ಅಣ್ಣಿಗೇರಿಯ ಪಂಪ ಸ್ಮಾರಕ ಭವನ


ಹುಬ್ಬಳ್ಳಿ - ಗದಗ ರಸ್ತೆಯಲ್ಲಿ , ಅಣ್ಣಿಗೇರಿ ಕ್ರಾಸ್ ಹತ್ತಿರ ಎರಡು ಎಕರೆ ಜಾಗದಲ್ಲಿ ಸ್ಮಾರಕ ಭವನ ನಿರ್ಮಾಣಗೊಂಡಿದ್ದು, 300 ಆಸನಗಳ ಸಭಾಭವನ, ಎರಡು ಗ್ರೀನ್ ರೂಮ್‌ಗಳು ಸಜ್ಜುಗೊಂಡಿವೆ. ಮೂರು ವರ್ಷಗಳ ಹಿಂದೆ ಅಣ್ಣಿಗೇರಿಯಲ್ಲಿ ಪಂಪನ ಸ್ಮಾರಕ ಭವನಕ್ಕಾಗಿ ಗುರುತಿಸಿದ ಎರಡು ಎಕರೆ ಜಾಗದಲ್ಲಿ ಗ್ರಂಥಾಲಯ ಮಾತ್ರ ನಿರ್ಮಾಣಗೊಂಡಿತ್ತು. ಈಗ ಭವ್ಯವಾದ ಪಂಪ ಕವಿಯ ಸ್ಮಾರಕ ನಿರ್ಮಾಣ ಗೊಂಡಿದೆ.
ಪಂಪನ ಸ್ಮಾರಕಕ್ಕೆ ಚಾಲನೆ ಸಿಕ್ಕಿದ್ದು ಹಿರಿಯ ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರಿಂದ. 1998ರಲ್ಲಿ ಕಲಬುರ್ಗಿ ಅವರಿಗೆ ರಾಜ್ಯ ಸರ್ಕಾರ ಪಂಪ ಪ್ರಶಸ್ತಿ ನೀಡಿ ಗೌರವಿಸಿತು. ಆದರೆ ಅವರು ಅಣ್ಣಿಗೇರಿಯಲ್ಲಿ ಪಂಪನ ಸ್ಮಾರಕ ಆಗಬೇಕೆಂದು ಪಂಪ ಪ್ರಶಸ್ತಿ ವೇಳೆ ಸರ್ಕಾರ ನೀಡಿದ ಒಂದು ಲಕ್ಷ ರೂಪಾಯಿ ಮೊತ್ತವನ್ನು ಸರ್ಕಾರಕ್ಕೆ ಮರಳಿ ನೀಡಿದರು. ನಂತರ ಪಂಪನ ಸ್ಮಾರಕವಾಗಬೇಕೆಂದು ಪ್ರತಿಷ್ಠಾನದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದರ ಪರಿಣಾಮ ಸ್ಮಾರಕ ಭವನ ಸಜ್ಜುಗೊಂಡಿದೆ.
ಪಂಪನ ಪೂರ್ವಜರು ಆಂಧ್ರಪ್ರದೇಶದ ವೆಂಗಿಪೊಳದವರು. ಆಗಿನ ಅರಸ ಅರಿಕೇಸರಿಯ ಆಶ್ರಯದಲ್ಲಿದ್ದ ಪಂಪ, ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ಕುರ್ಕಿಯಾಲದಲ್ಲಿ ದೊರೆತ ಶಾಸನದಲ್ಲಿ ಜಿನವಲ್ಲಭ, ಪಂಪ ತನ್ನ ಅಣ್ಣನೆಂದು, ಆತನ ಹುಟ್ಟು ತಾಯಿಯ ತವರು ಮನೆ ಅಣ್ಣಿಗೇರಿಯಲ್ಲಾಯಿತು ಎಂದು ಬರೆಯುತ್ತಾನೆ. ಇಂಥ ವಿವರವುಳ್ಳ ಶಾಸನ ಕುರಿತು ಆಂಧ್ರದ ವಿದ್ವಾಂಸ ವೆಂಕಟರಮಣಯ್ಯ ಬರೆದಿದ್ದಾರೆ.
ಇದನ್ನು ಕಂಡ ಡಾ. ಎಂ.ಎಂ. ಕಲಬುರ್ಗಿ, ಕುರ್ಕಿಯಾಲಕ್ಕೆ ಹೋಗಿ ಶಾಸನದ ಪ್ರತಿ ತೆಗೆದುಕೊಂಡು ಬಂದರು (ಈ ಶಾಸನವನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ನೋಡಬಹುದು).
'ಅಣ್ಣಿಗೇರಿಗೆ ಹೋಗಿ ಜೈನ ಮನೆತನ ಹುಡುಕಿದಾಗ ಸಿಕ್ಕಿದ್ದು ದೇಶಪಾಂಡೆ ಮನೆತನ. ಅಲ್ಲಿ ತಲೆತಲಾಂತರದಿಂದ ಬೀಮಪಯ್ಯ ಎಂಬ ಹೆಸರು ಆ ಮನೆತನದಲ್ಲಿದೆ. ಪಂಪನ ತಂದೆ ಹೆಸರು ಬೀಮಪಯ್ಯ. ಬ್ರಾಹ್ಮಣರಾಗಿದ್ದ ಬೀಮಪಯ್ಯ ಜೈನರಾಗಿ ಪರಿವರ್ತನೆಗೊಂಡರು'. "ಕನ್ನಡದ ಆದಿಕವಿಯಾಗಿ ಪ್ರೇರಣೆ ಗೊಂಡು, ಅಪ್ರತಿಮ ಕಾವ್ಯ ಸೃಷ್ಠಿ ಮಾಡಿ, ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ ಕವಿಯ ಸ್ಮಾರಕಕ್ಕೆ ಒಮ್ಮೆ ಬನ್ನಿ ....
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು