ಅಡಿಕೆ ಬೆಳೆ ಆರೈಕೆ ಬಹು ಸುಲಭ

ಕೋಳಿ ಗೊಬ್ಬರ, ಕುರಿ ಗೊಬ್ಬರ, ರಾಸಾಯನಿಕ ಗೊಬ್ಬರ ಎಲ್ಲವನ್ನು ಹಾಕುತ್ತೇವೆ, ಆದರೆ ಅತೀ ಉತ್ತಮ ಇಳುವರಿ ಇಲ್ಲ, ಎನ್ನುವವರ ಕೃಷಿಕರ ಧ್ವನಿ ಹೆಚ್ಚಿದೆ. ಈ ಕುರಿತಾಗಿ ಕೃಷಿ ತಜ್ಞರ ಸಲಹೆ ಕೇಳಿದರೆ, ಮಣ್ಣು ಪರಿಕ್ಷೆ ಮಾಡಿಸಿದ್ದಿರಾ?, ಬೇರು ಹುಳು ಕಾಟ ಇದೆಯಾ? ತೋಟದ ಬಸಿ ಕಾಲುವೆ ವ್ಯವಸ್ಥೆ ಹೇಗಿದೆ? ಹೀಗೆ ಇನ್ನು ಹಲವು ಪ್ರಶ್ನೆಗಳ ಕೇಳುವದು ಸಹಜ. ಜಾನುವಾರು ಸ್ಲರಿ, ಜೀವಾಮೃತ, ಕೊಟ್ಟಿಗೆ ಗೊಬ್ಬರ, ಏರೆ ಹುಳು ಗೊಬ್ಬರದಂತಹ ಅಡಿಕೆ ತೋಟಗಳಿಗೆ ಆರೈಕೆಗೆ ವರದಾನ ಎನ್ನುವ ಲೇಖನಗಳು ಪತ್ರಿಕೆಗಳಲ್ಲಿ ಸಾಕಷ್ಟು ಬಂದಿವೆ. ಆದರೆ ಅವೆಲ್ಲವೂ ಅಯಾ ಪರಿಸರ, ಹಾಗೂ ಅನುಕೂಲಕ್ಕೆ ಹೊಂದಿಕೊಂಡಿದೆ. ಸಾರ್ವತ್ರಿಕವಾಗಿ ಕೃಷಿ ಕ್ಷೇತ್ರಕ್ಕೆ ಇದೇ ಸರಿ ಎಂತ ಹೇಳಲಾಗದು. ಈ ಚರ್ಚೆ ಇಲ್ಲಿಗೆ ನಿಲ್ಲಿಸೊಣ. ಮುಂದೇನು?
ಅಡಿಕೆ ಮತ್ತು ಕಾಳುಮೆಣಸಿನ ಬಳ್ಳಿಗಳು ಸೋಂಪಾಗಿರುವದು ನಮ್ಮ ಸನಿಹದ ತೋಟದಲ್ಲಿ ಕಂಡುಬಂತು. ಅದೇ ವಿಶೇಷ. ಏಲ್ಲಿದೆ? ಶಿರಸಿ ತಾಲೂಕು ಹುಳಗೋಳದ ಶ್ರೀಪಾದ ಹೆಗಡೆಯವರ ತೋಟ ಮಾದರಿಯಾಗಿದೆ. ಶಿರಸಿಯಿಂದ ಯಲ್ಲಾಪುರ ರಸ್ತೆಗುಂಟ ಸಹಸ್ರಲಿಂಗ ಎನ್ನುವ ಪ್ರವಾಸಿತಾಣಕ್ಕೆ ಹೊಗುವಾಗ ಇವರ ತೋಟ ಕಣ್ಣಿಗೆ ರಾಚುತ್ತದೆ. ಈ ಕುರಿತಾಗಿ ಅವರ ಮಾತುಗಳು ಇಲ್ಲಿದೆ.
“೭ ಎಕರೆ ಅಡಿಕೆ ತೋಟ ೫ ಭಾಗದಲ್ಲಿ ಹಂಚಿಕೊಡಿದೆ. ನಮ್ಮ ಹಿಂದಿನ ತಲೆಮಾರಿನಿಂದ ಇರುವ ಕ್ಷೇತ್ರ. ಅದನ್ನು ನನ್ನ ತಿಳುವಳಿಕೆ ಮೇಲೆ ಆರೈಕೆ ಮಾಡುತ್ತಿದ್ದೆ. ಮುಖ್ಯವಾಗಿ ಹೊರಗಿನಿಂದ ಟ್ರಕ್‌ಗಟ್ಟಲೆ ಖರೀದಿಸುವ ಸೊಪ್ಪು ಮಿಶ್ರಿತ ಸೆಗಣಿ ಗೊಬ್ಬರ, ಕುರಿ ಗೊಬ್ಬರ, ಮನೆಯ ಕೊಟ್ಟಗೆ ಗೊಬ್ಬರ, ಚಾಲಿ ಸಿಪ್ಪೆ ಗೊಬ್ಬರ, ಇತ್ಯಾದಿಗಳು ಬೇರೆ ರೀತಿಯಲ್ಲಿ ಬಳಕೆಯಲ್ಲಿತ್ತು. ಈ ಅವಧಿಯಲ್ಲಿ ಅಷ್ಟಾಗಿ ಸೊಗಸಾಗಿ ನಮ್ಮ ತೋಟ ಕಾಣಲಿಲ್ಲ. ಈ ಎಲ್ಲದರ ಬಗ್ಗೆ ಖರ್ಚು ಬಹಳ ಆಗುತ್ತಿತ್ತು.”
“ಅಡಿಕೆ ತೋಟದ ಆರೈಕೆಯಲ್ಲಿ ಕೃಷಿ ಪತ್ರಿಕೆ, ಕೆಲವರ ಅನಿಸಿಕೆ, ಕೃಷಿ ತಜ್ಞರ ಮಾತನ್ನು ಆಲಿಸುತ್ತಿದ್ದೆ. ಆದರೆ ಈ ಎಲ್ಲಾ ಮಾರ್ಗದರ್ಶನಗಳು, ರೈತರ ಪರಸ್ಪರ ಅನುಭವಗಳು ೧೦೦% ಫಲ ಶ್ರುತಿ ಸಿಕ್ಕಿರಲಿಲ್ಲ. ಈ ಹಿಂದೆ ಬಳಕೆಯಲ್ಲಿ ಪಾರಂಪರಿಕವಾಗಿ ಇದ್ದ ಆರೈಕೆಯನ್ನು ಪೂರ್ಣ ಬಿಡಲು ಆಗುತ್ತಿರಲಿಲ್ಲ. ಈ ದ್ವಂದದಲ್ಲಿ ಇರುವಾಗ, ಸಾವಯವ ಗೊಬ್ಬರಗಳ ಅಭ್ಬರದ ಪ್ರಚಾರ ಮನೆ, ಮನೆಗೆ ಬರಲು ಆರಂಭಿಸಿದವು. ಆದರೆ ರೂ.೭ ರಿಂದ ೧೦ ರವರೆಗೆ ಇತ್ತು. ಆಗ ಬಂತು ಹೊಸ ಆಲೋಚನೆ. ಏನೆಂದರೆ, ಗೊಬ್ಬರ ತಯಾರಿಕಾ ಮೂಲಕ್ಕೆ ವಿಚಾರಿಸಿದೆ. ಅದೇ ಈಗ ಸಿಕ್ಕ ಸಿಹಿ ಅನಿಸಿಕೆ. ಏನು?” ಎಂಬುದನ್ನು ಈಗ ಹೇಳುತ್ತೇನೆ.
“ಜಮಖಂಡಿ ತಾಲೂಕಿನ ಸಕ್ಕರೆ ಕಾರ್ಖಾನೆಯ ಸಂಪರ್ಕದಿಂದ ಕಡಿಮೆ ದರದ ಗೊಬ್ಬರ ಸಿಕ್ಕಿದೆ. ಸಕ್ಕರೆ ಕಾರ್ಖಾನೆಗಳಲ್ಲಿ, ಕಬ್ಬಿನ ಹಾಲು ಕುದಿಯುವಾಗ ತೇಲುವ ಜೊಂಡು. ಸಣ್ಣ ಕಸ, ಹೊರಬರುವ ರಾಡಿಯಿಂದ ಕೂಡಿರುವುದೇ ಮಡ್ ಆಗಿರುತ್ತದೆ. ಇದರದ್ದೇ ಆದ ದೊಡ್ಡ ರಾಶಿಯೇ ಇರುತ್ತದೆ. ಈ ಮಡ್ ೪, ೬, ತಿಂಗಳು ಕಳಿತಮೇಲೆ ಕಪ್ಪು ಗೊಬ್ಬರವಾಗಿ ಪರಿವರ್ತನೆ ಆಗುತ್ತದೆ. ಕೆಲ ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ, ಸತುವು, ಮ್ಯಾಂಗನೀಸ್ ಇತ್ಯಾದಿಗಳು ಸೇರಿರುವ ಗೊಬ್ಬರ ಇದಾಗಿದೆ. ಪ್ರತ್ಯೇಕ ಸೇರಿಸುವ ಯಾವ ಪ್ರಯತ್ನ ಇಲ್ಲಿ ನಾನು ಮಾಡಿಲ್ಲ. ಪ್ರತಿ ಚೀಲ ೫೦ ಕಿಲೋ ಇದೆ. ಪ್ರತಿ ಕಿಲೋ ದರ ಸುಮಾರು ರೂ ೫-೭ ಇದೆ. ಅದಕ್ಕಾಗಿ ಇದನ್ನು ಆಯ್ಕೆ ಮಾಡಿದೆ. ಇದರ ಬಳಕೆ ವಿತರಣೆ ಬಹು ಸುಲಭ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಪ್ರತಿ ಅಡಿಕೆ ಮರಕ್ಕೆ ೪ ಕಿಲೊದಂತೆ ಕಳೆದ ೬ ವರ್ಷದಿಂದ ಉಣ್ಣಿಸಲಾಗಿದೆ. ಇದಕ್ಕಿಂತ ಕಡಿಮೆ ಉಣ್ಣಿಸಿದರೆ ಫಲ ಅಷ್ಟಕಷ್ಟೇ. ಮರದಿಂದ ೨ ಪಾದದ ದೂರಲ್ಲಿ ಸುತ್ತಲೂ ಹಾಕಬೇಕು. ಗೊಬ್ಬರ ಸ್ವಲ್ಪ ಬಿಸಿಯಾಗಿರುತ್ತದೆ. ತೊಂದರೆ ಇಲ್ಲ. ಈ ಕೆಲಸ ಪುರೈಸಿದ ಮೇಲೆ ಎನ್‌ಪಿಕೆ ಮಿಕ್ಸ್ (೧೪:೬:೨೧) ಮಾರುಕಟ್ಟೆಯಲ್ಲಿ ಲಭ್ಯ ಇರುವ ರಾಸಾಯನಿಕ ಗೊಬ್ಬರವನ್ನು ೬೦೦ ಗ್ರಾಮ್ ವರ್ಷಕ್ಕೊಮ್ಮೆ ಪ್ರತಿ ಅಡಿಕೆ ಮರಕ್ಕೆ ನೀಡಲಾಗುತ್ತದೆ. ಇವಷ್ಟನ್ನು ಬಿಟ್ಟು ಬೇರೆ ಏನೂ ಹಾಕಿಲ್ಲ. ಒಣ ದೆರಕು, ಒಣ ಹುಲ್ಲು (ಕರಡ) ಕೆಲ ಭಾಗಕ್ಕೆ ಹೊದಿಸುತ್ತೇನೆ. ಈ ಎಲ್ಲಾ ಗೊಬ್ಬರದ ಆರೈಕೆಗೆ ಪ್ರತಿ ಮರಕ್ಕೆ ರೂ ೨೭ ವೆಚ್ಚವಾಗಿದೆ. ಹೊಸದಾಗಿ ಮಣ್ಣು, ಡ್ರೈನೇಜ್ ಯೋಜನೆ ಅಳವಡಿಕೆ, ಇತ್ಯಾದಿಗಳ ಖರ್ಚು ಇಲ್ಲಿ ಸೇರಿಲ್ಲ. ಈಗ ಮೆಣಸು ಮತ್ತು ಅಡಿಕೆ ಬೆಳೆ ಚೆನ್ನಾಗಿ ಇದೆ. ಇಳುವರಿ ಸ್ವಲ್ಪ ಹೆಚ್ಚಿದೆ. ಈಗ ಸುಮಾರು ಚಾಲಿ ಅಡಿಕೆ ೧೨-೧೪ ಕ್ವಿಂಟಲ್ ಲಭಿಸುತ್ತಿದೆ. ಮೆಣಸಿನ ಬಳ್ಳಿಗಳು ಸಹ ಆರೋಗ್ಯವಾಗಿವೆ. ಅಡಿಕೆ ಮತ್ತು ಕಾಳು ಮೆಣಸಿಗೆ ವರ್ಷಕ್ಕೊಮ್ಮೆ ೨ ಬಾರಿ ತುತ್ತ ಮತ್ತು ಸುಣ್ಣದ ದ್ರಾವಣ ಸಿಂಪಡನೆ ಸಾಗಿದೆ. ಈ ವರ್ಷ ಮಳೆಗಾಲ ಅತೀ ಅಗಿದ್ದರೂ ಮೆಣಸಿನ ಬಳ್ಳಿಗಳು ೪% ಸತ್ತಿದೆ.
ಈ ಹಿಂದೆ ಒಟ್ಟು ೭ ಎಕರೆ ಅಡಿಕೆ ತೋಟಕ್ಕೆ ಗೊಬ್ಬರ ಒದಗಿಸುವುದೇ ಒಂದು ಗೊಂದಲದ ಗೂಡಾಗಿತ್ತು. ಸಕಾಲಕ್ಕೆ ಟ್ರಕ್, ಸೆಗಣಿ ಗೊಬ್ಬರ ಸಿಗುತ್ತಿಲ್ಲವಾಗಿತ್ತು. ಇತ್ತೀಚಿಗೆ ಹೊರಗಿನಿಂದ ಖರೀದಿಸುವ ಸೆಗಣಿ ಗೊಬ್ಬರದ ಗುಣ ಮಟ್ಟ ಸಹ ಅತೀ ಕೀಳಾಗಿತ್ತು. ಸಾಗಾಟದ ಕೂಲಿ ಕೊರತೆ ಉಂಟಾಗಿತ್ತು. ಮಾರುಕಟ್ಟೆಯಲ್ಲಿ ಸಿಗುವ ಸಾವಯವ ಗೊಬ್ಬರದ ಪ್ರಚಾರ ಎಂದು ತಿಳಿದುಕೊಳ್ಳಬೇಡಿ. ಇದೇ ತರಹದ ಹಲವು ಕಂಪನಿಯ ಸಾವಯವ ಗೊಬ್ಬರ ಮಾರುಕಟ್ಟೆಯಲ್ಲಿ ಲಭ್ಯ. ಆದರೆ, ನಮ್ಮ ಸುತ್ತಲಿನವರ ರೈತ ಮಿತ್ರರ ಅನಿಸಿಕೆ ಪಡೆದು ಇದರ ಬಳಕೆ ಮುಂದುವರೆಯುವುದು ಸೂಕ್ತ. ಈ ತರಹದ ಬೇರೆ ಬೇರೆ ಕಂಪನಿಯವರ ಸಾವಯವ ಗೊಬ್ಬರದ ಬಳಕೆಯನ್ನು ನಿಮ್ಮ ತೋಟದ ಕೆಲ ಭಾಗಗಳಿಗೆ ಬಳಸಿ ನೋಡಿ, ಯಾವುದು ಹೆಚ್ಚು ಇಳುವರಿ, ಆರೋಗ್ಯ ನೀಡುವ ಕುರಿತಾಗಿ ಖಾತ್ರಿ ಮಾಡಿಕೊಳ್ಳಿರಿ.
ಇತ್ತೀಚಿಗೆ ಈ ಕುರಿತಾಗಿ ಸಕ್ಕರೆ ಫ್ಯಾಕ್ಟರಿ ಮಡ್ ಒಂದಿಷ್ಟನ್ನು ಪ್ರಯೋಗಾಲಯಗಳಿಗೆ ಕಳಿಸಲಾಗಿದೆ. ಇದರಲ್ಲಿ ಏನಿದೆ? ಎಂಬುದು ಬಹಳ ಮುಖ್ಯ. ಈಗಾಗಲೇ ಮಲೆನಾಡಿನಲ್ಲಿ ಇದರ ಬಳಕೆ ಸರಿಯಾಗಿದೆ. ಆದಾಗ್ಯೂ ಇನ್ನೂ ಹೆಚ್ಚಿನ ವೈಜ್ಞಾನಿಕ ದೃಷ್ಠಿಕೋನದ ಚರ್ಚೆ ಆಗಬೇಕಿದೆ. ಈ ಶುಗರ್ ಫ್ಯಾಕ್ಟರಿ ಮಡ್ ರಾಜ್ಯದ ಎಲ್ಲೆಡೆ ಲಭ್ಯ. ನೇರವಾಗಿ ಸಕ್ಕರೆ ಫ್ಯಾಕ್ಟರಿ ಮಡ್ ಹಾಗೂ ನನ್ನ ನೆರೆಯ ಪ್ರಗತಿಪರ ರೈರು ಹಾಗೂ ಇತರರು ಸೇರಿ ತರಿಸಲು ಮುಂದಾಗಿದ್ದೇವೆ. ಬಳಕೆಯಿಂದಾಗುವ ಸಿಹಿ-ಕಹಿ ಅನಿಸಿಕೆ ಕೆಲದಿನಗಳಲ್ಲಿ ಗೊತ್ತಾಗಲಿದೆ.
ಕುರಿ ಗೊಬ್ಬರ, ಟ್ರಕ್, ಟ್ರಾಕ್ಟರ್ ಮೂಲಕ ತರುವ ಸ್ಥಳಿಯರ ಸೊಪ್ಪು, ಅಥವಾ ಸೆಗಣಿ ಗೊಬ್ಬರಗಳನ್ನು ಒದಗಿಸಿದಾಗ ಅಡಿಕೆ ತೋಟದ ಇಳುವರಿ ಗಮನಾರ್ಹವಾಗಿ ಹೆಚಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ ಅಂಶ. ಕಾರಣ ಇವುಗಳ, ಗುಣಮಟ್ಟ ಕುಸಿತವಾಗುತ್ತಲೇ ಇದೆ. ಪ್ರತಿ ಮನೆಯಲ್ಲೂ ಜಾನುವಾರು ಸಾಕಣಿಕೆ ಕಡಿಮೆ ಆಗುತ್ತಲಿದೆ. ಇದರಿಂದಾಗಿ ಬದಲಿ ಸಾವಯವ ಗೊಬ್ಬರ ಬಳಕೆ ಅನಿವಾರ್ಯ. ಅತೀ ಕಡಿಮೆ ಶ್ರಮದಲ್ಲಿ ಹೆಚ್ಚಿನ ಇಳುವರಿ, ಆರೋಗ್ಯವಾಗಿರುವ ಅಡಿಕೆ ಮತ್ತು ಕಾಳುಮೆಣಸಿನ ಬಳ್ಳಿ ನೋಡಿ, ಅನುಕರಣೆ ಮಾಡಬಹುದಾಗಿದೆ.
ಚಿತ್ರ - ಮಾಹಿತಿ: ರಾಧಾಕೃಷ್ಣ ಹೊಳ್ಳ