ಅಣೆಕಟ್ಟುಗಳ ನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿ ಅಗತ್ಯ
ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ನ ಚೈನ್ ತುಂಡಾಗಿ ಗೇಟ್ ಮುರಿದ ಪರಿಣಾಮ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ನದಿ ಸೇರುತ್ತಿದೆ. ಹೊಸ ಗೇಟ್ ಅಳವಡಿಸಲು ಜಲಾಶಯದಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುವ ಅನಿವಾರ್ಯತೆಗೆ ನೀರಾವರಿ ಇಲಾಖೆ ಸಿಲುಕಿದೆ. ಇದರಿಂದಾಗಿ ಪ್ರಸಕ್ತ ವರ್ಷ ಎರಡು ಬೆಳೆಗಳನ್ನು ಬೆಳೆಯುವ ನದಿ ಪಾತ್ರದ ಲಕ್ಷಾಂತರ ರೈತರ ಕನಸು ನುಚ್ಚುನೂರಾಗಿದೆ. ಇದೇ ವೇಳೆ ಹಾಲಿ ಬೆಳೆಯನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆಯಲ್ಲಿ ರೈತರು ಸಿಲುಕಿದ್ದಾರೆ. ಈ ಘಟನೆ ರಾಜ್ಯದಲ್ಲಿನ ಎಲ್ಲ ಜಲಾಶಯಗಳು ಮತ್ತು ಅಣೆಕಟ್ಟುಗಳ ನಿರ್ವಹಣೆ, ಇವುಗಳ ಸದ್ಯದ ಸ್ಥಿತಿಗತಿಗಳ ಬಗೆಗೆ ರೈತಾಪಿ ವರ್ಗದಲ್ಲಿ ಅನುಮಾನಗಳನ್ನು ಹುಟ್ಟುಹಾಕುವಂತೆ ಮಾಡಿದೆ.
ಪ್ರಸಕ್ತ ಮುಂಗಾರು ಋತುವಿನ ಆರಂಭಿಕ ಎರಡು ತಿಂಗಳುಗಳ ಅವಧಿಯಲ್ಲಿ ಉತ್ತಮ ಮಳೆಯಾದ ಪರಿಣಾಮ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಇದರಿಂದಾಗಿ ರೈತರು ಮಾತ್ರವಲ್ಲದೆ ಸರಕಾರ ಕೂಡ ನಿಟ್ಟುಸಿರು ಬಿಡುವಂತಾಗಿತ್ತು. ಸ್ವತಃ ಮುಖ್ಯಮಂತ್ರಿಗಳೇ ರಾಜ್ಯದ ವಿವಿಧ ಜಲಾಶಯಗಳಿಗೆ ಭೇಟಿ ನೀಡಿ, ಗಂಗಾಪೂಜೆ, ಬಾಗಿನ ಸಲ್ಲಿಸಿದರು. ಮುಂದಿನ ಒಂದೆರಡು ದಿನಗಳಲ್ಲಿ ತುಂಗಭದ್ರಾ ಜಲಾಶಯಕ್ಕೂ ತೆರಳಿ, ಬಾಗಿನ ಸಲ್ಲಿಸುವ ಇರಾದೆಯಲ್ಲಿದ್ದರು. ಮುಖ್ಯಮಂತ್ರಿ ಮಂಗಳವಾರ ಜಲಾಶಯದ ಮುರಿದ ಗೇಟ್ ಮತ್ತು ಹೊಸ ಗೇಟ್ ಅಳವಡಿಕೆ ಕುರಿತಂತೆ ತಜ್ಞರ ಜತೆ ಚರ್ಚೆ ನಡೆಸಲು ಜಲಾಶಯಕ್ಕೆ ಭೇಟಿ ನೀಡಿ ಮುಂದಿನ ಕ್ರಮಗಳ ಕುರಿತು ಸಲಹೆ ಸೂಚನೆ ನೀಡಲಿರುವರು.
ಸದ್ಯಕ್ಕಂತೂ ಟಿಬಿ ಜಲಾಶಯದ ಮುರಿದಿರುವ ಗೇಟ್ ಗೆ ಬದಲಾಗಿ ಹೊಸ ಗೇಟನ್ನು ಅಳವಡಿಸುವ ಮತ್ತು ಇನ್ನುಳಿದ ಗೇಟ್ ಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಸರಕಾರದ ಮೊದಲ ಆದ್ಯತೆಯಾಗಬೇಕು. ಏತನ್ಮದ್ಯೆ ಟಿಬಿ ಜಲಾಶಯದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎನ್ನಲಾಗಿದ್ದು ಇತ್ತ ಸರಕಾರ ತುರ್ತು ಗಮನಹರಿಸುವ ಅಗತ್ಯವಿದೆ.
ಟಿಬಿ ಜಲಾಶಯದ ನಿರ್ವಹಣೆಯಲ್ಲಾಗಿರುವ ಲೋಪದೋಷ, ಮಳೆಗಾಲ ಆರಂಭಕ್ಕೂ ಮುನ್ನ ಕೈಗೊಳ್ಳಲಾಗುವ ವಾರ್ಷಿಕ ನಿರ್ವಹಣೆ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸಲಾಗಿತ್ತೇ ಇಲ್ಲವೇ, ಅಧಿಕಾರಿಗಳು ಮತ್ತು ಎಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆಯೇ ಮತ್ತಿತರ ಅಂಶಗಳ ಬಗೆಗೂ ಸರಕಾರ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಖು. ರಾಜ್ಯದ ಉಳಿದ ಅಣೆಕಟ್ಟುಗಳ ನಿರ್ವಹಣೆಯಲ್ಲಿ ಇಂತಹ ಯಾವುದಾದರೂ ಲೋಪ ಆಗಿದೆಯೇ ಎಂಬುದರತ್ತಲೂ ಸರಕಾರ ತತ್ ಕ್ಷಣ ಗಮನಹರಿಸಬೇಕು.
ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಸರಕಾರ ರಾಜ್ಯದ ಎಲ್ಲ ಅಣೆಕಟ್ಟುಗಳ ಸ್ಥಿತಿಗತಿ ಪರಿಶೀಲನೆಗಾಗಿ ತಜ್ಞರ ಸಮಿತಿ ರಚಿಸುವುದಾಗಿ ತಿಳಿಸಿದೆ. ಅಣೆಕಟ್ಟುಗಳ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಈ ಹಿಂದೆ ರಚಿಸಿದ್ದ ಸಮಿತಿಯ ಶಿಫಾರಸುಗಳನ್ನು ಸರಕಾರ ಇನ್ನಾದರೂ ಆದ್ಯತೆಯ ಮೇಲೆ ಅನುಷ್ಟಾನಗೊಳಿಸಲು ನೀಲನಕಾಶೆಯೊಂದನ್ನು ರೂಪಿಸಿ, ಕಾರ್ಯೋನ್ಮುಖವಾಗಬೇಕು. ರಾಜ್ಯದ ಬಹುತೇಕ ಅಣೆಕಟ್ಟುಗಳು ಹಳೆಯದಾಗಿರುವುದರಿಂದ ಅವುಗಳ ಸಮರ್ಪಕ ನಿರ್ವಹಣೆ, ತುಂಬಿರುವ ಹೂಳು ತೆರವು, ಸಣ್ಣಪುಟ್ಟ ದುರಸ್ತಿ ಪಡಿಸುವ ಮತ್ತು ನಿರ್ದಿಷ್ಟ ಅವಧಿಗೊಮ್ಮೆ ಅಣೆಕಟ್ಟುಗಳನ್ನು ಸಮಗ್ರವಾಗಿ ನಿರ್ವಹಣೆ ಮಾಡುವ ವ್ಯವಸ್ಥೆಯೊಂದನ್ನು ಸರಕಾರ ರೂಪಿಸಬೇಕು. ಇಂತಹ ಸಣ್ಣಪುಟ್ಟ ಲೋಪ, ಪ್ರಮಾದ, ನಿರ್ಲಕ್ಷ್ಯ, ಕೃಷಿ ಬೆಳೆಗಳ ಹಾನಿಗೆ ಮಾತ್ರವಲ್ಲದೆ ಈ ಅಣೆಕಟ್ಟುಗಳ ಕೆಳಭಾಗದಲ್ಲಿರುವ ಜನರ ಪ್ರಾಣಕ್ಕೇ ಸಂಚಕಾರ ತಂದೊಡ್ಡುವ ಆತಂಕವಿರುವುದರಿಂದ ಸರಕಾರ ಇಂತಹ ವಿಷಯಗಳಲ್ಲಿ ಉದಾಸೀನ ತೋರುವುದು ಬಲುದೊಡ್ಡ ಅನಾಹುತಕ್ಕೆ ಕೈಯಾರೆ ಆಹ್ವಾನ ನೀಡಿದಂತೆ ಎಂಬುದನ್ನು ಮರೆಯಬಾರದು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೩-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ