ಅಣು ಯುದ್ಧದ ಅಂಚಿನಲ್ಲಿ... (ಭಾಗ ೨)

ಅಣು ಯುದ್ಧದ ಅಂಚಿನಲ್ಲಿ... (ಭಾಗ ೨)

ಏನಿದು ಪರಮಾಣು ಬಾಂಬ್?: ಕಳೆದ ಶತಮಾನದ ಆರಂಭದಲ್ಲಿ ಪರಮಾಣುವಿನ ಮಧ್ಯಭಾಗವಾದ ನ್ಯೂಕ್ಲಿಯಸ್ ನಲ್ಲಿ ಅಪಾರವಾದ ದ್ರವ್ಯವನ್ನು ಪತ್ತೆ ಹಚ್ಚಲಾಯಿತು. ಅದೇ ವೇಳೆಗೆ ಖ್ಯಾತ ವಿಜ್ಞಾನಿ ಐನ್ ಸ್ಟೀನ್, ದ್ರವ್ಯದಿಂದ ಶಕ್ತಿಯನ್ನು ಉತ್ಪಾದಿಸಬಹುದು ಎಂಬುದನ್ನು ತೋರಿಸಿ ಕೊಟ್ಟರು. ಈ ಎರಡು ಕಾರಣಗಳೂ ಪರಮಾಣು ಬಾಂಬ್ ನ ಉಗಮಕ್ಕೆ ನಾಂದಿಯಾಯಿತು.

ಪರಮಾಣು ಶಕ್ತಿಯನ್ನು ಉಪಯೋಗಿಸಿ ಪರಮಾಣು ಬಾಂಬ್ ತಯಾರಿಸಲಾಗುತ್ತದೆ. ಈ ಪರಮಾಣು ಬಾಂಬ್ ಗಳನ್ನು ಸ್ಥೂಲವಾಗಿ ಎರಡು ವಿಧಾನಗಳಲ್ಲಿ ತಯಾರಿಸಲಾಗುತ್ತದೆ.

೧. ವಿದಳನ ಬಾಂಬ್ ಗಳು ೨. ಸಮ್ಮಿಳನ ಬಾಂಬ್ ಗಳು ಅಥವಾ ಹೈಡ್ರೋಜನ್ ಬಾಂಬ್ ಗಳು

ವಿದಳನ ಬಾಂಬ್ ಗಳು: ಇಲ್ಲಿ ದೊಡ್ಡ ಪರಮಾಣುವಿನ ನ್ಯೂಕ್ಲಿಯಸ್ ನ್ನು ನ್ಯೂಟ್ರಾನ್ ಗಳಿಂದ ಹೊಡೆದಾಗ ಅದು ವಿಭಜಿಸಿ ಎರಡು ಚಿಕ್ಕ ನ್ಯೂಕ್ಲಿಯಸ್ ಆಗಿ ಪರಿವರ್ತಿಸಲ್ಪಡುತ್ತದೆ. ಇವುಗಳ ಒಟ್ಟು ರಾಶಿ ದೊಡ್ದ ನ್ಯೂಕ್ಲಿಯಸ್ ನ ರಾಶಿಗಿಂತ ಕಡಿಮೆಯಾಗಿರುತ್ತವೆ. ಇವೆರಡರ ವ್ಯತ್ಯಾಸದ ರಾಶಿ ಅಥವಾ ದ್ರವ್ಯಶಕ್ತಿಯಾಗಿ ಮಾರ್ಪಡುತ್ತದೆ. ಈ ತತ್ವದ ಮೇಲೆ ಪರಮಾಣು ಬಾಂಬ್ ಗಳನ್ನು ತಯಾರಿಸಲಾಗುತ್ತದೆ. ಇಂತಹ ಬಾಂಬ್ ಗಳನ್ನು ಎ - ಬಾಂಬ್ ಗಳು ಎಂದು ಕರೆಯುತ್ತಾರೆ. ಇಂತಹ ವಿದಳನ ಬಾಂಬ್ ಗಳು ೫ ಲಕ್ಷ ಟನ್ ಟ್ರೈನೈಟ್ರೋ ಟಾಲಿನ್ ಸ್ಪೋಟಕ ಸಿಡಿದಾಗ ಉಂಟಾಗುವ ಪರಿಣಾಮಕ್ಕೆ ಸಮನಾಗಿರುತ್ತದೆ. ಇವುಗಳನ್ನು ತಯಾರಿಸಲು ಯುರೇನಿಯಂ, ಪೋಲೋನಿಯಂನಂತಹ ಭಾರವಾದ ಧಾತುಗಳನ್ನು ಬಳಸಲಾಗುತ್ತದೆ. ಈ ವಿದಳನ ಕ್ರಿಯೆಯಲ್ಲಿ ಸರಪಳಿ ಕ್ರಿಯೆ ನಡೆದು ಅಪಾರ ಶಕ್ತಿ ಬಿಡುಗಡೆಯಾಗುತ್ತದೆ.

ಸಮ್ಮಿಳನ ಬಾಂಬ್ ಗಳು ಅಥವಾ ಹೈಡ್ರೋಜನ್ ಬಾಂಬ್ ಗಳು: ಅಪಾರ ಉಷ್ಣಶಕ್ತಿಯ ಸಮ್ಮುಖದಲ್ಲಿ ಎರಡು ಚಿಕ್ಕ ನ್ಯೂಕ್ಲಿಯಸ್ ಗಳನ್ನು ಬೆಸೆದು ದೊಡ್ದ ನ್ಯೂಕ್ಲಿಯಸ್ ಆಗಿ ಪರಿವರ್ತಿಸಬಹುದು. ಈ ಕ್ರಿಯೆಯಲ್ಲೂ ನಷ್ಟವಾಗುವ ದ್ರವ್ಯಶಕ್ತಿಯಾಗಿ ಪರಿವರ್ತಿಸಲ್ಪಡುತ್ತದೆ. ಇಲ್ಲಿ ಹೈಡ್ರೋಜನ್ ನ್ಯೂಕ್ಲಿಯಸ್ ಗಳನ್ನು ಬೆಸೆಯಲಾಗುತ್ತದೆ. ಇದಕ್ಕೆ ಬೇಕಾಗುವ ಅಪಾರ ಉಷ್ಣಶಕ್ತಿಯನ್ನು ವಿದಳನ ಬಾಂಬ್ ಗಳ ಮೂಲಕ ಪಡೆಯಲಾಗುತ್ತದೆ. ಆದ್ದರಿಂದಲೇ ಹೈಡ್ರೋಜನ್ ಬಾಂಬ್ ಗಳು ವಿದಳನ ಬಾಂಬ್ ಗಳಿಗಿಂತಲೂ ಅನೇಕ ಪಟ್ಟು ಶಕ್ತಿಶಾಲಿ. ಈ ಹೈಡ್ರೋಜನ್ ಬಾಂಬುಗಳು ೫೦ ದಶಲಕ್ಷ ಟನ್ ಟಿ ಎನ್ ಟಿ ಸ್ಪೋಟದ ಪರಿಣಾಮವನ್ನು ನೀಡಬಲ್ಲವು. 

ಈ ಪ್ರಪಂಚದಲ್ಲಿ ಇರುವ ಪರಮಾಣು ಬಾಂಬ್ ಗಳೆಷ್ಟು?: ಒಂದು ಅಂದಾಜಿನ ಪ್ರಕಾರ ಇಡೀ ಭೂಮಿಯ ಮೇಲೆ ಇಪ್ಪತ್ತು ಸಾವಿರದಾ ಐದುನೂರಕ್ಕಿಂತಲೂ ಹೆಚ್ಚು ಪರಮಾಣು ಬಾಂಬ್ ಗಳು ಕ್ಷಿಪಣಿಯ ತಲೆಯ ಮೇಲೆ ಹತ್ತಿ ಸಿಡಿಯಲು ಸಜ್ಜಾಗಿ ಕುಳಿತಿವೆ. ಅಮೇರಿಕಾ - ೧೦,೫೦೦, ರಷ್ಯಾ- ೧೦,೦೦೦, ಫ್ರಾನ್ಸ್ - ೪೬೪, ಚೀನಾ - ೪೧೦, ಇಸ್ರೆಲ್ - ೨೦೦, ಇಂಗ್ಲೆಂಡ್ - ೧೮೫, ಭಾರತ - ೬೦, ಪಾಕಿಸ್ತಾನ - ೨೦, ಕೊರಿಯಾ - ೧೦ ಪರಮಾಣು ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿವೆ.

ಪರಮಾಣು ಬಾಂಬ್ ಬಿಡುಗಡೆ ಮಾಡುವ ಶಕ್ತಿ ಎಷ್ಟು? : ಸರಳವಾಗಿ ಹೇಳುವುದಾದರೆ ಹಿರೋಷಿಮಾದ ಮೇಲೆ ಹಾಕಿದ ಪರಮಾಣು ಬಾಂಬ್ ಬಿ-೫೩, ಒಂಬತ್ತು ಮೆಗಾ ಟನ್ ಸಾಮರ್ಥ್ಯದ್ದು. ಇದು ಸುಮಾರು ೧ ಲಕ್ಷದ ೬೬ ಸಾವಿರ ಜನರನ್ನು ಬಲಿ ತೆಗೆದುಕೊಂಡಿತು. ಅಮೇರಿಕಾದ ಬಿ-೮೩, ಈ ಹಿರೋಷಿಮಾ ಬಾಂಬ್ ಗಿಂತ ೬೦೦ ಪಟ್ಟು ಹೆಚ್ಚು ಶಕ್ತಿಶಾಲಿ ! ಇಂತಹ ೨೦,೫೦೦ಕ್ಕಿಂತಲೂ ಅಧಿಕ ಪರಮಾಣು ಬಾಂಬ್ ಗಳು ಈ ಜಗತ್ತಿನಲ್ಲಿ ಸಜ್ಜಾಗಿವೆ. ಮತಿಹೀನ ಮಾನವನ ಕೈಯಲ್ಲಿ ಭೀಕರ ಪರಮಾಣು ಅಸ್ತ್ರಗಳು ! ಮುಂದೇನು?!

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ