕ ಚಿಂತಕರು, ಹೋರಾಟಗಾರರು ಅದೇಕೆ ದೈವಗಳಾಗಿ ಆರಾಧನೆಗೊಳಪಡಲಿಲ್ಲ.

ಇಲ್ಲ ಎಂದು ಹೇಳಲಾಗದು. ಆದರೆ ಅವರ ಆತ್ಮ‌ ದೈವದ ಸ್ಥಾನಮಾನವನ್ನು ಪಡೆದ ಅರಿವನ್ನು ಜನ ಬೆಳೆಸಿಕೊಳ್ಳದೇ ಇದ್ದುದರಿಂದ ಆರಾಧನೆ ಇಲ್ಲದೇ ದುರ್ಬಲಗೊಂಡು ಅವು ಕ್ರಮೇಣ ತಮ್ಮ ದೈವತ್ವವನ್ನು ಕಳೆದುಕೊಂಡು ಪುನರ್ಜನ್ಮದ ಹಾದಿಯನ್ನು ಹಿಡಿದಿರಲೂಬಹುದು.

ದೈವಗಳಿಗೆ ನೀಡುವ ಪ್ರಾಣಿ ಬಲಿ ಯಾಕಾಗಿ ಎಂದು ಅರ್ಥವಾಗಲಿಲ್ಲ?

ಆರಾಧನೆ ಎನ್ನುವುದು ಹತ್ತು ಹಲವು ವಿಧಿ ವಿಧಾನಗಳೊಂದಿಗೆ ನಡೆಯುತ್ತದೆ. ನೀವು ದೇವ ಕ್ರಿಯೆಯನ್ನು ಆಯ್ಕೆ ಮಾಡಿಕೊಂಡರೆ ಪ್ರಾಣಿ ಬಲಿಯ ಅಗತ್ಯವಿರುವುದಿಲ್ಲ. ವಾಸ್ತು ಪೂಜೆಯನ್ನು ಅಸುರ ಕ್ರಿಯೆಯಿಂದ ಮಾಡುವವರು ಪ್ರಾಣಿ ಬಲಿ ನೀಡುವುದು ಸಂಪ್ರದಾಯ. ದೈವಗಳು ಇಂತಹ ಆರಾಧನೆಯಿಂದಲೇ ಶಕ್ತಿಯನ್ನು ಪಡೆಯುವುದು. ಹಾಗಾಗಿ ನಾವು ಪ್ರತೀ ವರ್ಷ ಕೊಡುತ್ತಿದ್ದ ನೇಮ, ಕೋಲ, ತಂಬಿಲಗಳು ಸಿಗದೇ ಇದ್ದಾಗ ಅದಕ್ಕಾಗಿ ಅವು ನಮ್ಮನ್ನು ಪೀಡಿಸುತ್ತವೆ. ನಿಮಗೆ ಕ್ರಿಕೆಟ್ ಆಟಗಾರನೊಬ್ಬನ ಉದಾಹರಣೆ ಗೊತ್ತಲ್ಲ. ಹದಿನೆಂಟು ವರ್ಷ ಮಕ್ಕಳಾಗದೆ ಕೊನೆಗೆ ಊರಿನ ದೈವಕ್ಕೆ ಹರಕೆ ಹೇಳಿಕೊಂಡ ಮೇಲೆ ಸಂತಾನ ಭಾಗ್ಯವಾಯ್ತಲ್ಲ. ಇದನ್ನೆಲ್ಲ ಹೇಗೆ ವಿವರಿಸುತ್ತೀರಿ?”

ಒಟ್ಟಾರೆಯಾಗಿ, ಬೇರೆ ಪುಸ್ತಕ ಓದಿದಂತೆ ಗಬಗಬನೆ ಓದಿಸಿಕೊಂಡು ಹೋಗುವುದಿಲ್ಲ. ಮನನ ಮಾಡಿಕೊಂಡು ಚಿಂತನೆಗೆ ಹಚ್ಚುವ ಅನೇಕ ವಿಚಾರಗಳಿವೆ. ತುಳುನಾಡಿನ ಜನರು ಅಗತ್ಯವಾಗಿ ಓದಬೇಕಾದ ಪುಸ್ತಕ ಎಂದು ನನಗೆ ಅನಿಸಿತು. ಕುರುಡಾಗಿ ನಂಬುವುದಕ್ಕಿಂತ ಅರ್ಥ ತಿಳಿದು ನಂಬಲು ಒಳ್ಳೆಯ ಅಕರ. ನಂಬದವರಿಗೆ, ಅವರಿಗೇನು? For non-believers, it's all crazy. ಅಷ್ಟೇ!

(ವಾಟ್ಸಾಪ್ ಸಂಗ್ರಹ) ಸುರೇಶ್ ಎಸ್, ಸುರತ್ಕಲ್