ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ

ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ

ಬರಹ

"ಅಮ್ಮ ಆರ್ ವಿ ದೇರ್ ಯೆಟ್?"
ಹರಟೆ ಆಟ ನೋಟ ಎಲ್ಲ ಮುಗಿಸಿದರೂ ಮುಗಿಯದ ವಿಮಾನಯಾತ್ರೆಯಿಂದ ಆದಿಗೆ ಬೇಸರ ಬಂದಿತ್ತು.
"ಇನ್ನೊನ್ನವರ್ ಕಣೋ ಆದಿ ನೀನು ಪzಲ್ ಬುಕ್ ಫಿನಿಶ್ ಮಾಡೋದ್ರಲ್ಲಿ ಅಟ್ಲಾಂಟದಲ್ಲಿರ್ತೀವಿ"
"ಓ..ಇನ್ನು ಒನ್ ಅವರ್ರಾ..ಸೋ ಬೋರಿಂಗ್"
ಆದಿಯ ಕುಯ್ಯೊಮರ್ರೊ ಕೇಳಿ ಹಿಂದಿನ ಸೀಟಲ್ಲಿ ಕುಳಿತಿದ್ದ ಗೌರಜ್ಜಿ ಎರಡು ಸೀಟುಗಳ ಸಂದಿಯಲ್ಲಿ ಮೂಗು ತೂರಿಸಿ
"ಹುಚ್ಚ ಮುರುವ ಹುರಳೀ ಬಿತ್ದ ಹೊತ್ತಿಗ್ ಮೂರ್ಸಲ ಕಿತ್ ಕಿತ್ ನೋಡ್ದ ಅನ್ನೊ ಹಾಗೆ ಘಳಿಗ್ ಘಳಿಗೆಗೂ ಊರು ಬಂತಾ ಬಂತಾ ಅಂದ್ರೆ ಬಂದ್ಬುಡತ್ತೇನೋ? ಸಮಾಧಾನವಾಗಿ ಕೂತ್ಕೊಬೇಕಪ್ಪ. ಲೇ ಅನು ನಿನಗಿರೊ ವ್ಯವಧಾನ ನಿನ್ನ ಮಗನಿಗೆ ಬರಲಿಲ್ಲ ಬಿಡು. ಎಲ್ಲಾ ಪ್ರಶಾಂತಂದೇ ಪಡಿಯಚ್ಚು" ಎಂದರು.
"ಕಿರೀಕು ಕಣೆ ನಿಮ್ಮಜ್ಜಿ. ಚಾನ್ಸ್ ಸಿಕ್ತು ಅಂದ್ರೆ ಸಾಕು ನಂಗೇ ಬತ್ತಿ ಇಡಕ್ಕೆ ನೋಡ್ತಿರತ್ತೆ. ಮಾಲಿ ಮದ್ವೇಗ್ಬೇರೆ ಕರ್ಕೊಂಡು ಹೋಗ್ತಾ ಇದೀವಿ. ಏನೇನೋ ಮಾತಾಡಿ ಆಭಾಸ ಮಾಡ್ದೇ ಇರೋ ಹಾಗೆ ನೀನೆ ಸ್ವಲ್ಪ ಕಂಟ್ರೊಲ್ ಮಾಡ್ಬೇಕು.ಬಾಲ ಅಂಕಲ್ ಬೇರೆ ಒಂಥರಾ" ಪ್ರಶಾಂತ ಪಿಸುಗುಟ್ಟಿದ.
ಗೌರಜ್ಜಿಯ ಬಾಯಿಗೆ ಬೀಗ ಹಾಕುವಂತಹ ಯಾವುದೇ ಪೊಳ್ಳು ಪ್ರಾಮಿಸ್ ಮಾಡಲು ಹೆದರಿ "ಸೋಚನಾ ಕ್ಯಾ ಜೋಭಿ ಹೋಗ ದೇಖಾ ಜಾಯೇಗ" ಹಾಡೊಂದನ್ನು ಗುನುಗಿ ಅವನ ಕೈ ಅಮುಕಿದೆ. ಯಾಕೋ ತಣ್ಣಗೆ ಕೊರೆಯುತ್ತಿತ್ತು.ಆಜ್ಜಿ ಆಡೋ ಗಾದೆಗಳನ್ನೋ ಅಥವಾ ತೆಗೆದ ತಗಾದೆಗಳನ್ನು ನೆನೆಸ್ಕೊತಾ ಇದ್ನೋ ಏನೊ! ಮಗಳು ಆದ್ಯ ಮಾತ್ರ ಬೆಚ್ಚಗೆ ಅವನೆದೆಗೊರಗಿ ನಿದ್ದೆ ಹೋಗಿದ್ದಳು.

ನನ್ನ ಬಾಣಂತನಕ್ಕೆಂದು ಮೈಸೂರಿಂದ ಬಂದಿರುವ ಮಾತು ಮಾತಿಗೂ ಗಾದೆ ಹೇಳೋ 'ಗಾದೆ ಗೌರಜ್ಜಿ'ನೂ ಕರ್ಕೊಂಡು ಪ್ರಶಾಂತನ ಚಿಕ್ಕಮ್ಮನ ಮಗಳ ಮದುವೆಗೆ ಲಾಸ್ ವೇಗಸ್ಸಿನಿಂದ ಅಟ್ಲಾಂಟಕ್ಕೆ ಹೊರಟಿದೀವಿ. ಬೇರೆ ಊರುಗಳಿಂದ ಮದುವೆಗೆ ಬರುವ ಬಂಧು ಮಿತ್ರರಿಗೆಲ್ಲಾ ಹೊಟೆಲ್ನಲ್ಲಿ ಉಳ್ಕೊಳ್ಳೋತರ ಏರ್ಪಾಟು ಮಾಡಿದ್ರೂ, ಯಮುನಾ ಆಂಟಿ " ಪ್ರಶಾಂತ ನೀವೆಲ್ಲ ಮನೇಲೆ ಉಳ್ಕೊಳಿ. ಅನು ಅಜ್ಜಿಗೂ ಇಲ್ದಿದ್ರೆ ಸರಿಹೋಗಲ್ಲ" ಎಂದಿದ್ದರು. ಪ್ರಶಾಂತ ಅನುಮಾನಿಸುತ್ತಾ ಒಪ್ಪಿಕೊಂಡಿದ್ದರೂ ಅಜ್ಜಿಗೆ ಮಾತ್ರ ಬಹಳ ಖುಷಿಯಾಗಿತ್ತು.
* * *

ರಾತ್ರಿ ಸುಮಾರು ಏಳರ ಹೊತ್ತಿಗೆ ಅಟ್ಲಾಂಟ ತಲುಪಿದೆವು. ನಮ್ಮನ್ನು ರಿಸೀವ್ ಮಾಡಲು ಬಂದಿದ್ದ ಬಾಲ ಅಂಕಲ್ ಮತ್ತು ಮಗಳು ಮಂದಾರನ್ನ ನೋಡಿ ಆದಿ ಮೇಂಡಿ ಎಂದು ಕೂಗುತ್ತಾ ಓಡಿದ. ಏನಾಯ್ತೋ ಮಂಡಿ ಎನ್ನುತ್ತಾ ಅವನ ಹಿಂದೆ ದಾಪುಗಾಲು ಹಾಕುತ್ತಿದ್ದ ಅಜ್ಜೀನ ತಡೆದು ಮದುವೆ ಹುಡುಗಿಯ ತಂಗಿ ಮಂದಾರ ಎಂದು ತೋರಿಸಿದೆ. ಕೆಂಪು ಟ್ಯೂಬ್ ಟಾಪ್ ಡೆನಿಮ್ ಸ್ಕರ್ಟ್ ತೊಟ್ಟು ಮಂದಾರ ಪುಷ್ಪದಂತೆ ಅರಳಿ ನಿಂತಿದ್ದ ಮೇಂಡಿಯನ್ನು ಕಂಡು ಅಜ್ಜಿ ಬೆರಗಾದರು. ಅಷ್ಟರಲ್ಲಿ " ಹೇ ಪ್ರೆಸ್ಸಿ ಅನು ವೆಲ್ಕಮ್ ಟು ಅಟ್ಲ್ಯಾನ" ಡಿಸೈನರ್ ಫ್ರೇಗ್ರೆನ್ಸಿನ ಪರಿಮಳ ಸೂಸುತ್ತಾ ಬಾಲ ಅಂಕಲ್ ನಮ್ಮಿಬ್ಬರಿಗೆ ಅಮೇರಿಕನ್ ಹಗ್ ಕೊಟ್ಟರು. ಇದಕ್ಕೆ ಮುಂಚೆ ಸುಮಾರು ಸಲ ಅವರನ್ನ ಮೀಟ್ ಮಾಡಿದ್ದರೂ ಹಣೆಯ ತುಂಬಾ ಹರಡಿದ್ದ ಮಿರಮಿರ ಮಿಂಚುವ ಕಪ್ಪು ತೆಳು ಕೂದಲು, ಎಪ್ಪತ್ತರ ದಶಕದ ಸ್ಟೈಲ್ನಂತೆ ಕತ್ತಿನ ಸುತ್ತ ಸುತ್ತಿದ್ದ ಮಫ್ಲರ್, ಪದಗಳನ್ನು ತೇಲಿಸುತ್ತಾ ಮಾತಾಡುವ ರೀತಿ ಎಲ್ಲಾ ನೋಡ್ತಾ ನನಗೆ ಬಾಲಿವುಡ್ಡಿನ ಚಿರಯುವಕ-ಮುದುಕ ದೇವಾನಂದ್ ಕಣ್ಣ ಮುಂದೆ ನಿಂತಂತಾಯಿತು. ಬಲವಂತವಾಗಿ ದೇವ್ ಸಾಹೇಬರ ಮೆಂಟಲ್ ಇಮೇಜನ್ನ ಬದಿಗೆ ಸರಿಸಿ ಅಜ್ಜೀನ ಅವರಿಗೆ ಪರಿಚಯಿಸಿದೆ.
ತಕ್ಷಣ ಅಜ್ಜಿಯ ಮುಂದೆ ಸೊಂಟಾನ ಅರ್ಧಕ್ಕೆ ಬಗ್ಗಿಸಿ ಕೈಜೋಡಿಸಿ "ನಮಸ್ತೆ ನೀವು ಬಂದಿದ್ದು ತುಂಬಾ ಸಂತೋಷ" ಎಂದು ಜೋರಾಗಿ ಹೇಳಿ ಅಜ್ಜಿಯ ಪ್ರತಿಕ್ರಿಯೆಗೂ ಕಾಯದೆ ಲುಕ್ ಅಟ್ ದಿಸ್ ಕ್ಯೂಟಿ ಪೈ ಎಂದು ಆದ್ಯನೆಡೆಗೆ ಗಮನ ಹರಿಸಿದರು.
ಪ್ರಯಾಣದ ಆಯಾಸವೋ ಅಥವಾ ಅಪ್ಪ ಮಗಳ ವೇಷ ಭೂಷಣ ನಡೆ ನುಡಿಗಳಿಗೆ ದಂಗಾಗೋ ಅಜ್ಜಿ ಗಪ್ಚುಪ್ಪಾಗಿದ್ದರು.
ಕಾರಲ್ಲಿ ಹೋಗ್ತಾ ಮಾಲಿನಿ ಮದುವೆ ತಯ್ಯಾರಿಗಳು, ಮೈಸೂರಿಂದ ಹಿಂದಿನ ವಾರ ಬಂದಿರುವ ಬೀಗರು ಹೀಗೆ ಅದೂ ಇದೂ ಮಾತಾಡ್ತಾ ಇದ್ದ ಹಾಗೆ ಬಣ್ಣದ ದೀಪಗಳಿಂದ ಝಗಮಗಿಸುತ್ತಿರುವ ಮನೆಯ ಮುಂದೆ ಬಂದಿಳಿದೆವು.
* * *

ಕಾಲಿಂಗ್ಬೆಲ್ ಕಿರುಗುಟ್ಟಿಸಿ ಏಮಿ ಏಮಿ ಅಂತ ಬಾಲ ಅಂಕಲ್ ಬಾಗಿಲು ಬಡಿದ ಮೇಲೆ ಸ್ಥೂಲಕಾಯದ ಯಮುನಾ ಆಂಟಿ ಬಂದೆ ಬಂದೆ ಎನ್ನುತ್ತಾ ಬಾಗಿಲು ತೆರೆದರು.
"ಬನ್ನಿ..ಎಲ್ಲಾ ಬೇಸ್ಮೆಂಟಲ್ಲಿ ಮಾತಾಡ್ತಾ ಕೂತ್ಕೊಂಡಿದ್ವಿ. ಅದಕ್ಕೆ ಬಾಗಿಲು ತೆಗೆಯೋದು ಲೇಟ್ ಆಯ್ತು"
ದಡಬಡ ಮೆಟ್ಟಿಲು ಹತ್ತಿ ಬಂದಿದ್ದಕ್ಕೆ ಬೆವತು ಸೆರಗಿನಿಂದ ಗಾಳಿ ಹಾಕ್ಕೋತ
ಪುಟ್ಟ ಬಂಗಾರಿ ಎಷ್ಟು ಚನ್ನಾಗಾಗಿದೀಯೆ..ಆದಿ ನೀನು ಅಪ್ಪಂಗಿಂತ ಉದ್ದ ಆಗ್ತೀಯಾ ಕಣೋ..ಬನ್ನಿ ಅಜ್ಜಿ.. ಫ್ಲೈಟ್ ಎಲ್ಲ ಅರಾಮವಾಗಿತ್ತಾ ಅಂತ ನನ್ನ ಪ್ರಶಾಂತನ ಬೆನ್ನು ಸವರಿ ಟಿಪಿಕಲ್ ದೇಸಿ ಸ್ಟೈಲ್ನಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.
ಒಳಗೆ ಹೋಗ್ತಿದ್ದ ಹಾಗೆ ಮಾಲಿನಿ ತನ್ನ ಭಾವಿ ಪತಿಯೊಂದಿಗೆ ಬೇಸ್ಮೆಂಟಿನಿಂದ ಪ್ರತ್ಯಕ್ಷಳಾದಳು. ಎಲ್ಲರಿಗೂ ಅರುಣನ ಪರಿಚಯ ಮಾಡಿಸಿ ಮಧ್ಯಾಹ್ನ ನಡೆದ 'ಮೆಹೆಂದಿ ಹಾಗೂ ಸಂಗೀತ್' ಮಿಸ್ ಮಾಡಿದ್ದಕ್ಕೆ ಆಕ್ಷೇಪಿಸಿದಳು. ಪ್ರಶಾಂತ ಉತ್ತರಿಸುವ ಮೊದಲೇ ಅಜ್ಜಿ ಬಾಯಿ ಹಾಕಿ "ಏನ್ಮಾಡೋದು ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ ನಮ್ಮ ಪ್ರಶಾಂತನ ಆಫೀಸಲ್ಲಿ ಅವನ ಬಾಸು. ಉದ್ದದ ವಾರಾಂತ್ಯ ಅಂತ ಇವರೆಲ್ಲ ನೆನ್ನೇನೆ ಹೊರಡ್ಬೇಕೂಂತಿದ್ರೆ ಫೋನ್ ಮೆಲೆ ಫೋನ್ ಮಾಡಿ ಕುಟುಕಿ ತಡೆದ್ಬಿಟ್ಟ.ದೇವರು ವರ ಕೊಟ್ಟಿದ್ರೂ ಪೂಜಾರಿ ವರ ಕೊಡ್ದೇ ಫಂಕ್ಷನ್ನು ತಪ್ಪೋ ಹಾಗಾಯ್ತು"
ಮಾಲಿಗೆ ಅಜ್ಜಿ ಹೇಳಿದ್ರಲ್ಲಿ ಅದೆಷ್ಟು ಅರ್ಥವಾಯ್ತೊ ಬಿಡ್ತೋ..ಸುಮ್ಮನೆ ನಸುನಕ್ಕಳು.
ಆಮೇಲೆ ಅಜ್ಜಿ ನನ್ನ ಕೇಳಿದರು"ಅಲ್ಲವೇ ಗಂಡು ನೋಡಿದ್ರೇ ಅಯ್ಯಂಗಾರಿ ಪುಳ್ಳೆ ಮತ್ತೆ ಅದೇನು ಗೋರಂಟಿ-ಸಂಗೀತ ಅಂತ ಇಟ್ಕೊಂಡಿದ್ದು?"
ಇಲ್ಲಿ ಬೆಳೆದ ಮಕ್ಕಳ ಮದುವೆಯೆಲ್ಲ ಸಾಮಾನ್ಯವಾಗಿ ಹೀಗೆ ಅಜ್ಜಿ. ಪಾಪ್ಯುಲರ್ ಸಂಪ್ರದಾಯಗಳ ಫ್ಯೂಶನ್ ಮದುವೆ. ಹಾಗಂದ್ರೇ..
" ಸರಿ ಸರಿ ಅರ್ಥ ಆಯ್ತು ಬಿಡು ಕಲಸುಮೇಲೋಗರದ ಮದುವೆ.ಏನು ಜನಾ ಮರುಳೋ ಜಾತ್ರೆ ಮರುಳೋ" ಅಜ್ಜಿ ಅಚ್ಚರಿ ಪಟ್ಟರು.
ಯಮುನ ಆಂಟಿ ಮಾಡಿದ್ದ ಬೂದುಕುಂಬಳಕಾಯಿ ಮಜ್ಜಿಗೆ ಹುಳಿ ತಿಳಿ ಸಾರು ಕೋಸಂಬರಿಗಳನ್ನ ತಿಂದ ಮೇಲೆ ಅಜ್ಜಿ ಚನ್ನಾಗಿ ಚಿಗಿತುಕೊಂಡರು.
ಮದುವೆಗೆ ತಗುಲಿದ ಖರ್ಚು ವೆಚ್ಚ ವರೋಪಚಾರ ವಧೂಪಚಾರ ಇತ್ಯಾದಿ ವಿವರಗಳನ್ನು ತಿಳ್ಕೊಂಡಾದಮೇಲೆ ಬೆಂಗಳೂರಿಂದ ಮದುವೆಗೆಂದೇ ಬಂದಿರುವ ಯಮುನಾ ಆಂಟಿ ಸ್ನೇಹಿತೆ ರಾಧ ಲಕ್ಷಣವಾಗಿದ್ದರೂ ಮದುವೆ ಆಗದೇ ಇರಲು ಕಾರಣ ಮನೆಯ ಆರ್ಥಿಕ ಪರಿಸ್ಥಿತಿಯೋ ಅಥವ ವಿಫಲ ಪ್ರೇಮ ಪ್ರಕರಣವೋ, ಒಬ್ಬನೇ ಮಗ ಪ್ರೀತಿಸಿ ಮದುವೆಯಗುತ್ತಿರುವ ಬಗ್ಗೆ ಪೋಯಾಪಕ್ಕಂ ದಂಪತಿಗಳ ಸೆಂಟಿಮೆಂಟ್ಸು, ಮೈಸೂರು ಹಾಗು ಚನ್ನೈ ಅಯ್ಯಂಗಾರುಗಳ ಸಂಪ್ರದಾಯಗಳ ಸಾಮ್ಯ ಹಾಗೂ ವ್ಯತ್ಯಾಸ ಹೀಗೆ ಎಮೋಶನಲ್ ಟು ಇಂಟಲೆಕ್ಚುಯಲ್ ಎಲ್ಲಾ ಟಾಪಿಕ್ಗಳನ್ನೂ ಕವರ್ ಮಾಡಿದರು.
ಪದ್ಮಜಾ ಪೋಯಾಪಕ್ಕಂ ಅಜ್ಜಿಯ ಕಾಟ ತಡೆಯಲಾಗದೆ ತಲೆನೋವಿನ ನೆಪ ಒಡ್ಡಿ ತಮ್ಮ ರೂಮಿಗೆ ಹೋದರು.ಯಾವ ಎಸ್ಕೇಪ್ ಪ್ಲಾನೂ ಮಾಡಲಾಗದೆ ಉಳಿದವರ ಕಷ್ಟಕ್ಕೆ ಮನ ಕರಗಿ "ನಡೀರಿ ಅಜ್ಜಿ ನಾವು ಮಲಕ್ಕೊಳೋಣ ನಾಳೆ ಬೇಗ ಬೇರೆ ಏಳಬೇಕು" ಅಂತ ಎಬ್ಬಿಸಿದೆ. ಆದಿ ಕೈಲಿ ಎಲ್ಲರಿಗೂ ಗುಡ್ನೈಟ್ ಹೇಳಿಸಿ ಮಲಗಿದ್ದ ಮಗೂನ ಎತ್ಕೊಂಡು ನಮಗಾಗಿ ಅಣಿ ಮಾಡಿದ್ದ ರೂಮಿಗೆ ಹೊರಟ್ವಿ.
ಚಿವಾವ ನಾಯಿಮರಿಯನ್ನು ಮುದ್ದಿಸುತ್ತಾ ಮಂದಾರ ಕೆಳಗಿಳಿದು ಬಂದಳು.ಅದರ ಕುತ್ತಿಗೆಗೆ ಉದ್ದವಾದ ಲೀಶ್ ಬಿಗಿದು ಕಮಾನ್ ಕುಂಡಲಿ ಲೆಟ್ಸ್ ಗೊ ೞರ್ ಅ ವಾಕ್ ಎಂದು ಯಾರಿಗೂ ಹೇಳುವ ಕೇಳುವ ಗೋಜಿಗೆ ಹೋಗದೆ ತನ್ನ ಪಾಡಿಗೆ ತಾನು ಹೊರಟಳು."ಕುಂಡಲಿ ಅಂದ್ರೆ ಜಾತಕ ಅಂತ ಅಲ್ವೇ? ಅಥವ ವಾಲೆ ಅಂತ್ಲೊ? ಅದೇನು ನಾಯಿಗೆ ಆತರ ಹೆಸರಿಟ್ಟಿದಾರೆ" ಮೆಟ್ಟಿಲು ಹತ್ತುತ್ತಾ ಅಜ್ಜಿ ನನ್ನ ಕೇಳಿದರು.
ರೆಬೆಲಿಯಸ್ ಮೇಂಡಿ ಯಾಕೆ ಆ ಹೆಸರಿಟ್ಟಳೋ ಯಾರಿಗ್ಗೊತ್ತು? ಯಾವ ಅಮೇರಿಕನ್ ಹುಡುಗನ್ನೂ ಡೇಟ್ ಮಾಡಕ್ಕೆ ಬಿಡದೆ ಶಾಸ್ತ್ರ ಸಂಪ್ರದಾಯ ಅನ್ನೋ ಅಮ್ಮನಿಗೆ ಮುಜುಗರವಾಗ್ಲೀ ಅಂತ್ಲೇ? ಕುಂಡಲಿನಿ ಯೋಗದಿಂದ ಪ್ರೇರೇಪಣೆಯೆ? ಅಥವ ಸೌಂಡ್ಸ್ ಕೂಲ್ ಎಂದೇ! ಅಜ್ಜಿಗೆ ಇದನ್ನೆಲ್ಲಾ ಹೇಳಕ್ಕಾಗದೇ "ಏನೋ ಗೊತ್ತಿಲ್ಲಪ್ಪ" ಎಂದು ಲೈಟಾರಿಸಿದೆ.
* * *

ಅಟ್ಲಾಂಟಾದ ಹಿಂದೂ ಟೆಂಪಲ್ನಲ್ಲಿ ಮಾಲಿನಿ ಅರುಣರ ಮದುವೆ ಬೇಡದ(?) ವಿಧಿ ನಿಯಮಗಳನ್ನೆಲ್ಲಾ ಕತ್ತರಿಸಿಕೊಂಡು ಶಾಸ್ತ್ರೊಕ್ತವಾಗಿ ನೆರವೇರಿತು! ಈ ಶಾರ್ಟ್ ಎಂಡ್ ಸ್ವೀಟ್ ಮದುವೆಯ ಸವಿ ಸಂಪ್ರದಾಯಸ್ತ ಪೋಯಾಪಕ್ಕಂ ದಂಪತಿಗಳಿಗೆ ಅಷ್ಟಾಗಿ ಹತ್ತಿದಂತೆ ಕಾಣಲಿಲ್ಲ. ಸಾಲದ್ದಕ್ಕೆ ಬಾಲ ಅಂಕಲ್ ತಲೆ ಕಂಡರಾಗದ ಅಜ್ಜಿ ಬೇರೆ ಪೋಯಾಪಕ್ಕಂಗಳ ಅಕ್ಕ ಪಕ್ಕ ಸುತ್ತಾಡಿ 'ಬಗ್ಗಿದವನಿಗೆ ಗುದ್ದು ಜಾಸ್ತಿ', 'ಹೇಡಿಗೆ ಸಾವಿರ ಸಾವು ವೀರನಿಗೆ ಒಂದೇ ಸಾವು' ಮುಂತಾದ ಗಾದೆಗಳ ಸಹಾಯದಿಂದ ಬೀಗರ ವಿರುದ್ಧ 'ಹೋಲಿವಾರ್' ಮಾಡಲು ಬಿನ್ ಲಾಡೆನ್ನಂತೆ ಕುಮ್ಮಕ್ಕು ಕೊಡುತ್ತಾ ಹಿಂಸಿಸುತ್ತಿದ್ದರು. ಅಜ್ಜಿ ಕಿತಾಪತಿಯಿಂದ ಆಗಬಹುದಾದ ಲಟಾಪಟಿಯನ್ನು ತಪ್ಪಿಸಲು ಮಗಳನ್ನು ಪ್ರಶಾಂತನ ಕೈಗೊಪ್ಪಿಸಿ ಅಜ್ಜಿ ಮೇಲೆ ಕಣ್ಣಿಡುವ ಫುಲ್ ಟೈಮ್ ಕೆಲಸ ಶುರು ಮಾಡ್ದೆ.ಇಂತಹ ಆಪರ್ಚುನಿಟಿನೆಲ್ಲಾ ವೇಸ್ಟ್ ಮಾಡದ ಮಗರಾಯ ವೀಡಿಯೋ ಕೇಮರ ತೊಗೊಂಡು ಕಂಡ ಕಂಡವರ ತಲೆ ಕೈ ಕಾಲುಗಳ ಚಿತ್ರೀಕರಣ ಶುರು ಮಾಡಿದ.
ಉಡುಪಿ ಹೋಟೆಲ್ನಿಂದ ಕೇಟರ್ ಮಾಡಿಸಿದ್ದ ಊಟ ಮುಗಿಸಿ ಬಂದವರಿಗೆಲ್ಲ ತಾಂಬೂಲ ಕೊಟ್ಟು ಬೈ ಹೇಳಿ ಸಂಜೆ ಹಯಾಟ್ ಹೊಟೆಲ್ನಲ್ಲಿ ನಡೆಯಲಿರುವ ರಿಸೆಪ್ಶನ್ ಬಗ್ಗೆ ಮಾತಾಡ್ತಾ ಎಲ್ಲಾರೂ ಮನೆ ಕಡೆ ಹೊರೆಟ್ವಿ.ಕಾರಲ್ಲಿ ಆದಿ ತಾನು ತೆಗೆದಿದ್ದ ವಿಡಿಯೋನ ಕೇಮ್ ಕಾರ್ಡರ್ನಲ್ಲಿ ಅಜ್ಜಿಗೆ ತೋರಿಸ್ತಾಇದ್ದ.
'ಅಯ್ಯೋ ನನ್ನ ವಜ್ರದ ನೆಕ್ಲೇಸ್ ಎಲ್ಲೋ ಬಿದ್ದೋಗಿದೆ'ಏಮಿ ಆಂಟಿ ಕೂಗಿಗೆ ಲಕ್ಷಣವಾಗಿ ಹೊಟ್ಟೆ ತುಂಬ ಊಟ ಮಾಡಿ ಹಾಗೇ ಸೀಟಿಗೊರಗಿ ಒಂದು ಸಣ್ಣ ನಿದ್ದೆ ತೆಗಿರೋ ಹುನ್ನಾರದಲ್ಲಿದ್ದೋರೆಲ್ಲ ಬೆಚ್ಚ್ಬಿದ್ದು ಎದ್ವಿ. ಇವತ್ತು ಬೆಳಗ್ಗೆ ತಾನೇ ಹೆಂಗಳೆಯರೆಲ್ಲ ಲಕ ಲಕಾಂತ ಏಮಿ ಆಂಟಿಯ ಕತ್ನಲ್ಲಿ ಹೊಳೀತಿದ್ದ ನೆಕ್ಲೆಸ್ನ ಮುಟ್ಟಿ ತಟ್ಟಿ ಹೊಗಳಿದ್ದು, ಏಮಿ ಆಂಟಿ ಅದರ ಪೂರ್ವಾಪರದ ಡೀಟೇಲ್ಸ್ ಕೊಟ್ಟು ಜೊತೆಗೆ ಮೇಂಡಿ ಮಾಲಿಯರ ಜಾತಕಗಳಿಗೆ ವಜ್ರ ಹೊಂದದಿರೋ ದುಃಖ ತೋಡಿಕೊಂಡಿದ್ದು, ಮೇಂಡಿ ಮೂತಿ ಸೊಟ್ಟಗೆ ಮಾಡಿದ್ದು ಎಲ್ಲ ಸೀನ್ಗಳು ಒಟ್ಟಿಗೆ ಫ್ಲಾಶ್ಬ್ಯಾಕ್ ಆಯ್ತು. ಅಲ್ಲೇ ಹತ್ತಿರದಲ್ಲಿದ್ದ ಪಾರ್ಕಿಂಗ್ ಲಾಟೊಂದರಲ್ಲಿ ಇಳಿದು ಕಾರಲ್ಲೆಲ್ಲ ಹುಡುಕಾಡಿ ಸಿಗದಿದ್ದ ಮೆಲೆ ವಾಪಸ್ಸು ದೇವಸ್ಥಾನಕ್ಕೆ ಹೋಗಿ ಮದುವೆ ಹಾಲು, ಬಾತ್ರೂಮು, ಕಿಚನ್ನು, ಗರ್ಭಗುಡಿ ಎಲ್ಲಾ ಕಡೆ ತಡಕಾಡಿದರೂ ಏಲ್ಲೂ ಸಿಕ್ಕಲಿಲ್ಲ. ಕಡೆಗೆ 'ಲಾಸ್ಟ್ ಎಂಡ್ ೞೌಂಡ್' ಅಂತ ಯಾರಾದರು ಪುಣ್ಯಾತ್ಮರು ವಜ್ರದ ನೆಕ್ಲೇಸ್ ತಂದುಕೊಟ್ರೆ ಇಂತಹ ನಂಬರ್ಗೆ ಕಾಲ್ ಮಾಡಿ ಅಂತ ಟೆಂಪಲ್ ಮೇನೇಜರ್ಗೆ ಬಾಲ ಅಂಕಲ್ ಹೇಳಿ ಬಂದರು!
ರಿಸೆಪ್ಶನ್ನಲ್ಲಿ ಉಟ್ಟಿದ್ದ ಕೆಂಪು ಸೀರೆಗೆ ಹೊಂದೋ ತರ ಕಣ್ಣು ಮೂಗೇಲ್ಲಾ ಕೆಂಪಗೆ ಮಾಡಿಕೊಂಡು ಬಂದವರ ಜೊತೆಯಲ್ಲಿ ನಗುನಗುತ್ತಾ ಮಾತಾಡಲು ಟ್ರೈ ಮಾಡ್ತಿದ್ದ ಯಮುನಾ ಆಂಟಿ ಸ್ಥಿತಿ ಕರುಣಾಜನಕವಾಗಿತ್ತು. ಬಾಲ್ ಡೇನ್ಸ್, ಚಾಕೊಲೇಟ್ ಫೌನ್ಟನ್, ವೆಡ್ಡಿಂಗ್ ಕೇಕ್ಗಳ ಸಂಭ್ರಮದಲ್ಲೇ ಮಾಲಿಯ ಮಲ್ಟಿ ಕಲ್ಚರಲ್ ಮದುವೆಯ ಮುಕ್ತಾಯವಾಯ್ತು.
* * *

ವೇಗಸ್ಗೆ ಹೊರಡೋ ಫ್ಲೈಟು ಬೆಳಗ್ಗೆ ಬೇಗ ಇದ್ದುದರಿಂದ ಸ್ನಾನ ಗೀನ ಎಲ್ಲ ಮುಗಿಸಿ ಸಾಮಾನೆಲ್ಲ ಜೋಡಿಸಿಕೊಂಡು ಹೊರಡೋಕೆ ರೆಡಿಯಾಗಿ ಕೆಳಗಿಳಿದು ಬಂದ್ವಿ. ಏಮಿ ಆಂಟಿ ಕೈಯಿಂದ ಕಾಫಿ ಇಸ್ಕೊತ ಪ್ರಶಾಂತ" ಚಿಕ್ಕಮ್ಮ ನೆಕ್ಲೇಸ್ ಬಗ್ಗೆನೇ ಯೋಚಿಸ್ತಾ ಕೊರಗ್ಬೇಡಿ. ಮಗಳ ಮದುವೇನ ಚನ್ನಾಗಿ ಮಾಡಿದೀರ.ಒಳ್ಳೇ ಅಳಿಯ ಸಿಕ್ಕಿದಾನೆ ಖುಷಿಯಾಗಿರಿ. ನೆಕ್ಲೇಸ್ಗೇನು ಇನ್ನೊಂದು ತೊಗೊಂಡ್ರಾಯ್ತು" ಎಂದು ಸಮಾಧಾನ ಹೇಳಿದ."ನೆಕ್ಲೇಸ್ ಸಿಕ್ತು ಪ್ರಶಾಂತ ಕಾರ್ನಲ್ಲೇ ಸಂದೀಲಿ ಸಿಕ್ಕಾಕೊಂಡಿತ್ತು" ಏಮಿ ಆಂಟಿ ತಣ್ಣಗೆ ಹೇಳ್ದಾಗ ನನಗೂ ಪ್ರಶಾಂತನಿಗೂ ನಂಬಕ್ಕೇ ಆಗ್ಲಿಲ್ಲ."ಅದ್ಯಾವ ಸಂದಿಲಿ ಸಿಕ್ಕಾಕೊಂಡಿತ್ತು ಚಿಕ್ಕಮ್ಮ ನಾವೆಲ್ಲ ಅಷ್ಟ್ ಸಲ ಹುಡುಕಿದೀವಿ.. ವಂಡರ್ಫುಲ್..ಎಲ್ಲಿ ಬಾಲ ಅಂಕಲ್ ನೆನ್ನೆ ಹುಡುಕಿ ಹುಡುಕಿ ವದ್ದಾಡ್ಬಿಟ್ರು"
"ಈಗ ಇನ್ನೇನು ಕೇಳಬೇಡ ಪ್ಲೀಸ್..ಅಜ್ಜಿ ಆಮೇಲೆ ಎಲ್ಲ ಹೇಳ್ತಾರೆ" ಕಣ್ಣೀರು ಜಿನುಗುಸುತ್ತ ಕುಗ್ಗಿದ ಧ್ವನೀಲಿ ಏಮಿ ಆಂಟಿ ಹೇಳಿಗಾಗ ಡ್ರಮಾಟಿಕ್ಕಾಗಿ ಬದಲಾದ ಸೀನಿಗೆ ನಾನು ಪ್ರಶಾಂತ ಕಣ್ ಕಣ್ ಬಿಟ್ವಿ.
ಕಳೆದು ಹೋದ ನೆಕ್ಲೇಸಿನ ರೀಅಪಿಯರೆನ್ಸು! ಅದರಲ್ಲಿ ಅಜ್ಜಿ ಪಾತ್ರದ ಸಸ್ಪೆನ್ಸು!
ನಮ್ಮ ಮಾತು ಕತೆ ಎಲ್ಲ ಕೇಳಿದ್ರೂ ಕೇಳದಂತೆ ಅಲ್ಲೇ ಓಡಾಡ್ತಿದ್ದ ಅಜ್ಜೀನ ಹಿಡಿದು ಕೇಳುವ ಚಪಲವಾದರೂ ಯಮುನ ಆಂಟಿ ಅಷ್ತೊಂದು ಅಪ್ಸೆಟ್ ಆಗಿರೋದ್ನ ನೋಡಿ ಏನೂ ಮಾತಾಡದೆ ಸುಮ್ಮನಾದ್ವಿ.
ವಾಪಸ್ಸು ಹೊರಡೋಕೆ ಇಷ್ಟ ಇಲ್ಲದೆ ಆದಿ ಕೋಪ ಮಾಡ್ಕೊಂಡು ಯಾರ ಜೊತೇನು ಮಾತಾಡ್ದೇ ಉಪ್ ಅಂತ ನಿಂತಿದ್ದ.ಅಜ್ಜಿ ಅವನಿಗೆ ಸಮಾಧಾನ ಮಾಡ್ತಾ"ನಿನಗೆ ಬೇಸಗೆ ರಜ ಬಂದಾಗ ಮತ್ತೆ ಬರೋವಂತೆ ಜಾಣ ಅಲ್ವಾ ನೀನು ಹಾಗೆಲ್ಲ ಕೋಪ ಮಾಡ್ಕೋಬಾರ್ದು. ಎಲ್ಲಿ ಎಮ್ಮಿ ಆಂಟಿ ಬಾಲಂಗೆ.. ಮಂಡಿ ಮಲ್ಲೀಗೆ.. ಎಲ್ಲಾರ್ಗೂ ಹೋಗ್ಬರ್ತಿನೀಂತ ಹೇಳಪ್ಪ" ಅಂತ ಆದಿ ಕೈಲಿ ಬೈ ಹೇಳಿಸಿದರು.
ಎಮ್ಮಿ ಆಂಟಿ ಬಾಲ!! ಮಂಡಿ ಮಲ್ಲಿ!! ಅಜ್ಜಿ ಬೇಕೂಂತ್ಲೇ ಹಾಗೆ ಹೇಳಿದ್ರೂಂತ ನನಗೆ ಅನುಮಾನ.
ಸದ್ಯ ಪ್ರಾಸಬದ್ಧವಾಗಿ ಮೇಂಡಿ ನಾಯಿ ಕುಂಡಲೀನು ಸೇರಿಸ್ತಾ ಮಂಡಿ ಕುಂ..ಗೂ ಹೇಳಪ್ಪ ಅನ್ಲಿಲ್ವಲ್ಲ..ನನ್ನ ಪುಣ್ಯ!

***

ಪ್ಲೇನಿನ ಸೀಟಲ್ಲಿ ಸೆಟ್ಲಾಗಿ ಸೀಟ್ ಬೆಲ್ಟ್ ಕ್ಲಿಕ್ಕಿಸಿ ಅಜ್ಜೀನ ನೆಕ್ಲೆಸ್ ಮಿಸ್ಟ್ರಿ ಬಗ್ಗೆ ಕೇಳಿದೆ.
"ಅಯ್ಯೋ ಅದೇನೂಂತ ಕೇಳ್ತೀಯೇ ಹೇಳಕ್ಕೇ ಬೇಜಾರು ಮಾಡಿದೋರ ಪಾಪ ಆಡಿದೋರ ಬಾಯಲ್ಲಿ ಯಾಕೆ ಹೇಳು" ವಿಷಯ ಗಂಭೀರವಾಗಿದೆ ಅಂತ ಕ್ಲೂ ಕೊಟ್ಟು ಮಾತು ನಿಲ್ಲಿಸಿ ನಮ್ಮ ಪ್ರತಿಕ್ರಿಯೆಗಾಗಿ ಕಾದರು. ಏನೂ ಮಾತಾಡದೇ ಗರಬಡಿದಂತಿದ್ದ ಮುಖಗಳನ್ನು ನೋಡಿ ಎಲ್ಲಿ ನಿಜವಾಗ್ಲೂ ಸುಮ್ಮನಾಗಿ ಬಿಡ್ತಿವೇನೋಂತ ಸುತ್ತಿ ಬಳಸದೆ ಡೈರೆಕ್ಟಾಗಿ ವಿಷಯಕ್ಕೆ ಬರ್ತಾ "ಅದೂ..ನೆನ್ನೆ ಧಾರೇ ಆದ್ಮೇಲೆ ಮನೆಗೆ ಹೊರೊಡೋಕೇಂತ ಸಾಮಾನೆಲ್ಲ ಜೋಡಿಸಿ ಇಟ್ಕೊಳ್ತಾ ಇದ್ವಲ್ಲಾ ಅಗ.. ಯಮುನನ ನೆಕ್ಲೇಸು ಕೆಳಗೆ ಜಾರಿ ಬಿದ್ದಿದೆ. ಗಡಿಬಿಡಿಲಿ ಆವಳದನ್ನ ಗಮನಿಸಿಲ್ಲ.ಬಾಲಕೃಷ್ಣ ಅದನ್ನೆತ್ತಿ ಜೇಬಿಗೆ ಹಾಕೊಂಡಿದಾರೆ"
"ನೀವು ನೋಡಿದ್ರಾ ಅವರು ತೊಗೊಂಡಿದ್ದು?
"ನಾನು ನೋಡ್ಲಿಲ್ಲ. ನಿನ್ನ ಮಗನ ಕೇಮರ ಕಣ್ಣು ನೋಡಿದೆ. ಆದಿ ತೆಂಗಿನಕಾಯಿ ಮೂಟೆ ಬಾಗಿಲ ಬಿರಟೆ ಅಂತೆಲ್ಲಾ ವೀಡಿಯೋ ಮಾಡಿದಾನಲ್ಲ ಅದ್ರಲ್ಲಿ ಅಕಸ್ಮಿಕವಾಗಿ ಇದೂ ರೆಕಾರ್ಡ್ ಆಗಿದೆ"
"ಸರಿ..ಅದ್ರಲ್ಲೇನಂತೆ? ಹೆಂಡತಿ ವಸ್ತು ಅಂತ ತೊಗೊಂಡಿದಾರೆ"
"ಆದ್ರೆ ಅದನ್ನ ಹೆಂಡ್ತೀಗೆ ಕೊಡಲಿಲ್ವೇ" ಸತ್ಯವಾಗಿ ಕಂಡ್ರೂ ಪ್ರಮಾಣಿಸಿ ನೋಡ್ಬೇಕೂಂತ ಇದಕ್ಕೇ ಹೇಳೋದು"
"ಅಂದ್ರೆ?
"ಎಲ್ಲ ಕಡೆ ಹುಡುಕಾಡಿ ಮನೆಗ್ ಹೊದ ಮೇಲೆ ನನಗೆ ವೀಡಿಯೋಲಿ ನೋಡಿದ್ದು ಜ್ಙಾಪಕಕ್ಕೆ ಬಂತು. ಯಾಕೆ ಈತ ತಾವೇ ತೊಗೊಂಡು ಹುಡುಕೋ ನಾಟಕ ಮಾಡ್ತಾ ಇದ್ದಾರೆ ಅಂತ ಅವರನ್ನೇ ಗಮನಿಸ್ತಿದ್ದೆ.ಆಗ ನನಗೆ ಗೊತ್ತಾಗೊಯ್ತು"
"ಏನು.. ಏನು.. ಗೊತ್ತಾಯ್ತು?"
"ನೆಕ್ಲೇಸ್ ತೊಗೊಂಡು ಯಾರಿಗೆ ಕೊಟ್ರು ಅಂತ"
"ಯಾರಿಗೆ?"
"ಇನ್ನ್ಯಾರಿಗೆ..ಆ ವಯ್ಯಾರಿ ರಾಧಂಗೆ"
"ಅಯ್ಯೋ ದೇವ್ರೆ"
"ರಾಧನ ಕಣ್ ತಪ್ಪಿಸಿ ಅವಳ ಸೂಟ್ಕೇಸು ಪರ್ಸು ಎಲ್ಲ ಹುಡುಕ್ದೆ. ಪರ್ಸಲ್ಲಿ ಸಿಕ್ತು. ರಿಸೆಪ್ಶನ್ ಆದ್ಮೇಲೆ ರಾತ್ರಿ ಗುಟ್ಟಾಗಿ ಯಮುನಂಗೆ ಸರ ಕೊಟ್ಟು ಇರೋ ವಿಷಯ ಹೇಳ್ದೆ. ಪಾಪ ತುಂಬಾ ಸಂಕಟ ಪಟ್ಳು. ಸಂಸಾರ ಗುಟ್ಟು ವ್ಯಾಧಿ ರಟ್ಟು ಅಂತ ಬೀಗರ ಮುಂದೆ ಏನು ಹಗರಣ ಮಾಡ್ಬೇಡ ಮೊದಲೇ ಅವರಿಗೆ ಆಚಾರ ವಿಚಾರದ ಹೊಂದಾಣಿಕೆ ಇಲ್ಲ ಅನ್ನೋ ಬೇಸರ ಇದೆ...ಹೇಗೂ ಇನ್ನೆರಡು ದಿವಸದಲ್ಲಿ ಅವರು ವಾಪಸ್ ಹೋಗ್ತಾ ಇದಾರೆ ಆಮೇಲೆ ನಾರಿ ಮುನಿದರೆ ಮಾರಿ ಹೇಗಾಗ್ತಾಳೇಂತ ಅಂತ ನಿನ್ನ ಗಂಡನಿಗೂ ಸ್ನೇಹಿತೇಗೂ ಚನ್ನಾಗಿ ತೋರ್ಸು" ಅಂತಂದೆ. ಏನಂದ್ರೇನು..ಇವೆಲ್ಲ ಹೇಳಕ್ಕೆ ಸುಲಭ..ಅನುಭವಿಸಿದವರಿಗೆ ಗೊತ್ತು ಅತ್ತ ದರಿ ಇತ್ತ ಪುಲಿ ಅನ್ನೋ ಸ್ಥಿತಿಯ ಕಷ್ಟ ಎಂದು ನಿಟ್ಟುಸಿರು ಬಿಡುತ್ತಾ ತಮ್ಮ ಮಾತು ಮುಗಿಸಿದರು.
"ಚಿಕ್ಕಮ್ಮ ತುಂಬಾ ಕಷ್ಟ ಪಟ್ಟಿದ್ದಾರೆ ಇವ್ರನ್ನ ಕಟ್ಕೊಂಡು. ಇತ್ತೀಚಿಗೆ ಕೃಷ್ಣ ಲೀಲೆಗಳನ್ನೆಲ್ಲ ಬಿಟ್ಟು ಸುಧಾರಿಸಿದ್ದಾರೆ ಅಂದುಕೊಂದಿದ್ದೆ.ಥೂ..ಅಸಹ್ಯ"ಪ್ರಶಾಂತ ಬೇಜಾರಿನಿಂದ ಹೇಳಿದ.
"ಬಾಲ ಎಂದಿದ್ರೂ ಡೊಂಕೇ ಅಲ್ವೇನೋ..ನಾಯೀದೂ..ನಿಮ್ಮ ಚಿಕ್ಕಪ್ಪಂದಲ್ಲ..ಇವರ ಬಾಲ ಅಂಕೆ ಇಲ್ಲದ ಕಪಿ ತರ..ಲಂಕೆ ಸುಟ್ಟ ಹಾಗೆ ನಿಮ್ಮ ಚಿಕ್ಕಮ್ಮನ ಮನಶ್ಯಾಂತೀನೇ ಸುಟ್ಟಿತು!" ಏನೋ ಹೇಳಕ್ಕೋಗಿ ಇನ್ನೇನೋ ಅರ್ಥ ಬರೋತರ ಹೇಳಿದ್ದರ ಅರಿವಾಗಿ "ಅಯ್ಯೋ ಲೋಕದಾ ಡೊಂಕ ನಾವು ತಿದ್ದಕ್ಕಾಗತ್ಯೇ ನಮ್ಮ ನಮ್ಮ ಡೊಂಕಾನ ತಿದ್ಗೊಂಡ್ರೆ ಸಾಕು" ಅಂತ ವಚನಕ್ಕೆ ಶರಣು ಹೋಗಿ ಸುಮ್ಮನಾದರು. ಪ್ರಶಾಂತನಿಗೆ ಬೇಜಾರಾಗ್ಬಾರ್ದೂಂತ ಎಷ್ಟು ಕಂಟ್ರೋಲ್ ಮಾಡಿದ್ರೂ ಉಕ್ಕಿ ಬಂದ ನಗೂನ ತಡೆಯಕ್ಕಾಗ್ಲಿಲ್ಲ.
ಪರಿಸ್ಥಿತಿ ಹತೋಟಿಗೆ ಬಂದ ಮೇಲೆ ಅಜ್ಜಿನ ಕೇಳ್ದೆ.
ಸರಿ ಅಜ್ಜಿ ಬಾಲ ಅಂಕಲ್ ರಾಧಂಗೇ ನೆಕ್ಲೆಸ್ ಕೊಟ್ಟ್ರು ಅಂತ ಹೇಗೆ ಕಂಡು ಹಿಡಿದ್ರಿ?"
"ಸುಮ್ನೆ ಬಿಸಿಲಿಗೆ ನನ್ನ ತಲೆ ಬೆಳ್ಗಾಗಿಲ್ವೇ ಹುಡುಗೀ...ಪ್ರಪಂಚ ನೋಡಿರೋಳು ನಾನು..ಅವರಿಬ್ಬರ ಕಣ್ಣಾಮುcಚಾಲೆ ಆಟಾನ ಕಣ್ಣೋಟದಿಂದ್ಲೇ ತಿಳ್ಕೊಂಡ್ಬಿಟ್ಟೆ"ಇಂತಹ ವಿಷಯಗಳಲ್ಲೆಲ್ಲ ಅಜ್ಜಿಯ ಎಕ್ಸ್ಪರ್ಟೀಸ್ನಲ್ಲಿ ವಿಶ್ವಾಸವಿದ್ದುದರಿಂದ ದೂಸರಾ ಮಾತಿಲ್ಲದೇ ಒಪ್ಪಿಕೊಂಡೆ.
ಯಮುನ ಆಂಟಿಯ ಬಗ್ಗೆ ಮನ ಮಿಡುಕಿದರೂ ಬಾಲಕೃಷ್ಣರ ಬಣ್ಣ ಬಯಲಿಗೆಳೆದ ಅಜ್ಜಿ ಬಗ್ಗೆ ತುಂಬಾ ಹೆಮ್ಮೆಯಾಯ್ತು.

****************************