ಅತಿಥಿ ಮತ್ತು ಕೋತಿ

ಖ್ಯಾತ ಕಾದಂಬರಿಕಾರ, ಕಥೆಗಾರ ವಸುಧೇಂದ್ರ ಹೇಳುತ್ತಾರೆ “ನನ್ನ ಹಲವು ಓದುಗರು ವಿಶೇಷ ಕೋರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ‘ಕೊರೋನಾ ಕಾರಣದಿಂದಾಗಿ ಮನಸ್ಸು ಖಿನ್ನತೆಗೆ ಜಾರುತ್ತಿದೆ, ಮನೆಯ ಬಂಧನದಿಂದಾಗಿ ಮನಸ್ಸಿಗೆ ಒತ್ತಡವಾಗುತ್ತಿದೆ. ಆ ಕಾರಣದಿಂದ ದಯವಿಟ್ಟು ನಿಮ್ಮ ಹಾಸ್ಯಲೇಪಿತ ಪ್ರಬಂಧಗಳನ್ನು ಈ ಲಾಕ್‌ಡೌನ್ ಮುಗಿಯುವ ತನಕ ಹಂಚಿಕೊಳ್ಳಿ. ಮನಸು ತುಸು ಹಗುರವಾಗುತ್ತದೆ’ ಎಂದು ಕೇಳಿದ್ದಾರೆ. ಸಾಕಷ್ಟು ಜನರು ಸಾವು, ನೋವಿನಲ್ಲಿ ನರಳುತ್ತಿರುವುದು ಸತ್ಯವಾದರೂ, ಉಳಿದವರು ಭಯ ಮತ್ತು ಆತಂಕಗಳಿಂದ ಬಳಲುತ್ತಿರುವುದೂ ಅಷ್ಟೇ ಸತ್ಯ. ಅಂತಹ ಕುದಿಯನ್ನು ಈ ಲಘು ಹಾಸ್ಯದ, ಚೂರು ಉತ್ಪ್ರೇಕ್ಷೆಯ ಪ್ರಬಂಧಗಳು ತುಸುವಾದರೂ ತಗ್ಗಿಸಿದರೆ ನನಗೆ ಸಂತೋಷವೇ! ಸುಮಾರು ಹತ್ತು ಹದಿನೈದು ವರ್ಷಗಳ ಕೆಳಗೆ ನನಗೆ ಈ ತರಹದ ಪ್ರಬಂಧಗಳನ್ನು ಬರೆಯುವ ವಿಪರೀತ ಹುಮ್ಮಸ್ಸು ಇತ್ತು. ಈಗ ಆ ಮನೋಧರ್ಮವಿಲ್ಲ; ಅದಕ್ಕೆ ಬೇಕಾದ ಮುಗ್ಧಮನಸ್ಸು, ನನ್ನನ್ನೂ ಸೇರಿದಂತೆ ಎಲ್ಲರನ್ನೂ-ಎಲ್ಲವನ್ನೂ ತಮಾಷೆಯಾಗಿ ನೋಡುವ ಶಕ್ತಿ ಈಗ ಕುಂದಿದೆ. ಕಳೆದುಕೊಂಡ ಬಾಲ್ಯದಂತೆ ಈ ಪ್ರಬಂಧಗಳು ನನಗೆ ಭಾಸವಾಗುತ್ತವೆ.
ಅತಿಥಿ ಮತ್ತು ಕೋತಿ
ನಾನು ಸಾಫ್ಟವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತೇನಾದ ಕಾರಣ, ಹಲವಾರು ವಿದೇಶಿಯರನ್ನು ಭೇಟಿಯಾಗುವ ಸಂದರ್ಭ ಆಗಾಗ ಬರುತ್ತಿರುತ್ತದೆ. ಅವರು ಬೆಂಗಳೂರಿಗೆ ಬಂದಾಗ, ಕೆಲವು ದಿನ ಅವರೊಡನೆ ತಿರುಗಾಡಿ ಸ್ವಲ್ಪ ಗೆಳೆತನ ಮೂಡಿದ ಮೇಲೆ ಒಂದು ಪ್ರಶ್ನೆಯನ್ನು ತಪ್ಪದೆ ಕೇಳುತ್ತೇನೆ. “ನಮ್ಮೂರಿನಲ್ಲಿ ನಿಮಗೆ ವಿಶೇಷವಾಗಿ ಕಂಡಿದ್ದೇನು?” ಅಂತ. ನಾವು ಬದುಕುತ್ತಿರುವ ಈ ಪ್ರೀತಿಯ ಬೆಂಗಳೂರಿನಲ್ಲಿ ನಮ್ಮ ಕಣ್ಣಿಗೆ ಕಾಣದ, ಕಂಡರೂ ಅರಿವಿಗೆ ಬಾರದ ವಿಶೇಷಗಳು ಅವರಿಗೆ ಕಂಡಿರಬಹುದು ಎನ್ನುವ ಕುತೂಹಲ ನನ್ನದು. ಬಹಳಷ್ಟು ಜನ ಇಲ್ಲಿಯ ಜನಜಂಗುಳಿ, ಭಯಬೀಳಿಸುವ ಟ್ರಾಫಿಕ್, ಗಲಾಟೆಗಳ ಬಗ್ಗೆಯೇ ಗೊಣಗುತ್ತಾ ಹೇಳುತ್ತಾರಾದರೂ ಕೆಲವೊಬ್ಬರು ಅತ್ಯಂತ ವಿಶಿಷ್ಟ ಸಂಗತಿಗಳನ್ನು ತಿಳಿಸುತ್ತಾರೆ. ಮೊನ್ನೆ ಇಂಗ್ಲೆಂಡಿನಿಂದ ಬಂದಿದ್ದ ಪ್ಯಾಟ್ರಿಕ್ “ನಿಮ್ಮೂರಲ್ಲಿ ಎಷ್ಟೊಂದು ಹದ್ದುಗಳು ಆಕಾಶದಲ್ಲಿ ಹಾರಾಡುತ್ತವೆ. ಎಲ್ಲಿ ನೋಡಿದರಲ್ಲಿ ಕಾಣುತ್ತವೆ” ಎಂದು ಸಂಭ್ರಮದಿಂದ ತಿಳಿಸಿದಾಗ ನನಗೆ ಅಚ್ಚರಿ. “ಅದರಲ್ಲಿ ಅಂತಹ ವಿಶೇಷವೇನು?” ಎಂದು ಕೇಳಿದೆ. “ನಮ್ಮ ಇಡೀ ಇಂಗ್ಲೆಂಡಿನಲ್ಲಿ ಬರೀ ಏಳು ಹದ್ದುಗಳಿವೆ. ಯಾವತ್ತಾದರೂ ಅಪರೂಪಕ್ಕೆ ನಮ್ಮೂರಿನ ಆಕಾಶದಲ್ಲಿ ಒಂದು ಹದ್ದು ಕಂಡು ಬಂದರೆ ಆ ದಿನ ಊರಿನ ಜನರೆಲ್ಲಾ ಹಬ್ಬದ ಸಂಭ್ರಮದಲ್ಲಿರುತ್ತಾರೆ. ಮರುದಿನ ವೃತ್ತ ಪತ್ರಿಕೆಯ ಮುಖಪುಟದಲ್ಲಿಯೇ ಅದರ ಛಾಯಾಚಿತ್ರ ಬಂದಿರುತ್ತದೆ. ಬಾರ್, ಜಿಮ್‌ಗಳಲ್ಲಿಯೂ ಜನ ಆ ಹದ್ದಿನ ಬಗ್ಗೆಯೇ ಮಾತನಾಡುತ್ತಿರುತ್ತಾರೆ” ಎಂದು ವಿವರಿಸಿದ.
ಆಂಡಿ ಮತ್ತು ಜೆಫ್ ಬಂದಾಗ ಅವರನ್ನು ಕಬಿನಿ, ಮೈಸೂರು, ಬೇಲೂರು-ಹಳೆಬೀಡುಗಳಿಗೆಲ್ಲಾ ಸುತ್ತಿಸಿದೆವು. ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುವಾಗ ಅದೇ ಪ್ರಶ್ನೆ ಕೇಳಿದೆ. “ನಿಮ್ಮ ದೇಶದಲ್ಲಿ ಅಲ್ಲಲ್ಲಿ ಮಣ್ಣಿನ ಕಲಾಕೃತಿಗಳು ಎಷ್ಟು ಚೆನ್ನಾಗಿವೆ” ಎಂದು ಹೊಗಳಿದರು. ನನಗೆ ಯಾವ ಮಣ್ಣಿನ ಕಲಾಕೃತಿಗಳ ಬಗ್ಗೆ ಇವರು ಮಾತನಾಡುತ್ತಿದ್ದಾರೆಂದು ಅರ್ಥವಾಗಲಿಲ್ಲ. “ಕಬನಿಯ ಬಳಿಯಲ್ಲೂ ಇದ್ದವು, ಬೇಲೂರಿಗೆ ಹೋಗುವ ರಸ್ತೆಯ ಬದಿಯಲ್ಲೂ ಇದ್ದವು. ಮೈಸೂರಿನಲ್ಲೂ ಕಂಡವು” ಎಂದರು. ನಂಗೆ ಇನ್ನಷ್ಟು ಅನುಮಾನವಾಗಿ “ಯಾರು ಮಾಡಿದ ಕಲಾಕೃತಿಗಳವು” ಎಂದೆ. “ಗೊತ್ತಿಲ್ಲ. ಆದರೆ ಅದರ ಫೋಟೋ ತೆಗೆದುಕೊಂಡಿದ್ದೇವೆ” ಎಂದು ಖುಷಿಯಲ್ಲಿ ಫೋಟೋ ತೋರಿಸಿದರು. ನನಗೆ ಫೋಟೋ ನೋಡಿ ಕೈಕಾಲಲ್ಲಿ ನಡುಕ ಬಂತು. ಹಾವಿನ ಹುತ್ತಗಳವು! ಇಬ್ಬರೂ ಅದರ ತೀರಾ ಹತ್ತಿರ ಕುಳಿತು, ಹುತ್ತದ ತೂಬಿನ ಮೇಲೆ ಕೈ ಇಟ್ಟು, ವಿವಿಧ ಭಂಗಿಯಲ್ಲಿ ಪೋಜ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದರು. ಅವು ನಾಗರ ಹಾವಿನ ಹುತ್ತವೆಂದು ಹೇಳಿದಾಗ ನಿಜಕ್ಕೂ ಬೆವರಲಾರಂಭಿಸಿದರು. ತಮ್ಮ ದೇಶದಲ್ಲಿ ಹಾವುಗಳೇ ಇಲ್ಲವೆಂದೂ, ಎಂದೂ ಅಂತಹ ಹುತ್ತಗಳನ್ನು ನೋಡಿಲ್ಲವೆಂದು ನಡಗುತ್ತಲೇ ಹೇಳಿದರು. ಮರುದಿನ ಬಾಸ್ ಸಂದೀಪ್ ನನ್ನನ್ನು ಛೇಂಬರ್‌ಗೆ ಕರೆಸಿ ಚೆನ್ನಾಗಿ ಉಗಿದ. “ಹಾವು ಕಚ್ಚಿ ಸತ್ತು-ಗಿತ್ತು ಹೋಗಿದ್ರೆ ಗತಿ ಏನಿತ್ತು ರಿ? ನಾನಿಲ್ಲಿ ಮಿಲಿಯನ್ ಡಾಲರ್ ಪ್ರಾಜೆಕ್ಟ್‌ನ ಕನಸು ಕಾಣ್ತಾ ಕೂತಿದಿನಿ” ಎಂದು ನಾನೇ ತಪ್ಪಿತಸ್ಥ ಎಂಬಂತೆ ದೂರಿದ. ಸುಮ್ಮನಿದ್ದೆ.
ಉತ್ತರ ಭಾರತದ ಕಡೆಯಿಂದ ಬಂದ ಸ್ಮಿತಾ ಅಗರ್‌ವಾಲ್ ಮಾತ್ರ “ಈ ಊರಾಗೆ ಕಿರಾಣಿ ಅಂಗಡಿನಾಗೆ ಬಾಳೆಹಣ್ಣು ಮಾರ್ತಾರೆ” ಎಂದು ಕಿಸಕಿಸನೆ ನಕ್ಕಳು. ದೆಹಲಿಯಲ್ಲಿ ಬಾಳೆಹಣ್ಣು ಬೇಕೆಂದರೆ ಹಣ್ಣಿನ ಅಂಗಡಿಗೇ ಹೋಗಬೇಕಂತೆ. ಇಲ್ಲಿ ಅಕ್ಕಿ-ಬೇಳೆ-ಉಪ್ಪು-ಮೆಣಸಿನಕಾಯಿಯ ಜೊತೆ ಬಾಳೆಹಣ್ಣು ಮಾರುವುದು ಅವಳಿಗೆ ತಮಾಷೆಯ ಸಂಗತಿಯಾಗಿತ್ತು. ಅವಳು ಅದಕ್ಕೆ ನಗುವುದು ನೋಡಿ ನನಗೂ ನಗು ಬಂತು. ಆದರೆ ಡೆನ್ಮಾರ್ಕಿನಿಂದ ಲಿಸ್ಸಾ ಲೊಟ್ಟೆ ಬಂದಾಗ ಮಾತ್ರ, ನಾನು ಯಾವುದೇ ಪ್ರಶ್ನೆಯನ್ನು ಕೇಳದೆ ಅವಳು ಇಲ್ಲಿಯ ವಿಶೇಷವನ್ನು ನಿರೂಪಿಸಿಬಿಟ್ಟಳು. ನಮ್ಮ ಭಾರತೀಯ ಊಟ-ತಿಂಡಿ ತುಂಬಾ ಇಷ್ಟವೆಂದು ಹೇಳಿದ್ದಕ್ಕೆ ಒಳ್ಳೆಯ ಒಂದು ರೆಸ್ಟೋರೆಂಟಿಗೆ ಅವಳನ್ನು ಕರೆದುಕೊಂಡು ಹೋದವು. ಕೊಡಿಸಿದ್ದೆಲ್ಲಾ “ಚೆನ್ನಾಗಿದೆ, ಚೆನ್ನಾಗಿದೆ” ಎನ್ನುತ್ತಾ ಒಂಚೂರೂ ಬಿಡದಂತೆ ಚಪ್ಪರಿಸಿ ತಿಂದಳು. ಕೊನೆಗೆ ಕೈ ತೊಳೆಯಲು ಫಿಂಗರ್ ಬೌಲ್‌ನಲ್ಲಿ ಬಿಸಿನೀರು ತಂದಿಟ್ಟರೆ ನಾವು ಹೇಳುವದಕ್ಕೂ ಅವಕಾಶ ಕೊಡದಂತೆ ಗಟಗಟನೆ ಕುಡಿದುಬಿಟ್ಟಳು! ನಾನೂ ಸಂದೀಪ ಬಿಟ್ಟಗಣ್ಣಲ್ಲಿ ಅವಳ ಕೆಲಸವನ್ನು ನೋಡಿದೆವು. “ಊಟ ಆದ ಮೇಲೆ ಈ ಬಿಸಿ ನೀರು ಏಕೆ ಕುಡಿಬೇಕು?” ಎಂದು ಕೇಳಿದಳು. ಸಂದೀಪ ನನಗೆ ಮಾತನಾಡಲು ಅವಕಾಶ ಕೊಡದೆ “ತಿಂದಿದ್ದು ಜೀರ್ಣವಾಗಲಿ ಅಂತ” ಎಂದು ಹೇಳಿ ಕೈ ತೊಳೆಯಲು ವಾಷ್‌ಬೇಸಿನ್ ಕಡೆ ನಡೆದ. ನಾನೂ ಅವನನ್ನು ಹಿಂಬಾಲಿಸಿದೆ.
ಆದರೆ ಚೀನಾ ದೇಶದಿಂದ ಬಂದ ಝಾಂಗ್‌ನ ಜೊತೆಯ ನನ್ನ ಅನುಭವ ಮಾತ್ರ ವಿಶಿಷ್ಟವಾದದ್ದು. ತುಂಬಾ ದೊಡ್ಡ ಪ್ರಾಜೆಕ್ಟ್‌ನ ಆಸೆಯನ್ನು ಸಂದೀಪನಿಗೆ ಹತ್ತಿಸಿದ್ದ. ಇನ್ನು ಕೇಳಬೇಕೆ? ನಾನೇ ಸ್ವತಃ ಅವನನ್ನು ವಾರಾಂತ್ಯದಲ್ಲಿ ಯಾವುದಾದರೂ ಆಸಕ್ತಿಯುತ ಸ್ಥಳಕ್ಕೆ ಕರೆದುಕೊಂಡು ಹೋಗಿ ಖುಷಿಪಡಿಸಬೇಕೆಂದು ಅಪ್ಪಣೆ ಮಾಡಿದ. ನಾನು ದೊಡ್ಡಾಲದ ಮರಕ್ಕೆ ಕರೆದುಕೊಂಡು ಹೋಗುವದೆಂದು ಹೇಳಿ, ಅವನಿಗೆ ಅದರಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ “ಅದು ಪ್ರಪಂಚದಲ್ಲಿಯೇ ಅತ್ಯಂತ ಹಳೆಯ ಮತ್ತು ದೊಡ್ಡ ಆಲದ ಮರ” ಎಂದು ಮಾಹಿತಿ ಸರಿಯಾಗಿ ಗೊತ್ತಿರದಿದ್ದರೂ ರೈಲು ಬಿಟ್ಟೆ. ಸ್ವಲ್ಪ ಆಸಕ್ತಿ ತೋರಿಸಿದ. ಅವನಿಗೆ ಇನ್ನಷ್ಟು ಆಸಕ್ತಿ ಮೂಡಿಸುವ ಸಲುವಾಗಿ “ಅಲ್ಲಿ ನೂರಾರು ಕೋತಿಗಳಿವೆ” ಎಂದೆ. ಖುಷಿಯಾಗಿಬಿಟ್ಟ. “ಕೋತಿ ಅಂದ್ರೆ ನಂಗೆ ಭಾಳ ಇಷ್ಟ. ಖಂಡಿತಾ ಹೋಗೋಣ” ಎಂದು ಗೆಲುವಿನಿಂದ ಹೇಳಿದ. ನಾನು ಕೂಡಾ “ನಂಗೂ ಕೋತಿ ಅಂದ್ರೆ ಇಷ್ಟ. ನನ್ನದು ಬಳ್ಳಾರಿ ಜಿಲ್ಲೆ. ನಮ್ಮೂರಿನಲ್ಲಿಯೂ ಸಾಕಷ್ಟು ಕೋತಿಗಳಿವೆ” ಅಂತೆಲ್ಲಾ ನಮ್ಮೂರಿನ ಕೋತಿಗಳ ಚೇಷ್ಟೆಗಳನ್ನು ಪುಂಖಾನುಪುಂಖವಾಗಿ ಹೇಳಿದೆ.
ದೊಡ್ಡಾಲದ ಮರಕ್ಕೆ ಹೋದ ಮೇಲೆ, ಅವನನ್ನು ಮರದ ಬಳಿ ಬಿಟ್ಟು, ನಾನು ಹೊರಗಡೆ ಮಾರಾಟಕ್ಕಿಟ್ಟ ಸೌತೆಕಾಯಿ, ಪೇರಲಕಾಯಿ ಕೊಂಡು, ಕಡಿಮೆ ಖಾರವನ್ನು ಹಾಕಿಸಿ, ಕೋತಿಗಳಿಗೆ ಗೊತ್ತಾಗದಂತೆ ಅಂಗಿಯಲ್ಲಿ ಮುಚ್ಚಿಟ್ಟುಕೊಂಡು ಅವನ ಬಳಿ ಹೋಗಿ “ಸೌತೆಕಾಯಿ ಬೇಕಾ? ಪೇರಲಕಾಯಿ ಬೇಕಾ?” ಎಂದು ಕೇಳಿದೆ. ಅವನು ಅವೆರಡರ ಕಡೆ ಕಣ್ಣೆತ್ತಿಯೂ ನೋಡದೆ, ಕೋತಿಗಳ ಕಡೆಗೆ ನೋಡುತ್ತಾ “ನಂಗೆ ಕೋತಿ ಬೇಕು” ಅಂದ. ನನಗೆ ಗಲಿಬಿಲಿಯಾಯ್ತು. “ಅಲ್ಲ, ತಿನ್ನೋದಕ್ಕೆ ಸೌತೆಕಾಯಿನಾ? ಪೇರಲಕಾಯಿನಾ?” ಅಂತ ಬಿಡಿಸಿ ಹೇಳಿದೆ. “ತಿನ್ನೋದಕ್ಕೇ ಹೇಳಿದ್ದು, ನಂಗೆ ಕೋತಿ ಬೇಕು. ಆಫೀಸಿನಲ್ಲಿಯೇ ನಿಂಗೆ ಹೇಳಿದ್ದೆನಲ್ಲ, ಕೋತಿ ಅಂದ್ರೆ ನಂಗಿಷ್ಟ. ಎಳೆಯ ಕೋತಿಗಳನ್ನು ನೋಡ್ತಾ ನಂಗೆ ಬಾಯಲ್ಲಿ ನೀರು ಬರ್ತಾ ಅದೆ” ಎಂದು ಸ್ಪಷ್ಟಪಡಿಸಿದ. ನಂಗೆ ಕಣ್ಣಲ್ಲಿ ನೀರು ಬರೋದು ಮಾತ್ರ ಬಾಕಿ. ಕೋತಿ ಕಂಡರೆ ಸಾಕು “ಕಾಪಾಡಪ್ಪ ಮಾರುತಿರಾಯ” ಎಂದು ಕೈ ಮುಗಿಯುವ ನಮ್ಮಮ್ಮ ನನಗೆ ನೆನಪಾದಳು. “ಹಾಗೆಲ್ಲಾ ಕೋತಿನ್ನ ತಿನ್ನಬಾರದು. ಅವು ಹನುಮಂತ ದೇವರಿದ್ದಂಗೆ” ಎಂದು ಹೇಳಿದೆ. “ಹ್ಹಿ, ಹ್ಹಿ, ಹ್ಹಿ” ಎಂದು ನಕ್ಕು “ಅವು ಕೋತಿ, ದೇವರಲ್ಲ. ನಮ್ಮೂರಾಗೆ ಎಲ್ಲಾರೂ ತಿಂತೀವಿ“ ಎಂದು ನನ್ನನ್ನು ಪೆಕರನಂತೆ ನೋಡಿದ. ಸುತ್ತಮುತ್ತಲಿನವರು ನಮ್ಮ ಮಾತು ಕೇಳಿಸಿಕೊಂಡರೇನಪ್ಪ ಗತಿ ಎಂದು ನನಗೆ ಹೆದರಿಕೆ ಶುರುವಾಯ್ತು. “ಕೋತಿ ಹಿಡಿಯೋದಕ್ಕೆ ಆಗಲ್ಲ, ಅವು ಮರದ ಮೇಲೆ ಹತ್ತಿಕೊಂಡು ತಪ್ಪಿಸಿಕೊಳ್ತವೆ” ಎಂದು ನೆಪ ಹೇಳಿದೆ. “ಇಲ್ಲ, ನಂಗೆ ಕೋತಿ ಹಿಡಿಲಿಕ್ಕೆ ಬರ್ತದೆ. ಚಿಕ್ಕಂದಿನಲ್ಲಿ ಹಿಡಿದು ಅಭ್ಯಾಸ ಇದೆ. ನೀನು ‘ಹೂಂ’ ಅಂದರೆ ಸಾಕು, ಈಗ ಹಿಡಿತೀನಿ. ರಾತ್ರಿ ನಿನ್ನ ಮನೆಯಲ್ಲಿಯೇ ಅಡಿಗೆ ಮಾಡಬಹುದು” ಎಂದು ಉತ್ಸಾಹ ತೋರಿಸಿದ. ಇವನಿಗೆ ನೋಡಿದ ಪ್ರಾಣಿಗಳನ್ನು ಹಿಡಿದು ತಿನ್ನುವ ಅಭ್ಯಾಸವಿದೆ ಎಂದು ಮುಂಚೆಯೇ ಗೊತ್ತಾಗಿದ್ದರೆ ಸುಮ್ಮನೆ ಮನೆಯ ಹತ್ತಿರವಿರುವ ಬನ್ನೇರುಘಟ್ಟ ಉದ್ಯಾನವನಕ್ಕೆ ಕರೆದುಕೊಂಡು ಹೋಗಿ, ಹುಲಿಗಳನ್ನು ತೋರಿಸುತ್ತಿದ್ದೆ ಎಂದು ಪೇಚಾಡಿಕೊಂಡೆ.
ಅವನ ಕೋತಿ ತಿನ್ನುವ ಆಸೆ ಗೊತ್ತಾದರೆ ಊರವರು ನನ್ನನ್ನೂ ಸೇರಿಸಿ ಹೊಡೆಯುತ್ತಾರೆಂದು ನನಗೆ ನಡುಕ ಶುರುವಾಯ್ತು. “ಅವೆಲ್ಲಾ ಸಾಧ್ಯನೇ ಇಲ್ಲ” ಅಂತ ಹೇಳಿ, “ಈಗಲೇ ಬೆಂಗಳೂರಿಗೆ ವಾಪಾಸು ಹೋಗೋಣ ಬಾ. ನೀನು ಬರದಿದ್ದರೆ ನಾನೊಬ್ಬನೇ ಹೋಗಿ ಬಿಡ್ತೀನಿ” ಎಂದು ಮಕ್ಕಳಿಗೆ ಅಮ್ಮಂದಿರು ಹೇಳುವಂತೆ ಹೇಳಿ ಮತ್ತೆ ಮಾತನಾಡದೆ ಕಾರಿನಲ್ಲಿ ಹೋಗಿ ಕುಳಿತುಬಿಟ್ಟೆ. ಅವನು ಗೊಣಗಾಡುತ್ತಲೇ ಬಂದು ಕಾರನ್ನು ಹತ್ತಿದ. ಅವನನ್ನು ಹೋಟಲಿಗೆ ಬಿಟ್ಟು, ಮನೆಗೆ ಬಂದಾಗ ನಿಜಕ್ಕೂ ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡು ಬಂದ ಅನುಭವವಾಗಿತ್ತು.
ಕೋತಿ ಸಿಗದಿದ್ದು ಝಾಂಗ್‌ಗೆ ತೀರಾ ಅಸಮಾಧಾನವನ್ನು ತಂದಿತ್ತು. ವಿಮಾನ ಹತ್ತುವ ಮುಂಚೆ ಸಂದೀಪನಿಗೆ ಫೋನಾಯಿಸಿ “ನಾನು ಕೇಳಿದ್ದು ಕೊಡಿಸಲಿಲ್ಲ” ಎಂದು ದೂರಿದ್ದ. ಮರುದಿನ ಬೆಳಿಗ್ಗೆ ಬೆಳಿಗ್ಗೆ ಸಂದೀಪ್ ತನ್ನ ಕೋಣೆಗೆ ಕರೆಸಿ ನನಗೆ ಮಂತ್ರಪುಷ್ಪ ಹೇಳಿ “ಕೇಳಿದ್ದು ಕೊಡಿಸಲಿಕ್ಕೆ ಏನ್ರೀ ನಿಮಗೆ ಕಷ್ಟ? ಆಫೀಸಿನ ಕ್ರೆಡಿಟ್ ಕಾರ್ಡ್ ಕೊಟ್ಟಿದ್ದೆನಲ್ಲ” ಅಂದ. “ಸಾರ್, ಕೋತಿ ಹಿಡಕೊಂಡು ತಿನ್ನತೀನಿ ಅಂದ ಸಾರ್. ಅದನ್ನು ಹೆಂಗೆ ಕ್ರೆಡಿಟ್ ಕಾರ್ಡಿನಲ್ಲಿ ಕೊಡಿಸಲಿ ಹೇಳಿ” ಎಂದೆ. ಈಗ ಸಂದೀಪನಿಗೆ ಕಕ್ಕಾಬಿಕ್ಕಿ. “ಕೋತಿ ತಿಂತೀನಿ ಅಂದನೇನ್ರಿ?” ಎಂದು ಉದ್ಗಾರವೆತ್ತಿದ. ಗಾಳಿ ಆಂಜನೇಯಸ್ವಾಮಿಯ ಕಟ್ಟಾ ಭಕ್ತನಾದ ಸಂದೀಪ ಕೋತಿ ತಿನ್ನುವ ಪಾಪ ಕಾರ್ಯಕ್ಕೆ ಒಪ್ಪುವದಿಲ್ಲವೆಂದು ನನಗೆ ನಂಬಿಕೆಯಿತ್ತು. “ಅವನ ಮನಿ ಹಾಳಾಗ. ಅದೇನ್ರಿ ಕೆಟ್ಟ ಬುದ್ಧಿ ಅವನಿಗೆ” ಎಂದು ನನ್ನನ್ನೇ ಕೇಳಿದ. “ಎಳೆಯ ಕೋತಿ ನೋಡಿದ್ರೆ ಬಾಯಾಗೆ ನೀರು ಬರ್ತದೆ ಅಂತ ಹೇಳಿದ ಸಾರ್” ಎಂದೆ. ಸಂದೀಪ್ ನಿಟ್ಟುಸಿರು ಬಿಟ್ಟು “ಪ್ರಾಜೆಕ್ಟ್ ಮನೆ ಹಾಳಾಯ್ತು ಬಿಡ್ರಿ. ಇವರ ಸಹವಾಸಾನೇ ಬೇಡ. ಆಮೇಲಕ್ಕೆ ಅವರ ಊರಿಗೆ ಹೋದಾಗ ನಮ್ಮುನ್ನೇ ಹಿಡಿದು ತಿಂತೀವಿ ಅಂದಾರು” ಎಂದು ಮಂಗಳ ಹಾಡಿದ.
ಜಾನ್ ಲೀವರ್‌ಪೂಲ್ ಬಂದಾಗ ಸುಲಭದಲ್ಲಿ ಅವನನ್ನು ಖುಷಿಪಡಿಸುವ ಅದೃಷ್ಟ ಒದಗಿ ಬಂತು. ಶಾಪಿಂಗಿಗೆಂದು ಅವನನ್ನು ಕಾರಿನಲ್ಲಿ ಎಂ.ಜಿ. ರಸ್ತೆಯ ಸುತ್ತಮುತ್ತ ತಿರುಗಿಸುತ್ತಿದ್ದೆ. ಆಗ ಸಂಪಂಗಿರಾಮ ನಗರದ ಟ್ರಾಫಿಕ್ ಜಂಕ್ಷನ್‌ನಲ್ಲಿ ಕಾರನ್ನು ನಿಲ್ಲಿಸಿದಾಗ ಯಾವುದೋ ದೇವಸ್ಥಾನದ ಆನೆಯೊಂದು ನಾಮ-ಗೀಮ ಭರ್ಜರಿಯಾಗಿ ಹಚ್ಚಿಕೊಂಡು ತನ್ನ ಮಾವುತನ ಜೊತೆಗೆ ಬಂತು. ಅದು ಜಂಕ್ಷನ್‌ಗೆ ಬರುವ ವೇಳೆಗೆ ಸರಿಯಾಗಿ ಕೆಂಪು ದೀಪ ಬಂದಿದ್ದರಿಂದ ಸುಮ್ಮನೆ ನಿಂತುಬಿಟ್ಟಿತು. ಮತ್ತೆ ಹಸಿರು ದೀಪ ಬಂದ ತಕ್ಷಣ ತನ್ನ ಪಾಡಿಗೆ ತಾನು ರಸ್ತೆ ದಾಟಿಕೊಂಡು ಹೋಯಿತು. ಜಾನ್ ನಿಬ್ಬೆರಗಾಗಿಬಿಟ್ಟ! ಟ್ರಾಫಿಕ್ ಸಿಗ್ನಲ್ ಅರ್ಥ ಮಾಡಿಕೊಂಡು ದಾಟುವ ಆನೆಯೆಂದರೆ ತಮಾಷೆಯ ಸಂಗತಿಯೆ? ಆ ಆನೆಯನ್ನೇ ಹಿಂಬಾಲಿಸಿಕೊಂಡು ಹೋದೆವು. ಮಾವುತನಿಗೆ ಬೇಡಿಕೊಂಡಾಗ ಆಶೀರ್ವಾದ ಮಾಡಿಸುವದಕ್ಕೆ ಒಪ್ಪಿಕೊಂಡ. ಜಾನ್ ತನ್ನ ಬೊಕ್ಕಣದಿಂದ ಅದಕ್ಕೆ ಒಂದು ಪೌಂಡ್ (ಇಂಗ್ಲೆಂಡಿನ ನಾಣ್ಯ. ಸುಮಾರು ಎಪ್ಪತ್ತೈದು ರೂಪಾಯಿಗೆ ಸಮ) ಕೊಟ್ಟ. ಆನೆಗೆ ಆ ಹೊಸ ನಾಣ್ಯದ ಅಳತೆಯ ಅಭ್ಯಾಸ ಇರಲಿಲ್ಲವೇನೋ ಗೊತ್ತಿಲ್ಲ. ಅದನ್ನು ಅವನಿಗೇ ವಾಪಾಸು ಕೊಟ್ಟುಬಿಟ್ಟಿತು. ಮಾವುತ “ಒಂದು ರೂಪಾಯಿ ಕೊಡ್ರಿ ಸಾರ್” ಎಂದ. ನಾನು ನನ್ನ ಜೇಬಿನಿಂದ ಒಂದು ರೂಪಾಯಿ ನಾಣ್ಯ ತೆಗೆದು ಜಾನ್‌ಗೆ ಕೊಟ್ಟೆ. ಅದನ್ನು ಪಡೆದುಕೊಂಡ ಆನೆ ಖುಷಿಯಿಂದ ಅವನಿಗೆ ಆಶೀರ್ವಾದ ಮಾಡಿ ತನ್ನ ದಾರಿ ಹಿಡಿದು ಹೊರಟು ಹೋಯಿತು. “ಅದ್ಯಾಕೆ ಪೌಂಡ್ ಕೊಟ್ಟರೆ ಆಶೀರ್ವಾದ ಮಾಡಲಿಲ್ಲ?” ಎಂದು ಜಾನ್ ಕೇಳಿದ್ದಕ್ಕೆ, “ಆ ಆನೆಗೆ ದೇಶಭಕ್ತಿ ತುಂಬಾ ಜಾಸ್ತಿ” ಎಂದು ಸುಮ್ಮನೆ ಒಂದು ಬಿಟ್ಟೆ.
ಜಾನ್ ತನ್ನ ದೇಶಕ್ಕೆ ಹಿಂತಿರುಗಿದ ಮೇಲೆ ಎಲ್ಲರ ಮುಂದೂ ಆನೆಯ ಬುದ್ಧಿವಂತಿಕೆಯ ಬಗ್ಗೆ ಹೊಗಳಿದ್ದೇ ಹೊಗಳಿದ್ದು. ಜೊತೆಗೆ ನಮ್ಮ ಪ್ರಾಜೆಕ್ಟ್ ಕೂಡಾ ಸ್ಯಾಂಕ್ಷನ್ ಆಯ್ತು. ನಾನು ಸಂದೀಪನಿಗೆ “ಸಾರ್, ಪ್ರಾಜೆಕ್ಟ್ ಸಿಗೋದಕ್ಕೆ ಆನೆ ಕೂಡಾ ಸಹಾಯ ಮಾಡಿದೆ. ಅದಕ್ಕೆ ಒಂದು ದಿನದ ಊಟ ಸ್ಪಾನ್ಸರ್ ಮಾಡೋಣ ಸಾರ್” ಎಂದು ಸಲಹೆ ಕೊಟ್ಟೆ. ಸಂದೀಪ್ ಮಾತ್ರ “ಸುಮ್ಮನೆ ಗಣಪತಿ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸ್ಕೊಂಡು ಬರ್ರಿ. ಆನೆ ಅಂದರೂನೂ ಒಂದೆ, ಗಣೇಶ ಅಂದರೂನೂ ಒಂದೆ” ಎಂದು ಅಪ್ಪಣೆ ಕೊಡಿಸಿದ.
ಆದರೆ ಕೆಲವೇ ದಿನಗಳಲ್ಲಿ ಸಂಕಷ್ಟವೊಂದು ಕಾದಿದೆಯೆಂದು ನನಗೆ ಆಗ ಗೊತ್ತಾಗಲಿಲ್ಲ. ಪ್ರಾಜೆಕ್ಟ್ ಕೆಲಸದ ಮೇಲೆ ಸ್ಟೀವ್ ಸ್ಮಿತ್ ಬಂದ. ಜಾನ್‌ನ ಬಾಸ್ ಅವನು. ನಮ್ಮ ಪ್ರಾಜೆಕ್ಟ್‌ಗೆ ಅತ್ಯಂತ ಮುಖ್ಯ ವ್ಯಕ್ತಿ. ಯಥಾಪ್ರಕಾರ ವಾರಾಂತ್ಯ ಬಂದಾಗ ಅವನನ್ನು ತಿರುಗಾಡಿಸಲು ಕರೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಸಂದೀಪ “ಬೇಲೂರಿನ ಶಿಲಾಬಾಲಿಕೆಯನ್ನು ನೋಡ್ತೀರ? ಮೈಸೂರಿನ ಅರಮನೆಯ ಸೊಬಗನ್ನು ನೋಡ್ತೀರ?” ಅಂತ ಕೇಳಿದ್ದಕ್ಕೆ, “ಅವೆಲ್ಲಾ ಏನೂ ಬೇಡ, ಟ್ರಾಫಿಕ್ ಸಿಗ್ನಲ್ ದಾಟುವ ಆನೆ ತೋರಿಸಿ” ಎಂದ. ಸಂದೀಪನಿಗೆ ಸ್ವಲ್ಪ ಗಲಿಬಿಲಿಯಾಯ್ತು. ಏನು ಮಾಡಬೇಕೆಂದು ತೋಚದಾದಾಗ, ನನ್ನ ತಲೆಗೆ ಆ ಕೆಲಸವನ್ನು ಒಪ್ಪಿಸುವುದು ಅವನಿಗೀಗಾಗಲೇ ಅಭ್ಯಾಸವಾಗಿದೆ. ನನ್ನನ್ನು ಕರೆದು “ಇವರಿಗೆ ಟ್ರಾಫಿಕ್ ದಾಟಿಸೋ ಆನೆ ತೋರಿಸ್ಗೊಂಡು ಬರ್ರಿ” ಎಂದು ಹೇಳಿದ. ನನಗೆ ಪೀಕಲಾಟಕ್ಕಿಟ್ಟುಕೊಂಡಿತು. ಆ ಆನೆ ಯಾವಾಗ ಬರುತ್ತೆ, ಎಲ್ಲಿ ಬರುತ್ತೆ ಅಂತ ಯಾರಿಗೆ ಗೊತ್ತು? “ಅಲ್ಲ ಸಾರ್, ಆನೆ ಎಲ್ಲಿದೆ ಅಂತ ನಂಗೇನು ಸಾರ್ ಗೊತ್ತು?” ಎಂದು ರಾಗವೆಳೆದೆ. “ಏನ್ರಿ ನೀವು, ಯಾವಾಗಲೂ ಗೊಣಗ್ತೀರಲ್ರೀ... ಆಫೀಸಿನ ಕೆಲಸ ಮಾಡು ಅಂದರೆ ಅದಕ್ಕೂ ಕೈಲಾಗಲ್ಲ ಅಂತೀರಿ, ಈಗ ಆನೆ ತೋರಿಸ್ಕೊಂಡು ಬರ‍್ರಿ ಅಂದರೆ ಅದೂ ಆಗಲ್ಲ ಅಂತೀರಿ” ಎಂದು ಉಗಿದ. ಮತ್ತೆ ಮಾತಾಡಿ ಉಪಯೋಗವಿಲ್ಲವೆಂದು ಅರಿವಾಗಿ, “ಆಯ್ತು ಸಾರ್” ಎಂದು ಒಪ್ಪಿಕೊಂಡೆ. ದೇವರ ಮೇಲೆ ಭಾರ ಹಾಕಿ ಸ್ಟೀವ್‌ನನ್ನು ಕಾರಿನಲ್ಲಿ ಕೂಡಿಸಿಕೊಂಡು ಆನೆಯ ಶಿಕಾರಿಗೆ ಹೊರಟೆ.
ರಸ್ತೆ ರಸ್ತೆ ಸುತ್ತಿದ್ದಾಯ್ತು. ಆನೆ ಸಿಗಲಿಲ್ಲ. ಸ್ಟೀವ್ ವಾಪಾಸು ಹೋಗಲು ಸಿದ್ಧನಿಲ್ಲ. ತನ್ನ ಕೈ ಕೆಳಗೆ ಕೆಲಸ ಮಾಡುವವನಿಗೆ ಕಂಡ ದೃಶ್ಯ ತನಗೆ ಕಾಣಸಿಗುವದಿಲ್ಲವೆಂದರೆ ಏನರ್ಥ? ನಾನೂ ಸಹನೆ ಕಳೆದುಕೊಳ್ಳದೆ ಸುತ್ತಿದ ರಸ್ತೆಗಳಲ್ಲಿಯೇ ಮತ್ತೆ ಮತ್ತೆ ಕಾರನ್ನು ಅಡ್ಡಾಡಿಸಿದೆ. ಅಲ್ಲಲ್ಲಿ ದನಗಳು ರಸ್ತೆ ದಾಟಿದ್ದನ್ನು ತೋರಿಸಿ “ದನ ರಸ್ತೆ ದಾಟುತ್ತೆ ನೋಡಿ” ಅಂತ ಇನ್ನಿಲ್ಲದ ಉತ್ಸಾಹದ ಮಾತಲ್ಲಿ ಹೇಳಿದೆ. “ದನ ಬೇಡ, ಆನೆ ಬೇಕು” ಎಂದು ಗಂಭೀರವಾಗಿ ಉತ್ತರಿಸಿದ. ತೆಪ್ಪಗಾದೆ. ಹಿಂದೆ ಆನೆ ಕಂಡ ಸರ್ಕಲ್ಲಿನ ಬಳಿಯೇ ಕಾರನ್ನು ನಿಲ್ಲಿಸಿ, ಟ್ರಾಫಿಕ್ ಪೋಲೀಸಿನ ಬಳಿ ಹೋಗಿ “ಸಾರ್, ಇಲ್ಲೊಂದು ಆನೆ ಬರ್ತಾ ಇರುತ್ತಲ್ಲ ಸಾರ್. ಅದು ಎಷ್ಟು ಹೊತ್ತಿಗೆ ಬರುತ್ತೆ?” ಎಂದು ಕೇಳಿದೆ. ಮೊದಲೇ ವಾಹನಗಳ ಧೂಳನ್ನು ಕುಡಿದು ಅವನ ತಲೆ ಕೆಟ್ಟಿತ್ತೆಂದು ಕಾಣುತ್ತೆ. ಈ ನನ್ನ ಎಡವಟ್ಟು ಪ್ರಶ್ನೆಯಿಂದ ರೇಗಿ ಹೋದ. “ಅದೇನು ಸಿಟಿ ಬಸ್ಸೇನ್ರಿ ಟೈಂ ಕೇಳಲಿಕ್ಕೆ? ಓದಿದವರಂಗೆ ಕಾಣ್ತೀರಿ, ಅಷ್ಟೂ ತಿಳುವಳಿಕಿ ಇಲ್ಲವೇನ್ರಿ?” ಎಂದು ಜೋರಾಗಿ ಕಿರುಚಿದ. ನಾನು ಮತ್ತೆ ಮಾತಾಡದೆ ಕಾರಿನ ಕಡೆ ಹೆಜ್ಜೆ ಹಾಕಿದೆ. ಒಳಗೆ ಕಾರಿನ ಹವಾನಿಯಂತ್ರಣದಲ್ಲಿ ಕುಳಿತಿದ್ದ ಸ್ಟೀವ್ ಆನೆ ನೋಡದೆ ವಿದೇಶಕ್ಕೆ ಮರಳುವಂತೆ ಕಾಣಲಿಲ್ಲ. ಅವನ ಬಳಿಹೋಗಿ “ಸ್ಟೀವ್, ಆನೆಯಿಂದ ಒಂದು ಅನಾಹುತ ಆಗಿದೆ. ಯಾಕೋ ಕೋಪಗೊಂಡು ಮಾವುತನನ್ನು ತುಂಡು ತುಂಡು ಮಾಡಿಬಿಟ್ಟಿದೆಯಂತೆ. ಹತ್ತಿರ ಬಂದವರನ್ನ ತುಳಿದು ಬಿಡುವಷ್ಟು ಕೋಪ ತೋರಿಸ್ತಾ ಇದೆಯಂತೆ” ಎಂದು ಕತೆ ಕಟ್ಟಿದೆ. ತಬ್ಬಿಬ್ಬಾದ ಸ್ಟೀವ್ “ಇಂಥಾ ಕೆಲಸಾನೂ ಮಾಡುತ್ತೇನ್ರಿ?” ಎಂದ. “ಹೂಂ, ಬರೀ ಟ್ರಾಫಿಕ್ ದಾಟೋದೊಂದೇ ಅಲ್ಲ. ತುಂಬಾ ಡೇಂಜರಸ್ಸು” ಎಂದೆ. “ಹಾಗಿದ್ರೆ ಮನೆಗೆ ಹೋಗೋಣ” ಎಂದ. ಬದುಕಿಕೊಂಡೆ.
ಇಷ್ಟೆಲ್ಲಾ ಹೇಳಿದ ಮೇಲೆ ಡೇವಿಡ್ ವಿಂಬಲ್ಡನ್ ಬಂದಾಗ ನಡೆದ ಘಟನೆಯನ್ನು ಹೇಳದಿದ್ದರೆ ಓದುಗರಿಗೆ ಮೋಸ ಮಾಡಿದಂತಾಗುತ್ತದೆ. ಡೇವಿಡ್ ಇಂಗ್ಲೆಂಡಿನಲ್ಲಿರುವ ನಮ್ಮ ಮುಖ್ಯ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಬಹುಮುಖ್ಯ ಅಧಿಕಾರಿ. ನಾನು ಬೆಂಗಳೂರಿನಲ್ಲಿ ನೋಡಿಕೊಳ್ಳುತ್ತಿದ್ದ ಒಂದು ದೊಡ್ಡ ಪ್ರಾಜೆಕ್ಟ್‌ಗೆ ಅವನು ಆನ್‌ಸೈಟ್ ಪ್ರಾಜೆಕ್ಟ್ ಮ್ಯಾನೇಜರ್. ಮೃದುವಾಗಿ ಮಾತನಾಡುವ ಪ್ರಾಮಾಣಿಕ ವ್ಯಕ್ತಿ. ದಿನನಿತ್ಯ ಇವನೊಡನೆ ಇ-ಮೇಲ್, ದೂರವಾಣಿಯೊಡನೆ ಸಂಪರ್ಕವಿಟ್ಟುಕೊಂಡಿದ್ದೆವಾದರೂ, ವೈಯಕ್ತಿಕವಾಗಿ ಭೇಟಿಯಾಗಿರಲಿಲ್ಲ. ಹಾಗಂತ ಹೇಳಿದ್ದಕ್ಕೆ ಅವನ ಕುಟುಂಬದ ಒಂದು ಫೋಟೋ ಒಂದನ್ನು ಇ-ಮೇಲ್ ಮಾಡಿದ್ದ. ಅವನು, ಅವನ ಸುಂದರ ಹೆಂಡತಿ ಸೂಸಾನ್ ಮತ್ತು ಎಂಟು ವರ್ಷದ ಮುದ್ದಾದ ಮಗಳು ಬೆಕ್ಕಿ. ನನ್ನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ವಿವೇಕ್ ಎನ್ನುವ ಹುಡುಗನೊಬ್ಬನಿಗೆ ಮಕ್ಕಳೆಂದರೆ ತುಂಬಾ ಇಷ್ಟ. ಆದ ಕಾರಣ ಡೇವಿಡ್ ಮಗಳ ಚಿತ್ರವನ್ನು ಮಾತ್ರ ಫೋಟೋಶಾಪ್‌ನಲ್ಲಿ ಕತ್ತರಿಸಿಕೊಂಡು ತನ್ನ ಕಂಪ್ಯೂಟರಿನಲ್ಲಿ ಸ್ಕ್ರೀನ್ ಸೇವರ್ ಆಗಿ ಹಾಕಿಕೊಂಡಿದ್ದ. ವಿವೇಕ್ ಅದೇ ಹೊಸದಾಗಿ ಮದುವೆಯಾಗಿದ್ದ ಕಾರಣ, “ನಿನ್ನ ಮಗಳ ಫೋಟೋ ಸ್ಕ್ರೀನ್ ಸೇವರ್ ಆಗುವುದು ಯಾವಾಗಲೋ?” ಎಂದು ನಾವೆಲ್ಲಾ ಅವನನ್ನು ರೇಗಿಸುತ್ತಿದ್ದೆವು. ಟೀಮಿನ ಮಧ್ಯ ಓಡಾಡುವ ನಮಗೆಲ್ಲರಿಗೂ ಆ ಬೆಕ್ಕಿ ಚಿರಪರಿಚಿತಳೆಂಬಂತೆ ಅವಳ ಫೋಟೋ ಅವನ ಕಂಪ್ಯೂಟರ್ ಪರದೆಯ ಮೇಲೆ ಆಗಾಗ ಕಾಣುತ್ತಲೇ ಇರುತ್ತಿತ್ತು.
ಸುಮಾರು ಆರು ತಿಂಗಳಿನ ನಂತರ ಪ್ರಾಜೆಕ್ಟ್ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಅದರ ಯಶಸ್ಸನ್ನು ಹಂಚಿಕೊಳ್ಳುವದಕ್ಕಾಗಿ ಬೆಂಗಳೂರಿನ ಒಂದು ದೊಡ್ಡ ಪಂಚತಾರಾ ಹೋಟಲಿನಲ್ಲಿ ಪಾರ್ಟಿಯೊಂದನ್ನು ಹಮ್ಮಿಕೊಂಡೆವು. ಅದಕ್ಕಾಗಿ ಡೇವಿಡ್‌ನನ್ನು ಆಹ್ವಾನಿಸಿದೆವು. ತುಂಬಾ ಖುಷಿಯಿಂದ ಬಂದ. ಪ್ರಾಜೆಕ್ಟ್ ಹುಡುಗರೊಂದಿಗೆ ನಗುನಗುತ್ತಾ ಮಾತನಾಡಿದ. ಆದರೆ ಆಫೀಸಿನಲ್ಲಿ ಟೀಮಿನ ಮಧ್ಯ ಓಡಾಡುವಾಗ ಅವನಿಗೆ ಅಕಸ್ಮಾತ್ತಾಗಿ ವಿವೇಕ್ ಕಂಪ್ಯೂಟರ್ ಪರದೆಯ ಮೇಲಿನ ಅವನ ಮಗಳ ಚಿತ್ರ ಕಂಡು ಬಂತು. ಅವನ ಖುಷಿಯೆಲ್ಲಾ ಮಂಗಮಾಯವಾಗಿ, ಅಸಮಾಧಾನದಿಂದ ತನ್ನ ಕೋಣೆಗೆ ಹೋಗಿ ಕುಳಿತುಕೊಂಡುಬಿಟ್ಟ. ನಾನು ಏನೆಂದು ವಿಚಾರಿಸಲಾಗಿ “ನನ್ನ ಬೆಕ್ಕಿ ಈ ರೀತಿ ಕಾಣದ ದೇಶದಲ್ಲಿ ಸೆಕ್ಷುಯಲ್ ಹೆರಾಸ್‌ಮೆಂಟಿಗೆ ಒಳಗಾಗುತ್ತಿದ್ದಾಳೆಂದು ನನಗೆ ಗೊತ್ತಿರಲಿಲ್ಲ” ಎಂದು ಆಪಾದಿಸಿದ. ನಾನು ಸಮಾಧಾನದಿಂದ ಆ ತರಹ ಏನೂ ಇಲ್ಲವೆಂದೂ, ವಿವೇಕ್ ಮಕ್ಕಳ ಮೇಲಿನ ಪ್ರೀತಿಯಿಂದ ಆ ಫೋಟೋ ಹಾಕಿಕೊಂಡಿದ್ದಾನೆಂದು ಹೇಳಿದೆ ನಾದರೂ ಅದವನಿಗೆ ತಟ್ಟಲಿಲ್ಲ. “ಹರೆಯದ ಹುಡುಗನೊಬ್ಬ ಚಂದದ ಹುಡುಗಿಯ ಫೋಟೋವನ್ನು ಕಾಮುಕ ದೃಷ್ಟಿಯಲ್ಲದೆ ಬೇರೆ ಯಾವ ಕಾರಣಕ್ಕೆ ಹಾಕಿಕೊಳ್ಳಲಿಕ್ಕೆ ಸಾಧ್ಯ? ಮನೆಯಲ್ಲಿ ನನ್ನ ಸೂಸನ್‌ಗೆ ಈ ವಿಷಯ ಗೊತ್ತಾದರೆ ಎಷ್ಟೊಂದು ದುಃಖ ಪಡುತ್ತಾಳೆಂಬುದರ ಅರಿವು ನಿನಗಿಲ್ಲ” ಎಂದು ಕಣ್ಣು ತೇವ ಮಾಡಿಕೊಂಡ. ನಾನು ವಿವೇಕ್‌ಗೆ ಮದುವೆಯಾಗಿದೆಯೆಂದು ಸಮಜಾಯಿಷಿ ಕೊಟ್ಟೆ. “ಮದುವೆಯಾದರೆ ಏನೀಗ?” ಎಂದು ಮರುಪ್ರಶ್ನಿಸಿದ್ದಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ.
ವಿಷಯ ತುಂಬಾ ಗಂಭೀರವಾಗಿ ಹೋಯಿತು. ಡೇವಿಡ್ ಇಂಗ್ಲೆಂಡಿಗೆ ಫೋನಾಯಿಸಿ ಕಂಪನಿಯ ಮ್ಯಾನೇಜಿಂಗ್ ಡೈರಕ್ಟರ್‌ಗೆ ತನ್ನ ಮಗಳಿಗಾಗಿರುವ ಅನ್ಯಾಯವನ್ನು ತಿಳಿಸಿದ. ಇತ್ತ ಸಂದೀಪನಿಗೆ ದೂರು ಹೋಯಿತು. ಅವನೂ ಡೇವಿಡ್‌ಗೆ ಭಾರತದಲ್ಲಿ ಇದು ಅಂತಹ ಅಪರಾಧವಲ್ಲವೆಂದು ಪರಿಪರಿಯಾಗಿ ಹೇಳಿದ. ಆದರೆ ಡೇವಿಡ್ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇಂಗ್ಲೆಂಡಿನಲ್ಲಿರುವ ಮುಖ್ಯಾಧಿಕಾರಿಗಳೆಲ್ಲರೂ ಡೇವಿಡ್‌ನ ಪರವಾಗಿಯೇ ಮಾತನಾಡಿದರು. ಅವರ ಕೈಕೆಳಗೆ ಕೆಲಸ ಮಾಡುವ ನಮ್ಮ ಧ್ವನಿಗೆ ಸಮರ್ಥಿಸಿಕೊಳ್ಳುವ ಶಕ್ತಿ ಇರಲಿಲ್ಲ. ಹಗಲು-ರಾತ್ರಿಯೆನ್ನದೆ ಈ ಪ್ರಾಜೆಕ್ಟ್‌ಗಾಗಿ ದುಡಿದ ವಿವೇಕ್, ಸೆಕ್ಷುಯಲ್ ಹರಾಸ್‌ಮೆಂಟ್ ಶಿಕ್ಷೆಗೆ ಗುರಿಯಾಗಲೇಬೇಕಾಯ್ತು. ಅವನನ್ನು ಆ ಕ್ಷಣವೇ ಕಂಪನಿಯ ಕೆಲಸದಿಂದ ತೆಗೆದುಹಾಕಿದರು.
ವಿವೇಕ್‌ನ ನಿರ್ಗಮನ ಸಂದರ್ಶನವನ್ನು ನಾನೇ ತೆಗೆದುಕೊಂಡೆ. ವಿವೇಕ್ ಕಣ್ಣಲ್ಲಿ ನೀರು ತುಂಬಿಕೊಂಡಿದ್ದ. “ಕೆಲಸ ಹೋಗಿದ್ದಕ್ಕೆ ಬೇಸರವಿಲ್ಲ ಸಾರ್. ಸ್ವಲ್ಪೇ ದಿನಕ್ಕೆ ಇನ್ನೊಂದು ಸಿಗುತ್ತೆ. ಆದರೆ ಮೊನ್ನೆ ಮೊನ್ನೆ ಮದುವೆಯಾಗಿದೆ. ಬಂಧು-ಬಳಗದವರೆಲ್ಲರೂ ನನ್ನ ಹೆಂಡತಿಯ ಕಾಲ್ಗುಣ ಸರಿಯಿಲ್ಲ ಎಂದು ಮಾತನಾಡಲು ಶುರು ಮಾಡಿಬಿಡುತ್ತಾರೆ” ಎಂದ. “ಯೋಚನೆ ಮಾಡಬೇಡ ವಿವೇಕ್. ಇದಕ್ಕಿಂತಲೂ ಒಳ್ಳೆಯ ಕೆಲಸ ನಿನಗೆ ಸಿಗುತ್ತೆ ಅಂತ ನನಗೆ ನಂಬಿಕೆಯಿದೆ” ಎಂದು ಅವನ ಕೈ ಒತ್ತಿದೆ. “ಈ ಜನಗಳ ಸಹವಾಸವೇ ಬೇಡ ಅನ್ನಿಸುತ್ತೆ ಸಾರ್...” ಎಂದ.
-ವಸುಧೇಂದ್ರ
(ವಾಟ್ಸಾಪ್ ತಾಣದಿಂದ ಸಂಗ್ರಹಿತ)
ಚಿತ್ರ ಕೃಪೆ: ಇಂಟರ್ನೆಟ್ ತಾಣ