ಅಡಿಕೆ ಬೆಳೆಯ ಕೊರತೆಯಿಂದ ಬೆಲೆಯೇರಿಕೆಯ ಸಾಧ್ಯತೆ

ಹಾಲಿ ವರ್ಷದ ಹವಾಮಾನ ವೈಪರೀತ್ಯದ ಕಾರಣ ಅಡಿಕೆಯ ಸಾಂಪ್ರದಾಯಿಕ ಬೆಳೆ ಪ್ರದೇಶಗಳಲ್ಲಿ ೫೦% ಫಸಲು ನಷ್ಟವಾಗಿದ್ದು, ಈ ನಷ್ಟ ಇನ್ನೂ ಒಂದೆರಡು ವರ್ಷಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ಅಡಿಕೆ ತೋಟಗಳು ಕೆಲವು ನೀರಿಲ್ಲದೆ, ಕೆಲವು ನೀರು ಇದ್ದೂ ಹಾಳಾಗಿದೆ. ಅಡಿಕೆ ಮರಗಳಲ್ಲಿ ಗರಿಗಳು ಒಣಗಿವೆ. ಹೂಗೊಂಚಲು ಕರಟಿ ಹೋಗಿವೆ, ಬೆಳೆಗಾರರು ಮರ ಉಳಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದಾರೆ. ಅಡಿಕೆ ಬೆಳೆಗಾರರ ಪಾಲಿಗೆ ಈ ವರ್ಷದ ಹವಾಮಾನ ವೈಪರೀತ್ಯ ಅತೀ ದೊಡ್ಡ ನಷ್ಟವನ್ನು ಉಂಟುಮಾಡಿದೆ.
ದಕ್ಷಿಣ ಕನ್ನಡ, ನೆರೆಯ ಕಾಸರಗೋಡು, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿನ ಕೆಲವು ಭಾಗಗಳ ಅಡಿಕೆ ತೋಟಗಳು ಭಾಗಶಃ ಸತ್ತೇ ಹೋಗುತ್ತವೆಯೋ ಎಂಬ ಸ್ಥಿತಿಗೆ ತಲುಪಿವೆ. ಎಲ್ಲರ ಕೊಳವೆ ಬಾವಿಯಲ್ಲೂ ನೀರಿಲ್ಲ. ಹೊಳೆ, ಕೆರೆ ನೀರು ಬತ್ತಿ ಹೋಗಿ ತಿಂಗಳುಗಳೇ ಕಳೆದಿವೆ. ತೋಟದ ನೀರಿಗೆ ಕೊಳವೆ ಬಾವಿಯೊಂದೇ ಆಧಾರ. ಈ ಆಧಾರವೇ ಈ ವರ್ಷ ಕೈಕೊಟ್ಟಿದೆ. ಹಳೆಯ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೊಸತು ಕೊರೆದರೆ ೬೦೦-೭೦೦-೮೦೦-೧೦೦೦ ಅಡಿ ತೋಡಿದರೂ ನೀರು ಇಲ್ಲ, ಇದ್ದರೂ ಅತ್ಯಲ್ಪ. ಇಂತಹ ಪರಿಸ್ಥಿತಿ ಈ ಭಾಗದ ಜನರಿಗೆ ಎದುರಾದದ್ದೇ ಇಲ್ಲ. ಒಮ್ಮೆ ಮಳೆ ಬರಲಿ, ನೀರಾಗಲಿ ಎಂದು ಕಾಯುವಂತಾಗಿದೆ. ಎಪ್ರೀಲ್ ತಿಂಗಳ ಎರಡನೇ ವಾರದಲ್ಲಿ ಅಲ್ಲಲ್ಲಿ ಕೆಲವೆಡೆ ಉತ್ತಮ ಮಳೆ, ಕೆಲವೆಡೆ, ಸಾಧಾರಣ, ಮತ್ತೆ ಕೆಲವೆಡೆ ತುಂತುರು, ಹೀಗೆ ಮಳೆ ಬಂದಿದೆಯಾದರೂ ಯಾರಿಗೂ ನೀರಾವರಿಗೆ ಅನುಕೂಲ ಆಗಿಲ್ಲ. ಮೇ ಕೊನೆಯ ವಾರದಲ್ಲಿ ಅಲ್ಲಲ್ಲಿ ಮಳೆ ಪ್ರಾರಂಭವಾಗಿದೆ. ಬಿಸಿಲು ಹೀಗೆ ಮುಂದುವರಿದರೆ ಅಡಿಕೆ ತೋಟಗಳೇ ನಾಶವಾಗುವ ಸಂಭವ ಇದೆ.ಈ ಪರಿಸ್ಥಿತಿಯಿಂದ ಅಡಿಕೆ ಉತ್ಪಾದನೆ ಬಹಳಷ್ಟು ಕಡಿಮೆಯಾಗಲಿದೆ. ಇದರಿಂದಾಗಿ ಬೇಡಿಕೆ ಬಂದು ಬೆಲೆ ಏರಲಿದೆ.
ಯಾವ ಕಾರಣಕ್ಕೆ ಹೀಗಾಯಿತು?: ಅಧಿಕ ಬಿಸಿಲಿನ ವಾತಾವರಣ ಅಡಿಕೆ ತೋಟಗಳನ್ನು ಒಣಗುವಂತೆ ಮಾಡಿದೆ. ಈ ಹಿಂದೆಯೂ ಇಂತಹ ಹವಾಮಾನ ಪರಿಸ್ಥಿತಿ ಉಂಟಾಗಿತ್ತಾದರೂ ವಾತಾವರಣದಲ್ಲಿ ತೇವಾಂಶ ಇದ್ದ ಕಾರಣ ಗಣನೀಯ ಪ್ರಮಾಣದ ಹಾನಿ ಆಗುತ್ತಿರಲಿಲ್ಲ. ಈ ವರ್ಷ ವಾತಾವರಣದಲ್ಲಿನ ಆರ್ಧ್ರತೆ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ಅಡಿಕೆ ಮರಗಳಿಗೆ ಅತಿಯಾಗಿ ಕೀಟಬಾಧೆ ಉಂಟಾಗಿದೆ. ಅಡಿಕೆ ಮರಗಳಿಗೆ ಎಲ್ಲಾ ಕಡೆಯಲ್ಲೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಎಲೆ ಚುಕ್ಕೆರೋಗದ ಸೋಂಕು ಇದ್ದ ಕಾರಣ ಬಿಸಿಲಿನ ತಾಪವನ್ನು ಸಸಿಗಳು ಮರಗಳು ತಾಳಿಕೊಳ್ಳದ ಸ್ಥಿತಿ ಉಂಟಾಗಿದೆ. ಅಧಿಕ ತಾಪಮಾನ ಕೆಲವು ರಸಹೀರುವ ಕೀಟಗಳ ಸಂಖ್ಯಾಭಿವೃದ್ದಿಗೆ ಪೂರಕ. ವಿಶೇಷವಾಗಿ ತಿಗಣೆ ಜಾತಿಯ (ಮೈಟ್) ಕೀಟಗಳು ಬಿಸಿಲು ಹೆಚ್ಚಾಗಿರುವ ಸಮಯದಲ್ಲಿ ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ. ಈ ವರ್ಷ ಎಲ್ಲಾ ಕಡೆಯಲ್ಲೂ ಈ ಸಮಸ್ಯೆ ಉಂಟಾಗಿದ್ದು, ಸಸಿಗಳು, ಮರಗಳು ಮೈಟ್ ಕಾಟಕ್ಕೆ ತುತ್ತಾಗಿ ಸಾಯುವ ಸ್ಥಿತಿಗೆ ಬಂದಿದೆ. ಎಲ್ಲಾ ಕಡೆಯಲ್ಲೂ ಅಡಿಕೆ ಮರದ, ಸಸಿಯ ಗರಿಗಳು ಭಾಗಶಃ ಒಣಗಿರುವುದು, ಕೆಲವು ಸತ್ತೇ ಹೋಗಿರುವುದಕ್ಕೆ ಕಾರಣ ಈ ಮೈಟ್ ಗಳು. ಮೈಟ್ ಎಂಬುದು ಅತ್ಯಂತ ಸಣ್ಣ ಕೀಟವಾದರೂ ಸಹ ಅದು ಮಾಡುವ ಹಾನಿ ಮಾತ್ರ ಅಪಾರ.
ಮೈಟ್ ಹೇಗೆ ಬಾಧಿಸುತ್ತದೆ?: ಅಡಿಕೆ ಸಸಿ ಹಾಗೂ ಕೆಲವು ಹೂವಿನ ಸಸ್ಯಗಳಿಗೆ ಬಿಳಿ ಮತ್ತು ಕೆಂಪು ಮೈಟ್ ಗಳು ಬಾಧಿಸುತ್ತವೆ. ಅದು ವರ್ಷದ ಎಲ್ಲಾ ಕಾಲದಲ್ಲೂ ಬಾಧಿಸುವುದಿಲ್ಲ. ಚಳಿಗಾಲ ಪ್ರಾರಂಭವಾಗುವಾಗ ಕೆಲವು ಹೂವಿನ ಸಸ್ಯಗಳಿಗೆ, ಹಣ್ಣಿನ ಸಸ್ಯಗಳಿಗೆ (ದಾಸವಾಳ, ಗುಲಾಬಿ, ಮಾವು, ಪಪ್ಪಾಯ ಇತ್ಯಾದಿ) ಹಿಟ್ಟು ತಿಗಣೆ ಬಾಧೆ ಹೆಚ್ಚಾಗಿರುತ್ತದೆ. ಹಾಗೆಯೇ ಅಡಿಕೆ ಮರಗಳಿಗೆ ಮಾರ್ಚ್ ತಿಂಗಳ ನಂತರ ತಾಪಮಾನ ಏರಿಕೆ ಯಾದಂತೇ ಮೈಟ್ ಗಳ ಪ್ರವೇಶ ಆಗುತ್ತದೆ. ಬೇಸಿಗೆ ಮಳೆ ಆಗಾಗ ಬರುತ್ತಿದ್ದರೆ ( ಸಾಮಾನ್ಯವಾಗಿ ಕುಂಭ ಮಾಸದ ತರುವಾಯ ಆಗಾಗ ಒಂದೆರಡು ಮಳೆ ಬರುವುದು ವಾಡಿಕೆ) ಈ ಮೈಟ್ ಗಳು ಬಾಧಿಸಿದ್ದರೂ ಅದರ ಹಾನಿ ಕಡಿಮೆಯಾಗುತ್ತದೆ. ತಂಪಿನ ವಾತಾವರಣ ಇವುಗಳ ಬೆಳವಣಿಗೆಗೆ ಪೂರಕವಲ್ಲ. ಹಾಗಾಗಿ ಕೆಲವು ಸಮಯದಲ್ಲಿ ಬಾಧೆ ಕಡಿಮೆ ಇರುತ್ತದೆ. ೨೦೧೬ನೇ ಇಸವಿಯಲ್ಲಿ ಇದೇ ತರಹ ಡಿಸೆಂಬರ್ ತಿಂಗಳಲ್ಲಿ ನಿಂತ ಮಳೆ ಜೂನ್ ತನಕವೂ ಬರಲಿಲ್ಲ. ಆ ಸಮಯದಲ್ಲಿ ಇದರ ಕಾಟ ಹೆಚ್ಚಾಗಿತ್ತು.
ಮೈಟ್ ಗಳು ಎಂದರೆ ಅದಕ್ಕೆ ಎಂಟು ಕಾಲುಗಳಿದ್ದು, ಬರಿಕಣ್ಣಿಗೆ ಸಣ್ಣ ಚುಕ್ಕೆ ತರಹ ಕಾಣಿಸುತ್ತದೆ. ದೊಡ್ಡದು ಮಾಡಿ ನೋಡಿದರೆ ಹಸುಗಳ ಮೈಯಲ್ಲಿ ಇರುವ ಉಣ್ಣಿ ತರಹ ಕಾಣಿಸುತ್ತದೆ. ಆದರೆ ಅದರಷ್ಟು ಗಡಸು ಅಲ್ಲ. ಹೆಚ್ಚಾಗಿ ಅಡಿಕೆ ಮರಗಳಿಗೆ ಬಾಧಿಸುವಂತದ್ದು, ಕೆಂಪು ಮೈಟ್. ಕೆಲವೊಮ್ಮೆ ಬಿಳಿಯೂ ಸಹ ಬಾಧಿಸುತ್ತದೆ. ಕೆಂಪು ಮೈಟ್ ಆಗಲೀ, ಬಿಳಿ ಆಗಲಿ ಹಾನಿ ಒಂದೇ ರೀತಿ. ಇವು ಮೊದಲು ಕೆಳಭಾಗದ ಎಲೆಯ ಅಡಿ ಭಾಗದಲ್ಲಿ ಅಂಟಿಕೊಂಡು ರಸ ಹೀರಲು ಪ್ರಾರಂಭಿಸುತ್ತವೆ. ಆ ಸಮಯದಲ್ಲಿ ಇದನ್ನು ನಿಯಂತ್ರಣ ಮಾಡಿದರೆ ಅದು ಮುಂದಿನ ಎಲೆಗಳಿಗೆ ಹರಡುವುದಿಲ್ಲ. ಒಂದು ಎಲೆಗೆ ಬಾಧಿಸಿದಾಗ ಎಲೆಯ ಬಣ್ಣ ಸ್ವಲ್ಪ ಹಸುರು ಕಡಿಮೆಯಾದಂತೆ ಕಾಣಿಸುತ್ತದೆ. ಎಲೆಯ ಅಡಿ ಭಾಗವನ್ನು ನೋಡಿದರೆ ಏನೋ ಅಂಟಿಕೊಂಡಂತೆ ಕಾಣಿಸುತ್ತದೆ. ಅದನ್ನು ಬೆರಳಿನಲ್ಲಿ ಉಜ್ಜಿದರೆ ಬೆರಳಿಗೆ ಕೆಂಪು ಮೈಟ್ ಅದರೆ ಕೆಂಪು ಬಣ್ಣವೂ ಬಿಳಿ ಮೈಟ್ ಆದರೆ ಬರೇ ತೇವಾಂಶವೂ ಅಂಟಿಕೊಳ್ಳುತ್ತದೆ. ಒಂದು ಎಲೆಯ ರಸ ಹೀರುವಿಕೆ ಮುಗಿದ ನಂತರ ಅಲ್ಲೇ ಸಂತಾನಾಭಿವೃದ್ದಿಯನ್ನೂ ನಡೆಸಿ ಅದು ಮುಂದಿನ ಎಲೆಗೆ ವರ್ಗಾವಣೆಯಾಗುತ್ತದೆ. ಬಾಧಿತ ಎಲೆ ಸತ್ತು ಹೋಗುತ್ತದೆ. ನಂತರ ಅದು ಎರಡೆರಡು ಎಲೆಗೆ ಬಾಧಿಸುವಷ್ಟು ಸಂಖ್ಯಾಭಿವೃದ್ದಿಯಾಗಿರುತ್ತದೆ. ಹಾಗೆಯೇ ಮುಂದುವರಿದು ಎಲ್ಲಾ ಎಲೆಗಳಿಗೂ ಸುಳಿ ಭಾಗಕ್ಕೂ ಪಸರಿಸಿ ಗಿಡವನ್ನೇ ಸಾಯಿಸುವ ಮಟ್ಟಕ್ಕೆ ಬಾಧಿಸುತ್ತದೆ. ಒಣಗಿದ ಎಲೆಗಳು ಅದರ ಹಾಳೆ ಮರಕ್ಕೆ ಅಂಟಿಕೊಂಡು ಇರುತ್ತದೆ. ಹೆಚ್ಚಾಗಿ ಎಳೆ ಸಸಿಗಳಿಗೆ ಬಾಧಿಸುವುದು ಹೆಚ್ಚು, ಈ ವರ್ಷದಂತಹ ಹವಾಮಾನದಲ್ಲಿ ಬೆಳೆದ ಮರಕ್ಕೂ ಬಾಧಿಸುತ್ತದೆ. ಕೆಲವೆಡೆ ಬಾಧಿಸಿದೆ. ಸಸ್ಯದ ಆಹಾರ ಉತ್ಪಾದನೆಯ ಪ್ರಮುಖ ಅಂಗವಾದ ಎಲೆಗೆ ಈ ಕೀಟ ಬಾಧಿಸುವ ಕಾರಣ ಸಸ್ಯವೂ ನಿತ್ರಾಣ ಸ್ಥಿತಿಗೆ ಬಂದು ಅದು ಮತ್ತೆ ಸಹಜ ಸ್ಥಿತಿಗೆ ಬರಲು ಒಂದೆರಡು ವರ್ಷ ಸಮಯ ಬೇಕಾಗಬಹುದು.
ಕೀಟಗಳಲ್ಲಿ ನಿರ್ವಹಣೆಗೆ ಅತ್ಯಂತ ಕ್ಲಿಷ್ಟಕರವಾದದ್ದು ಎಂದರೆ ತಿಗಣೆಗಳು, ಹಿಟ್ಟು ತಿಗಣೆ, ಹೇನು, ಮೈಟ್ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಬಹಳ ತ್ರಾಸದಾಯಕ.
ನಿಯಂತ್ರಣ ಹೇಗೆ?: ಮೈಟ್ ತೊಂದರೆ ಪ್ರಾರಂಭವಾದಾಗ ಅದರ ನಿವಾರಣೆ ಸುಲಭ. ಅಡಿಕೆ ಎಲೆಗಳಿಗೆ ಮೈಟ್ ತೊಂದರೆ ಹಿಂದಿನಿಂದಲೂ ಇತ್ತು. ಬಹಳ ಹಿಂದಿನಿಂದಲೂ ಈ ಕೀಟ ಸಮಸ್ಯೆ ಉಂಟಾದಾಗ ಅದಕ್ಕೆ ನೀರಿನಲ್ಲಿ ಕರಗುವ ಗಂಧಕವನ್ನು ೧ ಲೀ ನೀರಿಗೆ ೨.೫-೩.೦ ಗ್ರಾಂನಂತೆ ಮಿಶ್ರಣ ಮಾಡಿ ಎಲೆ ಅಡಿ ಭಾಗ ಪೂರ್ತಿ ಒದ್ದೆಯಾಗುವಂತೆ ಸಿಂಪರಣೆ ಮಾಡಿದರೆ ಮೈಟ್ ಕಾಟ ನಿವಾರಣೆ ಆಗುತ್ತಿತ್ತು. ಈಗಲೂ ಇದು ಪರಿಣಾಮಕಾರಿಯೇ ಆಗಿದೆ. ಇದನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಚ್ ತಿಂಗಳಲ್ಲಿ ಸಿಂಪಡಿಸಿದರೂ ಯಾವ ತೊಂದರೆಯೂ ಇರುವುದಿಲ್ಲ. ಇದು ಪ್ರಭಲ ವಿಷಕಾರೀ ಕೀಟ ನಿಯಂತ್ರಕವೂ ಅಲ್ಲ.
ಕೀಟನಾಶಕಗಳಲ್ಲಿ ಬೇರೆ ಬೇರೆ ಕಂಪೆನಿಯ ಬೇರೆ ಬೇರೆ ತಯಾರಿಕೆಗಳನ್ನು ಮೈಟ್ ಗಳ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಇತ್ತೀಚೆಗೆ ಹೊಸ ತಲೆಮಾರಿನ(next generation)(ಹಳೆಯ ಬಹುಬಗೆಯ ಕೀಟಗಳನ್ನು ಹಾಗೂ ಪರಿಸರಕ್ಕೆ ಹಾನಿ ಮಾಡುವ ಗುಣವನ್ನು ಹೊಂದಿದ ಕೀಟನಾಶಕಗಳ ಬದಲಿಗೆ ಪರಿಚಯಿಸಲ್ಪಟ್ಟ ಹೊಸ ಕೀಟನಾಶಕಗಳು, ಇವು ಹಸುರು, ನೀಲಿ ಬಣ್ಣದ ಮಾರ್ಕ್ ಹೊಂದಿರುತ್ತವೆ. ಕಡಿಮೆ ಹಾನಿಯ ಗುಣ ಪಡೆದಿರುತ್ತವೆ) ಕೀಟನಾಶಕಗಳೂ ಬಂದಿದ್ದು, ಎಲ್ಲವೂ ಹಸುರು ಮಾರ್ಕ್ ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇವುಗಳನ್ನು ಸಿಂಪಡಿಸಿ ನಿಯಂತ್ರಣ ಮಾಡಬಹುದು. ಬಾಧಿಸಿದ ಎಲೆಗಳು ಹರಿತ್ತು ಕಳೆದುಕೊಂಡಿದ್ದರೆ ಅದು ಸರಿಯಾಗಲಾರದು. ಬಾಧಿಸದ ಎಲೆಗಳು ಸುರಕ್ಷಿತವಾಗಿರುತ್ತವೆ.
ಬೇಸಾಯ ಕ್ರಮದಿಂದ ಹತೋಟಿ: ರೈತರು ಯವುದೇ ಬೆಳೆ ಬೆಳೆಯುವಾಗ ಸಸ್ಯಗಳಿಗೆ ಬೇಕಾದ ಪ್ರಮಾಣದ ಗೊಬ್ಬರವನ್ನು ಕೊಡಬೇಕು. ಗೊಬ್ಬರ ಕೊಡುವಾಗ ಅಸಮತೋಲನ ಉಂಟಾಗಬಾರದು. ಗಂಧಕ, ಕ್ಯಾಲ್ಸಿಯಂ, ಮೆಗ್ನೀಶಿಯಂ ಸತು ಮುಂತಾದ ಪೋಷಕಗಳು ಸಸ್ಯಗಳಿಗೆ ಬೇಕಾಗುತ್ತದೆ. ಇನ್ನು ಪೂರೈಕೆ ಮಾಡುವುದನ್ನು ಅಬ್ಯಾಸ ಮಾಡಬೇಕು. ಗಂಧಕ ಎಂಬ ಪೋಷಕ ಇಂತಹ ಕೀಟಗಳ ನಿವಾರಣೆಯಲ್ಲಿ ಸಹಕಾರಿ. ಇದನ್ನು ಬೇರೆ ಬೇರೆ ಗೊಬ್ಬರಗಳ ಮೂಲಕ ಕೊಡುವುದು ಅಗತ್ಯ. (ಮೆಗ್ನೀಶಿಯಂ ಸಲ್ಫೇಟ್, ಸತುವಿನ ಸಲ್ಫೇಟ್ ೨೦:೨೦:೦:೧೩ ಇವುಗಳಲ್ಲಿ ಗಂಧಕದ ಅಂಶ ಇರುತ್ತದೆ. ಇದನ್ನು ವರ್ಷಕ್ಕೊಮ್ಮೆ ಕೊಡುವುದರಿಂದ ಕೀಟಗಳ ಹಾನಿ ಕಡಿಮೆಯಾಗುತ್ತದೆ.
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ