ಅತಿಯಾದರೆ ಅಮೃತವೂ ವಿಷವೇ !

ಅತಿಯಾದರೆ ಅಮೃತವೂ ವಿಷವೇ !

ಬಹಳ ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿರುವಾಗ ಬೋಧಿಸತ್ವ ಒಬ್ಬ ಶ್ರೇಷ್ಟಿಯ ಮನೆಯಲ್ಲಿ ಜನಿಸಿದ್ದ. ತಂದೆ ಕಾಲವಾದ ನಂತರ ತಂದೆಯ ಅಪಾರ ವ್ಯವಹಾರ ಜ್ಞಾನ ಪಡೆದು ಅವನೇ ನಗರಶ್ರೇಷ್ಟಿಯಾದ. 

ಎಂಬತ್ತು ಕೋಟಿ ಹಣವಿದ್ದ ಆತನಿಗೆ ದಾನ ಮಾಡುವುದರಲ್ಲಿ ತುಂಬ ಸಂತೋಷ. ಅವನು ನಗರದ ನಾಲ್ಕಾರು ಮೂಲೆಗಳಲ್ಲಿ, ಧರ್ಮಛತ್ರಗಳನ್ನು ಕಟ್ಟಿಸಿದ. ಈ ಎಲ್ಲ ಸ್ಥಳಗಳಲ್ಲಿ ದಿನನಿತ್ಯ ದಾನ, ಉಚಿತ ಊಟ ದೊರೆಯುವಂತೆ ಮಾಡಿದ. ಪ್ರತಿದಿನ ಆರು ಸಾವಿರ ಹಣವನ್ನು ದಾನಕ್ಕಾಗಿ ನೀಡುತ್ತಿದ್ದ.

ಇದನ್ನು ನೋಡಿದ ಇಂದ್ರನಿಗೆ ಮುಂದೆ ಇವನೇ ತನ್ನ ದಾನದ ಪ್ರಭಾವದಿಂದ ತನ್ನ ಸ್ಥಾನಕ್ಕೆ ಸಂಚಕಾರ ತರಬಹುದೆಂಬ ಭಯ. ಶ್ರೇಷ್ಟಿಯನ್ನು ಪರೀಕ್ಷೆ ಮಾಡಲು ತನ್ನ ಶಕ್ತಿಯಿಂದ ಅವನ ಖಜಾನೆಯನ್ನು, ಧನ, ಧಾನ್ಯಗಳನ್ನು, ಅವನ ದಾನ ಕಾರ್ಯಕ್ಕೆ ಸಹಾಯಕರಾಗಿ ನಿಂತಿದ್ದ ದಾಸ-ದಾಸಿಯರು, ಅಡುಗೆಯವರು, ಬಡಿಸುವವರು ಎಲ್ಲರೂ ಮಾಯವಾಗಿಸಿಬಿಟ್ಟ.

ನಗರದ ಧರ್ಮಛತ್ರದ ಮೇಲ್ವಿಚಾರಕರು ಬಂದು, ಶ್ರೇಷ್ಟಿಗಳೇ, ನಮ್ಮ ದಾನಶಾಲೆಯಲ್ಲಿ ದಾನಕ್ಕೆ ಯಾವ ವಸ್ತುವೂ ಉಳಿದಿಲ್ಲ. ಎಲ್ಲ ವಸ್ತುಗಳು ಕಾಣದಂತೆ ಮಾಯವಾಗಿವೆ. ಕೆಲಸಗಾರರೂ ಕಾಣಿಸುತ್ತಿಲ್ಲ. ಏನು ಮಾಡುವುದು? ಎಂದು ಕೇಳಿದರು. ಶ್ರೇಷ್ಟಿ, ಹೀಗೇಕಾಗುತ್ತಿದೆ ಕಾಣೆ, ಆದರೆ ಏನಾದರೂ ದಾನ ನಿಲ್ಲಿಸಬೇಡಿ. ನನ್ನ ಮನೆಯಿಂದಲೇ ಸಾಮಾನುಗಳನ್ನು ಕಳಿಸುತ್ತೇನೆ. ಎಂದ.

ತನ್ನ ಹೆಂಡತಿಯನ್ನು ಕರೆದು ಅವರೆಲ್ಲರಿಗೂ ಬೇಕಾದ ವಸ್ತುಗಳನ್ನು ಕೊಡುವಂತೆ ಹೇಳಿದ. ಆಕೆ ಮನೆಯೆಲ್ಲಾ ಹುಡುಕಾಡಿದರೂ ಇಂದ್ರನ ಪ್ರಭಾವದಿಂದ ಏನೂ ದೊರೆಯಲಿಲ್ಲ. ಆಕೆ ಹೌಹಾರಿ ಏನು ವಿಚಿತ್ರವೋ ನಾವು ಧರಿಸಿರುವ ಬಟ್ಟೆಯನ್ನು ಬಿಟ್ಟರೆ ಏನೂ ಉಳಿದಿಲ್ಲ, ಜನರೂ ಉಳಿದಿಲ್ಲ ಎಂದು ಗಂಡನಿಗೆ ತಿಳಿಸಿದಳು.

ದಾನವನ್ನು ಮಾಡಲೇಬೇಕೆಂಬ ಹಟ ತೊಟ್ಟಿದ್ದ ಶ್ರೇಷ್ಟಿ, ಮನೆಯಲ್ಲಿ ಏನು ಉಳಿದಿದೆಯೋ, ಅದು ಒಂದು ಚೂರಾದರೂ ಸಾಕು. ಅದನ್ನೇ ತಾ' ಎಂದು ಹೆಂಡತಿಗೆ ಹೇಳಿದ. ಆ ಸಮಯಕ್ಕೆ ತೋಟದ ಕೆಲಸಕ್ಕೆ ಹೋಗಿದ್ದವನೊಬ್ಬ ಹುಲ್ಲು ಕತ್ತರಿಸುವ ಕುಡುಗೋಲು ಮತ್ತು ಹುಲ್ಲಿನ ಹೊರೆಕಟ್ಟುವ ಹಗ್ಗವನ್ನು ಇಟ್ಟು ಹೋದ. ಅದನ್ನು ಕಂಡು ಶ್ರೇಷ್ಟಿ ಹೇಳಿದ, ಭದ್ರೆ, ಇದುವರೆಗೂ ನಾನು ಹುಲ್ಲುಕೊಯ್ಯುವ ಕೆಲಸವನ್ನು ಮಾಡಿಲ್ಲ, ನಡೆ, ನಾವಿಬ್ಬರೂ ಹೋಗೋಣ. ನಾನು ಹುಲ್ಲು ಕತ್ತರಿಸುತ್ತೇನೆ. ನೀನು ಹೊರೆಯನ್ನು ಕಟ್ಟು. ಹುಲ್ಲು ಮಾರಿ ಬಂದ ಹಣವನ್ನು ದಾನ ಮಾಡೋಣ' ಅದರಂತೆಯೇ ಮಾಡಿದರು.

ತಾವು ಉಪವಾಸವಿದ್ದು ಬಂದದ್ದನ್ನೆಲ್ಲ ಕೊಟ್ಟರು. ಒಂದು ವಾರ ಹೀಗೆಯೇ ನಡೆದು ಇವರು ಶಕ್ತಿ ಕಳೆದುಕೊಂಡು ಸಾಯುವ ಸ್ಥಿತಿಗೆ ಬಂದರು. ಆಗ ಇಂದ್ರ ಇವರ ಮುಂದೆ ಪ್ರಕಟವಾಗಿ ಧರ್ಮ ಒಳ್ಳೆಯದೇ, ಆದರೆ ಅದೂ ಒಂದು ಮಿತಿಯಲ್ಲಿರಬೇಕು. ಯಾವುದೂ ಅತಿಯಾದರೆ ರೋಗವಾಗುತ್ತದೆ. ಶಕ್ತಿ ಹೀರುತ್ತದೆ. ಇನ್ನು ಮುಂದೆ ಒಂದು ಮಿತಿಯಲ್ಲಿ ದಾನ ಮಾಡು' ಎಂದು ಹೇಳಿ ಅವರ ಐಶ್ವರ್ಯವನ್ನು ಮರಳಿಸಿ ಮಾಯವಾದ.

ಯಾವುದಾದರೂ ಸರಿಯೇ ಅತಿಯಾದರೆ ಖಂಡಿತ ಅದು ನಮಗೆ ಒಳಿತಿಗಿಂತ, ಕೆಡುಕನ್ನೇ ಮಾಡುವುದು ಶತಃ ಸಿದ್ಧ. ನಮ್ಮ ಮಕ್ಕಳಿಗೆ ಅವರ ಸುಖೀ ಜೀವನಕ್ಕೆ ಎಲ್ಲಾ ಅನುಕೂಲಗಳನ್ನು ಮಾಡಿಕೊಡಬೇಕು. ಎಂಬ ಕುರುಡು ಮೋಹದಿಂದ, ಅನಗತ್ಯವಾಗಿ ಅವರಿಗೆ ಬೇಕಾದ ಬೇಡವಾದ ಎಲ್ಲಾ ಅನುಕೂಲಗಳನ್ನೂ ಮಾಡಿಕೊಡುತ್ತೇವೆ.

ಹಕ್ಕಿಯೊಂದು ಹಾರಲು ಕಲಿಯಬೇಕೆಂದರೆ ತಾಯಿ ಹಕ್ಕಿ ಅದನ್ನು ಗೂಡಿನಿಂದ ಹೊರಗೆ ದೂಡಲೇ ಬೇಕು. ಜೀವನವಿಡೀ ತಾನೇ ಅದಕ್ಕೆ ಕಾಳು ಕಡ್ಡಿ ಹೊಂಚಲು ಸಾಧ್ಯವಿಲ್ಲ. ಅದೇ ರೀತಿ ನಮ್ಮ ಮಕ್ಕಳು ಕೂಡ ಸ್ವತಂತ್ರರಾಗಿ ಯೋಚಿಸಲು, ಅವರ ಜೀವನದಲ್ಲಿ ದಾರಿಗಳನ್ನು ತೆಗೆದುಕೊಳ್ಳಲು ನಾವು ಅವರನ್ನು ಪ್ರೇರೇಪಿಸಬೇಕು. ನಮಗೆ ಶಕ್ತಿ ಇದೇಂದು ಎಲ್ಲಕ್ಕೂ ನಾವೇ ಅಣಿ ಮಾಡುತ್ತಾ ನಿಂತುಕೊಂಡರೆ ಅವರು ಎಂದಿಗೂ ಕೂಡ ಅವರ ಕಾಲ ಮೇಲೆ ಅವರು ನಿಲ್ಲಲು ಕಲಿಯುವುದೇ ಇಲ್ಲ.

(-ವಿಶ್ವವಾಣಿ ಕೃಪೆ)

ಚಿತ್ರ ಕೃಪೆ: ಅಂತರ್ಜಾಲ ತಾಣ