ಅಜ್ಜಿ ಮತ್ತು ರಮೇಶ
ಬೆಂಗಳೂರು ಎಂಬ ಮಹಾನಗರದಲ್ಲಿ ಒಂದು ಚಿಕ್ಕ ಕುಟುಂಬ. ಅಪ್ಪ, ಅಮ್ಮ ಇಬ್ಬರು ಮಕ್ಕಳು. ಅಪ್ಪನದು ಸರ್ಕಾರಿ ನೌಕರಿ. ಅಮ್ಮ ಹೌಸ್ ವೈಫ್. ಮೊದಲನೇ ಮಗ ರಮೇಶ. ನಗರದ ಪ್ರತಿಷ್ಟಿತ ಐಟಿ ಕಂಪನಿಯಲ್ಲಿ ಅವನಿಗೆ ಮೈತುಂಬ ಕೆಲಸ ಕೈತುಂಬ ಸಂಬಳ. ಎರಡನೇ ಮಗ ಕೃಷ್ಣ. ಸರ್ಕಾರಿ ಕೆಲಸದಲ್ಲಿ ಸಂಬಳ ಜೊತೆ ಗಿಂಬಳವನ್ನೂ ಪಡೆಯುತ್ತಿದ್ದ.
ರಮೇಶ ಸಮಾಜಮುಖಿಯಾಗಿದ್ದ. ದುಡ್ಡಿಗಿಂತ ಗುಣ, ಸಹಾಯ ಮನೋಭಾವ ಮುಖ್ಯ ಎಂಬ ಅರಿವು ಅವನಿಗಿತ್ತು. ದಾರಿಯಲ್ಲಿ ಭಿಕ್ಷೆ ಬೇಡಿದವರಿಗೆ ಎಂದೂ ದುಡ್ಡಿಲ್ಲ ಎಂದವನಲ್ಲ. ಚಿಲ್ಲರೆ ಇಲ್ಲದದಿದ್ದರೂ ಜೇಬಿನಲ್ಲಿ ಎಷ್ಟು ಇರುತ್ತಿತ್ತೋ ಅಷ್ಟನ್ನೂ ಕೊಡುವಷ್ಟು ಕಲಿಯುಗದ ಕರ್ಣ. ಆದರೆ ಅವನ ತಮ್ಮ ಕೃಷ್ಣ ಅದಕ್ಕೆ ಸ್ವಲ್ಪ ವಿರೋಧ ಸ್ವಭಾವದವನು. ನಾವು ಕಷ್ಟ ಪಟ್ಟು ಬೆವರು ಸುರಿಸಿ ದುಡಿದ ಹಣವನ್ನು ಸಲೀಸಾಗಿ ಮತ್ತೊಬ್ಬರಿಗೆ ಭಿಕ್ಷೆ ನೆಪದಲ್ಲಿ ಕೊಡುವವನು ಅವನಾಗಿರಲಿಲ್ಲ. ಅವನದು ತುಂಬಾ ಕ್ಯಾಲ್ಕ್ಯುಲೇಟೆಡ್ ಮೈಂಡ್ . ಹಾಗಂತ ಅವನು ಕೆಟ್ಟವನಾಗಿರಲಿಲ್ಲ ಸಹಾಯ ಮನೋಭಾವ ಕಡಿಮೆ ಅಷ್ಟೇ.
ಅವರಿಬ್ಬರ ನಡುವೆ ಆಗಾಗ ದುಡ್ಡಿನ ಬಗ್ಗೆ, ಚಾರಿಟಿ ಬಗ್ಗೆ ಚರ್ಚೆಗಳಾಗುತ್ತಿದ್ದವು. ಕೆಲವು ಸಲ ಅವು ವಿಕೋಪಕ್ಕೆ ತಿರುಗಿ ಅಣ್ಣ ತಮ್ಮಂದಿರ ಕಾದಾಟಕ್ಕೂ ಕಾರಣವಾಗಿ ಮನೆಯಲ್ಲಿದ್ದ ಕೆಲವು ವಸ್ತುಗಳು ಪುಡಿ ಪುಡಿಯಾಗುತ್ತಿದ್ದವು. ರಮೇಶ ದಿನವೂ ತನ್ನ ಆಫೀಸಿಗೆ ಹೋಗುವಾಗ ದಾರಿಯಲ್ಲಿ ಸಹಾಯ ಕೇಳಿದರೆ, ಭಿಕ್ಷೆ ಬೇಡಿದರೆ ಅವರಿಗೆ ಸಹಾಯ ಮಾಡಿ ಹೋಗುತ್ತಿದ್ದ. ತಿಂಗಳಿಗೆ ಸಾವಿರಾರು ಗಳಿಸುವ ನಾವು ದಿನಕ್ಕೆ ಒಂದು ರೂಪಾಯಿಯಾದರೂ ಕೊಟ್ಟು ಮತ್ತೊಬ್ಬರ ಒಂದು ಹೊತ್ತಿಗೆ ಆಗದಿದ್ದರೂ ಒಂದು ತುತ್ತಿಗೆ ಆಗುವಷ್ಟು ಸಹಾಯ ಮಾಡುವುದರಲ್ಲಿ ತೃಪ್ತಿ ಇದೆ ಎಂದು ಅವನು ನಂಬಿದ್ದ.
ಹೀಗೆ ಒಂದು ದಿನ ಆಫೀಸಿಗೆ ಹೋಗುವಾಗ ೭೦ರ ಹರೆಯದ ಅಜ್ಜಿಯೊಬ್ಬಳು ಕೈಯಲ್ಲಿ ಕೋಲು ಹಿಡಿದು ಹೆಗಲಿಗೆ ಜೋಗುಳ ಸಿಗಿಸಿಕೊಂಡು ಹಾಡು ಹೋಗುವವರಿಗೆ ದುಡ್ಡಿಗಾಗಿ ಬೇಡುತ್ತಿದ್ದಳು. ರಮೇಶ ಒಂದು ದಿನ ಅವಳಿಗೆ ೧೦ರೂ ಕೊಟ್ಟು ಏನ್ ಅಜ್ಜಿ ಈ ವಯಸ್ಸಿನಲ್ಲಿಯೂ ಭಿಕ್ಷೆ ಬೇಡುತ್ತಿದ್ದೀಯಾ ನಿನಗ್ಯಾರು ಮಕ್ಕಳಿಲ್ವಾ ?'' ಎಂದು ಕೇಳಿದ. ಅದಕ್ಕೆ ಆ ಅಜ್ಜಿ ಗಂಡ ತೀರಿ ೫ ವರ್ಷವಾಯಿತು. ಇಬ್ಬರೂ ಮಕ್ಕಳು ನನ್ನ ಬಿಟ್ಟುಹೋದರು ಎಂದು ಕಣ್ಣೀರಿಟ್ಟಳು. ರಮೇಶನ ಕಣ್ಣಲ್ಲಿಯೂ ನೀರಾಡಿತು. ಅಲ್ಲಿಯೇ ಇದ್ದ ಹೋಟೆಲಿನಿಂದ ೨ ಇಡ್ಲಿ ಪಾರ್ಸೆಲ್ ತಂದುಕೊಟ್ಟು ಅತೃಪ್ತ ಭಾವದಿಂದ ಆಫೀಸಿಗೆ ಹೊರಟ. ಅಜ್ಜಿ ದೇವರು ನಿನ್ನ ಚೆನ್ನಾಗಿಟ್ಟಿರಲಿ ಮಗಾ... ಎಂದು ಹೇಳಿ ಪಾರ್ಸೆಲ್ ಬಿಚ್ಚಿ ತಿನ್ನತೊಡಗಿದಳು.
ಮರುದಿನ ಮತ್ತದೇ ಅಜ್ಜಿ ಅದೇ ಸ್ಥಳದಲ್ಲಿ. ಜೇಬಿನಲ್ಲಿದ್ದ ಚಿಲ್ಲರೆ ಕೊಟ್ಟು ಆಫೀಸಿಗೆ ಹೊರಟ. ಆ ಅಜ್ಜಿ ಥ್ಯಾಂಕ್ಸ್, ಧನ್ಯವಾದಗಳು ಅಂತ ಹೇಳುವಷ್ಟು ಶಿಕ್ಷಿತವಾಗದಿದ್ದರೂ ತನ್ನ ಮುಗ್ಧ ಇಳಿ ಕಣ್ಣುಗಳಲ್ಲಿ ಅವನನ್ನು ಹರಸುತ್ತಾ. ನಡುಗುವ ಕೈಗಳನ್ನು ಮೇಲೆತ್ತಿ ವಂದಿಸುತ್ತಿದ್ದಳು .ಹೀಗೆ ೬ ತಿಂಗಳು ಕಳೆಯಿತು. ಪ್ರತಿದಿನ ರಮೇಶ ತನಗಾದಷ್ಟು ಅವಳಿಗೆ ದುಡ್ಡು ಕೊಟ್ಟು ಆಫೀಸಿಗೆ ಹೋಗುತ್ತಿದ್ದ. ಇವನಲ್ಲದೆ ಸುತ್ತಮುತ್ತಲಿನ ಜನ ಕೂಡ ತಮಗಾದಷ್ಟು ಸಹಾಯ ಮಾಡುತ್ತಿದ್ದರು.
ಅದಾಗಿ ಒಂದು ದಿನ ರಮೇಶ ಆಫೀಸಿಗೆ ಹೋಗುವಾಗ ಅಜ್ಜಿ ಕಾಣಲಿಲ್ಲ. ದಿನವೂ ಅವಳನ್ನು ನೋಡಿ ಒಂದಿಷ್ಟು ದುಡ್ಡು ಕೊಟ್ಟು ಹೋಗುತ್ತಿದ್ದ ಅವನಿಗೆ ಮನದಲ್ಲಿ ಅಂದು ಕಸಿವಿಸಿ. ಏಕೆ ಬಂದಿಲ್ಲ ಅಂತ ಯೋಚಿಸುತ್ತಾ ಮುನ್ನೆಡೆದ. ಒಂದು ವಾರವಾದರೂ ಅಜ್ಜಿ ಸುಳಿವು ಇರಲಿಲ್ಲ. ಅಜ್ಜಿಗೆ ಏನಾಗಿರಬಹುದು ಎಂದು ಚಿಂತಿಸುತ್ತಾ ಅವಳನ್ನು ಹುಡುಕುತ್ತಾ ಹೊರಟ. ಹತ್ತಿರದಲಿದ್ದ ಬೀಡಾ ಅಂಗಡಿಯಲ್ಲಿ ವಿಚಾರಿಸಿದಾಗ ಅವಳು ಹತ್ತಿರದ ಒಂದು ಸ್ಲಂನಲ್ಲಿ ವಾಸವಾಗಿರುವುದು ತಿಳಿದು ಬಂದಿತು. ಅದನ್ನು ಅರಸುತ್ತ ರಮೇಶ ಹೊರಟೇಬಿಟ್ಟ
ಸುಮಾರು ಅರ್ಧ ಘಂಟೆ ನಡೆದ ಮೇಲೆ ಅವನಿಗೆ ಗುಡಿಸಲು ಕಂಡವು. ಅಜ್ಜಿ ಅಲ್ಲಿಯೇ ಯಾವುದೋ ಗುಡಿಸಲಿನಲ್ಲಿ ಇರಬಹುದು ಎಂದು ಅಂದುಕೊಂಡ. ಹತ್ತಿರ ಹೋಗುತ್ತಿದ್ದಾಗ ಒಂದು ಗುಡಿಸಲು ಪಕ್ಕದಲ್ಲಿ ಒಂದು ಪುಟ್ಟ ಅಂಗಡಿ ಇದ್ದಿದ್ದು ಕಂಡಿತು. ಅಜ್ಜಿ ಆ ಅಂಗಡಿಯಲ್ಲಿ ಇದ್ದಳು. ಅವಳನ್ನು ಕಂಡು ರಮೇಶನಿಗೆ ಸಮಾಧಾನವಾಯಿತು. ಕೊಡಲೇ ಅವಳನ್ನು ಮಾತನಾಡಿಸಲು ಹೊರಡುತ್ತಾನೆ.
ಏನ್ ಅಜ್ಜಿ ಆ ಕಡೆ ಬಂದೇ ಇಲ್ಲಾ? ಭಿಕ್ಷೆ ಬೇಡೋದು ನಿಲ್ಸಿ ಬಿಟ್ಯಾ? ಅಂದು ಕೇಳಿದಾಗ 'ಹೂಂ ಮಗಾ, ೭೦ ವರ್ಷ ನಾನು ಸ್ವಾಭಿಮಾನದಿಂದಲೇ ಬದುಕಿದ್ದೆ. ಯಾರ ಹತ್ತಿರಾನೂ ಒಂದು ಹಿಡಿಗಾಸು ಇಸ್ಕೊಂಡವಳಲ್ಲ. ಹೆತ್ತ ಮಕ್ಕಳು ಬೀದಿಗೆ ಅಟ್ಟಿದಾಗ ದುಡಿಮೆಗೆ ಒಂದು ಕಾಸು ಇಲ್ಲದಾಗ ಬೇರೆ ವಿಧಿಯಿಲ್ಲದೇ ಭಿಕ್ಷೆ ಬೇಡುತ್ತಿದ್ದೆ. ಸುಮಾರು ೬ ತಿಂಗಳುವರೆಗೆ ದಿನಾ ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಳೆ, ಚಳಿ. ಗಾಳಿ ಎನ್ನದೇ ಭಿಕ್ಷೆ ಬೇಡಿದೆ. ನಿಮ್ಮಂಥ ಮಕ್ಕಳು ಸಹಾಯ ಮಾಡಿದ ಹಣವನ್ನು ಕೂಡಿಸುತ್ತ ಬಂದೆ. ಮೊನ್ನೆ ಲೆಕ್ಕ ಹಾಕಿ ಎಣಿಸಿದಾಗ ೩೦೧೫.೫೦ ರೂ ಕೂಡಿದೆ. ಅದನ್ನೇ ಬಳಸಿಕೊಂಡು ಈ ಸಣ್ಣ ಡಬ್ಬಾ ಅಂಗಡಿ ಇಟ್ಟಿದ್ದೇನೆ. ಮಕ್ಕಳಿಗೆ ಚಾಕಲೇಟು, ದೊಡ್ಡವರಿಗೆ ಸಿಗರೇಟು, ಬಾಳೆಹಣ್ಣು ಇತ್ಯಾದಿ ಮಾರುತ್ತಾ ಇದೀನಿ ಎಂದು ನಿಟ್ಟುಸಿರಿಟ್ಟಳು.
ಇದನ್ನು ಕೇಳಿದ ರಮೇಶನಿಗೆ ದುಃಖ ಉಕ್ಕಿ ಬಂದಿತು. ಕಣ್ಣೀರಿಟ್ಟನು. ತನ್ನ ಮತ್ತು ಅಜ್ಜಿಯ ಬದುಕನ್ನು ಒಂದು ಕ್ಷಣ ತುಲನೆ ಮಾಡಿ, ಬದುಕನ್ನು ಒಂದು ಕ್ಷಣ ಶಪಿಸಿದನು. ಅಜ್ಜಿ ಅಂಗಡಿಯಲ್ಲಿ ಒಂದು ಬಾಳೆಹಣ್ಣು ತಿಂದು ಉಳಿದ ಎಲ್ಲ ಹಣ್ಣುಗಳನ್ನು ದುಡ್ಡು ಕೊಟ್ಟು ಖರೀದಿಸಿ ಹೊರಡುವ ಮುನ್ನ ಅಜ್ಜಿ ದುಡ್ಡು ಬೇಕಾದರೆ ಕೇಳು ಎಂದಾಗ 'ಬೇಡಪ್ಪ ಇನ್ಮುಂದೆ ಬೇಡಿ ತಿನ್ನಲ್ಲ' ಎಂದು ಉತ್ತರಿಸಿದಳು. ಅಜ್ಜಿಯ ಇಳಿ ವಯಸ್ಸಿನಲ್ಲೂ ಕುಗ್ಗದ ಹುಮ್ಮಸ್ಸು, ತನ್ನ ಬದುಕಿನ ಮೇಲಿನ ಸ್ವಾಭಿಮಾನಕ್ಕೆ ಮನದಲ್ಲೇ ಸಲಾಂ ಹೊಡೆದು ಆಫೀಸಿಗೆ ಹೊರಟ.
-ಮನು ಶಕ್ತಿನಗರ
ಚಿತ್ರ ಕೃಪೆ: ಇಂಟರ್ನೆಟ್ ತಾಣ