ಅಜ್ಜಿಯ ಮನೆಯಲಿ…
ಕವನ
ಅಮ್ಮನು ನಡೆದಳು ಮಕ್ಕಳಜೊತೆಯಲಿ
ಕಳೆಯಲು ಕೆಲದಿನ ತವರಿನಲಿ
ಸಂತಸಗೊಂಡವು ಪುಟಾಣಿ ಮಕ್ಕಳು
ಆಡಲು ಅಜ್ಜಿಯ ಮಡಿಲಿನಲಿ/
ನಗರದಲಿಲ್ಲದ ಹಲಬಗೆ ಸಾಧನ
ಮಕ್ಕಳು ಬೆರಗಲಿ ನೋಡಿದರು
ಅಜ್ಜಿಯು ಮೊಸರನು ಕಡೆಯಲು ಹೊರಟಿರೆ
ಅಜ್ಜಿಯ ಮಡಿಲನು ಸೇರಿದರು/
ಸುತ್ತಿದ ಹಗ್ಗವ ಅಜ್ಜಿಯು ಜಗ್ಗಲು
ತಿರುಗುತಲಿದ್ದಿತು ಕಡೆಗೋಲು
ಅಜ್ಜಿಯ ಜೊತೆಯಲಿ ಹಗ್ಗವನೆಳೆಯಲು
ಮಕ್ಕಳು ಉತ್ಸುಕರಾಗಿರಲು/
ಪ್ರೀತಿಯ ಚಿಣ್ಣರ ಮುದ್ದಿಸಿ ಅಜ್ಜಿಯು
ಮೊಗದಲಿ ನಸುನಗೆ ಸೂಸುತ್ತ
ಬಸಿರಿನ ಮೊಸರದು ಬೆಣ್ಣೆಯ ಹಡೆಯಿತು
ಚಿಣ್ಣರಿಗಿತ್ತಳು ನವನೀತ/
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್