ಅತಂತ್ರ ಸ್ವಾತಂತ್ರ್ಯ
“ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ ಒಂದು ದಿನ ಅವು ಹೂವಾಗಿ ಅರಳುತ್ತವೆ” ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು ಎಂದು ಅನುವಾದಕಿ ಜ್ಯೋತಿ. ಎ ಅವರು ‘ಅತಂತ್ರ ಸ್ವಾತಂತ್ಯ್ರ’ ಕೃತಿಗೆ ಬರೆದ ಅನುವಾದಕರ ನುಡಿ ನಿಮ್ಮ ಓದಿಗಾಗಿ ನೀಡಲಾಗಿದೆ.
“ಕೆಲವು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲಿ ಸರ್ಕಾರದ ಜನವಿರೋಧಿ ನೀತಿಗಳನ್ನು ಗಟ್ಟಿ ದನಿಯಲ್ಲಿ ಪ್ರತಿಭಟಿಸುವ ಜನಪರ ಹೋರಾಟಗಾರರ ವಿರುದ್ಧ ಕ್ರಿಮಿನಲ್ ಜಾಥಾಗಳನ್ನು ಬೇಕಾಬಿಟ್ಟಿಯಾಗಿ ದಾಖಲಿಸಿ ಅವರನ್ನು ಜೈಲಿಗೆ ಅಟ್ಟಲಾಗುತ್ತಿದೆ. ಇದಕ್ಕಾಗಿ ಪ್ರಭುತ್ವ ಯುಪಿಎಯಂತಹ (Unlawful Activities Prevention Act) ಕರಾಳ ಕಾಯಿದೆಯನ್ನು ಮನಸೋಇಚ್ಚೆ, ದುರ್ಬಳಕೆ ಮಾಡಿಕೊಳ್ಳುತ್ತಿದೆ. ದಮನಿತರ ಪರವಾದ ಹೋರಾಟಗಾರರಿಗೆ, ಸಾಹಿತಿಗಳಿಗೆ ಮತ್ತು ಬುದ್ದಿಜೀವಿಗಳಿಗೆ ಜಾಮೀನು - ಕೂಡ ಸಿಗದಂತೆ ಮತ್ತು ವರ್ಷಗಟ್ಟಲೆ ಸೆರೆಮನೆಯಲ್ಲಿ ಕೊಳೆಯುವಂತೆ ಮಾಡುತ್ತಿರುವ ಸರ್ಕಾರಗಳು, ಅವರ ವಿರುದ್ಧ ಹಗೆತನ ಸಾಧಿಸುತ್ತಿವೆ; ವಯೋವೃದ್ಧರಾದ ಮತ್ತು ಅನಾರೋಗ್ಯಪೀಡಿತರಾದ ಜನಪರ ಚಳುವಳಿಗಾರರಿಗೆ ಜೈಲಿನಲ್ಲಿ ಮೂಲಭೂತ ಸೌಕರ್ಯಗಳನ್ನೂ ಒದಗಿಸದೆ ಹಿಂಸಿಸಲಾಗುತ್ತಿದೆ. ಇತ್ತೀಚೆಗೆ ಫಾದರ್ ಸ್ಥಾನ: ಸ್ವಾಮಿಯವರನ್ನು ಸರ್ಕಾರ ಅತಿ ಕ್ರೂರವಾಗಿ ನಡೆಸಿಕೊಂಡು ಕಾರಾಗೃಹದಲ್ಲೇ ಅವರ ಸಾವಿಗೆ ಕಾರಣವಾಗಿದ್ದು ಒಂದು ಘೋರ ದುರಂತವೇ ಸರಿ. ಈ ಹಿಟ್ಲರಾಗಿ ಫ್ಯಾಸಿಸ್ಟ್ ಆಡಳಿತದಲ್ಲಿ ಇನ್ನೆಷ್ಟು ಅನಾಹುತಗಳಿಗೆ, ದುರ್ಘಟನೆಗಳಿಗೆ ನಾವು ಸಾಕ್ಷಿಯಾಗಬೇಕಾಗಿದೆಯೋ ಏನೋ?
ಹೀಗೆ ವರ್ಷಗಟ್ಟಲೆ ವಿವಿಧ ರಾಜ್ಯಗಳಲ್ಲಿ ಕೇಸುಗಳನ್ನು ಎದುರಿಸಿ ಅನೇಕ ಬಂಧೀಖಾನೆಗಳಲ್ಲಿನ ಅನುಭವಗಳನ್ನು ಪಡೆದು ಕೊನೆಗೂ ಬಿಡುಗಡೆಯ ಬೆಳಕನ್ನು ಕಂಡವರು ಜನಪರ ಹೋರಾಟಗಾರ ಕೋಬಾಡ್ ಗಾಂಧಿ, ಅವರ ಜೈಲುವಾಸದ ನೆನಪುಗಳೇ ಈ ಅತಂತ್ರ ಸ್ವಾತಂತ್ರ್ಯ. ಇದು ಅವರ ಆಂಗ್ಲ ಭಾಷೆಯ Fractured Freedom ಕೃತಿಯ ಸಂಕ್ಷಿಪ್ತ ಅನುವಾದವಾಗಿದೆ. ಕೋಬಾಡ್ ಗಾಂಧಿ ಮತ್ತು ಅವರ ಬಾಳಸಂಗಾತಿ ದಿವಂಗತ ಅನುರಾಧಾ ಮಹಾರಾಷ್ಟ್ರದಲ್ಲಿ ಸ್ಲಿಮ್ ನಿವಾಸಿಗಳ ಮತ್ತು ದಲಿತರ ಕ್ಷೇಮಾಭಿವೃದ್ಧಿಗಾಗಿ ಜೀವನಪರ್ಯಂತ ದುಡಿದವರು. ನನಗೆ ಉಡುಪರವರು ಕೋಬಾಡ ಗಾಂಧಿಯವರ ಈ ಪುಸ್ತಕವನ್ನು ಕೊಟ್ಟು ಅದನ್ನು ಕನ್ನಡಕ್ಕೆ ಅನುವಾದಿಸಬೇಕೆಂದು ಕೇಳಿಕೊಂಡಾಗ ಅದನ್ನು ಓದುವ ಅವಕಾಶ ನನಗೆ ದೊರಕಿತು. ಆವರೆಗೂ ಅವರ ಪರಿಚಯವೇನೂ ನನಗೆ ಇರಲಿಲ್ಲ. ನಾನಾದರೂ ಸಂಸದೀಯ ಪ್ರಜಾತಂತ್ರದ ಮೇಲೆ ವಿಶ್ವಾಸವಿಟ್ಟವಳು ಮತ್ತು ಅದೇ ಮಾದರಿಯ ಹೋರಾಟದಲ್ಲೇ ಸಾಗುತ್ತಿರುವವಳು. ಹೀಗಾಗಿ ಈ ಕೃತಿಯ ಅನುವಾದ ಕೈಗೊಂಡಾಗ ಅದನ್ನು ಓರ್ವ ಕ್ರಿಯಾಶೀಲ, ನಿಸ್ವಾರ್ಥಿ ಮಾರ್ಕ್ಸ್‌ವಾದಿ ಹೋರಾಟಗಾರನ ಬದುಕಿನ ಅನುಭವವೆಂದು ಗೌರವಿಸಿ ಅವರ ಮೇಲಿನ ಆದರದಿಂದ ತರ್ಜುಮೆ ಮಾಡಿದ್ದೇನೆ.
ಅತಂತ್ರ ಸ್ವಾತಂತ್ರ್ಯ ಕೃತಿಯು ಕೋಬಾಡ್ ಗಾಂಧಿಯವರ ಜೈಲುವಾಸದ ನೆನಪುಗಳಷ್ಟೇ ಆಗಿರುವುದಿಲ್ಲ. ಅವರ ಮತ್ತು ಅನುರಾಧಾರವರ ಹೋರಾಟಗಳ ಸ್ಮರಣೆಯನ್ನೂ ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೆ ಈ ಪುಸ್ತಕದ ಕೆಲವು ಅಧ್ಯಾಯಗಳು ಒಂದಷ್ಟು ತಾತ್ವಿಕ ಪ್ರಶ್ನೆಗಳನ್ನೂ ನಮ್ಮ ಮುಂದಿಡುತ್ತದೆ, ಅವುಗಳನ್ನು ಒಪ್ಪಬೇಕೋ, ಬಿಡಬೇಕೋ, ಅವುಗಳಿಗೆ ಉತ್ತರಿಸಬೇಕೋ ಇಲ್ಲವೇ ಅವುಗಳನ್ನು ಮುಂದುವರೆಸಬೇಕೋ, ಇವೆಲ್ಲ ಓದುಗರಿಗೆ ಬಿಟ್ಟಿದ್ದು, ಒಟ್ಟಾರೆ ಅವು ಲೇಖಕರ ಅಭಿಪ್ರಾಯಗಳಾಗಿರುತ್ತವೆ. ಈ ರಚನೆಯು ಮಾವೋವಾದಿ ಚಳುವಳಿಯ ಬಗ್ಗೆ, ಅದರ ವಿಘಟನೆಯ ಬಗ್ಗೆ ಕೆಲವು ಹೊಳಹುಗಳನ್ನು ನೀಡುತ್ತದೆ. ಅಂತಿಮವಾಗಿ “ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ ಒಂದು ದಿನ ಅವು ಹೂವಾಗಿ ಅರಳುತ್ತವೆ” ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು. ನಮ್ಮೆಲ್ಲರ ಗುರಿ ಮತ್ತು ಆಶಯ ಒಂದೇ ಆಗಿದ್ದರೂ ಹಾದಿಗಳು ಬೇರೆಬೇರೆ. ಇವೆ, ಸಮಸ್ತ ದುಡಿಯುವ ಜನತೆಗೆ ಸ್ವಾತಂತ್ರ್ಯದ, ಸಮೃದ್ಧತೆಯ, ಸ್ವಾವಲಂಬನೆಯ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ಆಶಯಗಳು ಈಡೇರುವಂತಾಗಬೇಕಾದರೆ, ಸಮಾನ ಗುರಿಗಳನ್ನು ಹೊಂದಿದ ಮತ್ತು ಛಿದ್ರಗೊಂಡಿರುವ ಜನಚಳುವಳಿಗಳು ಬೇಷರತ್ತಾಗಿ ಒಂದಾಗಬೇಕು ಮತ್ತು ಗಟ್ಟಿಗೊಳ್ಳಬೇಕು ಎಂಬುದು ಅತಿ ಮುಖ್ಯ.” ಎಂದಿದ್ದಾರೆ
ಈ ಕೃತಿಯಲ್ಲಿನ ಒಂದೆರಡು ವಾಕ್ಯಗಳು ಇಲ್ಲಿವೆ. ಇದನ್ನು ಓದುವಾಗ ನಿಮಗೆ ಈ ಪುಸ್ತಕವನ್ನು ಪೂರ್ತಿಯಾಗಿ ಓದಬೇಕೆಂಬ ಆಸೆ ಚಿಗುರುತ್ತದೆ. “ನಾನು ಅನುಳನ್ನು ಭೇಟಿ ಮಾಡಿದಾಗ ಅವಳು ಎಲ್ಲಿನ್ ಸ್ಟೋನ್ ಕಾಲೇಜ್‌ನಲ್ಲಿ ವಿದ್ಯಾರ್ಥಿ ನಾಯಕಿಯಾಗಿ ಪರ್ಯಾಯ ವಿಶ್ವವಿದ್ಯಾಲಯದಲ್ಲಿ ಸಕ್ರಿಯವಾಗಿದ್ದಳು. ಮೊದಲ ಬಾರಿ ನಾನು ಅವಳನ್ನು ತರಗತಿಯಲ್ಲಿ ಕಂಡಾಗ ಅವಳು ಗಿಲಿಗಿಲಿ ಎನ್ನುವ ವಾಚಾಳಿಯಾಗಿದ್ದು ಪ್ರಶ್ನೆಗಳನ್ನೆಸೆಯುತ್ತ ಗಮನ ಸೆಳೆಯುವ ಸಂವಹನದಲ್ಲಿ ವಿಪರೀತ ಚುರುಕಾಗಿದ್ದ ವಿದ್ಯಾರ್ಥಿನಿಯಾಗಿದ್ದಳು. ನಾನು ಅವಳ ಸಹಜತೆಗೆ ಸ್ವಾಭಾವಿಕತೆಗೆ, ಮತ್ತು ಜೀವನೋತ್ಸಾಹಕ್ಕೆ ಮರುಳಾದೆ. ಅವಳು ಎಲ್ಲರ ಜೊತೆ ಸುಲಭವಾಗಿ ಹೊಂದಿಕೊಳ್ಳುವ ವ್ಯಕ್ತಿಯಾಗಿದ್ದಳು. ಸಾಮಾಜಿಕ ಕಟ್ಟುಪಾಡುಗಳು ಕಟ್ಟಿಹಾಕುವ ಯಾವುದೇ ಅಡೆತಡೆಗಳೂ ಅವಳಲ್ಲಿರಲಿಲ್ಲ. ನಾವಿಬ್ಬರು ಭೇಟಿಯಾದಾಗ ಅವಳಿಗೆ ತನ್ನ ಸಹಪಾಠಿಯೊಂದಿಗೆ ಸಂಬಂಧವಿತ್ತು. ಅವನು ರಾಜಕೀಯವಾಗಿ ಯಾವುದೇ ಬಗೆಯ ಒಲವು ಹೊಂದಿರದ ಕ್ರೀಡಾಪಟುವಾಗಿದ್ದ, ಅವಳ ಚಟುವಟಿಕೆಗಳು ಬೆಳೆದಂತೆ ಅವರಿಬ್ಬರ ನಡುವಿನ ಸಂಬಂಧ ಕೊನೆಗೊಂಡಿತು.
ಅನ್ಯಾಯವೆಂದರೆ ಅವಳು ಕೋಪದಿಂದ ಕುದಿಯುತ್ತಿದ್ದಳು. ಆದರೆ ಅದರಲ್ಲೇ ಕಾಲಹರಣ ಮಾಡದೆ ಹಾಗೇ ಮುಂದಕ್ಕೆ ಸಾಗುತ್ತಿದ್ದಳು. ಅವಳೆಂದೂ ಹಮ್ಮು ಅಥವಾ ಅಹಂಕಾರದ ಮೇಲೆ ನಿಲ್ಲುತ್ತಿರಲಿಲ್ಲ ಇಲ್ಲವೇ ಸೇಡಿನ ಮನೋಭಾವ ಅವಳದ್ದಾಗಿರಲಿಲ್ಲ. ಇದೇನೂ ಅವಳ ಪ್ರಯತ್ನದಿಂದ ಬಂದ ಗುಣವಾಗಿರಲಿಲ್ಲ. ಅದು ಅವಳಲ್ಲಿ ಸಹಜವಾಗಿದ್ಧ ಸ್ವಭಾವವಾಗಿತ್ತು. ನನ್ನ ಮನೋಸ್ಥಿತಿ ಮತ್ತು ಗಣಗಳು ಬಹುತೇಕ ಒಟ್ಟಾರೆ ಅವಳ ಮನಸ್ಥಿತಿ ಮತ್ತು ಸ್ವಭಾವಕ್ಕೂ ವಿರುದ್ಧವಾಗಿದ್ದವು. ಇವು ಭೇಟಿಯಾದ ನಂತರವೇ ಅವಳು ಮಾಯಾನಗರದಲ್ಲಿ ಮತ್ತಿತರೆಡೆ ನನ್ನೊಡನೆ ಕೆಲಸ ಮಾಡಲು ಶುರು ಮಾಡಿದಳು. ಮೊದಲ ದಿನಗಳಲ್ಲಿ ನಾವಿಬ್ಬರು ಒಟ್ಟಿಗೆ ಕಳೆದ ಸಮಯವೆಂದರೆ ಸಭೆಗಳು, ದೀರ್ಘಕಾಲಿಕ ಅಧ್ಯಯನ ತರಗತಿಗಳು ಅಥವಾ ನನ್ನ ವರ್ಲಿ ಸೀ ಫೇಸ್ ಮನೆಯಲ್ಲಿ ಭಿತ್ತಿಪತ್ರಗಳನ್ನು ಮಾಡುತ್ತ ಕೂರುವುದು, ಅದರ ಮಧ್ಯೆ ಒಂದಷ್ಟು ಸಮಯ ಬಿಡುವು ತೆಗೆದುಕೊಳ್ಳುವುದಾಗಿತ್ತು, ನಾವು ಗೋಡೆಗಳ ಮೇಲೆ ಇತ್ತಿಪತ್ರಗಳನ್ನು ಅಂಟಿಸಲು ತರಾತ್ರಿ ಹೋಗುತ್ತಿದ್ದೆವು, ಇತರ ಸ್ನೇಹಿತರೊಡನೆ ಕುಳಿತು ವರ್ಲಿ ಮನೆಯಲ್ಲಿ ಕೈಬಲಿನಾದ ಬಿತ್ತಿಪತ್ರಗಳನ್ನು ತಯಾರಿಸುತ್ತಿದ್ದೆವು, ಅಬ್ಬಬ್ಬಾ ಎಂದರೆ ಒಟ್ಟಿಗೆ ನಾವಿಬ್ಬರೂ ಚಬ್ಬಿಲ್ ದಾಸ್ ಮತ್ತು ಪೃಥ್ವಿ ರಂಗಮಂದಿರಗಳಲ್ಲಿ ಕೆಲವು ನಾಟಕಗಳನ್ನು ನೋಡುತ್ತಿದ್ದೆವು. ಅವುಗಳಲ್ಲಿ ಅವಳ ತಮ್ಮ ಮತ್ತು ಸತ್ಯದೇವ್, ದೂಲೆವರ ನಾಟಕಗಳು ಬಹಳಷ್ಟು ಇರುತ್ತಿದ್ದವು. ನಿಜಕ್ಕೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಹುತೇಕ ಚಟುವಟಿಕೆಗಳು ನಿಂತಾಗಲೇ ನಮ್ಮ ಪ್ರೇಮಾಂಕುರವಾಗಿದ್ದು ಮತ್ತು ನಾವು ಆಗಾಗ್ಗೆ ಭೇಟಿಯಾಗಿ ಒಟ್ಟಿಗೆ ಕಾಲ ಕಳೆಯಲು ಆರಂಭಿಸಿದ್ದು, ಕೆಲವೊಮ್ಮೆ ಲೋವರ್ ಪರೇಲ್‌ನ ಜವಳಿ ಗಿರಣಿ ಪ್ರದೇಶಗಳಲ್ಲಿ ರಾತ್ರಿಯೆಲ್ಲ ಭಿತ್ತಿಪತ್ರಗಳನ್ನು ಅಂಟಿಸಿದ ಬಳಿಕ ಅವಳು ಹತ್ತಿರದಲ್ಲಿದ್ದ ನನ್ನ ವರ್ಲಿ ಮನೆಯಲ್ಲಿ ರಾತ್ರಿ ಉಳಿಯುತ್ತಿದ್ದಳು.”
೨೭೫ ಪುಟಗಳ ಈ ಪುಸ್ತವು ಕೋಬಾಡ್ ಗಾಂಧಿಯವರ ಜೈಲುವಾಸದ ನೆನಪುಗಳೇ ಆದರೂ ಇನ್ನೂ ಅನೇಕ ಮರೆಯಲಾಗದ ನೆನಪುಗಳನ್ನು ಕಟ್ಟಿಕೊಡುತ್ತದೆ.