ಅಡಿಕೆ ಮಿಡಿ ಉದುರುವಿಕೆಗೆ ಪರಿಹಾರವೇನು?

ಅಡಿಕೆ ಮಿಡಿ ಉದುರುವಿಕೆಗೆ ಪರಿಹಾರವೇನು?

ಇತ್ತೀಚಿನ ದಿನಗಳಲ್ಲಿ ಅಡಿಕೆಯ ಧಾರಣೆ ಒಂದಿಷ್ಟು ಉತ್ತಮವಾಗಿಯೇ ಇದೆ. ಈ ಕಾರಣದಿಂದ ಅಡಿಕೆಯನ್ನು ಬೆಳೆಸಲು, ಇದ್ದ ಬೆಳೆಯನ್ನು ಉಳಿಸಲು ಹಲವಾರು ಮಂದಿ ಕೃಷಿಕರು ಮನಸ್ಸು ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೊಳೆರೋಗಕ್ಕೆ ತುತ್ತಾಗುವ ಅಡಿಕೆ, ಬೇಸಿಗೆಯಲ್ಲಿ ಮಿಡಿ (ಎಳೇ ಕಾಯಿಗಳು) ಉದುರುವ ಸಮಸ್ಯೆಗೆ ಗುರಿಯಾಗುತ್ತದೆ. ಅಡಿಕೆ ಬೆಳೆಗಾರರ ಅತೀ ದೊಡ್ದ ಸಮಸ್ಯೆ ಎಂದರೆ ತಮ್ಮ ಅಡಿಕೆ ತೋಟದ ಮರದ ಬುಡದಲ್ಲಿ ರಾಶಿ ರಾಶಿ ಮಿಡಿ ಕಾಯಿಗಳು ಉದುರಿ ಬೀಳುವುದು. ಇದನ್ನು  ನೋಡಿದಾಕ್ಷಣ  ಯಾಕೆ ಹೀಗಾಗುತ್ತದೆ, ಹೀಗಾದರೆ ಮುಂದಿನ ಫಸಲು? ಎಂಬ ಪ್ರಶ್ನೆ ಮೂಡುತ್ತದೆ.

ಒಂದು ಅಡಿಕೆ ಉದುರಿದರೂ ರೂ. ೫-೧೦ ನಷ್ಟ ಎಂಬಂತಿದೆ ಪರಿಸ್ಥಿತಿ. ಇದರ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿದ್ದಾರೆ. ಒಂಡೆಡೆ ಬಿಸಿಲಿನ ಧಗೆ, ಬೆಳೆಗಾರರಿಗೆ ತಮ್ಮ ಮರಗಳಿಗೆ ಎಷ್ಟು ನೀರುಣಿಸಿದರೂ ತೃಪ್ತಿ ಎಂದಾಗುವುದಿಲ್ಲ. ನೀರು ಕಡಿಮೆಯಾಗಿ ಮಿಳ್ಳೆ ಉದುರುತ್ತ್ತಿದೆ ಎಂಬುದೇ ಹೆಚ್ಚಿನ ಬೆಳೆಗಾಗರರ ಅಭಿಪ್ರಾಯ. ನೀರಿನ ಕೊರೆತೆಯಿಂದಾಗಿ ಮಿಡಿ ಕಾಯಿ ಉದುರುವುದಲ್ಲ. ನೀರಿನ ಕೊರತೆಯಾದರೆ  ಮರದ ಲಕ್ಷಣದಲ್ಲಿ ಗೊತ್ತಾಗುತದೆ. ಗರಿಗಳು ಜೋತು ಬೀಳುತ್ತವೆ. ಮರ ಕಳೆ ಗುಂದಿರುತ್ತದೆ. ಇಷ್ಟಕ್ಕೂ ಒಂದು ಅಡಿಕೆ ಮರಕ್ಕೆ ದಿನಕ್ಕೆ ಬೇಕಾಗುವ ನೀರು ೨೦ ಲೀ. ಮಾತ್ರ. ಒಂದು ವೇಳೆ ಮೆಣಸಿನ ಬಳ್ಳಿ ಇದ್ದರೆ  ೪೦ ಲೀ. ಬೇಕಾಗಬಹುದು. ಇದಕ್ಕಿಂತ ಕಡಿಮೆಯಾದರೆ ಮರ ನೀರಿನ ಕೊರತೆ ಅನುಭವಿಸುತ್ತದೆ. ಹವಾಮಾನದ ಕಾರಣದಿಂದ ಮರದಲ್ಲಿ ಮಿಳ್ಳೆ ಉದುರುತ್ತದೆ. ಅಷ್ಟೇ ಅಲ್ಲದೆ ಮರದ ಹಿಂಗಾರದಲ್ಲಿ ಇರುವ ಎಲ್ಲಾ ಮಿಳ್ಳೆಗಳೂ ಉಳಿಯುವ ಸಾಧ್ಯತೆ ತುಂಬಾ ಕಡಿಮೆ. ಮೋಡ ಕವಿದ ವಾತಾವರಣ ಇದ್ದರೆ ಕೀಟಗಳು ವಿಶೇಷವಾಗಿ ಟಿ- ಸೊಳ್ಳೆ ಬಾಧೆ ಉಂಟಾಗುತ್ತದೆ. ಇಂದಿನ ವರ್ಷದ ಅಡಿಕೆ  ತೆಗೆದ ಗೊನೆಯ ಶೇಷಗಳು ಉಳಿದಿದ್ದರೆ, ಅಡಿಕೆ ಇಲ್ಲದೆ ಹೂ ಗೊಂಚಲು ಅಲ್ಲೇ ಒಣಗಿ ಮರಕ್ಕೆ  ಅಂಟಿ ಕೊಂಡಿದ್ದರೆ, ಶಿಲೀಂದ್ರ ರೋಗ ( ಕೋಲೆಟ್ರೋಟ್ರೈಕಂ ಜಾತಿಯವು) ಬರಬಹುದು. ಕಾರಣವನ್ನು ರೈತರೇ ತಮ್ಮ ತೋಟದ ಸ್ಥಿತಿಗತಿ ನೋಡಿ ಪತ್ತೆ ಮಾಡಬೇಕು.

ಈಗ ಉದುರುತ್ತಿರುವ ಎಳೆ ಮಿಡಿ ಕಾಯಿಗಳು ಕೆಲವು ಶಿಲೀಂದ್ರ ಸೋಂಕಿನಿಂದಾಗಿರಬಹುದು, ಮತ್ತೆ ಕೆಲವು ಕೀಟ ಹಾವಳಿಯಿಂದ ಉದುರಿರಬಹುದು, ಇನ್ನು ಕೆಲವು ಸರಿಯಾಗಿ ಬೆಳವಣಿಗೆ ಹೊಂದದೆ ಉದುರಿದ್ದಿರಬಹುದು. ಇದು ಇಂತದ್ದೇ ತೊಂದರೆ ಎಂದು ನಿಖರವಾಗಿ ಹೇಳಲು ಬೀಳುವ ಮಿಡಿ ಕಾಯಿಗಳನ್ನು ತಕ್ಷಣವೇ ಪರೀಕ್ಷೆಗೊಳಪಡಿಸಬೇಕಾಗುತ್ತದೆ ಅಥವಾ ಸಮೀಪದಲ್ಲಿ ಯಾರಾದರೂ /ಯಾವುದಾದರೂ ಸಂಶೋಧನಾ ಕೇಂದ್ರ, ವಿಜ್ಞಾನಿಗಳು ಇದ್ದಲ್ಲಿ ತೋರಿಸಿ ತಿಳಿಯಿರಿ.  

ಉದುರಿದ ಮಿಡಿ ಕಾಯಿಗಳನ್ನು  ಸೂಕ್ಷ್ಮವಾಗಿ ಗಮನಿಸಿ, ಇದು ಯಾವ ತೊಂದರೆ ಇರಬಹುದು ಎಂದು ಅಂದಾಜು ಮಾಡಬಹುದು. ಉದುರಿದ ಮಿಡಿ ಕಾಯಿಗಳ ತೊಟ್ಟನ್ನು ಸೂಕ್ಷ್ಮವಾಗಿ ಗಮನಿಸಿ. ಅನುಕೂಲವಿದ್ದರೆ ಮಸೂರದ ಸಹಾಯದಿಂದ (ಮ್ಯಾಗ್ನಿಪೈಯಿಂಗ್ ಗ್ಲಾಸ್) ನಲ್ಲಿ ಪರೀಕ್ಷಿಸಿ. ಆಗ ಅದರ ತೊಟ್ಟಿನ ಭಾಗದಲ್ಲಿ ಯಾವುದಾದರೂ ಹೇನುಗಳು ಇರುವುದು ಕಂಡು ಬಂದರೆ, ಅದು ರಸ ಹೀರುವ ಹೇನುಗಳಿಂದ ಆದ ತೊಂದರೆ ಇರಬಹುದು. ಅದೇ ರೀತಿಯಲ್ಲಿ ತೊಟ್ಟನ್ನು ತೆಗೆದು ತೆಗೆದು ನೋಡಿದಾಗ ಏನಾದರೂ ಸೂಜಿಯಿಂದ ಚುಚ್ಚಿದ ಗುರುತುಗಳು ಕಂಡು ಬಂದರೆ ಅದೂ ಹೇನು ಇಲ್ಲವೇ ನುಶಿಯಿಂದಾದ ತೊಂದರೆ. ಇನ್ನೂ ಕೆಲವು ಕಾಯಿಗಳ ತೊಟ್ಟು ತೆಗೆದು ನೋಡಿದಾಗ ಸಲ್ಪ ದೊಡ್ದ ಗಾತ್ರದ ಗಾಯಗಳು ಕಾಣಸಿಗುತ್ತವೆ. ಇದೂ ಸಹ ಒಂದು ರಸ ಹೀರುವ ಕೀಟದ ತೊಂದರೆ. ಯಾವಾಗಲೂ ಕೀಟಗಳು ಎಳೆಯದಾದ ಗಟ್ಟಿಯಿಲ್ಲದ ಭಾಗವನ್ನು ಚುಚ್ಚಿ ಹಾನಿ ಮಾಡುತ್ತವೆ. ಆದ ಕಾರಣ ತೊಟ್ಟಿನ ಭಾಗವನ್ನು  ಪರೀಕ್ಷಿಸಬೇಕು. ಶಿಲೀಂದ್ರ ಸೋಂಕನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವಾಗಬಹುದು. ಆದರೂ ಒಣಗಿ ಜೋತಾಡುವ ಸಿಂಗಾರಗಳು ಅಧಿಕ ಪ್ರಮಾಣದಲ್ಲಿದ್ದರೆ ಶಿಲೀಂದ್ರ ರೋಗದ ಬಗ್ಗೆ ಸಂಶಯ ಪಡಬಹುದು.

ಎಲ್ಲಾ ಅಡಿಕೆಯ ಮಿಡಿ ಉದುರುವುದಕ್ಕೆ ಕೀಟ, ಶಿಲೀಂದ್ರಗಳೇ ಕಾರಣವಲ್ಲ. ಕೆಲವೊಮ್ಮೆ ಪರಾಗಸ್ಪರ್ಶ ಕ್ರಿಯೆಯು ಸಮರ್ಪಕವಾಗಿ ನಡೆಯದೆ ಉದುರುವುದಿದೆ. ಗಾಳಿ ಮತು ಕೀಟಗಳಿಂದ ಪರಾಗಸ್ಪರ್ಶ ಹೊಂದುವ ಅಡಿಕೆಗೆ ವಾತಾವರಣದ ಅನುಕೂಲವೂ ಅಗತ್ಯ. ಅದು ಲಭ್ಯವಾಗದೇ ಉದುರುವುದು ಎಲ್ಲಕ್ಕಿಂತ ಹೆಚ್ಚು ಇರುತ್ತದೆ. ಉದುರಿದ ಅಡಿಕೆಯ ತೊಟ್ಟಿನ ಭಾಗದಲ್ಲಿ ಬೆಂದಂತಹ ಚಿನ್ಹೆ ಕಂಡು ಬಂದರೆ ಇದು ಶಿಲೀಂದ್ರದಿಂದ ಉಂಟಾಗುವ ಸಮಸ್ಯೆ. ಯಾವಾಗಲೂ ಮಿಡಿ ಕಾಯಿ ಉದುರಿದ ತಕ್ಷಣವೇ ಅದನ್ನು ಈ ರೀತಿ ಪರೀಕ್ಷಿಸಬೇಕು. ತಡವಾದರೆ ಬಿದ್ದಲ್ಲೇ ಅದಕ್ಕೆ ಬೇರೆ ಶಿಲೀಂದ್ರ ಸೋಂಕು ತಗಲಬಹುದು.

ಕೆಲವು ಉದುರಿದ ಅಡಿಕೆಯನ್ನು ಒಡೆದು ನೋಡಿದರೆ ಒಳಗೆ ಬಂಜೆ ಅಡಿಕೆಯ ತರಹದ ತಿರುಳು ಕಾಣುತ್ತದೆ. ಇಂಥಹ ಅಡಿಕೆಯಲ್ಲಿ ತಿರುಳು ಸರಿಯಾಗಿ ಕೂಡಿರುವುದಿಲ್ಲ. ಅಪಕ್ವ ಬೆಳವಣಿಗೆಯ ಕಾಯಿಗಳು  ಸಹಜವಾಗಿ ಅರ್ಧದಲ್ಲೇ ಉದುರುತ್ತವೆ.

ಅಡಿಕೆ ಮರಗಳಿಗೆ ಬೆಳೆ ಸಂರಕ್ಷಣೆಗಾಗಿ ಬೇಸಿಗೆಯ ಆರ್ದ್ರ ವಾತಾವರಣ ಇರುವಾಗ ಹೂ ಗೊಂಚಲಿಗೆ ಒಮ್ಮೆ ಹೇನು, ನುಶಿ ನಾಶಕವನ್ನು ಸಿಂಪರಣೆ ಮಾಡುವುದು ಸೂಕ್ತ. ಇದಲ್ಲದೇ ಇನ್ನೊಮ್ಮೆ ಮ್ಯಾಂಕೋಜೆಬ್ ಝಡ್ ೭೮  ಅಥವಾ ಪ್ರೊಪೆನೆಬ್ ಅನ್ನು ಸಿಂಪರಣೆ ಮಾಡಬೇಕು. ಆದರೆ ಇವೆರಡನ್ನೂ ಮಿಶ್ರಣ ಮಾಡಿ ಸಿಂಪರಣೆ ಮಾಡಕೂಡದು. ಹೇನು, ನುಶಿಗಳಿಗೆ ಬೇಸಿಗೆ ಕಾಲದಲ್ಲಿ  ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳು  ಬಳಸಲ್ಪಡುವ ಕಾರಣ ಅದರ ಕೊರತೆಯಾಗಿಯೂ ಮಿಡಿಗಳು ಉದುರಬಹುದು. ಸೂಕ್ಷ್ಮ ಪೋಷಕಾಂಶದ ಕೊರತೆಯಿಂದಲೂ ಉದುರಬಹುದು. ಈ ಸಮಯದಲ್ಲಿ  ಒಮ್ಮೆ ಗೊಬ್ಬರ ಕೊಡುವುದು ಉತ್ತಮ. ಅಡಿಕೆ ತೋಟಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರುಣಿಸಬೇಡಿ. ಮರವನ್ನು ಸ್ವಚ್ಚವಾಗಿ ಇಡಿ. ಗಾಳಿಯಾಡುತ್ತಾ ಇದ್ದು ಬಿಸಿಲು, ಗಾಳಿ ಆಡುತ್ತಿದ್ದರೆ  ಕಾಯಿ ಕಟ್ಟುವಿಕೆಗೆ ಒಳ್ಳೆಯದು.

ನಿಯಮಿತವಾಗಿ ನಿಮ್ಮ ಅಡಿಕೆ ತೋಟದ ಪರಿಶೀಲನೆ ಮಾಡಿ, ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಅಡಿಕೆಯ ಮಿಡಿಗಳು ಉದುರಿದ್ದರೆ ಸಮಸ್ಯೆ ಇದೆ ಎಂದು ಅರಿತು ಅದರ ಪರಿಹಾರದ ಬಗ್ಗೆ ಚಿಂತಿಸಿ. ಸಮಸ್ಯೆ ಮೇಲೆ ಹೇಳಿದ ಪರಾಗಸ್ಪರ್ಶ ಆಗದಿರುವಿಕೆ, ಶಿಲೀಂದ್ರ ರೋಗ, ಟಿ ಸೊಳ್ಳೆ ಸಮಸ್ಯೆ, ಇತರೆ ಕೀಟಗಳ ಸಮಸ್ಯೆ ಯಾವುದೂ ಇರಬಹುದು. ಸಮಸ್ಯೆಯ ಮೂಲವನ್ನು ಕಂಡು ಹಿಡಿದು ಅಥವಾ ಬಲ್ಲವರಿಂದ (ವಿಜ್ಞಾನಿಗಳು/ಅನುಭವಸ್ಥ ಕೃಷಿಕರು) ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಂಡು ನಿಮ್ಮ ಬೆಳೆಯ ಇಳುವರಿಯನ್ನು ಹೆಚ್ಚಿಸಿಕೊಳ್ಳುವುದು ಉತ್ತಮ.

ಚಿತ್ರಗಳು: ರಾಧಾಕೃಷ್ಣ ಹೊಳ್ಳ