ಅತಿಥಿ ದೇವೋ ಭವ‌

Submitted by santhosha shastry on Tue, 06/05/2018 - 21:39

(ನಮ್ಮ ಮಾಧವ, ಮಾಲತಿ-ದಂಪತಿಗಳಿಬ್ಬರೂ SBI ಉದ್ಯೋಗಿಗಳು. ಸಾಲದ್ದಕ್ಕೆ ಇಬ್ಬರೂ officers.  ಹಾಗಾಗಿ ಇಬ್ಬರೂ ಮನೆ ತಲ್ಪೋದೇ  ಊಟ ಮತ್ತು ವಸತಿಗಾಗಿ! ಮದುವೆಯಾಗಿ 3 ವರ್ಷ ಆದ್ರೂ  ಮಕ್ಕಳಿಲ್ಲ.  ಅವರಲ್ಲೇನೋ ಕೊರತೆ ಇದೇಂತಲ್ಲ – just,  ಪ್ರೈವಸಿಯ ಕೊರತೆ - ಬೇಡಾದ ಅತಿಥಿಗಳಿಂದ.  ಹೇಗಂತೀರಾ? ಬನ್ನಿ ನೋಡೋಣ . . . )
 
ಮಾಲತಿ - ರೀ ಈ office ಸಾಕಾಗ್ಹೋಗಿದೆ.  ಸುಮ್ನೆ ವಾಲಂಟರಿ  ರಿಟೈರ್‍ಮೆಂಟ್ ತೊಗೊಂಬಿಡ್ತೀನಿ.
ಮಾಧವ- ಏ ಹಾಗೆಲ್ಲಾರೂ ಮಾಡ್ಬಿಟ್ಟೀಯಾ! ಯಾಕೆ, ಈ ಸಲ ನಂ. SBIಗೆ 7500 ಕೋಟಿ ನಷ್ಟ ಆಯ್ತೂಂತ್ಲೇ? ಅದೂ NPA ಪ್ರಾವಿಶನ್ನೂಂತ . . . 
ಮಾಲತಿ- ಅಯ್ಯೋ, ನಾನು ಆ ಪ್ರಾವಿಶನ್  ಬಗ್ಗೆ ತಲೆ ಕೆಡಿಸ್ಕೊಂಡಿಲ್ಲಾರೀ.  ನಮ್ಮ ಮನೆ  ಪ್ರಾವಿಶನ್ ಬಗ್ಗೆ ಮಾತಾಡಿ.  ಮನೆಗೆ ಬಂದು ಹೋಗ್ತಿರೋ ಈ ದಂಡಪಿಂಡಗಳಿಂದ  ಮನೆ ಖರ್ಚು ಎರಡರಷ್ಟಾಗಿದೆ.
ಮಾಧವ- ಮತ್ತೆ, ಹೀಗಿರ್ಬೇಕಾದ್ರೆ ಕೆಲ್ಸ ಬಿಡೋ ಮಾತ್ಯಾಕೆ?
ಮಾಲತಿ- ನಂ ಬಾಸ್ ಇದಾನಲ್ಲಾ, ಅವ್ನು  ಮನುಷ್ಯ ವರ್ಗಕ್ಕೆ  ಸೇರಿದ ಪ್ರಾಣಿ ಅಲ್ಲಾಂತ ನನ್ನ ಅನಿಸಿಕೆ. 
ಮಾಧವ- ಬಾಸ್‍ಗಳೆಲ್ಲಾ ಅಷ್ಟೇ ಕಣೇ.  ನಂ ಬಾಸ್ ಇನ್ನೇನು ಅಂತಿಯಾ? ಇವನಿಗೆ ಹೋಲಿಸಿದ್ರೆ, ರಾವಣ, ಕಂಸ, ಇವರುಗಳ ಕೈಕೆಳಗೇ ನಾನು ಹಾಯಾಗಿರ್ತಿದ್ನಾಂತ ಅನ್ಸತ್ತೆ!
ಮಾಲತಿ- ಅಲ್ಲಿಂದ ಮನೆಗೆ ಬಂದ್ರೆ, ಇಲ್ಲಿ ಯಾವಾಗ್ಲೂ  ಅತಿಥಿಗಳ ಕಾಟ.  ರೀ ನಿಜಾ ಹೇಳ್ರೀ.  ನಾವಿಬ್ರೇ ಮನೇಲಿ ಹಾಯಾಗಿ ಇದ್ದದ್ದು last ಯಾವಾಗ?
ಮಾಧವ- ಅದೂ. . . ಅದೂ . . ಪ್ರಾಯಶಃ ಎರಡು ವರ್ಷದ ಹಿಂದೆ, ಫೆಬ್ರವರಿ 30ಕ್ಕೆ!
ಮಾಲತಿ- ಅದ್ಸರೀನ್ನಿ,  ಇಲ್ಲಾಂತ ಡೈರೆಕ್ಟಾಗೂ ಹೇಳ್ಬಹುದು.  ನಾವು ಬೆಂಗಳೂರಿನಲ್ಲಿದೀವಿ ಅನ್ನೋ ಏಕೈಕ ತಪ್ಪಿಗೆ, ಇಡೀ ಕರ್ನಾಟಕದ  ಉದ್ದಗಲ ಹಬ್ಬಿರೋ ನಿಂ ಕಡೆ ಸಂತತಿಯವರೆಲ್ಲಾ  ನಮ್ಮಲ್ಲೇ ಬಂದು ಝಾಂಡಾ ಊರ್ತಾರೆ!
ಮಾಧವ- ಯಾಕೋs. . . ತಂ ಕಡೆ  ಸಂತತಿಯವರೇನು  ಕಡಿಮೇನೇ? ಹೋದ ತಿಂಗಳು ನಿನ್ನ ಚಿಕ್ಕಮ್ಮನ  ಮಗಳ ಸಂಸಾರ ಬಂದು 20 ದಿನ ನಮ್ಮಲ್ಲಿ ಇರಲಿಲ್ವೇ?
ಮಾಲತಿ- ರೀ, ಅವರಾದ್ರೂ  ಹತ್ತಿರದ ಸಂಬಂಧ.  ನಿಂ ಕಡೆಯವ್ರು, ಅದ್ಯಾರೋ ನಿಂ ತಂಗಿಯ ನೆಗಣ್ಣಿ...
ಮಾಧವ- ಆ್ಞಂ, ಏನೇ ಅದು ನೆಗಣ್ಣಿ ಅಂದ್ರೆ?
ಮಾಲತಿ- ನಂಗೇನ್ಗೊತ್ತು, ನೀವೇ ಹೇಳಿದ್ದು.
ಮಾಧವ- ಹೌದಾ, ಏನೋ  ಇರ್ಬಹುದು  ಬಿಡು!
ಮಾಲತಿ- ನಿಂ ತಂಗಿಯ ನೆಗಣ್ಣಿಯ ಮಲತಾಯಿ ಮೊಮ್ಮಗ ಅಂದ್ಕೊಂಡು  ಯಾವನೋ  ಬಂದಿದ್ನಲ್ಲಾ, ಅವನ್ಯಾರೂಂತ ಹೋಗೋವರ್ಗೂ ನಿಮಗೇ  ಗೊತ್ತಾಗ್ಲಿಲ್ಲ!
ಮಾಧವ- ಈಗ್ಲೂ  ಗೊತ್ತಿಲ್ಲ – ಆ ವಿಷ್ಯ ಬೇರೆ ಬಿಡು. ಇಲ್ಲಾ, ಈ ವಿಚಾರದಲ್ಲಿ ನಾವು serious ಆಗಿ ಒಂದು ತೀರ್ಮಾನಕ್ಕೆ ಬರ್ಬೇಕು.
ಮಾಲತಿ- ನಾನೂ ಅದೇ ಹೇಳ್ಬೇಕೂಂತಿದ್ದೆ.  ಮದುವೆ ಆದಾಗಲಿಂದ  ಈವರೆಗೆ ಮೊದಲ ಸಲ ನಾವಿಬ್ರೂ ಒಂದೇ ಯೋಚನೆ ಮಾಡಿದೀವಿ ನೋಡಿ!
ಮಾಧವ- Yes,  ನಿಂ ಕಡೆಯವರು ಯಾರಾದ್ರೂ ಬಂದ್ರೆ, ನೀನು ಏನಾದ್ರೂ ನೆಪ ಹೇಳಿ, avoid ಮಾಡು. ನಂ ಕಡೆಯವರನ್ನು  ನಾನು  avoid ಮಾಡ್ತೀನಿ. ಏನಂತಿಯಾ? 
ಮಾಲತಿ- ನಂದೇನೋ ok,  ನಿಮ್ದೇ  doubt ನಂಗೆ! 
ಮಾಧವ- ಏಯ್, ನನ್ಮೇಲೇ ಡೌಟಾ ನಿಂಗೇ? ನಾನು . . (ಅಷ್ಟರಲ್ಲಿ ಫೋನು ರಿಂಗಾಗುತ್ತೆ) ತಡಿ, ಫೋನಲ್ಲಿ ಮಾತಾಡಿ ನಿನಗೆ ತಕ್ಕ ಉತ್ತರ ಕೊಡ್ತೀನಿ. . ಹಲೋ ಯಾರು, ಓ ಗೋವಿಂದಾನಾ? ಹೇಗಿದಿಯಪ್ಪ ಎಲ್ಲಿದ್ದೀಯಾ ಈಗ?  ಬೆಂಗ್ಳೂರಲ್ಲಾ? . . . ಒಂದ್ನಿಮ್ಷ ನನ್ಮಾತು ಕೇಳಪ್ಪಾ . . . ಅಯ್ಯೋ, ನಂಗೂ ಮಾತಾಡಕ್ಕೆ ಬಿಡು . . .ಓಹೋ . . . (ನಿಟ್ಟುಸಿರು)
ಮಾಲತಿ- ಏನ್ರೀ, ಏನಾಯ್ತ್ರೀ?
ಮಾಧವ- ಸಾರಿ ಕಣೇ, ನಿನ್ನಿಂದ  ಒಂದು  help  ಆಗ್ಬೇಕು.
ಮಾಲತಿ- ರಾಯರೇನೋ ದೊಡ್ಡ ಖೆಡ್ಡಾ ಹಾಕ್ತಿರೋ ಹಾಗಿದೆ!
ಮಾಧವ- ಹಾಗೇನಿಲ್ಲ. ನಂ ದೊಡ್ಡಮ್ಮನ ಮಗ ಗೋವಿಂದೂ ಬಂದಿದ್ದಾನಂತೆ ಬೆಂಗ್ಳೂರಿಗೆ..
ಮಾಲತಿ- ಪ್ರಶ್ನೇನೇ ಇಲ್ಲಾ. ಈಗ್ತಾನೇ ತೀರ್ಮಾನಕ್ಕೆ ಬಂದಿದ್ದೀವಿ. ಹೇಗಾದ್ರೂ ಸಾಗಹಾಕಿ ಅವನನ್ನ.
ಮಾಧವ- ಏ ಅದೊಂದು ವಿಚಿತ್ರ ಪ್ರಾಣಿ ಕಣೇ.  ಡೈರೆಕ್ಟಾಗಿ ಹೋಗೋ ಅಂದ್ರೂ ಹೋಗಲ್ಲ, ಅಂಥದ್ದು. ನಾನು  ಅವನನ್ನ ಮನೇಗೆ ಸೇರಿಸ್ಲಿಲ್ಲಾಂದ್ರೆ, ಊರಲ್ಲಿ, ನನ್ನ ಇರೋ ಬರೋ ಮಾನಾನೆಲ್ಲ ಹರಾಜು ಹಾಕಿ ಬಿಡ್ತಾನೆ ಅಷ್ಟೇ.
ಮಾಲತಿ- ಅವೆಲ್ಲಾ ಕಥೆ ಬಿಡ್ಬೇಡಿ. ಎಲ್ರೂ ಅಷ್ಟೇನೇ. ಬೇಡಾಂದ್ರೆ ಬೇಡಾ ಅಷ್ಟೇ.
ಮಾಧವ- ಇದು ಎಲ್ರ ಥರಾ ಅಲ್ಲಾ ಕಣೇ.  specimenಊ. ಸಾಗಹಾಕೋ ಜಾತೀದೇ ಅಲ್ಲಾ. ಅದಕ್ಕೇ ಕಣೇ ನಿನ್ನ  help ಕೇಳ್ತಿರೋದು. ಇದೊಂದ್ಸಲ  adjust ಮಾಡ್ಕೊಂಡ್ಬಿಡು ಪ್ಲೀಸ್.
ಮಾಲತಿ- ಹಾಳಾಗ್ಹೋಗ್ಲಿ. ಎಷ್ಟು ದಿವ್ಸ ಇರತ್ತಂತೋ ಈ ಪ್ರಾಣಿ?
ಮಾಧವ- ಅದೇ ಗೊತ್ತಿಲ್ಲ ಕಣೇ. ನಾಳೆ ಬಂದಾಗ ಕೇಳ್ಬೇಕು. (ಅಷ್ಟರಲ್ಲಿ calling bell ಶಬ್ದ. ಮಾಧವ ಬಾಗಿಲು ತೆಗೆಯುತ್ತಾನೆ)
ಗೋವಿಂದ- ಹಾಯ್ ಮಾಮ್ಸ್. ನಮಸ್ತೇ ಅತ್ತಿಗೆ.  ನಾನು ಗೋವಿಂದೂ ಅಂತ.
ಮಾಧವ- ಏ. .  ಏನೋ ಗೋವಿಂದೂ,  ನಾಳೆ ಬರ್ತೀನಿ ಅಂದಿದ್ಯಲ್ಲೋ!?
ಗೋವಿಂದ- ಸಂತ ಕಬೀರದಾಸರು  ಹೇಳಿಲ್ವೇ? – ಕಲ್ ಕರೇತೋ ಆಜ್ ಕರ್, ಆಜ್ ಕರೇತೋ ಅಬ್! . . . ಹೇಗಿದೇ surprise? . . . ಹ್ಹ ಹ್ಹ ಹ್ಹ ಹಿಡಿಸಲಿಲ್ವಾ? Ok . . . 
ಮಾಧವ- ಅಲ್ಲಲೇ, ಅದೂ . . . 
ಗೋವಿಂದ- ಅದೂ ಇಲ್ಲ. ಇದೂ ಇಲ್ಲ. ಅತ್ತಿಗೇ, ನಿಮ್ಮ ಅಮೃತೋಪಮ ಕೈಗಳಿಂದ ಒಂದು ಅಮೃತೋಪಮ ಕಾಫಿ ಮಾಡ್ಬಿಡಿ. ದಾರೀಲಿ ಕಾಕಾ ಅಂಗ್ಡೀಲಿ ಟೀ ಕುಡಿದು  ಬಾಯೆಲ್ಲ ಎಕ್ಹುಟ್ಹೋಗಿದೆ! ಊಟಕ್ಕೆ ಜಾಸ್ತಿ ಮಾಡಕ್ಹೋಗಬೇಡಿ. ಅನ್ನ ಸಾರು ಸಾಕು. ನೀವಂತೂ ಶಿರ್ಸಿ ಕಡೆಯವ್ರು . .  ಬೇಡಾಂದ್ರೂ ಹಪ್ಪಳ, ಹಶೀ, ಗೊಜ್ಜು ಮಾಡೋವ್ರೇನೇ . ಅಲ್ವೇ? ಅಂದ್ಹಾಗೆ ಎಲ್ಲಮ್ಮಾ ನನ್ರೂಮು? ಥ್ಯಾಂಕ್ಯೂ . . . (ಹಿನ್ನೆಲೆ ಹಾಡು: `ವಿವಾಹ ಭೋಜನವಿದು . . . ')
 
ಅಂಕ – 2
ಮಾಲತಿ- ರೀ, ಎಲ್ಲಿಂದ ಗಂಟ್ಹಾಕಿದ್ರಿ ಈ ಶನೀನಾ? ಎರಡು ವಾರ ಆಯ್ತು. ಹೋಗೋ ಮಾತೇ ಇಲ್ಲ! ಅವ್ನೋ, ಅವ್ನ ಹೊಟ್ಟೇನೋ, ಕಾಫಿ, ತಿಂಡಿ, ಊಟ ಎಲ್ಲಾ ಪಾಂಕ್ತವಾಗಿ  ಕಾಲಕಾಲಕ್ಕೆ ಆಗ್ಬೇಕು! ಬಸರಿ/ಬಾಣಂತಿಯರಿಗೂ ಇಷ್ಟೊಂದು ಸೇವೆ ಮಾಡೋದಿಲ್ಲಾಪ್ಪ!
ಮಾಧವ- ನಾ ಮೊದ್ಲೇ ಹೇಳ್ಳಿಲ್ವಾ, ಇದೊಂದು ಸ್ಪೆಸಿಮನ್ನು, ಇನ್ನೊಬ್ಬರ ಪರಿಸ್ಥಿತಿಯನ್ನ ಅರ್ಥ ಮಾಡ್ಕೊಳ್ಳೋದೇ ಇಲ್ಲಾ.  ನಾವೇ ಏನಾದ್ರೂ plan ಮಾಡಿ ಆಚೆ ತಳ್ಬೇಕು.
ಮಾಲತಿ- ರಿ ನಂಗೊಂದು plan  ಹೊಳೀತು.  ಇವತ್ತು ಸಂಜೆ ಅವ್ನು  ಬಂದಾಗ ಹೇಳಿ - `ಗೊವಿಂದೂ, ನಾವ್ನಾವೇ ಇದ್ದು ಬೋರಾಗಿದೆ. ಇವತ್ತು ಹೊರಗಡೆ ಹೋಟಲಿಗೆ ಹೋಗೋಣ' – ಅಂತ. ಕೆಟ್ಟ ಹೋಟಲಿಗೆ ಕರ್ಕೊಂಡ್ಹೋಗಿ, ಅವನಿಗಷ್ಟೇ ಚೆನ್ನಾಗಿ ತಿನ್ಸಿ, ನಮಗೆ ಏಕಾದಶಿ ಉಪವಾಸ ಅಂತ ಹೇಳಣ. ಅವ್ನ ಹೊಟ್ಟೆ ಕೆಟ್ಟು ಮಲಗ್ಬಿಡಬೇಕು. ಆಮೇಲೆ ಮತ್ಯಾವತ್ತೂ ಅವ್ನು ಈ ಕಡೆ ತಲೆ ಹಾಕಿಯೇ ಮಲಗ್ಬಾರ್ದು! ಹಾಗಾಗತ್ತೆ ನೋಡೀ.
ಮಾಧವ- ಆಹಾ, ಏನ್ ತಲೇನೇ! ಈ ಥರದ  thinking ನಲ್ಲಿ ನಿಮ್ಮನ್ನ ಮೀರಿಸ್ಲಿಕ್ಕೆ ಆಗಲ್ಲ ನೋಡು! 
ಮಾಲತಿ- ಏನಂದ್ರೀ?
ಮಾಧವ- ಏನಿಲ್ಲ, ಸುಮ್ನೆ  ಅಂದೆ. ಅದೇ ಮಾಡೋಣ. ನಂಗೂ ಸಾಕ್ಸಾಕಾಗ್ಹೋಗಿದೆ!
(ಗೋವಿಂದನ ಆಗಮನ)
 
ಗೋವಿಂದ- Sorry, ಗಂಡ ಹೆಂಡ್ತಿ ಮಧ್ಯೆ ಕರಡಿ ಹಾಗೆ ಬಂದ್ಬಿಟ್ಟೆ!
ಮಾಧವ- ಅಯ್ಯೋ, ಅದರಲ್ಲಿ ಹೊಸತೇನಿದೆ ಬಿಡು!
ಗೋವಿಂದ- ಆ್ಞಂ!
ಮಾಧವ- ಅದಿರ್ಲಿ, ನಾನು ನಿನಗೆ ಬೆಳಿಗ್ಗೇನೇ ಒಂದ್ಮಾತು ಹೇಳ್ಬೇಕೂಂತಿದ್ದೆ.
ಗೋವಿಂದ- Oh, what a co-incidence, ನಾನೂ ಹೇಳ್ಬೇಕೂಂತಿದ್ದೆ. Ok, Seniors first, ಹೇಳು.
ಮಾಧವ- ನಾವು ಮೂರೇ ಜನ ಪ್ರತಿದಿನ ಊಟಕ್ಕೆ ಕೂತು ಬೋರಾಗಿದೆ ಅದಕ್ಕೇ . . . 
ಗೋವಿಂದ- Correct ಮಾಧೂ, ನಾನೂ ಅದೇ ಹೇಳ್ಬೇಕೂಂತಿದ್ದೆ.  ನೋಡು ನನ್ನ ನಿಮ್ಮ ಯೋಚನೆಗಳು ಹೇಗೆ ಮ್ಯಾಚ್ ಆಗುತ್ವೇಂತ.  ಬೆಳಿಗ್ಗೆ ನಾನು ಕೃಷ್ಣಂಗೆ ಫೋನ್ ಮಾಡಿದ್ದೆ. ಕೃಷ್ಣ ಗೊತ್ತಾಗ್ಲಿಲ್ವಾ? ಅದೇಪ್ಪಾ ನಾನೂ ನೀನೂ  ಸೇರಿ ಅವ್ನ ಡವ್‍ನ  ಚುಡಾಯ್ಸಿದ್ವಿ ಅಂತ  ಹಿಗ್ಗಾಮುಗ್ಗಾ ತದ್ಕಿದ್ನಲ್ಲಾ 8ನೇ ಕ್ಲಾಸಲ್ಲಿ. ಅದೇ ಕೃಷ್ಣ. ನನ್ನ ದೂರದ ಸಂಬಂಧಿ. ಅವ್ನು ಇಲ್ಲೇ ಗಿರಿನಗರದಲ್ಲಿದಾನಂತೆ.  ಅವನನ್ನ ಇಲ್ಲಿಗೇ ರಾತ್ರಿ ಊಟಕ್ಕೆ ಕರ್ದಿದೀನಿ!
ಮಾಧವ- (ಸಿಟ್ಟಿನಿಂದ) ಅವನನ್ನಷ್ಟೇ  ಯಾಕಪ್ಪಾ, ಅವನ ಪಟಾಲಂಗೂ  ಕರೀಬೇಕಿತ್ತು!
ಗೋವಿಂದ- ವಾಹ್, ನಂಗೊತ್ತಿತ್ತು ನೀನು ದಿಲ್ದಾರ್ ಮನುಷ್ಯಾಂತ. ಅವನು 2-3 ಫ್ರೆಂಡ್ಸ್ ಜೊತೆಗೇ ಬರ್ತಿರೋದು.
ಮಾಧವ- ಆ್ಞಂ!
ಗೋವಿಂದ- ಹೋಟಲಿಗೆ ಹೋಗೋಣವಾ ಅಂದ. `ಅಯ್ಯೋ ಕತ್ತೆ ಮುಂಡೇದೇ, ಅಂಥ ಹೊರನಾಡು  ಅನ್ನಪೂರ್ಣೇಶ್ವರಿಯ ಅಪರಾವತಾರವಾಗಿರೋ ಅತ್ತಿಗೆ ಮುಂದೆ ಹೋಟೆಲ್ ಹೆಸರ್ಹೇಳಿದ್ರೆ ನಾಶವಾಗ್ಹೋಗ್ತಿಯಾ' ಅಂತ ಬೈದೆ! (ಹಿ. ಹಾಃ `ಅನ್ನಪೂರ್ಣೇಶ್ವರಿ ಸ್ತುತಿ. . . ) ಹೋಟೆಲ್‍ಗೆ  ಹೋಗಿ ಹೊಟ್ಟೆ ಕೆಡಿಸ್ಕೋಬೇಕೇ? ಅತ್ತಿಗೇs  ಇದು ನಿಮ್ಮ ಮಾನಾಪಮಾನದ ಪ್ರಶ್ನೆ. ಅವರನ್ನ ಎಷ್ಟು ಚೆನ್ನಾಗಿ ಸತ್ಕರಿಸುತ್ತಿರೋ ನಿಮಗೇ ಬಿಟ್ಟದ್ದು.  ಎಷ್ಟಂದ್ರೂ ಶಿರ್ಸಿ ಕಡೆಯವ್ರು. ಅಣ್ಣಾ, ಮಾಧವ, ಸ್ವಲ್ಪ ಅತ್ತಿಗೇಗೆ  help ಮಾಡಪ್ಪಾ - ಸುಮ್ನೆ ನಿಂತ್ಬಿಟ್ಟಾ ಗೋಮಟೇಶನ ಥರಾ .  ಹ್ಹ ಹ್ಹ ಹ್ಹಾ. . . . ಯಾಕೆ ಜೋಕ್ ಹಿಡಿಸಲಿಲ್ವಾ? Ok. . . . 
ಮಾಧವ- ಮಾಲತೀ . . . 
ಮಾಲತಿ- ಅಡುಗೆ ಮನೆಗೆ ಬನ್ನಿ, ನಿಮಗೆ ಇದೆ ಇವತ್ತು!
--
 
 
 
ಅಂಕ-3
ಮಾಲತಿ- ರೀ ಒಂದು ತಿಂಗಳು ಮುಗಿದು,  ಹದಿನೈದು ದಿವ್ಸ ಆಗ್ತಾ ಬಂತು.
ಮಾಧವ- ವಾವ್, Good news ಏನೇ?
ಮಾಲತಿ- Good news ಏನ್ಬಂತು, ನಿಮ್ಮ  ಮುಖಕ್ಕಿಷ್ಟು! ನಾ ಹೇಳಿದ್ದು, ಆ ಶನಿ ಬಂದು ಒಂದೂ ವರೆ ತಿಂಗಳು ಆಯ್ತೂಂತ! ನನ್ನ plan work out ಆಗ್ಲಿಲ್ಲ. ನೀವೇ ಏನಾರಾ plan ಮಾಡಿ.
ಮಾಧವ- ಹೌದು, ದೇವ್ರು ಯಾಕೋ ನಮ್ಮ ಮೇಲೆ ಕೋಪಿಸಿಕೊಂಡ್ಹಾಂಗಿದೆ. ನಕ್ಷತ್ರಿಕನೂ ಹರಿಶ್ಚಂದ್ರನ್ನ ಇಷ್ಟು ಸತಾಯಿಸ್ತಿರ್ಲಿಲ್ಲ ಅನ್ಸತ್ತೆ (ಯೋಚಿಸಿ) ಹೀಗೆ ಮಾಡಿದರೆ ಹೇಗೆ? ನಿನಗೆ 15 ದಿವಸ training ಬಂದಿದೇಂತ  ಹೇಳಿಬಿಡಲಾ?
ಮಾಲತಿ- ಹಾಗ್ಹೇಳಿದ್ರೆ ಮುಗೀತು. ನೀವುಗಳು ಮನೇನೇ  ಬಾರ್ ಮಾಡ್ಕೊಂಡ್ಬಿಡ್ತೀರಾ. . (ಹಿ.ಹಾಃ `ಜಾಲಿಬಾರಿನಲ್ಲಿ ಪೋಲಿ ಹುಡುಗರು . . ') ನಾವುಗಳು ನೆಟ್ಟಗಿರ್ತೀವಿ. ಹಂಸದ ಥರಾ ಚೂಸೀ. ಹಾಲೊಂದ್ಕಡೆ, ನೀರೋಂದ್ಕಡೆ ಇಟ್ರೆ ಹಾಲು ಕುಡಿದು, ನೀರನ್ನ ಬಿಡ್ತೀವಿ.
ಮಾಧವ- ನಾವೂ ಅಷ್ಟೇನಮ್ಮಾ, ಬೀಚಿ ಹೇಳ್ದಂಗೆ, ಹಾಲು ಕುಡಿದು, ನೀರು ಬಿಡ್ತೀವಿ, ಸ್ವಲ್ಪ ಹೊತ್ತಾದ್ಮೇಲೆ! ಅಷ್ಟೇ.
ಮಾಲತಿ- ಛೀ, ಏನೂಂತ ಮಾತಾಡ್ತೀರೋ.. ಅದಿರ್ಲಿ , ಆ training ನಿಮ್ದೂಂತ ಹೇಳಿದ್ರೆ ಹೇಗೆ? ಆಗ್ಲೂದ್ರೂ ಪ್ರಾಣಿ `location shift' ಅಂದಾನು.
ಮಾಧವ- Yes, correct, we will try that (ಗೋವಿಂದನ ಆಗಮನ)
ಗೋವಿಂದ- Oh sorry, ಗಂಡ ಹೆಂಡ್ತಿ ಮಧ್ಯೆ . . . .
ಮಾಧವ- ಓ ಸುಮ್ನಿರಪ್ಪಾ, ನೀನು ಕರಡಿ ಹಾಗೇ ಬಂದೆ!  ಪ್ರತಿ ದಿವಸಾ ಅದೇ ಮಾತ್ ಹೇಳ್ಬೇಡಾ, ತಲೆ ನೋಯತ್ತೆ.
ಗೋವಿಂದ- Relax ಮಾಧೂ,  relax. ಗಂಡ ಹೆಂಡ್ತಿ ಮಧ್ಯೆ ಜಗಳ ಆಗ್ತಿದ್ಯಾ ಅಂತ ಕೇಳೋಕೆ ಹೊರಟಿದ್ದೆ! ಗಂಡಾ-ಹೆಂಡ್ತಿ ಅಂದ್ರೇ ಜಗಳಾ . . ಹ್ಹ ಹ್ಹ ಹ್ಹಾ . . . ಯಾಕೆ joke  ಹಿಡಿಸಲಿಲ್ವಾ? Ok . . . 
(ಹಿ.ಹಾಃ `ಸೂರ್ಯಂಗೂ ಚಂದ್ರಂಗೂ ಬಂದಾsರೆ ಮುನಿಸು . . ) 
ಮಾಧವ- ಗೋವಿಂದೂ, ನಿಂಗೊಂದ್ ಮಾತ್ ಹೇಳ್ಬೇಕಮ್ಮಾ.
ಗೋವಿಂದ- ಒಂದೇನು, ಸಾವಿರ ಹೇಳಮ್ಮಾ, ನಾನಿರೋದೇ ನಿಮಗಾಗಿ.
ಮಾಧವ- ನನಗೆ ಒಂದ್ ಹದಿನೈದು ದಿವಸ ಡೆಲ್ಲೀಲಿ  training ಗೆ ಹಾಕಿದಾರೆ. ಅದಕ್ಕೇ ನೀನು . . .
ಗೋವಿಂದ- Ok, ok, ಮುಂದೇನೂ ಹೇಳ್ಬೇಕಾಗಿಲ್ಲ ನೀನು. ನಂಗೆಲ್ಲಾ ಅರ್ಥ ಆಗುತ್ತೆ.
ಮಾಧವ- ಅಬ್ಬಾ ಅಂತೂ ಅರ್ಥ ಆಯ್ತಲ್ಲಾ.
ಗೋವಿಂದ- (ಯೋಚಿಸಿ, ನಿಟ್ಟುಸಿರು ಬಿಟ್ಟು) Ok, I have come to a conclusion.
ಮಾಧವ- ಯಾವಾಗ ಹೊರಡ್ತೀಯಪ್ಪಾ? ಟಿಕೆಟ್ ಬೇಕಿದ್ರೆ ನಾನು ಬುಕ್ ಮಾಡ್ತೀನಿ.
ಗೋವಿಂದ- ಥೂ ಬಿಡ್ತೂನ್ನು, ನಾನ್ಯಾಕೆ  ಹೋಗ್ಲಿ. ಅದೂ ಪಾಪ ಅತ್ತಿಗೇನ ಒಬ್ಬಂಟಿಯಾಗಿ ಬಿಟ್ಬಿಟ್ಟು!
ಮಾಧವ- ಏ ಅವೆಲ್ಲಾ ಯೋಚನೆ ಮಾಡಬೇಡ, ಇದು ಬೆಂಗ್ಳೂರಮ್ಮ. ನಂ ಹಳ್ಳಿ ಅಲ್ಲಾ.
ಗೋವಿಂದ- ನೀ ಏನೇ ಹೇಳು, ನನಗೆ ತುತ್ತನ್ನ ನೀಡಿದ ದೇವತೇನ ನಾನು ನಡು ನೀರಲ್ಲಿ ಕೈ ಬಿಡಲಾರೆ. (ಹಿ. ಹಾಃ `ಕೈ ತುತ್ತು ಕೊಟ್ಟೋಳೇ Mother India. . ') ಎರಡು ದಿವಸ ಬಿಟ್ಟು ಹೋಗೋಣಾಂತಿದ್ದೆ.  ಈಗ, ಹೀಗಾದ್ಮೇಲೆ, ಮೂರು ವಾರ ಬಿಟ್ಟೇ ಹೋಗ್ತೀನಿ, ಬಿಡು.
ಮಾಧವ- ಛೇ ಛೇ ನಿನ್ನ  plan  ಪ್ರಕಾರ ನೀನು ಹೋಗಪ್ಪಾ. ಅಡ್ಡಿ ಏನಿಲ್ಲ. ನನ್ನ  training ನ ನಾನು ಬೇಕಾದ್ರೆ  cancel  ಮಾಡಿಸ್ಕೋತೀನಿ.
ಗೋವಿಂದ- ನೀ ಹೇಳಿದ್ರೆ ಆಗ್ಬಿಡತ್ತಾ? ಈ  office ಗಳಲ್ಲಿ ನಾವಂದ್ಕೊಂಡ್ಹಾಗೆ ಆದ್ರೆ ಮುಗೀತು ಕತೆ, ಅಲ್ವಾ ಅತ್ತಿಗೆ?  ಈಗ ಟೆನ್ಶನ್ನೇ ಬೇಡಪ್ಪಾ. ನಿನ್ನ  training ಅನ್ನೋ ತೂಗುಗತ್ತಿ ನಿಲ್ಲೋವರ್ಗೂ, ಅಂದ್ರೆ ಒಂದ್ಮೂರು ವಾರದ ವರ್ಗೆ ನಾನು ಹೋಗೋ ಕಥೇನೇ ಉದ್ಭವಿಸೋದಿಲ್ಲ. Ok?
ಮಾಧವ- ಗೋವಿಂದಾs . . . . 
ಗೋವಿಂದಾ- ನಾನಿದೀನಲ್ಲಮ್ಮಾ?
ಮಾಧವ - ಅದಕ್ಕೇ ಕಣೋ, ಆ ಗೋವಿಂದನ್ನ ನೆನೆಸಿದ್ದು!
- - -
ಅಂಕ-4
ಮಾಲತಿ- ರೀ ನನಗೆ ಹುಚ್ಚು ಹಿಡಿಯೋದೊಂದು ಬಾಕಿ . ಕಸಾ ಕೊಟ್ರೂ ತಿಂತಾನಲ್ರೀ ನಿಮ್ ಶಿಷ್ಯ. ಚೋರ್ ಗುರು ಚಾಂಡಾಲ ಶಿಷ್ಯ.
ಮಾಧವ- ಏs,   ನಂಗ್ಯಾಕೇ ಬೈತೀಯಾ? ಪೀಡೆ ಕಳ್ಕೊಳೋಕ್ಕೆ ನಾನು  try ಮಾಡ್ತಿಲ್ವಾ?
ಮಾಲತಿ- ನಿಂ  plan  ಎಂಥದ್ದು ಅಂತ prove ಆಯ್ತಲ್ಲಾ.  ಹೋದೆಯಾ ಪಿಶಾಚಿ ಅಂದ್ರೆ, ಬಂದೇ ಗವಾಕ್ಷೀಲಿ ಅಂತ ವಕ್ರಿಸಿಕೊಂಡ್ತು!
ಮಾಧವ- ಏನೋ ಆ plan boomerang ಆಯ್ತು, ಏನ್ಮಾಡ್ಲೀ.
ಮಾಲತಿ- ಇದು  continue ಆದ್ರೆ ನಾನು loss of pay ಹಾಕಿ  ಶಿರ್ಸಿಗೆ ಹೋಗ್ಬಿಡ್ತೀನಿ.
ಮಾಧವ- ಹಾಗೆಲ್ಲಾ ಮಾಡ್ಬಿಟ್ಟೀಯೆ! ಇದು ನನ್ನ ಜೀವಕ್ಕೇ ಅಂಟ್ಕೊಂಡ್ ಬಿಡತ್ತೆ! (ಹಿ.ಹಾಃ `ಕುಚುಕು, ಕುಚುಕು . . . ') ನೀನು ವಾಪ್ಸು  ಬರೋವರ್ಗೂ ಹೋಗಲ್ಲಾ ಅಂದ್ರೆ ನನ್ನ ಗತಿ! ಏನಾರೂ strong plan  ಮಾಡಣ.
ಮಾಲತಿ- ಏನು ಪ್ಲಾನೋ ಏನೋ? ವೋ ತೋ ಜಾನೇ ಕಾ ನಾಮ್ಹೀ ನಹ್ಞೀ ಲೇತಾ!
ಮಾಧವ- ವಾವ್ . . Idea . . ವೋ ನಹ್ಞೀ ಜಾತಾ ತೋ ಹಂ ಜಾ ಸಕ್ತೇ ನಾ?
ಮಾಲತಿ- ಅಂದ್ರೇ?
ಮಾಧವ- ಅದೇ ಕಣೇ, ಇದೇ ನಂ ಹೊಸಾ ಪ್ಲಾನು. Of course ಆಖರೀ ಪ್ಲಾನು.
ಮಾಲತಿ- Details  ಪ್ಲೀಸ್
ಮಾಧವ- ನಾವಿಬ್ರೂ 15 ದಿವಸ  Honeymoon Tourಗೆ  ಬುಕ್ ಮಾಡಿದೀವಿ ಅಂತ ಹೇಳೋಣ.  ನಾನೊಬ್ನೇ ಇಲ್ಲಿ ಇರ್ತೀನಿ ಅಂತ  ಖಂಡಿತಾ ಹೇಳಲ್ಲ. ಯಾಕೇಂದ್ರೆ  ಹೊತ್ಹೊತ್ತಿಗೆ  ಕೂಳು ಸಿಗಲ್ವಲ್ಲಾ? ಏನಂತೀ?
ಮಾಲತಿ- ಹೌದ್ರೀ,  ಅಪರೂಪಕ್ಕೆ ನಿಮ್ಮ ಮೆದಳೂ ಕೆಲಸ ಮಾಡತ್ತೆ!
ಮಾಧವ- ಏನಂದೇ!
ಮಾಲತಿ- ತಮಾಷೆಗಂದೆ, But ಇದು work out ಆಗುತ್ತಾ?
ಮಾಧವ- ಯಾಕಾಗಲ್ಲ, ನೋಡ್ತಿರು.
(ಗೋವಿಂದೂ ಆಗಮನ)
ಗೋವಿಂದ- Oh sorry, ಈ ಸಾರಿ ಗಂಡ ಹೆಂಡ್ತಿ . . . . . 
ಮಾಧವ- ಮತ್ತೆ . . . .
ಗೋವಿಂದ- No No No .  .  ಗಂಡ ಹೆಂಡ್ತಿ ಸೇರಿ ನನ್ನನ್ನ ಸಾಗ ಹಾಕ್ಲೀಕೆ ನೋಡ್ತಾ ಇದ್ಹಾಂಗಿದೆ ಅಂದೆ! ಹ್ಹ ಹ್ಹ ಹ್ಹಾ . . . ಯಾಕೆ joke  ಹಿಡಿಸಲಿಲ್ವಾ, Ok. . . . 
ಮಾಧವ- ಗೋವಿಂದೂ, ಅದೂ ಕಳೆದ 1 ವರ್ಷದಿಂದ ನಾವು ದಂಪತಿಗಳು ಎಲ್ಲೂ ಹೋಗೇ ಇಲ್ಲ.  ಅದಕ್ಕೇ  ಒಂದ್ ಹದಿನೈದು ದಿವ್ಸ, ರಜಾ ಹಾಕಿ  North India Tour  ಹೋಗೋಣಾಂತ.  `ಆನಂದ ವಿಹಾರಿ'ನಲ್ಲಿ 2 ಸೀಟ್ book ಮಾಡಿದೀವಿ.  ಅದೂ ಬರೋ ಭಾನುವಾರದಿಂದ‌. ಲೇಟಾಗಿ book ಮಾಡಿದ್ದಕ್ಕೆ ನಮ್ದೇ ಎರಡು ಲಾಸ್ಟ್ ಸೀಟಂತೆ!
ಗೋವಿಂದ- ವಾವ್, What an idea sirjee!! `ಆನಂದ ವಿಹಾರಿ'ಯವ್ನು ನನ್ನ close friend.  ಈಗ್ಲೂ ನಾನು officeಗೆ  ಅವ್ನು ಕೊಟ್ಟಿರೋ bagನ್ನೇ ತೊಗೊಂಡ್ಹೋಗೋದು! (ಪ್ರೇಕ್ಷಕರತ್ತ ತಿರುಗಿ, `ಅಲ್ವೇನ್ರಪ್ಪಾ? ಹ್ಞೂ ಅನ್ನಿ') ಅವ್ನು ನನಗೆ ಇಲ್ಲಾ ಅನ್ನೋದೇ ಇಲ್ಲ.  Driverನ ಇಳಿಸಿಯಾದ್ರೂ ನನ್ನ ಕೂರಿಸ್ತಾನೆ! ಅಷ್ಟಕ್ಕೂ  ನಾನು, seat  ಇಲ್ಲಾಂದ್ರೆ ನಿಂತ್ಕೊಂಡು ಬರೋಕೂ ರೆಡಿ! ನನಗಾಗಿ ಅಲ್ದಿದ್ರೂ, ಇಷ್ಟ್ ದಿವ್ಸ ನಿಂ ಜೊತೆ ಇದ್ದು, ನಿಮಗೆ ನನ್ನ ಕಂಪನಿ ಇಲ್ಲಾಂತ, ಬೇಜಾರಾಗ್ಬಾರ್ದು ಅಲ್ವಾ, ಅದಕ್ಕಾಗಿ!
ಇಬ್ಬರೂ- ವೆಂಕಟರಮಣ ಗೋವಿಂದಾs ,  ಗೋವಿಂದ!
---