ಅತಿಥಿ ದೇವೋ ಭವಃ

ಅತಿಥಿ ದೇವೋ ಭವಃ

ಅಮೆರಿಕೆಯ ಅಧ್ಯಕ್ಷ ಮಹೋದಯರು ಬಂದು ಹೋದರು. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು, ಗಗನಚುಂಬಿ ಕಟ್ಟಡಗಳು ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನ ನೋಡಿ ಪ್ರಶಂಸಿಸಲು ಮತ್ತು ಮುಂಬೈಗೆ ಬಂದಿಳಿದ ಒಬಾಮ ಮುಂಬೈ ನರಹತ್ಯೆಯ ರೂವಾರಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ನಾಮಕರಣ ಮಾಡಬಹುದು ಎಂದು. ಆದರೆ ಒಬಾಮರಿಗೆ ಅಥವಾ ಅಮೆರಿಕನ್ನರಿಗೆ ಮುಂಬೈ ನರಹತ್ಯೆ ದೊಡ್ಡ ವಿಷಯವಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ರಾಷ್ಟ್ರರಾಷ್ಟ್ರ ಗಳ ನಡುವಿನ ಸಂಬಂಧದಲ್ಲಿ ಅನುಭವವಾಗುವ collateral damage ಅಷ್ಟೇ ಮುಂಬೈಯಲ್ಲಿ ನಡೆದ ನಗ್ನ ಹಿಂಸೆ. ಪಾಕಿಗಳನ್ನು ವಿಚಾರಿಸಿ ಕೊಳ್ಳಲು ನಾವು ಅಮೆರಿಕೆಯನ್ನಾಗಲೀ ಇನ್ಯಾವುದೇ ರಾಷ್ಟ್ರವನ್ನಾಗಲಿ ಅವಲಂಬಿಸಕೂಡದು ಎಂದು ಚಾಣಕ್ಯಪುರಿಗೆ ಯಾವಾಗ ಹೊಳೆಯುತ್ತದೋ ನೋಡೋಣ. ಹಾಗೇನಾದರೂ ಸುದೈವವಶಾತ್ ಹೊಳೆದಲ್ಲಿ ಅಷ್ಟು ಹೊತ್ತಿಗೆ ನಾವೆಲ್ಲಾ ಪಾಕಿ ಭಯೋತ್ಪಾದಕರಿಗೆ  ಬಲಿಯಾಗದೆ ಜೀವಂತವಾಗಿದ್ದರೆ ನಮ್ಮ ಪುಣ್ಯ ಸಹ ಹೌದು.


ಈ ಮಧ್ಯೆ ಪತ್ರಿಕೆಗಳು ಮತ್ತು ಟೀವೀ ಮಾಧ್ಯಮಗಳು ಒಬಾಮಾ ಪಾಕ್ ಬಗ್ಗೆ ಏನೂ ಹೇಳಲೇ ಇಲ್ಲ ಎಂದು ಮುನಿಸಿಕೊಂಡವು. ನಾವೆಲ್ಲಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಬೇಡಿ ಎಂದು ಪಾಕಿಗಳಿಗೆ ತಾಕೀತು ಮಾಡಬಹುದು ಎಂದು ಬಗೆದಿದ್ದೆವು ಆದರೆ ಅಮೇರಿಕಾ ಎಂದಿಗೂ ಪಾಕಿನ ಮಿತ್ರ ಎಂದು ಸಾಬೀತು ಪಡಿಸಿತು ಎಂದು ಹಲುಬಿದವು ಮಾಧ್ಯಮಗಳು. ಒಂದು ರೀತಿಯ ದೈನಂದಿನ ಬದುಕಿನ ದೃಶ್ಯದ ಥರ ಕಾಣುತ್ತಿಲ್ಲವೇ ಇದು? ಕಮಲಮ್ಮನ ಮನೆಗೆ ಪಕ್ಕದ ಮನೆಯ ಜಾನಕಮ್ಮ ಬಂದು ಸರಸಮ್ಮನ ಬಗ್ಗೆ ಏನೂ ಚಾಡಿ ಹೇಳಿಲ್ಲ ಎಂದು ದೂರುವ ಹಾಗೆ ವರ್ತಿಸಿದವು ಮಾಧ್ಯಮಗಳು ಮತ್ತು ಒಬಾಮಾರ ಭೇಟಿಯ ಬಗ್ಗೆ ಮಾತನಾಡಲು ಬಂದ ಪಂಡಿತರು. ಅಮೇರಿಕಾ ಪಾಕಿನ ಬಗ್ಗೆ ಅಷ್ಟು ಸುಲಭವಾಗಿ ದೂರಲು ಹೋಗೋದಿಲ್ಲ. ಕೆಲವಾರಗಳ ಹಿಂದೆ ಬ್ರಿಟಿಶ್ ಪ್ರಧಾನಿ ಕಮೆರೂನ್ ಬಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದು ಕೊಂಡಿದ್ದರು. ಭಯೋತ್ಪಾದಕತೆ ಶುರು ಆಗೋದೆ ಪಾಕಿನಿಂದ ಎನ್ನುವರ್ಥದ ಮಾತನ್ನು ಹೇಳಿದರು. ಹಾಗೆ ಹೇಳಿದ್ದಕ್ಕೆ ಪಾಕಿನಿಂದ ಉಗ್ರ ಪ್ರತಿಭಟನೆ ಬಂದರೂ ಕಮೆರೂನ್ ಜಗ್ಗಲಿಲ್ಲ. ಆದರೆ ಇದನ್ನು ವೀಕ್ಷಿಸಿದ್ದ ಅಮೆರಿಕೆಗೆ ಇದು ಎಚ್ಚರಿಕೆ ಗಂಟೆಯಾಯಿತು. ಕೆಮೆರೂನ್ ಏನೇ ಹೇಳಿದರೂ ಅವರಿಗೆ ನಷ್ಟವಿಲ್ಲ ಏಕೆಂದರೆ ಆಫ್ಘಾನಿಸ್ತಾನದಲ್ಲಿ ಅವರ ಪಾತ್ರ ದೊಡ್ಡದಲ್ಲ. ಆದರೆ ಅಮೆರಿಕೆಯ ವಿಷಯ ಹಾಗಲ್ಲ. ಕಂದಹಾರದ ಉಗ್ರರನ್ನು ಬಲಿ ಹಾಕಬೇಕೆಂದರೆ ಪಾಕಿನ ಸಹಕಾರ ಬೇಕೇ ಬೇಕು. ನಾವ್ಯಾಕೆ ಬೇಡದ ಉಸಾಬರಿಗೆ ಕೈ ಹಾಕಿ ಕಷ್ಟದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕು. ನಾವು ಬಂದಿರೋದು ವ್ಯಾಪರಕ್ಕೊಸ್ಕರ. ವ್ಯಾಪಾರ ಕುದುರಿಸಿ ಒಂದಿಷ್ಟು ಡಾನ್ಸ್ ಮಾಡಿ ಭಾರತೀಯರನ್ನು ಮೋಡಿ ಮಾಡಿದರೆ ಸಾಕು ಎಂದು ಅಮೆರಿಕೆಯ ಎಣಿಕೆ. ಈ ಕಾರಣಕ್ಕಾಗಿಯೇ ಅಮೆರಿಕೆಯ ದಿವ್ಯ ಮೌನ ಪಾಕ್ ಭಯೋತ್ಪಾದಕತೆ ಬಗ್ಗೆ. ಒಬಾಮ ಬಂದ ಮೊದಲ ದಿನವೇ 10 billion ಡಾಲರ್ಗಳ ವ್ಯಾಪಾರ ಮಾಡಿತು ಅಮೇರಿಕ.


NPR ಅಮೆರಿಕೆಯ ಪ್ರಸಿದ್ಧ ರೇಡಿಯೋ ಮಾಧ್ಯಮ. ಒಬಾಮಾ ಜೊತೆಗೆ ಬಂದಿದ್ದ npr ವರದಿಗಾರ st. xaviers college ನಲ್ಲಿ ನಡೆದ ಅಧ್ಯಕ್ಷರ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ದ ವೇಳೆ ೧೯ ರ ಓರ್ವ ತರುಣಿ ಪಾಕಿನ ಭಯೋತ್ಪಾದನೆ ಬಗ್ಗೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಹೇಳುತ್ತಾ “ಭಾರತಕ್ಕೆ ಪಾಕಿಸ್ತಾನ ಎಂದರೆ ಒಂದು ರೀತಿಯ jealous and rivalry ಎಂದು ಹೇಳಿದ. rivalry ಏನೋ ಸರಿಯೇ. ಆದರೆ jealous ಯಾವುದರ ಬಗ್ಗೆಯೋ ತಿಳಿಯುತ್ತಿಲ್ಲ. ಎಲ್ಲಾ ತೀರ್ಮಾನಗಳಿಗೂ, ನಿರ್ಧಾರಗಳಿಗೂ ಇಸ್ಲಾಮಾಬಾದ್ ಅಮೆರಿಕೆಯ ವಾಷಿಂಗ್ಟನ್ ನಿಂದ dictation ತೆಗೆದು ಕೊಳ್ಳುತ್ತದಲ್ಲಾ, ಪಾಕಿಗಳ ಈ ಬೆನ್ನುಲುಬಿಲ್ಲದ ನಡವಳಿಕೆ ಬಗ್ಗೆ ಇರಬೇಕು ನಮಗೆ ಮತ್ಸರ, jealousy.           


ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕಾರಣಿಗಳಂತೆಯೇ ಭರವಸೆಯನ್ನ ನೀಡಲು ಮರೆಯಲಿಲ್ಲ ಒಬಾಮಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ ಒಬಾಮ ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತ ಜಗಾರೂಕತೆಯಿಂದ ವರ್ತಿಸುವಂತೆ ಸೂಕ್ಷ್ಮವಾಗಿ ಸೂಚಿಸಿದರು. ಆದರೆ ಈ ಆಶ್ವಾಸನೆಯ ಬೆನ್ನಲ್ಲೇ ಬಂದವು ಅಪಸ್ವರಗಳು, ಜರ್ಮನಿ ಮತ್ತು ಜಪಾನ್ ದೇಶಗಳಿಂದ. ಒಬಾಮಾ ನೀಡಿದ್ದು ಆಶ್ವಾಸನೆ ಮಾತ್ರ, ಈ ಆಶ್ವಾಸನೆ ವಿರುದ್ಧವೇ ತಕರಾರು ಬಂದರೆ ಇನ್ನು ವಿಶ್ವಸಂಸ್ಥೆಯಲ್ಲಿ ನಮಗೆ ಯಾವ ರೀತಿಯ ಬೆಂಬಲ ಸಿಕ್ಕೀತು ಎಂದು ಊಹಿಸಲು ನಮಗೆ ರಾಜನೀತಿಯಲ್ಲಿ ಡಾಕ್ಟರೇಟ್ ಪದವಿಯ ಅವಶ್ಯಕತೆಯಿಲ್ಲ.  


ಒಟ್ಟಿನಲ್ಲಿ ಒಬಾಮ ಬಂದರು, ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. ಒಬಾಮ ಎಲ್ಲಿಗೆಹೋದರು, ಏನನ್ನು ತಿಂದರು,  ಹೇಗೆ ಕುಣಿದರು ಇತ್ಯಾದಿ ಇತ್ಯಾದಿ ಪುಂಖಾನುಪುಂಖವಾಗಿ ವರದಿ ಮಾಡಿದವು. ನಮಗೂ ಒಂದು ರೀತಿಯ ಪುಳಕ. ಬಿಳಿಯರ ನಾಡಿನಿಂದ ಒಂದು ಕಾಗೆ ಬಂದಿಳಿದರೂ ನಮ್ಮ ಬದುಕು ಸಾರ್ಥಕವಾಗಿ “ಅತಿಥಿ ದೇವೋ ಭವ”ನನ್ನು ಸಂತುಷ್ಟ ನನ್ನಾಗಿಸಿದ ಭಾವನೆಯಲ್ಲಿ ಧನ್ಯರಾಗಿ ಬಿಡುತ್ತೇವೆ.

Comments