ಅಜ್ಜಿ ಹೇಳಿದ ಕಥೆಗಳು

ಅಜ್ಜಿ ಹೇಳಿದ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೮೦-೦೦ ಮೊದಲ ಮುದ್ರಣ: ಸೆಪ್ಟೆಂಬರ್ ೨೦೨೦

ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. ಅಜ್ಜಿ ಹೇಳಿದ ಕಥೆಗಳು ಎಂಬ ಹೆಸರಿನಲ್ಲಿ ದೇಶ, ವಿದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಆದರೆ ರೋಹಿತ್ ಅವರ ಈ ಪುಸ್ತಕವನ್ನು ಮಕ್ಕಳು ಸರಾಗವಾಗಿ ಓದಿ ಮುಗಿಸಬಹುದು ಏಕೆಂದರೆ ಬಹುತೇಕ ಕಥೆಗಳು ಒಂದೆರಡು ಪುಟಗಳಲ್ಲೇ ಮುಗಿದು ಹೋಗುವಷ್ಟು ಚಿಕ್ಕದಾಗಿವೆ ಮತ್ತು ಚೊಕ್ಕದಾಗಿಯೂ ಇವೆ.

ರೋಹಿತ್ ಅವರು ಮುನ್ನುಡಿಯಲ್ಲಿ ತನ್ನ ಅಜ್ಜಿಯಾದ ಪದ್ಮಾವತಿ ಅಮ್ಮನವರನ್ನು ನೆನಪಿಸಿಕೊಂಡಿದ್ದಾರೆ. ಅಜ್ಜಿಯು ಹೇಳಿದ ಕಥೆಗಳನ್ನು ಕೇಳಿ ಬೆಳೆದವರಿಗೆ ಈ ಪುಸ್ತಕ ಓದಿ ಮತ್ತೊಮ್ಮೆ ತಮ್ಮ ಬಾಲ್ಯದ ನೆನಪಾಗುವುದು ಖಂಡಿತ. ಇವರು ‘ನನ್ನ ನಾಕು ಮಾತು' ಮುನ್ನುಡಿಯಲ್ಲಿ ಬರೆಯುತ್ತಾರೆ-’ ನಾನು ನನ್ನ ಜೀವನದ ಮೊದಲ ಐದು ವರ್ಷಗಳನ್ನು ಕಳೆದದ್ದು ಅಜ್ಜ ಅಜ್ಜಿಯರ ಸಂಗದಲ್ಲಿ. ಅವರು ಹೇಳುತ್ತಿದ್ದ ಅಜ್ಜಿಕತೆಗಳ ರಮ್ಯಲೋಕದಲ್ಲಿ. ವರ್ಷಗಳ ಹಿಂದೆ ಅಜ್ಜಿ ತೀರಿಕೊಂಡಾಗ, ಸುತ್ತ ಆವರಿಸಿದ ಶೂನ್ಯದಿಂದ ಹೊರ ಬರಲು ನನಗೆ ಕತೆಗಳ ಊರುಗೋಲು ಬೇಕಾಯಿತು. ಅಜ್ಜಿ ಮತ್ತು ಮೊಮ್ಮಕ್ಕಳ ಎರಡೆರಡು ಜನರೇಷನ್ನುಗಳ ಅಂತರದ ಮಹಾಗೋಡೆಯನ್ನು ಒಂದೇ ಏಟಿಗೆ ಹೊಡೆದುರುಳಿಸಿ ಅವರಿಬ್ಬರನ್ನು ಹತ್ತಿರ ತರುವ ಮಂತ್ರದಂಡ- ಈ “ಕತೆ". ನನ್ನ ಅಜ್ಜಿಯ ಋಣದ ಒಂದಂಶವನ್ನಾದರೂ ತೀರಿಸಬೇಕಾದರೆ ಕತೆ ಬರೆಯಬೇಕು ಅಂತ ಯಾವುದೋ ಗಳಿಗೆಯಲ್ಲಿ ನನ್ನೊಳಗು ತೀರ್ಮಾನಿಸಿಬಿಟ್ಟಿತು ! ನಿಧಾನವಾಗಿ ಮಕ್ಕಳ ಕತೆ, ಅಜ್ಜಿಕತೆಗಳಿಗೆ ನನ್ನನ್ನು ನಾನು ತೆರೆದುಕೊಳ್ಳತೊಡಗಿದೆ'.

ಈ ಪುಸ್ತಕದಲ್ಲಿ ತುಳು, ಮಣಿಪುರಿ, ಅಸ್ಸಾಮಿ, ಚೀನ, ಮೇಘಾಲಯ, ನೇಪಾಳ ಮುಂತಾದ ಕಡೆಗಳಿಂದ ಹೆಕ್ಕಿ ತಂದ ಅಪರೂಪದ, ಸೊಗಸಾದ ಜನಪದ ಕಥೆಗಳಿವೆ. ಇಲ್ಲಿಯ ಕತೆಗಳಿಗೆ ವಿಜಯಶ್ರೀ ನಟರಾಜ್ ಅವರು ರೇಖಾಚಿತ್ರಗಳನ್ನು ಬಿಡಿಸಿದ್ದಾರೆ. ಇದರಿಂದ ಮಕ್ಕಳಿಗೆ ಚಿತ್ರ ನೋಡುತ್ತಾ ಓದುವುದಕ್ಕೆ ಆಸಕ್ತಿ ಕುದುರಬಹುದು. ಮಕ್ಕಳ ಪೋಷಕರೂ ಇಲ್ಲಿ ನೀಡಿರುವ ಕತೆಗಳನ್ನು ಓದಿ ತಮ್ಮ ಮಕ್ಕಳಿಗೆ ಹೇಳಲೂ ಬಹುದು. ಪುಸ್ತಕದಲ್ಲಿ ೨೮ ಪುಟ್ಟ ಪುಟ್ಟ ಕತೆಗಳಿವೆ. ಅಯೋಧ್ಯಾ ಪ್ರಕಾಶನದವರ ೮ನೇ ಪುಸ್ತಕವಾದ ಇದರಲ್ಲಿ ಸುಮಾರು ೧೧೫ ಪುಟಗಳಿವೆ. ಮೊಬೈಲ್, ಟಿವಿಗಳ ಹಿಂದೆ ಬಿದ್ದಿರುವ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಈ ಪುಸ್ತಕ ಸಹಕಾರಿಯಾಗಬಲ್ಲುದು.