ಅಣ್ವಣೂಪಾಧ್ಯಾಯ

ಅಂಕಣಕಾರ, ಸಂಸ್ಕೃತ ವಿದ್ವಾನ್ ಡಾ. ವಿಶ್ವಾಸ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಅಣ್ವಣೂಪಾಧ್ಯಾಯ’ ಎನ್ನುವ ವಿಚಿತ್ರ ಹೆಸರಿನ ಪುಸ್ತಕ. ಈ ಪುಸ್ತಕದಲ್ಲಿ ೧೦ ಕಥೆಗಳಿವೆ. ಈ ಕಥೆಗಳ ಬಗ್ಗೆ ಖ್ಯಾತ ವಿಮರ್ಶಕರಾದ ಡಾ. ಬಿ. ಜನಾರ್ದನ್ ಭಟ್ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿರುವುದು ಹೀಗೆ…
“ಡಾ. ವಿಶ್ವಾಸ ಅವರ ಈ ಕಥಾ ಸಂಕಲನಕ್ಕೆ ಒಂದು ವಿಶಿಷ್ಟ ಗೌರವವಿದೆ. ಅದೇನೆಂದರೆ ಸಂಸ್ಕೃತದಲ್ಲಿ ಈ ಆಧುನಿಕ ಕತೆಗಳನ್ನು ಬರೆದು, ಅವನ್ನು ತಾವೇ ಕನ್ನಡಕ್ಕೆ ಅನುವಾದಿಸಿರುವ ಒಂದು ಅಪೂರ್ವ ಸನ್ನಿವೇಶ ಇದು. ಹೀಗೆ ಏಕಕಾಲದಲ್ಲಿ ಎರಡೂ ಭಾಷೆಯಲ್ಲಿ ಒಂದು ಸಾಹಿತ್ಯ ಕೃತಿಯನ್ನು ಬರೆಯುವ ಸಾಮರ್ಥ್ಯ ಜಗತ್ತಿನಲ್ಲಿ ಕೆಲವೇ ಕೆಲವು ಸಾಹಿತಿಗಳಿಗೆ ಇದೆ. ಮೊದಲು ಪ್ರಭುತ್ವ ಇರುವ ಒಂದು ಭಾಷೆಯಲ್ಲಿ ಬರೆದು, ನಂತರ ತಮಗೆ ಅಷ್ಟೇ ಪ್ರಭುತ್ವ ಇರುವ ಇನ್ನೊಂದು ಭಾಷೆಯಲ್ಲಿ ಬರೆಯುವ ಅಥವಾ ‘ಅನುವಾದಿಸುವ’ ಸಾಹಿತಿಗಳು ಕಡಿಮೆ ; ಆದರೂ ಇದ್ದಾರೆ.
ಡಾ ವಿಶ್ವಾಸ್ ಹೇಳುವಂತೆ ‘ಸಂಸ್ಕೃತ ಮತ್ತು ಕನ್ನಡ - ಈ ಎರಡು ಭಾಷೆಗಳೂ ನನಗಂತೂ ಎರಡು ಕಣ್ಣುಗಳಿದ್ದಂತೆ. ವಸ್ತುತಃ ಅವೆರಡರಲ್ಲಿ ಒಂದಿಷ್ಟೂ ತಾರತಮ್ಯವಿಲ್ಲ ನನ್ನ ದೃಷ್ಟಿಯಲ್ಲಿ. ಆರಂಭದಿಂದಲೂ ಈ ಎರಡೂ ಭಾಷೆಗಳಲ್ಲೂ ಒಂದಿಷ್ಟು ಸಾಹಿತ್ಯ ಕೃಷಿಯನ್ನು ನಾನು ನಡೆಸಿಕೊಂಡೇ ಬಂದಿರುವೆನಾದರೂ ಒಟ್ಟಿನಲ್ಲಿ ಕನ್ನಡಕ್ಕಿಂತಲೂ ಸಂಸ್ಕೃತದಲ್ಲೇ ನನ್ನ ಬರವಣಿಗೆ ಗಾತ್ರದಲ್ಲಿ ಹೆಚ್ಚಿರಬಹುದೇನೋ. ಅದಕ್ಕೆ ಕಾರಣವಿಷ್ಟೆ - ಕನ್ನಡದಲ್ಲಿ ಬರೆಯುವವರ ಸಂಖ್ಯೆ ಬೇಕಾದಷ್ಟಿದೆ…’
ಈ ಕಥಾಸಂಕಲನವನ್ನು ನಾನು ಹಲವು ದೃಷ್ಟಿಗಳಿಂದ ಕುತೂಹಲದಿಂದ, ಆಸಕ್ತಿಯಿಂದ ಓದಿದೆ. ಇದರಲ್ಲಿ ಮುಖ್ಯವಾದ ಒಂದು ಆಸಕ್ತಿ, ಸಂಸ್ಕೃತದಲ್ಲಿ ಆಧುನಿಕ ಸಾಹಿತ್ಯ ಸೃಷ್ಟಿ ಹೇಗಿದೆ ಎನ್ನುವುದನ್ನು ತಿಳಿಯುವುದು. ಈ ಕಥಾ ಸಂಕಲನ ಅದರತ್ತ ಒಂದು ದಿಕ್ಸೂಚಿಯಂತೂ ಹೌದು. ಇನ್ನೂ ಹೆಚ್ಚಿನ ವಿವರಣೆಯನ್ನು ಡಾ. ಹೆಚ್ ಆರ್ ವಿಶ್ವಾಸ ಅವರೇ ‘ನನ್ನ ನುಡಿ’ಯಲ್ಲಿ ನೀಡಿದ್ದಾರೆ.
ನಾವು ಮೊದಲನೆಯದಾಗಿ ಶ್ಲಾಘಿಸಬೇಕಾದುದು ಡಾ. ವಿಶ್ವಾಸರ ಸಂಸ್ಕೃತದ ಸಣ್ಣಕತೆಗಳು ನಿಜವಾಗಿಯೂ ಆಧುನಿಕ ವಸ್ತುಗಳನ್ನೇ ಉಳ್ಳ, ಆಧುನಿಕ ಪಾಶ್ಚಾತ್ಯ ಕತೆಗಳ ತಂತ್ರವನ್ನು ಬಳಸಿಕೊಂಡು ಬೆಳೆದಿರುವ ಕನ್ನಡ ಸಣ್ಣಕತೆಗಳ ನಿರೂಪಣಾ ತಂತ್ರವಿರುವ ಸಣ್ಣಕತೆಗಳಾಗಿವೆ. ಇವು ಹೇಗಿವೆ ಎಂದರೆ ಕನ್ನಡದ ಈ ಕಾಲದ ಸಣ್ಣಕತೆಗಳನ್ನು ಸಂಸ್ಕೃತಕ್ಕೆ ಭಾಷಾಂತರಿಸಿದಂತೆ ಇವೆ. (ಆರ್ ಕೆ ನಾರಾಯಣರ ಇಂಗ್ಲಿಷ್ ಕತೆ, ಕಾದಂಬರಿಗಳು ಕನ್ನಡದಿಂದ ಇಂಗ್ಲೀಷ್ ಗೆ ಭಾಷಾಂತರಿಸಿದಂತೆ ಇದ್ದ ಹಾಗೆ!)
ಇಲ್ಲಿ ಒಂದು ಸ್ವಾರಸ್ಯಕರವಾದ ಸಂಗತಿಯನ್ನು ಗಮನಿಸಬೇಕು. ಕತೆಗಾರನ ಅನುಭವ ಪ್ರಪಂಚವು ವಸ್ತುಗಳ ಆಯ್ಕೆಯನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸುತ್ತದೋ, ಕಲ್ಪಿತ ಓದುಗರ ಸಾಂಸ್ಕೃತಿಕ ಹಿನ್ನಲೆಯೂ ಅಷ್ಟೇ ನಿಯಂತ್ರಿಸುತ್ತದೆ. ಉದಾಹರಣೆಗೆ ಸಂಸ್ಕೃತದ ಓದುಗರು ಮೇಲುವರ್ಗದ ಹಿನ್ನಲೆಯವರು ಆಗಿರುತ್ತಾರೆನ್ನುವುದು ಸಾಮಾನ್ಯ ಕಲ್ಪನೆ. ಹಾಗಾಗಿ ಅದರಲ್ಲಿ ಬ್ರಾಹ್ಮಣ ಜಾತಿ ನಿಂದೆ, ಸಮುದಾಯ ದ್ವೇಷ ಕಾಣ ಸಿಗಲಾರದು; ಮೌಲ್ಯಾಧಾರಿತ ವಿಮರ್ಶೆ ಸಿಗಬಹುದು. ಹಾಗಾಗಿ ಕತೆಗಳ ವಸ್ತುಗಳು ಮತ್ತು ಕಲ್ಪಿತ ಓದುಗ ಇಬ್ಬರ ಸಾಂಸ್ಜೃತಿಕ ಪರಿಸರಗಳಿಗೆ ಸಂಬಂಧಿಸಿರುತ್ತವೆ ಎನ್ನುವುದು ಒಂದು ಸಾಮಾನ್ಯವಾಗಿ ಗ್ರಹಿಸಲ್ಪಟ್ಟ ವಿಚಾರ.” ಎಂದು ಹೇಳುತ್ತಾ ಜನಾರ್ದನ ಭಟ್ ಅವರು ಇಲ್ಲಿರುವ ಹತ್ತು ಕತೆಗಳ ಪುಟ್ಟ ವಿಮರ್ಶೆಯನ್ನು ಮಾಡಿದ್ದಾರೆ. ಅದರಲ್ಲಿ ಆಯ್ದ ಕೆಲವು ವಿಮರ್ಶೆಗಳು..
ಈ ಕಥಾ ಸಂಕಲನದ ಎರಡನೇ ಕತೆಯಾದ ‘ಹೋದೆಯಾ ಪಿಶಾಚಿ ಅಂದ್ರೆ…’ಯಲ್ಲಿ ಕಥಾನಾಯಕ ನಾಲ್ಕು ಮನೆಗಳಿರುವ ಫ್ಲ್ಯಾಟಿನಲ್ಲಿ ಒಂದು ಮನೆಯನ್ನು ತೆಗೆದುಕೊಂಡಿರುತ್ತಾನೆ. ಆದರೆ ಅದರ ಮೇಲಿನ ಮಹಡಿಯಲ್ಲಿ ಬಾಡಿಗೆಗಿದ್ದ ಒಬ್ಬಾತ ದೂರವಾಣಿಯಲ್ಲಿ ಸದಾ ಬೊಬ್ಬೆ ಹಾಕುತ್ತಾ ಮಾತಾಡುತ್ತಿದ್ದುದರಿಂದ ಇವರಿಗೆ ಕಿರಿಕಿರಿಯಾಗುತ್ತದೆ. ಅವರು ಬೇರೆ ಮನೆಗೆ ಬಾಡಿಗೆ ಹೋಗಲು ಯೋಚಿಸುತ್ತಿದ್ದದ್ದು ಗೊತ್ತಾಗಿ ಇವರೇ ಹುಡುಕಿ ಕೊಡುತ್ತಾರೆ. ಶ್ರೀಕಂಠನ ಕುಟುಂಬ ಅಲ್ಲಿಗೆ ಹೋದ ಮೇಲೆ ನೆಮ್ಮದಿಯಾಗಿ ಇರುತ್ತಾರೆ. ಆದರೆ ಬೊಬ್ಬೆ ಹಾಕಿ ಮಾತಾಡುವ ಶ್ರೀಕಂಠ, ಅವರು ಮೊದಲು ಬಾಡಿಗೆಗೆ ವಾಸವಾಗಿದ್ದ, ಅಂದರೆ ನಿರೂಪಕನ ಮನೆಯ ಮೇಲಿನ ಮನೆಯನ್ನು ಖರೀದಿಸಿ ಪುನಃ ಅಲ್ಲಿಗೇ ಬಂದುಬಿಡುತ್ತಾನೆ…
ಎಂಟನೇ ಕಥೆಯಾದ ‘ಅಪರಾಧ’ದಲ್ಲಿ ನಿರೂಪಕ ಕೃಷ್ಣಕುಮಾರ ಖ್ಯಾತ ಕತೆಗಾರ. ಒಮ್ಮೆ ಅವನ ಹೆಸರಿನಲ್ಲಿ ವಿಶೇಷಾಂಕವೊಂದರಲ್ಲಿ ಕತೆಯೊಂದು ಪ್ರಕಟವಾಗುತ್ತದೆ. ಅದನ್ನು ತಾನು ಬರೆದಿಲ್ಲವೆಂದು ಅವನಿಗೆ ಗೊತ್ತಿರುತ್ತದೆ. ಆಗ ಯುವಕನೊಬ್ಬ ಅವರನ್ನು ಭೇಟಿಯಾಗಿ, ತನ್ನ ಕತೆಗಳಿಗೆ ಮನ್ನಣೆ ದೊರಕದೆ ಹೋದಾಗ ಈ ತಂತ್ರವನ್ನು ಪ್ರಯೋಗಿಸಿದೆ, ತನ್ನ ಅಪರಾಧವನ್ನು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಾನೆ. ಕೃಷ್ಣಕುಮಾರ ಇದು ತನ್ನಿಂದಲೇ ಆದ ಪ್ರಮಾದ ಎಂದು ಪತ್ರಿಕೆಗೆ ತಿಳಿಸಿ ಆ ಯುವಕನಿಗೆ ಸಹಾಯ ಮಾಡುತ್ತಾನೆ.
ಈ ರೀತಿಯ ಮನಮಿಡಿಯುವ ಭಾವನಾತ್ಮಕ ಕತೆಗಳು ಈ ಕೃತಿಯಲ್ಲಿವೆ. ಕತೆಗಾರ ಡಾ ವಿಶ್ವಾಸ್ ತಮ್ಮ ನುಡಿಯಲ್ಲಿ ಈ ಕೃತಿಯನ್ನು ಬರೆಯಲು ಕಾರಣವಾದ ಸಂಗತಿಗಳನ್ನು ವಿವರಿಸಿದ್ದಾರೆ. ಸುಮಾರು ೧೪೦ ಪುಟಗಳಿರುವ ಈ ಪುಸ್ತಕ ಸಣ್ಣ ಕತೆಗಳನ್ನು ಇಷ್ಟ ಪಡುವವರಿಗೆ ಹೇಳಿ ಮಾಡಿಸಿದಂತಿದೆ.