ಅಡಿಕೆಯ ಸಿಂಗಾರ ನಾಶಮಾಡುವ ಹುಳು
ಅಡಿಕೆ ಬೆಳೆಯಲ್ಲಿ ಗಣನೀಯವಾಗಿ ಬೆಳೆ ನಷ್ಟ ಮಾಡುವ ಕೀಟಗಳಲ್ಲಿ ಒಂದು ಮುಖ್ಯ ಕೀಟ ಸಿಂಗಾರ ಭಕ್ಷಿಸುವ ಹುಳು. ಇದು ಆ ಸಿಂಗಾರವನ್ನೇ ಹಾಳು ಮಾಡುತ್ತದೆ. ಒಂದು ಮುಗಿದ ನಂತರ ಮತ್ತೊಂದು ಸಿಂಗಾರಕ್ಕೆ ದಾಳಿ ಮಾಡುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಅಡಿಕೆ ಬೆಳೆಗಾರರು ನಮ್ಮ ಅಡಿಕೆ ಮರದಲ್ಲಿ ಸಿಂಗಾರ ಒಣಗಿ ಹೋಗುತ್ತಿದೆ ಎನ್ನುತ್ತಾರೆ. ಕೆಲವರು ಅಡಿಕೆ ಮಿಳ್ಳೆ ಉದುರುತ್ತದೆ ಎನ್ನುತ್ತಾರೆ. ಮಿಳ್ಳೆ ಉದುರುವ ಸಮಸ್ಯೆ ಇಲ್ಲ. ಆದರೆ ಅಡಿಕೆ ಇಡೀ ಗೊನೆಯೇ ಒಣಗಿ ಹೋಗುತ್ತದೆ ಎನ್ನುವ ಬೆಳೆಗಾರರು ಹೆಚ್ಚು.
ಕೆಲವು ಅಡಿಕೆ ಬೆಳೆಗಾರರ ಅಡಿಕೆ ಮರಗಳಲ್ಲಿ ಸಿಂಗಾರ ಪೂರ್ತಿ ಒಣಗಿ ಕಾಂಡಕ್ಕೆ ಅಂಟಿಕೊಂಡು ಕೆಲವೊಮ್ಮೆ ಉದುರಿ ಬೀಳುವುದು ಅಥವಾ ಅಲ್ಲೇ ಒಣಗಿ ಜೋತಾಡಿಕೊಂಡಿದ್ದು, ಮಳೆ ಬಂದ ತಕ್ಷಣ ಉದುರಿ ಬೀಳುವುದು ಇರುತ್ತದೆ. ಇದಕ್ಕೆ ರೋಗ ಕಾರಕ ಶಿಲೀಂದ್ರ ಕಾರಣ ಎಂಬುದಾಗಿ ಕೆಲವರ ಭಾವನೆ. ಸಿಂಗಾರ ಒಣಗುವುದೆಲ್ಲಾ ರೋಗಕಾರಕ ಶಿಲೀಂದ್ರದ ಬಾಧೆ ಅಲ್ಲ. ಹೆಚ್ಚಿನ ಮಟ್ಟಿಗೆ ಬೇಸಿಗೆಯಲ್ಲಿ ಸಿಂಗಾರಕ್ಕೆ ರೋಗಾಣುಗಳು ಬಾಧಿಸುವುದಿಲ್ಲ. ಡೈ ಬ್ಯಾಕ್ ಎಂದು ನಾವು ಅದಕ್ಕೆ ಶಿಲೀಂದ್ರ ನಾಶಕ ಸಿಂಪರಣೆ ಮಾಡುವುದು ಹೆಚ್ಚಿನ ಸಂದರ್ಭಗಳಲ್ಲಿ ವ್ಯರ್ಥವೂ ಸಹ. ಇದು ಕೀಟದ ಸಮಸ್ಯೆಯಾಗಿದ್ದು, ಮರದ ಬೆಳವಣಿಗೆ ಮತ್ತು ಕೆಲವು ಮರದ ಹುಟ್ಟು ಗುಣದ ಕಾರಣದಿಂದ ಆ ಮರಕ್ಕೆ ಈ ಕೀಟದಿಂದ ಹೆಚ್ಚು ಹಾನಿ ಉಂಟಾಗುತ್ತದೆ.
ಅಡಿಕೆ ಮರದ ಸಿಂಗಾರವನ್ನು ಬಕ್ಷಿಸುವ ಒಂದು ರೀತಿಯ ಕಂಬಳಿ ಹುಳ ಇದ್ದು, ಇದು ಸಿಂಗಾರದ ಒಳಗಡೆ ಬಲೆ ಹೆಣೆದು ವಾಸವಾಗಿದ್ದು, ಗಂಡು, ಹೆಣ್ಣು ಹೂವುಗಳನ್ನು, ಹೂ ದಂಟನ್ನು ತಿನ್ನುತ್ತಾ ಬದುಕುತ್ತದೆ. ಒಂದೇ ಒಂದು ಕಾಯಿಯೂ ಫಲಿತಗೊಳ್ಳದೆ ಇಡೀ ಸಿಂಗಾರವೇ ಒಣಗುತ್ತದೆ. ಇದು ತೆರೆದುಕೊಳ್ಳದ, ಎಳೆ ಪ್ರಾಯದ ಅಡಿಕೆ ಮರಗಳ ಸಿಂಗಾರದಲ್ಲಿ ಜಾಸ್ತಿಯಾಗಿರುತ್ತದೆ. ಈ ಹುಳವನ್ನು ನಾಶ ಮಾಡದೆ ಇದ್ದಲ್ಲಿ ಅದು ಅಲ್ಲೇ ಇದ್ದು ಮತ್ತೆ ಇನ್ನೊಂದು ಸಿಂಗಾರಕ್ಕೆ ತೊಂದರೆ ಮಾಡುತ್ತದೆ. ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ಜಾಸ್ತಿ. ನಿಯಂತ್ರಣ ಕ್ರಮ ಕೈಗೊಳ್ಳದಿದ್ದಲ್ಲಿ ವರ್ಷದುದ್ದಕ್ಕೂ ತೊಂದರೆ ಇರುತ್ತದೆ.
ಕೆಲವು ಅಡಿಕೆ ಮರಗಳು ದಪ್ಪವಾಗಿ ಬೆಳೆದು ಶಿರ ಭಾಗ ಅಗಲಕ್ಕೆ ಬಿಡಿಸಿಕೊಂಡಿರುವುದಿಲ್ಲ. ಎಲೆಗಳಲ್ಲಿ ಗರಿಗಳೂ ಸಹ ಪೂರ್ತಿ ಬಿಡಿಸಿಕೊಂಡಿರುವುದಿಲ್ಲ. ಅದರ ಹಾಳೆಗಳು ತುಂಬಾ ದಪ್ಪವಾಗಿರುತ್ತವೆ. ಈ ಮರದಲ್ಲಿ ಬಿಡುವ ಹೂ ಗೊಂಚಲು ಸಣ್ಣದಾಗಿರುತ್ತದೆ. ಮತ್ತು ಹೂ ಗೊಂಚಲಿನ ರಕ್ಷಾ ಕವಚ ದಪ್ಪವಾಗಿದ್ದು, ಹಾಳೆ ಉದುರಿ ವಾರವಾದರೂ ರಕ್ಷಾಕವಚ ಬಿಚ್ಚಿ ಕೊಳ್ಳುವುದಿಲ್ಲ.ಇಂತಹ ಹೂ ಗೊಂಚಲಿಗೆ ಈ ಕಂಬಳಿ ಹುಳು ಪ್ರವೇಶ ಮಾಡಿ ಒಳಗೊಳಗೇ ಹೂ ಗೊಂಚಲನ್ನು ಭಕ್ಷಣೆಮಾಡುತ್ತವೆ.
ಈ ತೊಂದರೆ ನಿವಾರಣೆಗೆ ಹಾಳೆ ಬಿದ್ದ ದಿನ ಇಲ್ಲವೇ ಮರು ದಿನ ಸಿಂಗಾರದ ರಕ್ಷಾ ಕವಚವನ್ನು ಬಿಡಿಸಬೇಕು. ಕತ್ತಿ ಒಳಗೊಂಡ ಕೊಕ್ಕೆ ಹಾಕಿ ಹದವಾಗಿ ಗೀರಿದರೆ ಅದು ಬಿಚ್ಚಿಕೊಳ್ಳುತ್ತದೆ. ಮರಗಳ ಲಕ್ಷಣವನ್ನು ನೋಡಿ ಕೆಲವು ಬೀಜ ಸಹಜವಾಗಿ ಉತ್ತಮ ಸಿಂಗಾರ ಬಿಡದಿರುವ ಸಸಿಗಳನ್ನು ಫಸಲು ಪ್ರಾರಂಭವಾದ ಎರಡು ವರ್ಷದೊಳಗೆ ತೆಗೆದು ಬೇರೆ ಸಸಿ ನಾಟಿ ಮಾಡಬೇಕು. ಅಡಿಕೆ ಸಸ್ಯಗಳಿಗೆ ಸಸಿಗಳ ಹಂತದಿಂದ ಶಿಫಾರಿತ ಪ್ರಮಾಣದ ಪೊಷಕಗಳನ್ನು ಕೊಡುತ್ತಿರಬೇಕು. ಪೊಟ್ಯಾಶಿಯಂ ಗೊಬ್ಬರವನ್ನು ಕಡಿಮೆ ಮಾಡುವುದು ಈ ರೀತಿ ಸಸಿಗಳು ಬೆಳೆಯಲು ಕಾರಣವಾಗಿರುತ್ತದೆ. ಪೊಟ್ಯಾಶಿಯಂ ಗೊಬ್ಬರವನ್ನು ಎಳವೆಯಿಂದಲೇ ಕೊಡುತ್ತಾ ಬಂದರೆ ಸಸ್ಯ ಬೆಳವಣಿಗೆ ಸಹಜವಾಗಿರುತ್ತದೆ. ಆದಾಗ್ಯೂ ಕೆಲವು ಬೀಜ ಗುಣದಲ್ಲೇ ಹೀಗಿರುತ್ತದೆ.
ಅಡಿಕೆ ಮರದ ಸಿಂಗಾರದ ರಕ್ಷಾಕವಚ ತೆಳುವಾಗಿ ಬಿಳಿ ಬಣ್ಣದಲ್ಲಿ ಇದ್ದರೆ ಅದು ಹಾಳೆ ಉದುರಿದ ದಿನ ಇಲ್ಲವೇ ಮರು ದಿನ ಬಿಡಿಸಿಕೊಳ್ಳುತ್ತದೆ. ಅಂತಹ ಹೂ ಗೊಂಚಲಿನಲ್ಲಿ ಕಾಯಿ ಕಚ್ಚುವಿಕೆಯ ಪ್ರಮಾಣವೂ ಹೆಚ್ಚು ಇರುತ್ತದೆ. ಬಿಡಿಸಿಕೊಂಡ ಸಿಂಗಾರಕ್ಕೆ ಕೀಟ ತೊಂದರೆ ಕಡಿಮೆ. ಈ ರೀತಿಯ ಸಿಂಗಾರ ರಕ್ಷಾಕವಚ ಇರಬೇಕಾದರೆ ಸಮತೋಲನ ಪ್ರಮಾಣದ ಗೊಬ್ಬರ ಕೊಡಬೇಕಾದುದ್ದು ಅಗತ್ಯ. ಅತಿಯಾದ ಸಾರಜನಕಯುಕ್ತ ಗೊಬ್ಬರ ಅಥವಾ ಸಾವಯವ ಗೊಬ್ಬರವೂ ವರ್ಜ್ಯ.
ಕೀಟ ಸಮಸ್ಯೆ ನಿವಾರಣೆಗೆ ಡೈಮಿಥೋಯೇಟ್ ೨.೫ ಮಿಲಿ. ೧ ಲೀ ನೀರಿಗೆ ( ರೋಗರ್) ಅಥವಾ ಇಮಿಡಾ ಕ್ಲೋಫ್ರಿಡ್ .೬ ಮಿಲಿ ೧ಲೀ ನೀರಿಗೆ ( ಕಾನ್ಫಿಡಾರ್ ಅಥವಾ ಟಾಟಾಮಿಡಾ) ಬೆರೆಸಿ ಸಿಂಪರಣೆ ಮಾಡಬೇಕು.ಸಿಂಪರಣೆ ಮಾಡುವಾಗ ತೆರೆದಿರದ ಸಿಂಗಾರವನ್ನು ತೆರೆದು ಅದರ ಒಳಗೆ ತಾಗುವಂತೆ ಸಿಂಪರಣೆ ಮಾಡಬೇಕು. ಕೀಟನಾಶಕ ಬಳಕೆಗಿಂತ ನಿರ್ವಹಣೆಯಲ್ಲಿ ಹತೋಟಿ ಮಾಡುವುದು ಉತ್ತಮ. ಕೀಟನಾಶಕದ ಬಳಕೆಯಿಂದ ಪರಾಗಸ್ಪರ್ಶಕ್ಕೆ ತೊಂದರೆಯಾಗುತ್ತದೆ. ಹಾನಿಗೊಳಗಾಗ ಸಿಂಗಾರವನ್ನು ಬುಡದಲ್ಲಿ ಹಾಕಿದರೆ ಎಷ್ಟು ಕೀಟನಾಶಕ ಸಿಂಪಡಿಸಿದರೂ ವ್ಯರ್ಥ. ಅದನ್ನು ಸುಡಬೇಕು.
ಮಾಹಿತಿ: ರಾಧಾಕೃಷ್ಣ ಹೊಳ್ಳ