ಅಡಿಗರ ಕಾವ್ಯದಲ್ಲಿ ವಾಸ್ತವತೆ

ಅಡಿಗರ ಕಾವ್ಯದಲ್ಲಿ ವಾಸ್ತವತೆ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ॥ ಅಣ್ಣಮ್ಮ
ಪ್ರಕಾಶಕರು
ಐಬಿಎಚ್ ಪ್ರಕಾಶನ, ೪ನೇ ಬ್ಲಾಕ್, ಜಯನಗರ, ಬೆಂಗಳೂರು-೫೬೦೦೧೧
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೦೪

“ಆರು ತಿಂಗಳ ಕಾಲ ಸತತವಾಗಿ ಮನಸ್ಸನ್ನು ಕೇಂದ್ರೀಕರಿಸಿ, ಅಡಿಗರ ಕವನಗಳನ್ನು ಮನನ ಮಾಡಿಕೊಂಡು, ಅವುಗಳ ಅರ್ಥವಂತಿಕೆಯನ್ನು ಕಂಡುಕೊಳ್ಳುತ್ತ, ಆಲೋಚಿಸಿದ್ದನ್ನು ಸ್ಪಷ್ಟವಾಗುವಂತೆ ಬರೆಯಲಿಕ್ಕೆ ಹಲವು ಬಾರಿ ಪ್ರಯತ್ನಿಸಿ, ಮತ್ತೆ ಮತ್ತೆ ತಿದ್ದುತ್ತ ಈ ಮಹಾಪ್ರಬಂಧವನ್ನು ಸಿದ್ಧ ಪಡಿಸುವುದಕ್ಕೆ ಅಣ್ಣಮ್ಮನವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಇಂಥ ಪರಿಶ್ರಮವನ್ನು ಕಾಲೇಜಿನ ಉಪನ್ಯಾಸಕರು ಜೀವನದಲ್ಲಿ ಒಮ್ಮೆ ತೆಗೆದುಕೊಂಡರೆ, ಅವರು ತೋರಿಸಿದ ಧಾರಣ ಶಕ್ತಿ, ಧೀಮಂತಿಕೆ ಅವರದ್ದಲ್ಲ ಅನ್ನಿಸುವುದು ಸಾಧ್ಯ. ಹಾಗೆ ಅನ್ನಿಸಲಿಕ್ಕೆ ಬಿಡದೆ ಸ್ವಾಧ್ಯಾಯದಲ್ಲಿ ಮುಳುಗಿ ಧ್ಯಾನ, ಮನನ ಮತ್ತು ಧಾರಣದಿಂದ ತಮ್ಮ ವಿಶ್ಲೇಷಣಾ ಶಕ್ತಿಯನ್ನು ಬೆಳೆಸಿಕೊಂಡಾಗ ಅದು ವಿದ್ವತ್ತಾಗಿ ಉಳಿಯುತ್ತದೆ. ಅದು ಪ್ರವಚನಕ್ಕೂ ಶಕ್ತಿಯನ್ನು ಕೊಡುತ್ತದೆ. 

ಕಾವ್ಯಕ್ಕೆ ‘ವಾಸ್ತವದ ರಕ್ತದಾನ' ಮತ್ತು ‘ಮಣ್ಣಿನ ವಾಸನೆ' ಎನ್ನುವ ಪರಿಕಲ್ಪನೆಗಳನ್ನು ಅಡಿಗರು ವಿಮರ್ಶೆಯ ಮಾನದಂಡವಾಗಿಯೂ ಬಳಸಿದರು. ಕಾವ್ಯದಲ್ಲಿ ಅವರು ತೋರಿಸಿದ ವಾಸ್ತವತೆಯ ವ್ಯಾಪ್ತಿಯನ್ನು ಈ ಅಧ್ಯಯನ ತೋರಿಸುತ್ತದೆ. ವಾಸ್ತವತೆಯ ತತ್ವವನ್ನು ಅಡಿಗರ ಕಾವ್ಯದ ಉದಾಹರಣೆಗಳಿಂದ ಸ್ಪಷ್ಟಗೊಳಿಸುವುದು ಅಷ್ಟು ಸುಲಭವಾದ ಕೆಲಸವೇನಲ್ಲ. ಆದರೆ ಡಾ॥ ಅಣ್ಣಮ್ಮನವರ ಅಧ್ಯಯನದಲ್ಲಿ ಅದು ಸಾಧ್ಯವಾಗಿದೆ. ಇಲ್ಲಿಯವರೆಗೂ ವಿಶ್ಲೇಷಣೆಗೆ ಸಿಗದಿದ್ದ ‘ಕೃಷ್ಣನ ಕೊಳಲು' ಅಂತಹ ಕವಿತೆಯ ವಿವರಣೆ ಮೆಚ್ಚುವಂತಿದೆ. ಅಡಿಗರ ದಲಿತಪರ ಚಿಂತನೆ, ಅವರು ಕೊಟ್ಟ ಬಂಡಾಯದ ವ್ಯಾಖ್ಯಾನ ಮತ್ತು ಅವರ ಕಾವ್ಯದಲ್ಲಿನ ವೈಯುಕ್ತಿಕ ವಾಸ್ತವ ಮೊದಲಾದ ಮೌಲಿಕ ವಿಷಯಗಳು ಈ ಪ್ರಬಂಧದಲ್ಲಿ ಗಮನಿಸಬೇಕಾದ ಅಂಶಗಳಾಗಿವೆ.” ಎಂದು ಈ ಪುಸ್ತಕದ ಬೆನ್ನುಡಿಯಲ್ಲಿ ಸಾಹಿತಿ ಸುಮತೀಂದ್ರ ನಾಡಿಗ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರೊ.ಅರವಿಂದ ಮಾಲಗತ್ತಿ ಇವರು ‘ಅಡಿಗರ ಕಾವ್ಯ’ ಬಗ್ಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಪುಸ್ತಕದ ಲೇಖಕಿಯಾಗಿರುವ ಡಾ॥ ಅಣ್ಣಮ್ಮನವರು ತಮ್ಮ ಬರಹದಲ್ಲಿ “ಬೇಂದ್ರೆ, ಕುವೆಂಪು, ಅಡಿಗರಂತಹ ಕವಿಗಳನ್ನು ಅಧ್ಯಯನ ಮಾಡಿದರೆ ಒಂದು ರೀತಿಯಲ್ಲಿ ಪಂಪನಿಂದ ಹಿಡಿದು ಅಡಿಗರವರೆಗಿನ ಕಾವ್ಯ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಆದ್ದರಿಂದ ಕನ್ನಡ ಕಾವ್ಯಕ್ಕೆ ವಾಸ್ತವದ ರಕ್ತದಾನ ಮಾಡಿದ ಗೋಪಾಲಕೃಷ್ಣ ಅಡಿಗರ ಕಾವ್ಯದ ಅಧ್ಯಯನವನ್ನು ನಾನು ಆರಿಸಿಕೊಂಡೆ. ಈ ಅಧ್ಯಯನಕ್ಕೆ ಡಾ.ಸುಮತೀಂದ್ರ ನಾಡಿಗರು ಮಾರ್ಗದರ್ಶಕರಾಗಿ ಸಿಕ್ಕಿದ್ದು ಒಂದು ವಿಶೇಷ. ಅವರು ಅಡಿಗರ ಒಡನಾಡಿಯಾಗಿದ್ದವರು. ಅವರಿಂದ ಕಲಿತುಕೊಂಡಿದ್ದರು.” ಎಂದು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. 

ಪುಸ್ತಕದ ಪರಿವಿಡಿಯಲ್ಲಿ ೭ ಅಧ್ಯಾಯಗಳನ್ನು ನೀಡಿದ್ದಾರೆ. ಅದರಲ್ಲಿ ಅಡಿಗರ ಕಾವ್ಯದ ಬಗ್ಗೆ ಅಧ್ಯಯನದ ವಿಷಯ, ಸ್ವರೂಪ, ಉದ್ದೇಶ ಮತ್ತು ವ್ಯಾಪ್ತಿ ಬಗ್ಗೆ ವಿವರಣೆ ನೀಡಿದ್ದಾರೆ. ಕೊನೆಯಲ್ಲಿ ಆಕರ ಗ್ರಂಥಗಳ ಬಗ್ಗೆಯೂ ಮಾಹಿತಿ ಇದೆ. ಸುಮಾರು ೨೬೫ ಪುಟಗಳ ಪುಸ್ತಕವನ್ನು ಲೇಖಕಿ ತಮ್ಮ ಪತಿಯವರಾದ ಡಾ॥ ಆಂಜನಪ್ಪ ಅವರಿಗೆ ಅರ್ಪಿಸಿದ್ದಾರೆ. 

 

Comments

Submitted by addoor Mon, 06/14/2021 - 13:21

ಗೋಪಾಲಕೃಷ್ಣ ಅಡಿಗರ ಕವನಗಳನ್ನು ಅರ್ಥ ಮಾಡಿಕೊಳ್ಳಲು ಒಂದಷ್ಟು ತಯಾರಿ ಬೇಕಾಗುತ್ತದೆ. ಇದು ಸಾಧ್ಯವಿಲ್ಲದ ಕೆಲವರು, ಅಡಿಗರ ಎತ್ತರಕ್ಕೆ ಏರಲಾಗದೆ, ಅವರನ್ನು ತೀವ್ರವಾಗಿ ಟೀಕಿಸಿದರು. ಆದರೆ ಅಡಿಗರು ಇನ್ನಷ್ಟು ಕವನಗಳನ್ನು ಬರೆಯುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಎತ್ತರೆತ್ತರಕ್ಕೆ ಏರುತ್ತಲೇ ಹೋದರು. ಟೀಕಿಸಿದವರೆಲ್ಲ ಅಡಿಗರ ಎದುರು ಸಣ್ಣವರಾಗುತ್ತಲೇ ಹೋದರು. ಈಗ ಉಳಿದಿರುವುದು ಅಡಿಗರ ಕವನಗಳ ಹಿರಿಮೆ. ಆ ಟೀಕೆಗಳೆಲ್ಲ ಕಾಲನ ಓಟದಲ್ಲಿ ಮಣ್ಣುಪಾಲಾಗಿ ಹೋಗಿವೆ.