ಅಡ್ವಾಣಿಯವರ ಅಗ್ನಿ ಪರೀಕ್ಷೆ

ಅಡ್ವಾಣಿಯವರ ಅಗ್ನಿ ಪರೀಕ್ಷೆ

ಬರಹ

ಅಡ್ವಾಣಿಯವರ ಅಗ್ನಿ ಪರೀಕ್ಷೆ

ಕೆಲವು ದಿನಗಳ ಹಿಂದಷ್ಟೇ ಬಿ.ಜೆ.ಪಿ. ನಾಯಕ ಎಲ್.ಕೆ.ಅಡ್ವಾಣಿಯವರ ಆತ್ಮಕಥೆ 'ಮೈ ಕಂಟ್ರಿ,ಮೈ ಲೈಫ್' ('ನನ್ನ ದೇಶ, ನನ್ನ ಬದುಕು') ದೆಹಲಿಯಲ್ಲಿ ಬಿಡುಗಡೆಯಾಯಿತು. ಬಿಡುಗಡೆ ಸಮಾರಂಭದಲ್ಲಿ ಅಡ್ವಾಣಿಯವರ ನಿಡುಗಾಲದ ಗೆಳೆಯರೂ, ಭಾರತದ ರಾಜಕಾರಣದ ಭೀಷ್ಮ ಪಿತಾಮಹರೂ ಆದ ಅಟಲ್ ಬಿಹಾರಿ ವಾಜಪೇಯಿವರ ಅನಾರೋಗ್ಯ ಕಾರಣದ ಗೈರು ಹಾಜರಿ ಎದ್ದು ಕಾಣುವಂತಿತ್ತು ಎಂದು ಇಂಗ್ಲಿಷ್ ಪತ್ರಿಕೆಯೊಂದು ಬರೆದಿದೆ. ಸುಮ್ಮನೆ ನೋಡಿದರೆ ಇದೊಂದು ಸಾಮಾನ್ಯ ಸುದ್ದಿ. ಆದರೆ ಇದರಲ್ಲಿ ನನಗೆ ಎದ್ದು ಕಂಡದ್ದು, ಆ ಪತ್ರಕರ್ತ ಮಾಡಿದ್ದ ಭಾರತದ ರಾಜಕಾರಣದ ಭೀಷ್ಮ ಪಿತಾಮಹ ಎಂಬ ವಾಜಪೇಯಿಯವರ ವರ್ಣನೆ. ಅದು ನನ್ನನ್ನು, ನಿಜವಾಗಿಯೂ ವಾಜಪೇಯಿಯವರು ಭಾರತದ ರಾಜಕಾರಣದ ಭೀಷ್ಮ ಪಿತಾಮಹರೇ ಎಂದು ಯೋಚಿಸುವಂತೆ ಮಾಡಿತು.

ನಿಜ, ವಾಜಪೇಯಿಯವರು ನಮ್ಮ ರಾಷ್ಟ್ರ ರಾಜಕಾರಣದಲ್ಲಿನ ಅತ್ಯಂತ ಹಿರಿಯಲ್ಲೊಬ್ಬರು. ಸಜ್ಜನರು ಕೂಡಾ. ಆದರೆ ರಾಷ್ಟ್ರ ರಾಜಕಾರಣದ ಭೀಷ್ಮಪಿತಾಮಹರು ಎನ್ನಿಸಿಕೊಳ್ಳಲು, ಅದಕ್ಕೆ ಅವರಿಂದ ಸಂದ ಕೊಡುಗೆಯಾದರೂ ಏನು? ಆಕರ್ಷಕವಾದ ಆಂಗಿಕ ಭಾವ ಭಂಗಿಗಳಲ್ಲಿ ಹೊಮ್ಮುವ ಅಲಂಕಾರಿಕ ಮಾತುಗಾರಿಕೆಯ ಮೂಲಕ ಸೃಷ್ಟಿಸುವ ರಾಜಕೀಯ ಮೋಡಿಯ ಹೊರತಾಗಿ ಅವರು ನಮ್ಮ ರಾಜಕಾರಣಕ್ಕೆ ಯಾವ ಹೊಸ ಚೈತನ್ಯ ಒದಗಿಸಿದ್ದಾರೆಂದು ಅವರನ್ನು 'ಭೀಷ್ಮ ಪಿತಾಮಹ'ರೆಂದು ಕರೆಯಬೇಕು? ಸ್ಪಷ್ಟವಾಗಿ ಯಾವುದೇ ನಿರ್ದಿಷ್ಟ ರಾಜಕೀಯ ಚಿಂತನೆಯನ್ನಾಗಲೀ ಪ್ರತಿಪಾದಿಸದ ಮತ್ತು ಯಾವುದೇ ರಾಜಕೀಯ ಹೋರಾಟದಲ್ಲಿ ಭಾಗವಹಿಸದ ವಾಜಪೇಯಿ, ವಾದದ ಎರಡೂ ಕಡೆ ಅರ್ಥ ಹೊರಡುವಂತಹ ಪೌರಾಣಿಕ ಭಾಷೆಯಲ್ಲಿ ಮಾತನಾಡುತ್ತಾ, ತಮ್ಮ ಭೋಳೆ ರಾಜಕಾರಣವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದವರು. ಆದರೆ ಇಂತಹ ಯಶಸ್ಸು ಕೂಡಾ ತಾತ್ಕಾಲಿಕ ಮಾತ್ರ ಎಂಬುದನ್ನು 2004ರ ಚುನಾವಣೆ ತೋರಿಸಿತು!

ಹಾಗೆ ನೋಡಿದರೆ ಇಂದು ರಾಷ್ಟ್ರ ರಾಜಕಾರಣದ ಭೀಷ್ಮ ಪಿತಾಮಹ ಎನ್ನಿಸಿಕೊಳ್ಳಲು ಪೈಪೋಟಿ ನಡೆಸಬಲ್ಲವರು ಬಹುಶಃ ಈ ಮುವ್ವರು: ಜ್ಯೋತಿ ಬಸು, ಜಾರ್ಜ್ ಫ‌ರ್ನಾಂಡೀಸ್ ಹಾಗೂ ಎಲ್.ಕೆ.ಅಡ್ವಾಣಿ. ತಮ್ಮ ರಾಜಕೀಯ ಜೀವನದ ಅಂತಿಮ ಘಟ್ಟದಲ್ಲಿರುವ ಈ ಮುವ್ವರೂ ಹಿರಿಯರಷ್ಟೇ ಅಲ್ಲ, ಹೋರಾಟದ ಮೂಸೆಯಲ್ಲಿ ಪುಟಗೊಂಡು ಬೆಳೆದವರು. ನಮ್ಮ ರಾಜಕೀಯ ಅಭಿಪ್ರಾಯದ ಮೇರೆಗೆ ಈ ಹಿರಿಯರ ಹೋರಾಟದ ರಾಜಕಾರಣದ ರೀತಿ ನೀತಿಗಳನ್ನು ನಾವು ಒಪ್ಪಬಹುದು. ಒಪ್ಪದೇ ಇರಬಹುದು; ಆದರೆ ಅವರು ತಮ್ಮ ಆ ಹೋರಾಟದ ರಾಜಕಾರಣದ ಮೂಲಕ ಭಾರತದ ರಾಜಕಾರಣದಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವವರು ಎಂಬುದನ್ನು ಅಲ್ಲಗೆಳಯಲಾಗದು. ಆರಂಭದಲ್ಲಿ ಒಂದು ಕಡೆ ಕಾಂಗ್ರೆಸ್ಸಿಗರ, ಮತ್ತೊಂದು ಕಡೆ ನಕ್ಸಲೈಟರ ರಾಜಕೀಯ ದಾಳಿಗೆ ಸಿಕ್ಕಿಯೂ ತಮ್ಮ ಕಾರ್ಮಿಕ ಸಂಘಟನೆಯ ಮೇಲಿನ ಹಿಡಿತವನ್ನು ಬಿಟ್ಟುಕೊಡದೆ; ಸತತ ಐದು ಅವಧಿಗಳ ಕಾಲ ತಮ್ಮ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷವನ್ನು ತಮ್ಮ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಭಾರಿ ಬಹುಮತದೊಂದಿಗೆ ಗೆಲ್ಲಿಸಿಕೊಂಡಿದ್ದಲ್ಲದೆ, ತಾವೂ ಅಷ್ಟೂ ಅವಧಿಯದ್ದಕ್ಕೂ ಮುಖ್ಯಮಂತ್ರಿಯಾಗಿ ಮುಂದುವರೆಯುವ (ನಂತರವೂ ತಮ್ಮ ಪಕ್ಷ ಮತ್ತೆರಡು ಅವಧಿಗೂ ಭಾರಿ ಬಹುಮತದೊಂದಿಗೆ ಚುನಾಯಿತವಾಗುವಂತಹ) ರಾಜಕೀಯ ದಕ್ಷತೆ ಹಾಗೂ ಕೌಶಲ್ಯ ತೋರಿದ ಜ್ಯೋತಿ ಬಸು ರಾಷ್ಟ್ರ ರಾಜಕಾರಣದಲ್ಲಿ ಪಾಲ್ಗೊಂಡಿದ್ದು ಕಡಿಮೆ. 1997ರಲ್ಲಿ ಪ್ರಧಾನಿ ಮಂತ್ರಿಯಾಗುವ ಅವಕಾಶವಿದ್ದರೂ, ಅವರ ಪಕ್ಷದ ಈಗ ಅವ್ಯವಾಹಾರಿಕವೆಂದು ತೋರುವ ರಾಜಕೀಯ ನಿರ್ಧಾರಕ್ಕ್ಕೆ ಬಲಿಯಾಗಿ ಆ ಅವಕಾಶ ತಪ್ಪಿಸಿಕೊಂಡ ಹಾಗೂ ಆ ಬಗ್ಗೆ ನಂತರ ಯಾವುದೇ ವಿಷಾದ ತೋರದ ರಾಜಕೀಯ ಮುತ್ಸದ್ದಿ ಇವರು. ಹೀಗಾಗಿ, ಉಳಿದಿಬ್ಬರಿಗೆ ಹೋಲಿಸಿದರೆ ಇವರು ರಾಷ್ಟ್ರ ರಾಜಕಾರಣದಲ್ಲಿ ಸೀಮಿತ ಪಾತ್ರ ವಹಿಸಿದವರು.

ಜಾಜರ್್ ಫರ್ನಾಂಡೀಸ್ ಈ ಮುವ್ವರಲ್ಲಿ ಕಿರಿಯರಾದರೂ, ಹೋರಾಟದ ವಿಷಯದಲ್ಲಿ ಎಲ್ಲರಿಗಿಂತ ಹಿರಿಯರು! ಮಂಗಳೂರು ಮೂಲದವರಾದರೂ, ಮುಂಬೈನಲ್ಲಿ ಕಾರ್ಮಿಕ ನಾಯಕರಾಗಿ ಬೆಳೆದು ಬಿಹಾರದಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಂಡ ಇವರು ತಮ್ಮ ವಿಶಿಷ್ಟ ಹೋರಾಟಗಳ ಮೂಲಕವೇ ಬಹು ಬೇಗ ರಾಷ್ಟ್ರೀಯ ರಾಜಕಾರಣದ ಮುಂಚೂಣಿಯಲ್ಲಿ ಸ್ಥಾನ ಪಡೆದುಕೊಂಡರು. ಮುಂಬೈನಲ್ಲಿ ಎಪ್ಪತ್ತರ ದಶಕದ ಹೊತ್ತಿಗೇ ಎಸ್.ಕೆ.ಪಾಟೀಲರಂತಹ ಘಟಾನುಘಟಿಯನ್ನು ಸೋಲಿಸಿ ಮುಂಬೈ ರಾಜಕಾರಣದ ಸ್ವರೂಪವನ್ನೇ ಬದಲಿಸಿ 'ದೈತ್ಯಾರಿ'(Gaint killer) ಎನ್ನಿಸಿಕೊಂಡ ಜಾರ್ಜ್ ಸಂಘಟಿಸಿದ ರೈಲ್ವೇ ಮುಷ್ಕರ, ಅವರ ನಾಯಕತ್ವದ ಗುಣಗಳನ್ನು ಬೆಳಕಿಗೆ ತಂದಿತಲ್ಲದೆ, ದುಡಿಯುವ ವರ್ಗದ ಸಂಕಷ್ಟಗಳ ಬಗೆಗೆ ರಾಷ್ಟ್ರದ ಆತ್ಮಸಾಕ್ಷಿಯನ್ನು ಕೆಣಕುವಂತಿತ್ತು. ನಂತರ ತು‌ರ್ತು ಪರಿಸ್ಥಿತಿ ವಿರುದ್ಧ ಭೂಗತರಾಗಿ ಅವರು ನಡೆಸಿದ - ಬರೋಡಾ ಡೈನಮೈಟ್ ಪ್ರಕರಣವೆಂದೇ ಪ್ರಸಿದ್ಧವಾದ - ಹೋರಾಟ ಅವರನ್ನು ಎಪ್ಪತ್ತರ ದಶಕದ ರಾಜಕೀಯ 'ಹೀರೋ'ನನ್ನಾಗಿ ಮಾಡಿತು. ಹಾಗಾಗಿಯೇ ಅವರು ಬರೋಡಾದ ಸೆರೆಮನೆಯೊಂದರಲ್ಲಿ ಕೈ ಕಾಲುಗಳಿಗೆಲ್ಲ ಸರಪಣಿ ಹಾಕಿಸಿಕೊಂಡ ಕೈದಿಯಾಗಿದ್ದುಕೊಂಡೇ ಬಿಹಾರದ ಮುಝಾಫರಪುರದಿಂದ ಲೋಕಸಭೆಗೆ ಸ್ಪರ್ಧಿಸಿ ನಾಲ್ಕು ಲಕ್ಷಗಳಿಗೂ ಅಧಿಕ ಮತಗಳಿಂದ ಜಯ ಗಳಿಸಲು ಸಾಧ್ಯವಾದದ್ದು. ನಂತರ ಕೈಗಾರಿಕಾ ಮಂತ್ರಿಯಾಗಿ ಜಿಲ್ಲಾ ಕೈಗಾರಿಕಾ ಕೇಂದ್ರಗಳಿಗೆ ಚಾಲನೆ ನೀಡಿದ್ದು ಮತ್ತು 'ಕೋಕಾ ಕೋಲಾ'ವನ್ನು ದೇಶದಿಂದ ಓಡಿಸಿದ್ದು ಇವರ ಆಡಳಿತ ಸಾಧನೆ.

ಆದರೆ ಎಂಭತ್ತರ ದಶಕದ ಹೊತ್ತಿಗೆ ಫರ್ನಾಂಡೀಸರ ರಾಜಕಾರಣ ಅಂದಾದುಂದಿಯಾಗಿ ಹೋದದ್ದು ರಾಷ್ಟ್ರ ರಾಜಕಾರಣದ ಒಂದು ದೊಡ್ಡ ದುರಂತ. ಲೋಹಿಯಾ ಶಿಷ್ಯರಾದರೂ, ತುರ್ತು ಪರಿಸ್ಥಿತಿಯ ನಂತರ ಪಕ್ಷ ಕಳೆದುಕೊಂಡ ಸಮಾಜವಾದಿಯಾಗಿ ಯಾವುದೇ ರಾಜಕೀಯ ಸ್ಪಷ್ಟತೆ ಇಲ್ಲದವರಂತೆ ಇವರು ಯಾವುದಾವುದೋ ಪಕ್ಷಗಳ ಜಗುಲಿಗಳ ಮೇಲೆ ಮಲಗಿ; ಕೊನೆಗೆ ಪ್ರಧಾನ ಮಂತ್ರಿಯಾಗುವ ಆಸೆಯೊಂದಿಗೆ ತಮ್ಮ ಕೊನೆಯ ಪಕ್ಷ ಸಂಯುಕ್ತ ಜನತಾ ದಳವನ್ನು ಬಿ.ಜೆ.ಪಿ. ನೇತೃತ್ವದ ಮೈತ್ರಿ ಕೂಟಕ್ಕೆ ಸೇರಿಸುವ ಒತ್ತಡಕ್ಕೆ ಸಿಕ್ಕಿ, ಈಗ ರಾಜಕೀಯವಾಗಿ ನಿರ್ನಾಮವಾಗುವ ಹಂತ ತಲುಪಿದ್ದಾರೆ. ಒಂದು ರೀತಿಯಲ್ಲಿ ಇವರು ಲೋಹಿಯೋತ್ತರ ಸಮಾಜವಾದಿ ಚಳುವಳಿ ತನ್ನ ಮೂಲ ನೆಲೆ - ಸೆಲೆಗಳೆರಡನ್ನೂ ಕಳೆದುಕೊಂಡ ಚರಿತ್ರೆಯ ದುರಂತ ನಾಯಕ. ಇಂದು ವಿವಿಧ ಟಿ.ವಿ.ವಾಹಿನಿಗಳ ಸಂದರ್ಶನಗಳಲ್ಲಿ ಜಾರ್ಜ್ ಅನಾಥರಾದವರಂತೆ, ಸ್ವಯಂಮರುಕದ ತಳ ಮುಟ್ಟಿದವರಂತೆ, ರಾಜಕೀಯ ದಿಗ್ಭ್ರಾಂತಿಗೆ ಒಳಗಾದವರಂತೆ, ದೈಹಿಕ ಅನಾರೋಗ್ಯದ ಅಂಚು ಮುಟ್ಟಿರುವ ಆತಂಕದಲ್ಲಿರುವವರಂತೆ, ಅಸಹಾಯಕವಾಗಿ ಒಂದೊಂದೇ ಶಬ್ದವನ್ನು ತೊದಲುತ್ತಾ ಉಚ್ಚರಿಸುವುದನ್ನು ನೋಡಿದಾಗ ಇವರ ಕೆಚ್ಚು ಮತ್ತು ಸಾಹಸಮಯ ರಾಜಕೀಯ ಜೀವನವನ್ನು ಬಲ್ಲವರ ಕಣ್ಣಲ್ಲಿ ನೀರಾಡುತ್ತದೆ. ಜಾ‌ರ್ಜ್ ಸಂಪೂರ್ಣ ಮಂಕಾಗಿದ್ದಾರೆ, ಅವರನ್ನು ಬೆಳೆಸಿದ ಸಮಾಜವಾದಿ ಚಳುವಳಿಯಂತೆಯೇ...

ಇನ್ನು ಉಳಿದವರು ಅಡ್ವಾಣಿಯವರು. ರಾಷ್ಟ್ರ ವಿಭಜನೆಯ ಸಂದರ್ಭದಲ್ಲಿ ಕರಾಚಿಯಿಂದ ಪಾಕಿಸ್ತಾನ್ ನಿರಾಶ್ರಿತರಾಗಿ ದೆಹಲಿಗೆ ಬಂದ ಇವರು, ಆರ್.ಎಸ್.ಎಸ್. ಸ್ವಯಂಸೇವಕರಾಗಿ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದ್ದು ಸಹಜವೇ ಆಗಿದೆ. ಅಂದಿನಿಂದ ಇಂದಿನವರೆಗೂ ತಮ್ಮ ರಾಜಕೀಯ ನೆಲೆಯನ್ನಾಗಲೀ, ನಂಬಿಕೆಯನ್ನಾಗಲೀ ಬದಲಾಯಿಸಿಕೊಳ್ಳದ (1977ರ ಜನತಾ ಪಕ್ಷದಲ್ಲಿದ್ದ ಮೂರು ವರ್ಷಗಳ ಮಾರುವೇಷದ ಹೊರತಾಗಿ!) ಅಡ್ವಾಣಿ, ದೆಹಲಿ ನಗರಸಭೆ ಅಧ್ಯಕ್ಷ ಸ್ಥಾನದಿಂದ ಇಂದು ಛಾಯಾ ಪ್ರಧಾನಿ ಮಂತ್ರಿ (Prime Minister in waiting)ಯಾಗಿ ಮೂಡುವವರೆಗೂ ಅವರು ತಾವು ನಂಬಿದ್ದನ್ನು ಸ್ಪಷ್ಟವಾಗಿ ಹೇಳಿಕೊಂಡು ಬಂದವರೇ. ಯಾವುದೇ ಆಮಿಷಕ್ಕೊಳಗಾಗಿ ಅತ್ತಿತ್ತ ಸರಿದವರಲ್ಲ. ಹಾಗಾಗಿಯೇ ಅವರು ತಾವು ಹಿಡಿದು ಹೊರಟ ರಾಜಕೀಯ ಹಾದಿಯ ಅಂತಿಮ ಹಂತ ತಲುಪಿದ್ದಾರೆ. ಅವರ ಅಥವಾ ಅವರ ಪಕ್ಷದ ರಾಜಕೀಯ ಚಿಂತನೆಯ ಮಿತಿ ಹಾಗೂ ಸಂಕುಚಿತತೆಗಳಿಂದಾಗಿ ಅವರು ತಮ್ಮ ರಾಜಕೀಯ ಬದುಕಿನ ಅಂತಿಮ ಗುರಿ ತಲುಪದೇ ಹೋಗಬಹುದು. ಆದರೆ ತಾವು ನಂಬಿದ ಒಂದು ರಾಜಕೀಯ ಚಿಂತನೆಯನ್ನು - ಎಲ್ಲ ಕಡೆಯಿಂದ ವಿರೋಧ, ದೂಷಣೆಗಳು ಹಾರಿ ಬರುತ್ತಿದ್ದ ಕಾಲದಲ್ಲೂ ವಿಚಲಿತರಾಗದೇ - ಹೇಗೆ ಶಿಸ್ತು, ಶ್ರದ್ಧೆ ಹಾಗೂ ಬದ್ಧತೆಗಳಿಂದ ಬೆಳಸಬಹುದು ಎಂಬುದಕ್ಕೆ ಅವರು ದೊಡ್ಡ ಉದಾಹರಣೆಯಾಗಿದ್ದಾರೆ. ಹಾಗೆ ನೋಡಿದರೆ ವಾಜಪೇಯಿಯವರಿಗಿಂತಲೂ ದೊಡ್ಡ ಉದಾಹರಣೆ. ವಾಜಪೇಯಿ ಪ್ರಧಾನಿಯಾಗಿದ್ದಾಗ; ಅಡ್ವಾಣಿಯವರನ್ನು ನಂಬಬಹುದು, ಇವರನ್ನು ನಂಬುವಂತಿಲ್ಲ ಎಂದು ಎಷ್ಟು ಬಾರಿ ಎಷ್ಟು ಜನಕ್ಕೆ ಅನ್ನಿಸಿಲ್ಲ!

ಆದರೆ ಅಡ್ವಾಣಿಯವರು ಹಿಡಿದ ಹಾದಿಯೇ ತಪ್ಪಾಗಿದೆ. ತಮ್ಮ ಪಕ್ಷ ವಿ.ಪಿ.ಸಿಂಗ್ ಅವರ ಸಾಮಾಜಿಕ ನ್ಯಾಯದ ರಾಜಕಾರಣದ ಎದುರು ಅಪ್ರಸ್ತುತವಾಗಿ ಬಿಡುವ ಅಪಾಯಕ್ಕೆ ಸಿಕ್ಕಿಕೊಂಡಾಗ ಸಾಂಸ್ಕೃತಿಕ ರಾಷ್ಟ್ರೀಯತೆಯ ರಾಜಕಾರಣ ಶುರು ಮಾಡಿ ಅವರು ಬಾಬ್ರಿ ಮಸೀದಿ ನಾಶಕ್ಕೆ ಕಾರಣರಾದರು. ಈ ದುರಂತಕ್ಕೆ - ಈಗ ಹಿಂದಿರುಗಿ ನೋಡಿದಾಗ - ಅವರಷ್ಟೇ ಅಲ್ಲದೆ, ಕಾಂಗ್ರೆಸ್ಸೇತರ ಸೆಕ್ಯುಲರ್ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳ ಅಲ್ಪಕಾಲಿಕ ರಾಜಕಾರಣವೂ (ಲೋಕಸಭೆಯಲ್ಲಿ ಎರಡೇ ಎರಡು ಸ್ಥಾನಗಳೊಂದಿಗೆ ಒದ್ದಾಡುತ್ತಿದ್ದ ಅವರ ಪಕ್ಷ ಇವರ ಮೈತ್ರಿಯಲ್ಲಿ ಎಂಭತ್ತು ಸ್ಥಾನಗಳಿಗೆ ಏರಿತು!) ಹಾಗೂ ಕಾಂಗ್ರೆಸ್ಸಿನ (ರಾಜೀವ್ ಗಾಂಧಿ ಹಾಗೂ ಪಿ.ವಿ.ನರಸಿಂಹರಾಯರ ಕಾಲದ) ಸಮಯ ಸಾಧಕ ಕೋಮು ರಾಜಕಾರಣವೂ ಕಾರಣವಾಗಿದ್ದುದೂ ಸ್ಪಷ್ಟವಾಗಿ ಕಾಣುತ್ತದೆ. ಅದೇನೇ ಇರಲಿ, ಅಡ್ವಾಣಿಯವರು ಆ ದುರಂತದ ದಿನವನ್ನು ತಮ್ಮ ರಾಜಕೀಯ ಜೀವನದ ಅತ್ಯಂತ ಕೆಟ್ಟ ದಿನ ಎಂದು ವರ್ಣಿಸಿದಾಗ, ಅದು ಪ್ರಾಮಾಣಿಕ ಹೇಳಿಕೆ ಇದ್ದರೂ ಇರಬಹುದು ಎಂದು ನಂಬಿದವರನ್ನು ಗೌರವಿಸಲಾದರೂ ಅವರು ತಮ್ಮ ಕೈಮೀರಿ ಹೋದ ಈ ಘಟನೆಗೆ ಕಾರಣರಾದ ವಿ.ಎಚ್.ಪಿ. ಹಾಗೂ ಬಜರಂಗ ದಳಗಳಿಂದ ತಮ್ಮನ್ನು ದೂರವಿರಿಸಕೊಳ್ಳಬೇಕಿತ್ತು. ಆದರೆ ಅವರ ರಾಜಕೀಯ ಮಹಾತ್ವಾಕಾಂಕ್ಷೆಯೇ ಅದು ಸಾಧ್ಯವಾಗದಂತೆ ತಡೆದು ಅವರನ್ನು ಮತ್ತೆ ನರೇಂದ್ರ ಮೋದಿಯ ನರಹಂತಕ ರಾಜಕಾರಣವನ್ನು ಮನ್ನಿಸುವಂತೆ ಪ್ರೇರೇಪಿಸಿತು... ಹುಲಿ ಏರಿರುವ ಅಡ್ವಾಣಿ ಈಗ ಅದರಿಂದ ಇಳಿದು ಮನುಷ್ಯರಂತೆ ನಡೆಯಲಾರದವರಾಗಿದ್ದಾರೆ!

ಈ ಅಸಹಾಯಕ ಸ್ಥಿತಿಯಿಂದ ಅಡ್ವಾಣಿಯವರನ್ನು ಪಾರು ಮಾಡಲೆಂಬಂತೆಯೋ ಏನೋ, ಅವರ ಆತ್ಮ ಚರಿತ್ರೆ ಪುಸ್ತಕದ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾಂಗ್ರೆಸ್ಸೊಂದರ ಹೊರತಾಗಿ ಸಕಲ ರಾಜಕೀಯ ಪಕ್ಷಗಳ ನಾಯಕರು, ಲೇಖಕರು, ಬುದ್ಧಿಜೀವಿಗಳು, ಪತ್ರಕರ್ತರು, ಕೈಗಾರಿಕೋದ್ಯಮಿಗಳು, ಸಿನೆಮಾ ನಟ ನಟಿಯರು ಇತ್ಯಾದಿಯಾಗಿ ರಾಜಕೀಯ ಹಾಗೂ ಸಾಂಸ್ಕೃತಿಕ ಲೋಕದ ಮುಖ್ಯರಿಂದ ತುಂಬಿ ತುಳುಕುತ್ತಿದ್ದ ಆ ಸಮಾರಂಭದಲ್ಲಿ ಅವರನ್ನು ಮೃದುವಾದಿಯೆಂದು ಬಿಂಬಿಸುವ ದೊಡ್ಡ ಪ್ರಯತ್ನವೊಂದು ನಡೆಯಿತು. ಆದರೆ ಇಂತಹ ಪ್ರಯತ್ನಗಳಿಂದ ಯಾವುದೇ ಪ್ರಯೋಜನವಿಲ್ಲವೆಂದು ಅವರ ಅಭಿಮಾನಿಗಳು ಆದಷ್ಟು ಬೇಗನೆ ತಿಳಿದರೆ ಒಳ್ಳೆಯದು. ಅಡ್ವಾಣಿ ನಿಜವಾಗಿ ಮೃದುವಾದಿ ಎಂದೆನ್ನಿಸಿಕೊಳ್ಳಬೇಕಾದರೆ, ಮೊದಲು ತಮ್ಮ ಪಕ್ಷವನ್ನು ಮೃದು ಮಾಡಬೇಕಿದೆ. ಕೆಲವು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಜಿನ್ನಾರ ಸಮಾಧಿಯ ಮುಂದೆ ಜಿನ್ನಾರನ್ನು ಮೆಚ್ಚಿ ತಾವು ಆಡಿದ ಮಾತಿನ ಮೂಲಕ ಎತ್ತಿ ಹಿಡಿದ ಕೋಮು ದೃಷ್ಟಿ ಮೀರಿದ ರಾಜಕಾರಣದ ಬಗೆಗಿರುವ ತಮ್ಮ ಬದ್ಧತೆಯನ್ನು ಸಮರ್ಥಿಸುವ ರಾಜಕೀಯ ಧೈರ್ಯ ತೋರಬೇಕಿದೆ. ಮುಖ್ಯವಾಗಿ ಕಾಂಗ್ರೆಸ್ಸಿನ ತಥಾಕಥಿತ ಮುಸ್ಲಿಂ ತುಷ್ಠೀಕರಣದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಭಾರತದಲ್ಲಿರುವರೆಲ್ಲರೂ ಹಿಂದೂಗಳೇ ಎಂಬ ತಮ್ಮ ಪಕ್ಷದ ಮೂಲ ನಂಬಿಕೆಗೊಂದು ರಾಜಕೀಯ ಘನತೆ ಒದಗಿಸುವ ರೀತಿಯಲ್ಲಿ ಎಲ್ಲರನ್ನೂ ನಮ್ಮವರಂತೆಯೇ ನೋಡುವ ಉದಾರ ರಾಜಕಾರಣಕ್ಕೆ ಅವರು ನಾಂದಿ ಹಾಡಬೇಕಿದೆ. ಅಡ್ವಾಣಿಯವರು ರಾಷ್ಟ್ರದ ಪ್ರಧಾನಿಯಾಗಲು ತಮ್ಮ ಜನಪ್ರಿಯತೆಯನ್ನು ಪಣ ಒಡ್ಡಬೇಕಾದದ್ದು ಪಕ್ಷದ ಮುಂದಲ್ಲ, ರಾಷ್ಟ್ರದ ಮುಂದೆ.

ಹಾಗೆ ನೋಡಿದರೆ ಅಡ್ವಾಣಿಯವರ ರಾಜಕೀಯ ಜೀವನದ ಮುಂದೆ ಇಂದಿನ ಕಾಂಗ್ರೆಸ್ಸಿನ ಹೆಚ್ಚೂ ಕಡಿಮೆ ಎಲ್ಲ ನಾಯಕರೂ ಬಚ್ಚಾಗಳೇ! ಅಡ್ವಾಣಿಯವರ ಆತ್ಮ ಚರಿತ್ರೆ ಪುಸ್ತಕದ ಬಿಡುಗಡೆ ಸಮಾರಂಭವನ್ನು ಅವರು ಬಹಿಷ್ಕರಿಸಿದರೆಂಬುದೇ ಅವರ ಅಪ್ರಬುದ್ಧತೆಯನ್ನು ತೋರಿಸುವಂತಿದೆ. ಮೊನ್ನೆ ಕರ್ನಾಟಕದಲ್ಲಿ ರಾಹುಲ್ ಗಾಂಧಿಯೆಂಬ, ಹುಟ್ಟಿನ ಹಿನ್ನೆಲೆಯ ಹೊರತಾಗಿ ಇನ್ನಾವ ರಾಜಕೀಯ ಅರ್ಹತೆಯನ್ನೂ ಈವರೆಗೆ ಪ್ರದರ್ಶಿಸಿರದ ಪಡ್ಡೆ ಹುಡುಗನೊಬ್ಬನ ಬಳಿ ಹಾರ ಹಿಡಿದು ಸುತ್ತುವ, ಅವರ ಗುಣಗಾನ ಮಾಡಲು ತಮ್ಮ ದೇಹದ ಪೀಠ ಭಾಗದ ನರಗಳನ್ನೆಲ್ಲ ಎಳೆದು ಅಬ್ಬರಿಸುವ ಕಾಂಗ್ರೆಸ್ಸಿನ 'ಹಿರಿಯ' ನಾಯಕರನ್ನು ನೋಡಿದರೇ ಇದು ಸ್ಪಷ್ಟವಾಗುತ್ತದೆ. ಹಾಗೇ, ಎಂತಹ ದೊಡ್ಡ ಸ್ವಾತಂತ್ರ್ಯ ಹೋರಾಟಗಾರರಾಗಲೀ ಅಥವಾ ಪಕ್ಷಕ್ಕೆ ತಮ್ಮ ತನು ಮನ ಧನ ತೆತ್ತ ಯಾರೇ ಹಿರಿಯ ನಾಯಕರಾಗಲೀ ಅಲಂಕರಿಸದಿದ್ದಷ್ಟು ಕಾಲ ಸೋನಿಯಾ ಗಾಂಧಿಯವರು ತಮ್ಮ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ; ಅದನ್ನು ಸಂಭ್ರಮದಿಂದ ಆಚರಿಸುವ ಕಾಂಗ್ರೆಸ್ಸಿಗರ ನಿರ್ಲಜ್ಜ ರಾಜಕಾರಣಕ್ಕೆ ಪ್ರತಿಕ್ರಿಯಿಸುವ ಅಗತ್ಯವೇ ಅಡ್ವಾಣಿಯವರಂತಹ ಹಿರಿಯರಿಗೆ ಈಗ ಇಲ್ಲ.

ಆದರೆ ಆಘಾತ - ಸೋಲು - ದೂಷಣೆಗಳೇ ಹೆಚ್ಚಿರುವ ತಮ್ಮ ದೀರ್ಘ ರಾಜಕೀಯ ಜೀವನದ ಮಧ್ಯೆ ತಮ್ಮ ಗೃಹಸ್ಥ ಜೀವನವನ್ನು ಸಿನೆಮಾ - ಸಂಗೀತ - ಸಾಹಿತ್ಯದಂತಹ ಸರಳ ಸಂತೋಷಗಳ ಮೂಲಕ ಜೀವಂತವಾಗಿಟ್ಟುಕೊಂಡು ಎಂಭತ್ತು ವರ್ಷಗಳನ್ನು ಯಶಸ್ವಿಯಾಗಿ ದಾಟಿರುವ ವಯೋವೃದ್ಧ ಅಡ್ವಾಣಿ, ಊರಲ್ಲಿದ್ದೂ ತಮ್ಮ ಆತ್ಮಕತೆ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬರದಿದ್ದ ಸೋನಿಯಾ ಗಾಂಧಿಯವರ ಮನೆಗೆ ಒಂದೆರಡು ದಿನಗಳಲ್ಲೇ ಹೋಳಿ ಹಬ್ಬದ ನೆಪದಲ್ಲಿ ತಾವೇ ಹೋಗಿ ಶುಭಾಶಯ ಹೇಳಿ ಬಂದಿರುವ ಪ್ರಬುದ್ಧ ಮನಸ್ಸಿನ ಅಡ್ವಾಣಿ; ರಾಷ್ಟ್ರದ ವರ್ತಮಾನದ ಸಂದಿಗ್ಧಗಳನ್ನು ನಿವಾರಿಸಿಕೊಳ್ಳಲು ತಮ್ಮ ಪಕ್ಷದ ರಾಜಕೀಯ ಚರಿತ್ರೆಯ ಅಹಂಕಾರದ ಹಂಗುಗಳನ್ನು ಮೀರಬಲ್ಲರೇ? ಅದಕ್ಕಾಗಿ ಅವರು ತಮ್ಮ ಪಕ್ಷವನ್ನು ಸಿದ್ಧಪಡಿಸಬಲ್ಲರೇ? ಅದೇ ಎಲ್ಲ ರಾಜಕಾರಣದ ಆತ್ಯಂತಿಕ ಜಯವೂ ಅಲ್ಲವೇ? ಆ ಅರಿವು, ಆ ಧೈರ್ಯ, ಆ ತ್ಯಾಗ ರಾಷ್ಟ್ರದ ಅತ್ಯಂತ ಹಿರಿಯ ಕ್ರಿಯಾಶೀಲ ರಾಜಕಾರಣಿಯಾದ ಅಡ್ವಾಣಿಯವರಿಗೆ ಸಾಧ್ಯವೇ? ತಮ್ಮ ಬದುಕಿನ ಕೊನೆಯ ಘಳಿಗೆಯ ಈ ಅಗ್ನಿ ಪರೀಕ್ಷೆಯನ್ನು ಅವರು ನಿಜವಾಗಿ ಗೆಲ್ಲಬಲ್ಲರೇ? 'ಮೈ ಕಂಟ್ರಿ, ಮೈ ಲೈಫ್' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಕೆಲವರನ್ನಾದರೂ ಈ ಪ್ರಶ್ನೆಗಳು ಕಾಡಿದ್ದರೆ ಆಶ್ಚರ್ಯವಿಲ್ಲ.

ಅಂದ ಹಾಗೆ: ತಮ್ಮ ಪಿತಾಶ್ರೀಯವರನ್ನೇ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಹೊಂದಿರುವ ಕುಮಾರಸ್ವಾಮಿಯವರು ಇತ್ತೀಚೆಗೆ ತಮ್ಮ ಜೈತ್ರ ಯಾತ್ರೆ ಭಾಷಣಗಳಲ್ಲಿ ರಾಜ್ಯದ ಹಿತ ರಕ್ಷಣೆಗಾಗಿ ಪ್ರಾದೇಶೀಕ ಪಕ್ಷವನ್ನು ಬೆಂಬಲಿಸಿ ಎಂದು ಕರೆ ಕೊಡುತ್ತಿರುವುದರ ಮರ್ಮವಾದರೂ ಏನು? ಇದು, ಚುನಾವಣೆ ಘೋಷಣೆಯಾಗುತ್ತಿದ್ದಂತೆ ತಮ್ಮ ಪಕ್ಷವನ್ನು ಪ್ರಾದೇಶಿಕ ಪಕ್ಷ ಎಂದು ಘೋಷಿಸಿಕೊಂಡು ಜನರನ್ನು ಸೆಳೆಯಲು ನಡೆಸಿರುವ ಸಿದ್ಧತೆಯೇ?

ಅಪ್ಪ-ಮಕ್ಕಳ ರಾಜಕಾರಣದ ಮರ್ಮವನ್ನು ಬಲ್ಲವರಾರು!