ಅಜೋಲ ; ಕಾಫಿ ತೋಟಗಳಿಗೆ ಜೈವಿಕ ಗೊಬ್ಬರ

ಅಜೋಲ ; ಕಾಫಿ ತೋಟಗಳಿಗೆ ಜೈವಿಕ ಗೊಬ್ಬರ

ಅಜೋಲ ಒಂದು ಅದ್ಭುತ ಜಲಸಸ್ಯ. ಪ್ರೊಟಿನ್ಸ್, ಅಗತ್ಯ ಅಮಿನೋ ಆಮ್ಲಗಳು, ವಿಟಮಿನ್ ಎ, ಬಿ-೧೨, ಬೀಟಾಕಾರೋಟಿನ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ತಾಮ್ರ, ಮೆಗ್ನೀಷಿಯಂ, ಪೊಟ್ಯಾಷಿಯಂ ಇತ್ಯಾದಿ ಖನಿಜಗಳ ಉಗ್ರಾಣ. ಇದು ನೀರಿನ ಮೇಲೆ ತೇಲಾಡಿಕೊಂಡು ಬೆಳೆಯಬಲ್ಲ ಸಸ್ಯ. ಒಣ ಅಜೋಲದಲ್ಲಿ ತೂಕದ ಲೆಕ್ಕದಲ್ಲಿ ಶೇ. ೨೫-೩೫ ಪ್ರೋಟಿನಿದೆ. ಶೇ. ೧೦-೧೫ ಖನಿಜಗಳಿವೆ.  ಶೇ. ೭-೧೦ ಅಮೀನೋ ಆಮ್ಲಗಳು, ಜೈವಿಕ ಕ್ರಿಯಾಶಾಲಿ ಪದಾರ್ಥಗಳು ಮತ್ತು ಜೈವಿಕ ಪಾಲಿಮರ್‌ಗಳಿವೆ.

ಅಜೋಲವು ಕಾಫಿಗೆ ಅವಶ್ಯಕವಾದ ಸಾರಜನಕದ ಅವಶ್ಯಕತೆಯ ಭಾಗವನ್ನು ಜೈವಿಕ ವಿಧಾನದಿಂದ ಒದಗಿಸುವ ಸಾಮರ್ಥ್ಯವನ್ನು ಪಡೆದಿದೆ.  ಇದು ಪ್ರಕೃತಿಯು ಮಾನವನಿಗೆ ವಾತಾವರಣದ ಗಾಳಿಯಲ್ಲಿರುವ ಸಾರಜನಕವನ್ನು ಹೀರಿಕೊಳ್ಳಲು ಕೊಟ್ಟಿರುವ ಪ್ರಾಕೃತಿಕ ಕೊಡುಗೆ. ಅಜೋಲವನ್ನು ಕಾಫಿ, ಅಡಿಕೆ, ತೆಂಗು, ಮೆಣಸು, ಬಾಳೆ, ತರಕಾರಿ ಬೆಳೆ ಮುಂತಾದ ಎಲ್ಲಾ ಬೆಳೆಗಳಿಗೆ ನೇರವಾಗಿ ಹಾಕಬಹುದು ಅಥವಾ ಮಣ್ಣಿನೊಂದಿಗೆ ಬೆರೆಸಬಹುದು ಅಥವಾ ಕಾಂಪೋಸ್ಟ್‌ನಲ್ಲಿ ಬಳಸಬಹುದು. ಇತ್ತೀಚಿನ ದಿನಗಳಲ್ಲಿ ಗಗನಕ್ಕೇರಿದ ರಸಗೊಬ್ಬರಗಳ ಬೆಲೆಗಳ ಹಿನ್ನಲೆಯಲ್ಲಿ ಇಂತಹ ಸೂಕ್ಷ್ಮ ಜೀವಿಗಳ ಬಳಕೆಯನ್ನು ತೀವ್ರಗೊಳಿಸಬೇಕಾಗುತ್ತದೆ.  

ಅಜೋಲವನ್ನು ತೋಟದಲ್ಲಿ ಬೆಳೆಸಬಹುದು. ಅರ್ಧ ಅಡಿ ಆಳದ ೧೫ ಅಡಿ ಉದ್ದ, ೧೦ ಅಡಿ ಅಗಲದ ಹೊಂಡಗಳಿಗೆ ಸಿಲ್ಪುವಿನ್ ಪ್ಲಾಸ್ಟಿಕ್ ಪದರವನ್ನು ಹಾಕಿ ಅದರಲ್ಲಿ ನೀರು ಮತ್ತು ಮಣ್ಣು ಹಾಕಿ ಅಜೋಲವನ್ನು ಬೆಳೆಸಬೇಕು. ಶೇ. ೭೦ ರ ನೆರಳಿನ ಬಲೆಯನ್ನು ಹಾಕಬೇಕು. ಮಣ್ಣು ಮತ್ತು ನೀರನ್ನು ತಿಂಗಳಿಗೊಮ್ಮೆ ಬದಲಾಯಿಸಬೇಕು. ಮಳೆಗಾಲದಲ್ಲಿ ನೀರು ನಿಲ್ಲದಹಾಗೆ ಮಾಡಬೇಕು ಮತ್ತು ಗೋಬರ್‌ಗ್ಯಾಸ್ ಸ್ಲರ್ರಿಯನ್ನು ಹಾಕುತ್ತಿರಬೇಕು. ಇದರಿಂದ ವಾರಕ್ಕೆ ಸುಮಾರು ೫೦ ಕೆ.ಜಿ.ಯ ಅಜೋಲ ಸಿಗುತ್ತದೆ.

ಅಜೋಲವನ್ನು ಮಣ್ಣಿಗೆ ಸೇರಿಸುವುದರಿಂದ ಅದು ೪೦-೫೦ ಕೆ.ಜಿ. ಯಷ್ಟು ಸಾರಜನಕವನ್ನು ಮತ್ತು ೧೫,೦೦೦ ರಿಂದ ೨೦,೦೦೦ ಕೆ.ಜಿ.ಯಷ್ಟು ಸಾವಯವ ಗೊಬ್ಬರವನ್ನು ಒದಗಿಸುತ್ತದೆ.  ಶೇ. ೭೦ ರಷ್ಟು ಕಳೆಯನ್ನು ನಿಯಂತ್ರಿಸುತ್ತದೆ.  ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ. ರಸಗೊಬ್ಬರದ ಬಳಕೆ ಮತ್ತು ಖರ್ಚು ಕಡಿಮೆ ಮಾಡುತ್ತದೆ.  ಶೇ. ೧೫-೨೦ ರಷ್ಟು ಅಧಿಕ ಇಳುವರಿ ನೀಡುತ್ತದೆ. ಇದನ್ನು ಎಲ್ಲಾ ರೀತಿಯ ಬೆಳೆಗಳಾದ ತರಕಾರಿ, ಪ್ಲಾಂಟೇಷನ್ ಬೆಳೆ, ಇತರೆ ಬೆಳೆಗಳಿಗೂ ಬಳಸಬಹುದು. ಸಾರಜನಕದ ಅಗ್ಗದ ಮೂಲವಾದ ಅಜೋಲದ ಪ್ರಾಮುಖ್ಯತೆಯನ್ನು ಚೀನಾದಲ್ಲಿ ಮೊದಲು ಗಮನಿಸಲಾಯಿತು. ೧೭ನೇ ಶತಮಾನದ ಆದಿಯಲ್ಲಿ ಅಜೋಲವನ್ನು ಗೊಬ್ಬರವಾಗಿ ಬಳಸುವ ಬಗ್ಗೆ ಚೀನಾ ಮತ್ತು ವಿಯೆಟ್ನಾಂಗಳಲ್ಲಿ ಹಲವಾರು ಸ್ಥಳೀಯ ದಾಖಲೆಗಳಿದ್ದವು. ಜಪಾನ್, ಬರ್ಮಾ, ಜಪಾನ್, ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದಲ್ಲಿ ಅಜೋಲಾವು ಪ್ರಖ್ಯಾತಿ ಪಡೆದಿದೆ.  ಅಜೋಲವನ್ನು ಸಾರಜನಕ ಗೊಬ್ಬರದ ಕಿರು ಕೈಗಾರಿಕೆಗಳೆಂದು ಚೀನಾ ಮತ್ತು ವಿಯೆಟ್ನಾಂನವರು ವರ್ಣಿಸಿದ್ದಾರೆ. ದುರದೃಷ್ಟವಶಾತ್ ಭಾರತದ ಕಾಫಿ ಬೆಳೆಗಾರರಲ್ಲಿ ೯೦% ಹೆಚ್ಚಿನವರಿಗೆ ಸಾರಜನಕದ ಕೊರತೆಯನ್ನು ತುಂಬಿಸಿಕೊಳ್ಳಲು ಹಾಗೂ ಉತ್ಪಾದನೆ ಹೆಚ್ಚಿಸಿಕೊಳ್ಳಲು ಅಜೋಲದ ಉಪಯುಕ್ತತೆಯ ಬಗ್ಗೆ ತಿಳುವಳಿಕೆ ಇಲ್ಲ. ಅಜೋಲದ ಉಪಯುಕ್ತ ಅಂಶಗಳನ್ನು ಕಾಫಿ ಬೆಳೆಗಾರರು ಅರ್ಥ ಮಾಡಿಕೊಂಡು ಅಜೋಲವನ್ನು ಹಸಿರು ಗೊಬ್ಬರವಾಗಿ ಅಥವಾ ಕಾಂಪೋಸ್ಟ್ ತಯಾರಿಕೆಯಲ್ಲಿ ಸಾವಯವ ವಸ್ತುವಾಗಿ ಬಳಸಬಹುದು ಹಾಗೂ ಜೀವಾಮೃತದ ಜೊತೆಯೂ ಅಜೋಲಾವನ್ನು ಬೆರೆಸಿ, ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಇದರಲ್ಲಿ ತೈಲಾಂಶ ಅತೀ ಕಡಿಮೆ. ಇದರಿಂದಾಗಿ ಇದೊಂದು ಅತ್ಯುತ್ತಮ ಜಾನುವಾರು ಅಹಾರ. ಇದರಲ್ಲಿ ನಾರಿನಾಂಶ ತುಂಬಾ ಕಡಿಮೆಯಿದ್ದು, ಪ್ರೋಟಿನ್ ಅಧಿಕವಿರುವುದರಿಂದ ಸುಲಭವಾಗಿ ಜೀರ್ಣವೂ ಆಗುತ್ತದೆ. ಅಜೋಲವನ್ನು ಕೋಳಿ, ಕುರಿ, ಆಡು, ಹಂದಿ, ಮೊಲಗಳಿಗೂ ಆಹಾರವಾಗಿ ಬಳಸಬಹುದು.

- ಬಿ.ಸಿ. ಅರವಿಂದ್, ಭೂತನಕಾಡು, ಚಿಕ್ಕಮಗಳೂರು