ಅಡಿಕೆ ಬೆಳೆಯಲ್ಲಿ ಸುಳಿ ಮುರುಟುವಿಕೆ ನಿಯಂತ್ರಣ

ಅಡಿಕೆ ಬೆಳೆಯಲ್ಲಿ ಸುಳಿ ಮುರುಟುವಿಕೆ ನಿಯಂತ್ರಣ

ಅಡಿಕೆ ಸಸ್ಯದ ಸುಳಿಯ ಭಾಗದ ಎಲೆಗಳು ಮುರುಟಿ ಬೆಳೆಯುವ ಸಮಸ್ಯೆಗೆ ಹಿಡಿಮುಂಡಿಗೆ, ಬಂದ್ ರೋಗ ಎಂಬ ನಾಮಕರಣ ಮಾಡಲಾಗಿದೆ. ಇದು ನಿಜವಾಗಿಯೂ ಹಿಡಿಮುಂಡಿಗೆಯೇ ಅಥವಾ ಬೇರೆಯೇ? ಇಲ್ಲಿದೆ ಸಮಸ್ಯೆ ನಿವಾರಣೆಯಾದ ಒಂದು ಪುಟ್ಟ ಯಶೋಗಾಥೆ.

ಬಹುತೇಕ ಅಡಿಕೆ ಬೆಳೆಗಾರರ ತೋಟದಲ್ಲಿ ೧೫-೨೫ % ದಷ್ಟು ಅಡಿಕೆ ಮರ-ಸಸಿಗಳು ಸುಳಿ ಮುರುಟಿಕೊಂಡು ಅಲ್ಲಿಗೇ ಸುಳಿ ಬೆಳವಣಿಗೆ ಸ್ಥಗಿತವಾಗಿ ಕೊನೆಗೆ ಇದು ಪ್ರಯೋಜನವಿಲ್ಲ ಎಂದು ಕಿತ್ತೊಗೆಯುವ ಪರಿಸ್ಥಿಗೆ ತಲುಪಿರುವುದು ಸಾಮಾನ್ಯ. ಸುಳಿ ಭಾಗದಲ್ಲಿ ಮೂಡುವ ಗರಿಯ ಮೊಗ್ಗು ಒಂದರಿಂದ ಒಂದು ಸಧೃಢವಾಗಿ ಬೆಳೆಯಬೇಕು. ಒಂದು ಸುಳಿಯ ಬೆಳವಣಿಗೆ ಕುಂಠಿತವಾದರೆ ನಂತರದ ಸುಳಿಗಳೆಲ್ಲಾ ಕಿರಿದಾಗುತ್ತಲೇ ಬರುತ್ತದೆ. ಕೊನೆಗೆ ಸುಳಿಯ ಭಾಗವೇ ಕುಬ್ಜವಾಗುತ್ತದೆ. ಸುಳಿಯಿಂದ ಮೂಡುವ ಗರಿ ಮೊಗ್ಗು ಆರೋಗ್ಯಕರವಾಗಿದ್ದರೆ ಅದು ಸುಮಾರು ೫-೬ ಅಡಿ ಉದ್ದ ಮತ್ತು ೨.೫ ರಿಂದ ೩ ಅಡಿ ಅಗಲಕ್ಕೆ ಬೆಳೆದಿರುತ್ತದೆ. ಅದರ ಗರಿ ಕಡ್ಡಿಗಳು ಬಿಡಿಸಿಕೊಂಡಿರುತ್ತವೆ. ಮುರುಟಿ ಮೂಡುವ ಸುಳಿಗೆ ನೈಜ ಗರಿಯ ಗಡಸುತನ ಇರುವುದಿಲ್ಲ. ಗರಿಯ ಉದ್ದ ಸುಮಾರು ೧ ಅಡಿಯಿಂದ ೨ ಅಡಿ ತನಕ ಮಾತ್ರ ಬೆಳೆಯುವುದನ್ನು ಕಾಣಬಹುದು. ಈ ಎಲೆ ಬೆಳೆದು ಉದುರಿದ ನಂತರ ಮರದ ಕಾಂಡದ ಗಂಟುಗಳ ಅಂತರ ಕಡಿಮೆಯಾಗುವುದು ಕಾಣುತ್ತದೆ. ಸುಳಿ ಮುರುಟಿ ಬೆಳೆದ ಭಾಗಕ್ಕೆ ರಸ ಹೀರುವ ತಿಗಣೆಗಳು ಪ್ರವೇಶವಾಗುತ್ತದೆ. ಅದನ್ನು ಭಕ್ಷಿಸಲು  ಇರುವೆಗಳು ಬರುತ್ತವೆ. ಅದರೊಂದಿಗೆ  ಬಿಳಿ ಹಿಟ್ಟು ತಿಗಣೆಯೂ ಸೇರಿಕೊಳ್ಳುತ್ತದೆ. ಇದರಿಂದಾಗಿ ಸುಳಿ ಮುರುಟುವಿಕೆಗೆ ಮತ್ತಷ್ಟು ಅನುಕೂಲವಾಗುತ್ತದೆ. ನಂತರ ಬರುವ ಗರಿಗಳೆಲ್ಲಾ ಕುಬ್ಜವಾಗುತ್ತಾ ಹೋಗಿ ಅದು ಫಲ ಕೊಡಲಾರದು. ಇಂತಹ ನ್ಯೂನತೆಗೆ ಹಿಡಿಮುಂಡಿಗೆ- ಬಂದ್ ರೋಗ ಎಂಬ ಹೆಸರನ್ನು ಇಡಲಾಗಿದೆ.

ಸೂಕ್ತ ಬಸಿಗಾಲುವೆ ಇಲ್ಲದಿರುವಿಕೆ, ಮಣ್ಣಿನ ಫಲವತ್ತತೆಯಲ್ಲಿ ಕೊರತೆತಂತಹ ಅಂಶಗಳು ಈ ನ್ಯೂನ್ಯತೆಗೆ ಕಾರಣ ಎನ್ನುತ್ತಾರೆ ವಿಜ್ಞಾನಿಗಳು. ಬೇರಿನ ಬೆಳವಣಿಗೆಗೆ ಸಮರ್ಪಕ ಪರಿಸ್ಥಿಯನ್ನು ಒದಗಿಸಿಕೊಟ್ಟು ಮಣ್ಣು ಪರೀಕ್ಷೆಯ ಆಧಾರದಲ್ಲಿ ಗೊಬ್ಬರ ಕೊಡಬೇಕು. ಶೇ. ೧ರ ಸತುವನ್ನು ಸಿಂಪರಣೆ ಮಾಡುವುದರಿಂದ ತಾತ್ಕಾಲಿಕ ಪರಿಹಾರ ಇದೆ ಎನ್ನುತ್ತಾರೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಹೇಳಲಾಗುತ್ತಿಲ್ಲ. ಇದು ಅಡಿಕೆ ಬೆಳೆಗಾರರ ಗಂಭೀರ ಸಮಸ್ಯೆಯಾಗಿದ್ದು ಗಣನೀಯ ನಷ್ಟ ಉಂಟುಮಾಡುವ ನ್ಯೂನ್ಯತೆಯಾದ ಕಾರಣ ರೈತರೂ ಈ ದಿಶೆಯಲ್ಲಿ ಪರೀಕ್ಷೆಗಳನ್ನು ಕೈಗೊಳ್ಳುತ್ತಲೇ ಇದ್ದಾರೆ.

ಬಂಟ್ವಾಳ ತಾಲೂಕು ಕಾವಳಕಟ್ಟೆ ಸಮೀಪದ ಪ್ರಗತಿಪರ ಕೃಷಿಕ ಗಣೇಶ್ ಭಟ್ ಇವರ ಸಸಿ ತೋಟದಲ್ಲಿ ೨೦% ಹೆಚ್ಚು ಅಡಿಕೆ ಸಸ್ಯಗಳು ಈ ರೀತಿ ಸುಳಿ ಮುರುಟಿಕೊಂಡಿರುವುದನ್ನು ತಿಳಿಸಿದ್ದರು (ಬಹುಷಃ ಮೂರು ವರ್ಷಗಳ ಹಿಂದೆ ಜುಲೈ ತಿಂಗಳು ಇರಬಹುದು). ಇದರ ಬಗ್ಗೆ ಅವರಲ್ಲಿ ವಿಚಾರಿಸಿದಾಗ ಇದು ನಮಟೋಡು ಸಮಸ್ಯೆ ಎಂದು ತಿಳಿಸಿದ್ದರು. ಆದರೂ ಸುಳಿ ಭಾಗದಲ್ಲಿ ಕಂಡು ಬಂದ ತಿಗಣೆ ಮತ್ತು ಹಿಟ್ಟು ತಿಗಣೆಯನ್ನು  ಗಮನಿಸಿ ಇದು ರಸ ಹೀರುವ ಕೀಟದ ಪರಿಣಾಮದಿಂದಲೂ ಇರಬಹುದೇನೋ ಎಂದು ಸಂಶಯ ಪಟ್ಟಿದ್ದರು. ತೀರ್ಥಹಳ್ಳಿ, ಸಾಗರ ಕಡೆಯ ಕೆಲವು ರೈತರು ಈ ಸಮಸ್ಯೆಗೆ ಒಂದು ರಸ ಹೀರುವ ತಿಗಣೆಯೇ ಕಾರಣ ಎಂದು ಸುಳಿ ಭಾಗಕ್ಕೆ  ಮೋನೋಕ್ರೋಟೋಫೋಸ್ ಕೀಟನಾಶಕ ಸಿಂಪರಣೆ ಮಾಡುತ್ತಾರೆ. ಕೆಲವರು ಬುಡ ಭಾಗಕ್ಕೆ ಥಿಮೇಟ್ ಹಾಕುವುದೂ ಇದೆ. ಇಲ್ಲಿಯೂ ಇದು ಸ್ವಲ್ಪ ಮಟ್ಟಿಗೆ ಹತೋಟಿ ಬಂದಿದೆ ಎಂದು ಬೆಳೆಗಾರರು ಅಭಿಪ್ರಾಯ ಪಡುತ್ತಾರೆ.

ಗಣೇಶ್ ಭಟ್ ಇವರು ಇದನ್ನು ಬೇರು ಕೊರೆಯುವ ನಮಟೋಡು ( ಜಂತು ಹುಳು) ಎಂದು ಖಂಡಿತವಾಗಿ ನಿರ್ಧರಿಸಿ ಅದಕ್ಕೆ ಜೈವಿಕ ವಿಧಾನದಲ್ಲಿ ನಿಯಂತ್ರಣ ಕ್ರಮವನ್ನು ಅನುಸರಿಸಿದರು. ಜೈವಿಕವಾಗಿ ನಮಟೋಡುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲ ಪಸಿಲೋಮೈಸಿಸ್ ಲಿಲಾಸಿನಸ್ (Yorker) ಅನ್ನು ನೀರಿನಲ್ಲಿ ಕರಗಿಸಿ, ನೆಲಕ್ಕೆ ಸಿಂಪಡಿಸಬಹುದಾದ ಜೈವಿಕ ಜಂತು ನಾಶಕವನ್ನು ಜುಲೈ ತಿಂಗಳ ಮೂರನೇ ವಾರ ನೆಲಕ್ಕೆಲ್ಲಾ ಬೀಳುವಂತೆ ಸಿಂಪರಣೆ ಮಾಡಿದ್ದಾರೆ.

೨೫೦ ಗ್ರಾಂ ನ ಈ ನಮಟೋಡು ನಾಶಕವನ್ನು ೨೦೦ ಲೀಟರ್ ನೀರಿನಲ್ಲಿ ಕರಗಿಸಿ ಸುಮಾರು ೧ ಎಕ್ರೆ ಪ್ರದೇಶಕ್ಕೆ  ಸಿಂಪಡಿಸಬಹುದಂತೆ. ಹೀಗೆ ಸಿಂಪಡಿಸಿದ ೧ ತಿಂಗಳ ನಂತರ ಯಾವ ಗಿಡದಲ್ಲಿ ಸುಳಿಗಳು ಮುರುಟಿಕೊಂಡಿದ್ದವೋ ಅಂಥ ಸಸ್ಯಗಳ ಸುಳಿಗಳು ಸಹಜ ರೀತಿಯಲ್ಲಿ ಬೆಳೆಯಲಾರಂಭಿಸಿದವು. ಇನ್ನೇನು ಆ ಸಸಿಯನ್ನು  ತೆಗೆದು ಬೇರೆ ಸಸಿ ನೆಡುವುದೇ ಎಂಬ ತೀರ್ಮಾನಕ್ಕೆ ಬಂದಿದ್ದ ಸಸಿಗಳೆಲ್ಲವೂ ಸಹ ಹೊಸ ಸುಳಿಯನ್ನು ಆರೋಗ್ಯಕರವಾಗಿ ಬಿಟ್ಟಿದ್ದವು. 

ಇದರಿಂದ ಅಡಿಕೆ ಸಸಿ ಮರಗಳಿಗೆ ಹಿಡಿಮುಂಡಿಗೆ- ಬಂದ್ ಎಂಬ ನ್ಯೂನ್ಯತೆಯು ಯಾವುದೇ ಪೋಶಕಾಂಶದ ವ್ಯತ್ಯಯದಿಂದ ಉಂಟಾಗುವುದಲ್ಲ. ಅದಕ್ಕೆ  ಶಾಶ್ವತ ಪರಿಹಾರ ಇಲ್ಲ ಎಂಬ ಮಿಥ್ಯೆ ದೂರವಾಯಿತು. ಇದು ನಮಟೋಡುಗಳಿಂದ ಆಗುವ ತೊಂದರೆ. ಇದಕ್ಕೆ  ಜೈವಿಕ ಪರಿಹಾರ ಹೊಂದುತ್ತದೆ ಎಂಬುದು ಸಾಬೀತಾಯಿತು. ಈ ಜೈವಿಕ ವಿಧಾನ ಯಾವುದೇ ವಿಷ ರಾಸಾಯನಿಕ ವಿಧಾನವಾಗಿರದೆ ಯಾರಿಗೂ ಯಾವುದೇ ಹಾನಿ ಇಲ್ಲ. ಈ ಜೀವಾಣುಗಳು ಬೇರು ವ್ಯೂಹವನ್ನು ಹಿಂಡುವ ನಮಟೋಡುಗಳನ್ನೇ ಆಶ್ರಯಿಸಿ ಬೆಳೆದು ಅದನ್ನು ಹುಡುಕಿ ಕೊಲ್ಲುತ್ತವೆ. ದೀರ್ಘಾವಧಿಯ ತನಕ ಇದರ ಪರಿಣಾಮ ಇರುತ್ತದೆ.

ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ  ಹೊಳ್ಳ