ಅಣ್ಣಾ... ಅಣ್ಣಾ.... ಕವಣೆ ಎಲ್ಲಿ?

ಅಣ್ಣಾ... ಅಣ್ಣಾ.... ಕವಣೆ ಎಲ್ಲಿ?

ಬರಹ

ಮನೆಯ ಮುಂದೆ ದೊಡ್ಡ ಮಾವಿನ ಮರ. ಮರ ತುಂಬಾ ಮಾವಿನ ಕಾಯಿ. ಬೇಸಿಗೆಕಾಲದ ರಜೆ ಬಂತೆಂದರೆ ಮಾವಿನ ಮಿಡಿ ಉಪ್ಪು ಬೆರೆಸಿ ತಿನ್ನುವುದು, ಉಪ್ಪಿನಕಾಯಿ ಮಾಡುವುದು ಗೌಜಿಯೇ ಗೌಜಿ. ನಮ್ಮ ಮನೆಯಲ್ಲಿ ನಾಲ್ಕೈದು ತರದ ಮಾವಿನ ಮರ ಇದ್ದರೂ ಮನೆ ಮುಂದಿರುವ ಗೋವಾ ಮಾವು ಎಂದರೆ ತುಂಬಾ ಇಷ್ಟ. ಬೆಳಿಗ್ಗೆ ಎದ್ದಾಗ ಅಂಗಳದಲ್ಲಿ ಅದೆಷ್ಟೋ ಮಾವಿನ ಮಿಡಿ ಉದುರಿರುವುದನ್ನು ಕಾಣಬಹುದು. ಮಾವಿನ ಕಾಯಿ ಹಣ್ಣಾಗಬೇಕಾದರೆ ಮೇ ತಿಂಗಳವರೆಗೆ ಕಾಯಬೇಕು. ಅಂತೂ ಏಪ್ರಿಲ್ ತಿಂಗಳಲ್ಲಿ ಮಿಡಿ ಮಾವಿನ ಕಾಯಿ ಸವಿಯುವ ಗಮ್ಮತ್ತೇ ಬೇರೆ.

ಸಾಕಷ್ಟು ಮಾವಿನ ಮಿಡಿ ಮರದ ಕೆಳಗೆ ಬಿದ್ದಿದ್ದರೂ ಮರದಿಂದಲೇ ಕೊಯ್ದು ತಿನ್ನುವ ಚಪಲ ನಮಗೆ. ನಾನು ಮತ್ತು ನನ್ನ ಅಣ್ಣಂದಿರು (ನನ್ನ ದೊಡ್ಡಪ್ಪ ಹಾಗೂ ಮಾವನ ಮಕ್ಕಳು) ಯಾವಾಗಲೂ ಮಾವಿನ ಮರದ ಕೆಳಗೇ ಕಾಲ ಕಳೆಯುತ್ತಿದ್ದೆವು. ಅವರೆಲ್ಲಾ ಹುಡುಗರು ಮರ ಹತ್ತಿ ಮಿಡಿ ಕೊಯ್ದು ತಿನ್ನುತ್ತಿದ್ದರು. ನನಗೆ ಮರ ಹತ್ತಲಿಕ್ಕೆ ಗೊತ್ತಿಲ್ಲ :) ಅದಕ್ಕೆ ನಾನು ಕೆಳಗೆ ನಿಂತು ಅವರು ಕೊಯ್ದು ಕೊಟ್ಟ ಮಿಡಿ ಮಾವಿನ ಕಾಯಿಗಳನ್ನು 'ಕ್ಯಾಚ್್' ಹಿಡಿಯುತ್ತಿದ್ದೆ. ಅಣ್ಣಂದಿರೆಲ್ಲಾ ಮರ ಹತ್ತಿ ಅಲ್ಲೇ ಮಾವಿನ ಕಾಯಿ ತಿನ್ನುವವರು. ಹಣ್ಣಾದ ಮಾವಿನ ಕಾಯಿ ಇದ್ದರೆ ಅದನ್ನು ಕೀಳದೆಯೆ ಬಾವಲಿಯಂತೆ ಕಚ್ಚಿ ತಿನ್ನುವುದೂ ಅವರ ಅಭ್ಯಾಸವಾಗಿತ್ತು. ಆವಾಗ ''ನಾನು ಕೂಡಾ ಹುಡುಗನಾಗಿರುತ್ತಿದ್ದರೆ... ಅಣ್ಣನಂತೆ ಮರ ಹತ್ತಿ ಈ ಎಲ್ಲಾ ಚೇಷ್ಟೆಗಳನ್ನು ಮಾಡಬಹುದಾಗಿತ್ತು'' ಎಂದು ಅನಿಸುತ್ತಿತ್ತು.

ಇನ್ನೊಂದು ವಿಷಯ...ಮಾವಿನ ಕಾಯಿಯನ್ನು ಮರದಿಂದ ಕೊಯ್ದು ತಿನ್ನುವ ಬದಲು ಕಲ್ಲೆಸೆದು ಬೀಳಿಸಿ ಉದುರಿಸುವ ಮಜಾನೇ ಬೇರೆ. ಇದಕ್ಕಾಗಿ ನಾವು ಹಿತ್ತಿಲಿಗೆ ಹೋಗುತ್ತಿದ್ದೆವು. ಅಲ್ಲಿಯೂ ಇದೆ ನಾನಾ ಬಗೆಯ ಮಾವು. ಕಲ್ಲೆಸೆದು ಯಾರು ಎಷ್ಟು ಮಾವಿನಕಾಯಿ ಉದುರಿಸುತ್ತಾರೆ ಎಂಬ ಸ್ಪರ್ಧೆಯೇ ನಮ್ಮಲ್ಲಿ ನಡೆಯುತ್ತಿತ್ತು. ಕಲ್ಲು ಸಿಕ್ಕದೇ ಇರುವಾಗ ಅಲ್ಲಿ ಬಿದ್ದಿದ್ದ ಮಾವಿನ ಕಾಯಿಗಳನ್ನೇ ಬಳಸಿ ಇನ್ನೊಂದು ಗೊಂಚಲಿಗೆ ಎಸೆಯುತ್ತಿದ್ದೆವು.

ಅಂತೆಯೇ ಕಾಯಿ ಉದುರಿಸಲು ಕಲ್ಲು ಎಸೆಯುವ ಬದಲು ಕವಣೆ (ಕ್ಯಾಟಾಪುಲ್ಟ್) ಬಳಸಿಯೂ ಮಾವಿನ ಕಾಯಿ ಬೀಳಿಸುತ್ತಿದ್ದೆವು. ಕಲ್ಲನ್ನು ಎಸೆಯಲು ಕವಣೆ ಸುಲಭ ಸಾಧನ. ಇಂದೀಗ ಕವಣೆ ಎಂಬುದು ಅಪರೂಪ ಎಂದೇ ನನ್ನ ಅನಿಸಿಕೆ. ಇಂಗ್ಲಿಷ್ ಅಕ್ಷರ 'ವೈ' (Y) ಶೇಪ್ ಇರುವ ಮರದ ಚಿಕ್ಕ ಗೆಲ್ಲು (ಕಬೆ) ಅದು ಗಟ್ಟಿಯಿರಬೇಕು, ಅದಕ್ಕೆ ಸೈಕಲ್ ಟ್ಯೂಬ್್ನ ತುಂಡೊಂದನ್ನು ಬಳಸಿ ಎಳೆದು ಕಟ್ಟಬೇಕು. ಈ ಕವಣೆಯ ಮಧ್ಯಭಾಗದಲ್ಲಿರುವ ಚೌಕಾಕಾರದ ರಬ್ಬರ್ ತುಂಡಿನಲ್ಲಿ ಕಲ್ಲನ್ನಿಟ್ಟು, ರಬ್ಬರನ್ನು ಹಿಂದಕ್ಕೆಳೆದು ಬಿಟ್ಟರೆ ಕಲ್ಲು ಸುಯ್ಯಂನೆ ಎಸೆಯಲ್ಪಡುವುದು.

ಇದಕ್ಕೆಲ್ಲಾ ನನ್ನ ಅಣ್ಣಂದಿರೇ ಮುಂದು. ಸರಿಯಾಗಿ ಗುರಿಯಿಟ್ಟು ಹೊಡೆದರೆ ಸಾಕು, ಕಲ್ಲನ್ನು ಎತ್ತಿ ಎಸೆಯುವಷ್ಟು ಚೈತನ್ಯ ಬೇಕಾಗಿಲ್ಲ. ಕವಣೆಯಲ್ಲಿ ಎಸೆದ ಒಂದು ಚಿಕ್ಕ ಕಲ್ಲು ಗುರಿ ಮುಟ್ಟಿದರೆ ಮಾವಿನ ಮಿಡಿ ಎಷ್ಟೋ ಉದುರುತ್ತಿದ್ದವು. ನನ್ನ ದೊಡ್ಡಪ್ಪನ ಮಗ ಚೆನ್ನಾಗಿಯೇ ಗುರಿಯಿಡುತ್ತಿದ್ದ ಅದಕ್ಕೆ ನಾವು ಅವನನ್ನು 'ಅರ್ಜುನ' ಎಂದು ಕರೆಯುತ್ತಿದ್ದೆವು.

ಮಾವಿನ ಮಿಡಿ ಬೀಳಿಸುವುದಕ್ಕೆ ಮಾತ್ರವಲ್ಲ ಮನೆ ಪಕ್ಕದಲ್ಲಿರುವ ಗಾಳಿ ಮರದಲ್ಲಿ ಕುಳಿತುಕೊಳ್ಳುವ ಗಿಳಿಗಳಿಗೆ, ಕೊಬ್ಬರಿ ಒಣಗಿಸುವಾಗ ಬರುವ ಕಾಗೆಗಳಿಗೆ ಹೀಗೆ ಎಲ್ಲಾ ಹಕ್ಕಿಗಳನ್ನು ಓಡಿಸಲು ನಮ್ಮ ಮನೆಯಲ್ಲಿ ಕವಣೆ ಬಳಕೆಯಾಗುತ್ತಿತ್ತು.

ಈಗ ತಾನೇ ಕಳೆದ ವಿಷುವಿಗೆ ಮನೆಗೆ ಹೋದಾಗ ಮನೆ ಮುಂದಿನ ಮಾವಿನ ಮರದಲ್ಲಿ ಯಥೇಚ್ಛ ಮಾವಿನ ಕಾಯಿ ಇತ್ತು. ಈಗಂತೂ ಮಾವಿನ ಮರದಲ್ಲಿ ಆಟ ಆಡುವ ಚಿಕ್ಕ ವಯಸ್ಸೇನು ಅಲ್ಲ ಬಿಡಿ. ನಾನು ಚಿಕ್ಕವಳಿರುವಾಗ ಮಾವಿನ ಕಾಯಿ ಕೊಯ್ದು ಕೊಡು ಎಂದು ಅಣ್ಣನಲ್ಲಿ ಹಠ ಮಾಡುವಾಗ ಕವಣೆ ಬಳಸಿ ಅಣ್ಣ ಮಾವಿನ ಕಾಯಿ ಉದುರಿಸಿಕೊಡುತ್ತಿದ್ದ. ಈಗ ಅಣ್ಣನೂ ಬ್ಯುಸಿ, ಕವಣೆಯೂ ಇಲ್ಲ. ಒಂದು ದೊಡ್ಡ ಕೋಲು ಬಳಸಿ ಸ್ವಲ್ಪ ಬಗ್ಗಿರುವ ಗೆಲ್ಲಿನಲ್ಲಿದ್ದ ಮಾವಿನ ಮಿಡಿ ಕೊಯ್ದು ತಿಂದು ತೃಪ್ತಿ ಪಡಬೇಕಾದ ಸ್ಥಿತಿ ನನ್ನದಾಗಿತ್ತು.