ಅಜ್ಜಿಯ ಉಪಾಯ ಮತ್ತು ಹುಲಿ
ಒಂದಾನೊಂದು ಕಾಲದಲ್ಲಿ ಪರ್ವತದ ಬುಡದಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಆ ಪರ್ವತದಲ್ಲಿ ಒಂದು ಹುಲಿಯಿತ್ತು. ಅದು ಅಜ್ಜಿಯ ಮೂಲಂಗಿ ಹೊಲಕ್ಕೆ ಆಗಾಗ ಬರುತ್ತಿತ್ತು.
ಅಜ್ಜಿ ಕಷ್ಟ ಪಟ್ಟು ಬೆಳೆಸಿದ ಮೂಲಂಗಿಗಳನ್ನು ಎಳೆದು ಎಳೆದು ಇಡೀ ಹೊಲವನ್ನು ಹುಲಿ ಹಾಳು ಮಾಡುತ್ತಿತ್ತು. ತನ್ನ ಹಸಿವು ನೀಗಿಸಲಿಕ್ಕಾಗಿ ಹುಲಿ ಮೂಲಂಗಿ ಎಳೆದು ಹಾಕುತ್ತಿದ್ದರೆ ಅಜ್ಜಿ ಸುಮ್ಮನಿರುತ್ತಿದ್ದಳು. ಆದರೆ, ಉಪಟಳ ಮಾಡಲಿಕ್ಕಾಗಿಯೇ ಹುಲಿ ಹಾಗೆ ಮಾಡುತ್ತಿತ್ತು. ಇದರಿಂದಾಗಿ ಅಜ್ಜಿಗೆ ಭಾರೀ ಕೋಪ ಬರುತ್ತಿತ್ತು.
ಅದೊಂದು ದಿನ, ಹುಲಿ ನೆಲದಿಂದ ಮೂಲಂಗಿ ಎಳೆದು ಎಳೆದು ಹಾಕುತ್ತಿದ್ದಾಗ ಅಲ್ಲಿಗೆ ಅಜ್ಜಿ ಬಂದಳು. ಈ ಉಪಟಳ ನಿಲ್ಲಿಸಲು ಏನಾದರೂ ಮಾಡಬೇಕೆಂದು ಅಜ್ಜಿ ಯೋಚಿಸಿದಳು. ಆಗ ಅವಳಿಗೊಂದು ಉಪಾಯ ಹೊಳೆಯಿತು. ಬಹಳ ಮೆದುವಾದ ಧ್ವನಿಯಲ್ಲಿ ಅಜ್ಜಿ ಹುಲಿಗೆ ಹೇಳಿದಳು, “ಏ ಹುಲಿಯೇ, ನೀನ್ಯಾಕೆ ಈ ರುಚಿಯಿಲ್ಲದ ಮೂಲಂಗಿಗಳನ್ನು ತಿನ್ನುತ್ತಿ? ಇವತ್ತು ರಾತ್ರಿ ನೀನು ನನ್ನ ಮನೆಗೆ ಬಂದರೆ, ರುಚಿರುಚಿಯಾದ ಅನ್ನದ ಅಂಬಲಿ ಮತ್ತು ಸಾಂಬಾರು ತಿನ್ನಿಸುತ್ತೇನೆ.”
ಈ ಆಹ್ವಾನವನ್ನು ಕೇಳಿದ ಹುಲಿಗೆ ಬಹಳ ಖುಷಿಯಾಯಿತು. ಅವತ್ತು ರಾತ್ರಿ ಅಜ್ಜಿಯ ಮನೆಗೆ ಬಂದೇ ಬರುತ್ತೇನೆಂದ ಹುಲಿ ಪರ್ವತಕ್ಕೆ ಹಿಂತಿರುಗಿತು.
ಮನೆಗೆ ಮರಳಿದ ಅಜ್ಜಿ ಅಂಬಲಿ ಮಾಡಲಿಲ್ಲ. ಬದಲಾಗಿ, ಮನೆಯ ಹಿಂಬದಿಯಲ್ಲಿ ಇದ್ದಲಿನ ಸ್ಟವಿನಲ್ಲಿ ಬೆಂಕಿ ಮಾಡಿ, ಅದನ್ನು ನಂದಿಸಿದಳು. ಅನಂತರ, ಒಂದು ದೊಡ್ಡ ಪಾತ್ರೆಯಲ್ಲಿ ನೀರು ತುಂಬಿಸಿ ಅದಕ್ಕೆ ಮೆಣಸಿನ ಪುಡಿ ಹಾಕಿದಳು. ಆ ಪಾತ್ರೆಯನ್ನು ಒಂದು ಬಟ್ಟೆಯಿಂದ ಮುಚ್ಚಿ, ಅದರಲ್ಲಿ ಹಲವು ಸೂಜಿಗಳನ್ನು ಚುಚ್ಚಿ ಅಡುಗೆಕೋಣೆಯಲ್ಲಿ ಇಟ್ಟಳು. ಅಂತಿಮವಾಗಿ, ಅಡುಗೆಕೋಣೆಯ ಬಾಗಿಲಿನ ಮುಂಭಾಗದಲ್ಲಿ ಸೆಗಣಿ ಹಾಕಿ, ಅದರ ಎದುರು ಹುಲ್ಲಿನ ಚಾಪೆಯನ್ನು ಹಾಸಿದಳು. ಬಳಿಕ, ಒಬ್ಬ ಸಾಮಾನು ಸಾಗಿಸುವವನಿಗೆ ಬೇಲಿಯ ಹೊರಗೆ ಕಾದಿರಲು ಹೇಳಿದಳು.
ಈ ಎಲ್ಲ ತಯಾರಿ ಮಾಡಿದ ನಂತರ, ತನ್ನ ಕೋಣೆಯಲ್ಲಿ ಕುಳಿತು ಹುಲಿಗಾಗಿ ಅಜ್ಜಿ ಕಾಯತೊಡಗಿದಳು. ಕತ್ತಲಾಗುತ್ತಿದ್ದಂತೆ ಹುಲಿ ಅಲ್ಲಿಗೆ ಬಂತು.
“ಅಜ್ಜೀ, ನಾನು ಬಂದಿದ್ದೇನೆ” ಎಂದಿತು ಹುಲಿ. ಅದನ್ನು ಖುಷಿಯಿಂದ ಸ್ವಾಗತಿಸುವಂತೆ ನಟಿಸುತ್ತಾ, ಬಾಗಿಲು ತೆರೆದಳು ಅಜ್ಜಿ. “ಓ, ಬಂದಿಯಾ? ನನಗೆ ಬಹಳ ಸಂತೋಷವಾಯಿತು. ಬಾ, ಬಾ. ಒಂದು ನಿಮಿಷ ಕಾದಿರು. ನನಗೆ ನನ್ನ ಕೋಣೆಯಲ್ಲಿ ಚಳಿಯಾಗುತ್ತಿದೆ. ಮನೆಯ ಹಿಂಭಾಗದಲ್ಲಿ ಸ್ಟವ್ ಇದೆ. ಒಮ್ಮೆ ಅದನ್ನು ಎತ್ತಿಕೊಂಡು ಬಾ” ಎಂದಳು ಅಜ್ಜಿ.
ಮನೆಯ ಹಿಂಭಾಗಕ್ಕೆ ಹೋಯಿತು ಹುಲಿ. ಅಲ್ಲಿ ಸ್ಟವಿನಲ್ಲಿ ಬೆಂಕಿ ಆರಿ ಹೋಗುತ್ತಿತ್ತು. “ಅಜ್ಜೀ, ಇದರಲ್ಲಿ ಬೆಂಕಿ ಆರಿ ಹೋಗುತ್ತಿದೆ” ಎಂದು ಕೂಗಿ ಹೇಳಿತು ಹುಲಿ. “ಹೌದೇನು? ಹಾಗಾದರೆ, ಸ್ಟವಿನ ಬೂದಿಗೆ ಬಾಯಿಯಿಂದ ಗಾಳಿ ಊದು. ಆಗ ಬೆಂಕಿ ಪುನಃ ಉರಿಯುತ್ತದೆ” ಎಂದಳು ಅಜ್ಜಿ.
ಅಜ್ಜಿ ಹೇಳಿದಂತೆ ಸ್ಟವಿನ ಬೂದಿಗೆ ಗಾಳಿ ಊದಿತು ಹುಲಿ. ಆಗ ಸ್ಟವಿನಿಂದ ಮೇಲೆದ್ದ ಬೂದಿ ಹುಲಿಯ ಕಣ್ಣುಗಳ ಒಳಕ್ಕೆ ಹೋಯಿತು. “ಓ, ನನ್ನ ಕಣ್ಣುಗಳು ಉರಿತಾ ಇವೆ” ಎಂದು ಬೊಬ್ಬೆ ಹಾಕಿತು ಹುಲಿ. ಉರಿ ತಡೆಯಲಿಕ್ಕಾಗದೆ ಅದು ತನ್ನ ಕಣ್ಣುಗಳನ್ನು ಉಜ್ಜಿಕೊಂಡಿತು. ಅದರಿಂದಾಗಿ ಅದರ ಕಣ್ಣುಗಳು ಇನ್ನಷ್ಟು ಉರಿಯ ತೊಡಗಿದವು. ಹುಲಿ ಗೊಂದಲದಿಂದ ಕಿರಿಚಿತು, “ಅಜ್ಜೀ, ಬೂದಿ ನನ್ನ ಕಣ್ಣುಗಳಲ್ಲಿ ಸೇರಿಕೊಂಡಿದೆ. ನನಗೆ ಬಹಳ ನೋವಾಗುತ್ತಿದೆ. ಈಗ ನಾನೇನು ಮಾಡಲಿ?”
ತಕ್ಷಣವೇ ಅಜ್ಜಿ ಉತ್ತರಿಸಿದಳು, “ಛೇ, ಛೇ, ಇದೇನು ಮಾಡಿಕೊಂಡೆ? ಅಲ್ಲಿ ಅಡುಗೆಕೋಣೆಯಲ್ಲಿ ಒಂದು ಪಾತ್ರೆಯಲ್ಲಿ ನೀರಿದೆ. ಆ ನೀರಿನಿಂದ ಕಣ್ಣು ತೊಳೆದುಕೋ.”
ಕೂಡಲೇ ಹುಲಿ ಅಡುಗೆಕೋಣೆಗೆ ಓಡಿ ಹೋಗಿ, ಅವಸರದಿಂದ ಅಲ್ಲಿನ ಪಾತ್ರೆಯಲ್ಲಿದ್ದ ನೀರಿನಿಂದ ಕಣ್ಣುಗಳನ್ನು ತೊಳೆದು ಕೊಂಡಿತು. ಅದು ಮೆಣಸಿನ ಪುಡಿ ಹಾಕಿದ್ದ ನೀರಲ್ಲವೇ? ಹಾಗಾಗಿ, ಹುಲಿಯ ಕಣ್ಣುಗಳಿಗೆ ಬೆಂಕಿ ಬಿದ್ದಂತಾಯಿತು. ಹುಲಿ ಕಂಗಾಲಾಗಿ ನೋವಿನಿಂದ ಚೀರಿತು. "ಇದೇನಾಯಿತು ಅಜ್ಜೀ? ನನ್ನ ಕಣ್ಣುಗಳು ಬೆಂಕಿಯಲ್ಲಿ ಸುಟ್ಟು ಹೋದಂತೆ ಆಗಿದೆ. ಈಗ ಮುಂಚಿಗಿಂತ ಜಾಸ್ತಿ ನೋವಾಗುತ್ತಿದೆ. ಅಯ್ಯೊಯ್ಯೋ!”
ಇದೀಗ ಅಜ್ಜಿ ಕೂಗಿ ಹೇಳಿದಳು, “ಏನು ಮಾಡಿಕೊಂಡೆ ನೀನು? ತಕ್ಷಣವೆ ಪಾತ್ರೆಯ ಮೇಲಿರುವ ಬಟ್ಟೆಯಿಂದ ನಿನ್ನ ಕಣ್ಣುಗಳನ್ನು ಒರಸಿಕೋ"
ಈಗಾಗಲೇ ಉರಿಯಿಂದಾಗಿ ಕುರುಡನಂತಾಗಿದ್ದ ಹುಲಿ ಹಾಗೆ ಮಾಡುತ್ತಲೇ, ಆ ಬಟ್ಟೆಯಲ್ಲಿದ್ದ ಸೂಜಿಗಳು ಅದರ ಕಣ್ಣಿಗೆ ಚುಚ್ಚಿದವು. “ಅಬ್ಬಬ್ಬಾ, ಅಬ್ಬಬ್ಬಾ! ಇದೇನಿದು? ನನ್ನ ಕಣ್ಣುಗಳಿಗೆ ಇದೇನು ಚುಚ್ಚುತ್ತಿದೆ?” ಎಂದು ಕೂಗಾಡಿತು ಹುಲಿ. ಅದು ಕಣ್ಣುಗಳ ಉರಿ ಮತ್ತು ಭಯಂಕರ ನೋವು ತಾಳಲಾಗದೆ ಅಸಹಾಯಕವಾಗಿ ಇದ್ದಲ್ಲೇ ಮೇಲೆ-ಕೆಳಗೆ ಜಿಗಿಯತೊಡಗಿತು.
ಇಷ್ಟೆಲ್ಲ ಆಗುವಾಗ ಹುಲಿಗೆ ತಿಳಿಯಿತು, ಅಜ್ಜಿ ತಂತ್ರಗಾರಿಕೆ ಮಾಡಿದ್ದಾಳೆಂದು. ಅಜ್ಜಿಯಿಂದ ಪಾರಾಗಲಿಕ್ಕಾಗಿ ಅಲ್ಲಿಂದ ಹೊರಕ್ಕೆ ಓಡಿತು ಹುಲಿ. ಆದರೆ, ಅಡುಗೆಕೋಣೆಯ ಬಾಗಿಲಿನ ಎದುರಿನ ಸೆಗಣಿಯ ಮೇಲೆ ಕಾಲಿಟ್ಟು ಜಾರಿ ಬಿತ್ತು.
ಹುಲಿ ಹಾಗೆ ಜಾರಿ ಉರುಳುತ್ತಿದ್ದಂತೆ, ಅಲ್ಲಿದ್ದ ಹುಲ್ಲಿನ ಚಾಪೆ ಅದರ ದೇಹವನ್ನು ಸುತ್ತಿಕೊಂಡಿತು. ತಕ್ಷಣವೇ ಬೇಲಿ ಬದಿಯಲ್ಲಿ ಕಾದಿದ್ದಾತ, ಹುಲಿಯಿದ್ದ ಚಾಪೆಯನ್ನು ಹೊತ್ತೊಯ್ದು, ಹತ್ತಿರದ ನದಿಗೆ ಎಸೆದು ಬಿಟ್ಟ.
ಬಹಳ ಸಮಯದ ನಂತರ, ಹುಲಿ ಪರದಾಡಿಕೊಂಡು ಈಜಾಡಿ ನದಿಯಿಂದ ಹೊರಕ್ಕೆ ಬತು. ಅನಂತರ, ಅಜ್ಜಿಯ ಮೂಲಂಗಿ ಹೊಲದ ಹತ್ತಿರ ಆ ಹುಲಿ ಯಾವತ್ತೂ ಬರಲಿಲ್ಲ.
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ: ರೀಡ್ ಮಿ ಎ ಸ್ಟೋರಿ
ಚಿತ್ರಕಾರ: ಕಿಮ್ ಯಂಗ್-ಜು