ಅತೀತಭವ

ಅತೀತಭವ

ಪುಸ್ತಕದ ಲೇಖಕ/ಕವಿಯ ಹೆಸರು
ಅಶ್ವಿನಿ ಸುನಿಲ್
ಪ್ರಕಾಶಕರು
ಸಾಹಿತ್ಯಲೋಕ ಪಬ್ಲಿಕೇಶನ್ಸ್, ಬೆಂಗಳೂರು
ಪುಸ್ತಕದ ಬೆಲೆ
₹135.00, ಮುದ್ರಣ - 2024

ಈ ವರ್ಷ ಓದಿದ ಮೊದಲ ಕಥಾಸಂಕಲನ ಅಶ್ವಿನಿ ಸುನಿಲ್ ಅವರ 'ಅತೀತಭವ'. ಕಳೆದವರ್ಷ ನಿತ್ಯೋತ್ಸವ ಅಭಿಯಾನದಲ್ಲಿ ವೀಣಾಮೇಡಂ ಅವರಿಂದ ಬಹುಮಾನವಾಗಿ ದೊರೆತ ಕೃತಿಯಿದು. ಸಣ್ಣಕತೆಗಳು ಯಾರಿಗೆ ತಾನೇ ಇಷ್ಟವಾಗುವುದಿಲ್ಲ! ಹದಿನೈದು ಸಣ್ಣಕತೆಗಳು ಈ ಸಂಕಲನದಲ್ಲಿವೆ. ಇಲ್ಲಿನ ಬಹುತೇಕ ಕತೆಗಳು ಐದಾರು ಪುಟಗಳಲ್ಲಿ ಮುಗಿದುಬಿಡುತ್ತವೆ. ಹೀಗಾಗಿ ಓದುಗನಿಗೆ ಒಂದೇ ಗುಕ್ಕಿನಲ್ಲಿ ನಾಲ್ಕಾರು ಕತೆಗಳನ್ನು ಒಮ್ಮೆಲೆ ಓದಲು ಸಾಧ್ಯವಾಗುತ್ತದೆ. ಹೆಚ್ಚಿನ ಕಥಾವಸ್ತುಗಳು ದೈನಂದಿನ ಜೀವನಕ್ಕೆ ಸಂಬಂಧಿಸಿದವೇ ಆದ್ದರಿಂದ, ಸರಳವಾಗಿ ಮತ್ತು ಸರಾಗವಾಗಿ ಕತೆಗಳು ಸಾಗುತ್ತವೆ. ನನಗೆ ವೈಯುಕ್ತಿಕವಾಗಿ ಯಾವ ಕತೆಯೂ ಧೀರ್ಘವೆನಿಸಲಿಲ್ಲ. ಆದರೆ ಜಾಹ್ನವಿ, ಅಪ್ಪ, ಗೋಲಿಸೋಡಾ, ಭ್ರಮೆ ಕತೆಗಳಲ್ಲಿ ಮನಸ್ಸಿನ ತಪ್ಪು ಕಲ್ಪನೆ, ಅಥವಾ ಪ್ರೇರಿತ ಮನಸ್ಥಿತಿಗಳೇ ಕತೆಯ ಪಾತ್ರಗಳನ್ನು ಭಾದಿಸುವುದು ಕೊಂಚ ಏಕತಾನತೆಯೆನಿಸಿತು. ಇಲ್ಲಿ ಕೊಂಚ ವೈವಿಧ್ಯತೆಯಿರಬಹುದಿತ್ತು. ಉಳಿದಂತೆ, ನನಗೆ ಬಹಳ ಇಷ್ಟವಾದ ಕೆಲ ಕತೆಗಳು ಹೀಗಿವೆ.

1. ಫೇ(ಕ್)ಸ್ ಬುಕ್: ಈ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಕತೆಯಿದು. 'ಜನರೇಷನ್ ಗ್ಯಾಪ್' ಎಂಬುದು ಕೌಟುಂಬಿಕ ಸಂಬಂಧಗಳಲ್ಲಿ ಎಷ್ಟು ಸೂಕ್ಷ್ಮ ಪಾತ್ರ ವಹಿಸುತ್ತದೆ ಎಂದು ತೋರಿಸುವ ಕತೆಯಿದು. ಪ್ರಾಯಶಃ ಇಂದಿನ ತಲೆಮಾರಿನಲ್ಲಿ ನಗರದಲ್ಲಿ ಬದುಕುತ್ತಿರುವ ನಾವುಗಳು ಒಮ್ಮೆಯಾದರೂ ನಮ್ಮ ಹೆತ್ತವರೊಂದಿಗೆ ಹೊಂದಿರಬಹುದಾದ ಅನುಭವದ ಕುರಿತು ಮಾತಾಡುವ ಸುಂದರ ಕತೆಯಿದು. ಕಥಾವಸ್ತುವಿನ ಆಯ್ಕೆ ಬಹಳ ಇಷ್ಟವಾಯಿತು.

2. ವಿಂಡೋ ಸೀಟ್: ಬಬದುಕಿನಲ್ಲಿ ಅಚಾನಕ್ಕೆ ನಡೆಯುವ ಘಟನೆಯೊಂದು ಕೊನೆಯವರೆಗೂ ನಮ್ಮಲ್ಲಿ ಹೇಗೆ ಪಾಪಪ್ರಜ್ಞೆಯನ್ನು ಉಳಿಸುತ್ತದೆ ಎಂದು ಲೇಖಕಿ ಮನೋಜ್ಞವಾಗಿ ಹೇಳಿದ್ದಾರೆ. ಈ ಕತೆಯನ್ನು ಓದಿದಾಗ ನಮ್ಮಿಂದಲೂ ಅಚಾನಕ್ಕಾದ ತಪ್ಪುಗಳು ನೆನಪಾಗದೇ ಇರವು!

3. ಅತೀತಭವ: ಕಾಲ್ಪನಿಕ ಎನ್ನಬಹುದಾದ ಕತೆಯಾದರೂ, ವಾಸ್ತವದಿಂದ ದೂರ ತಳ್ಳುವಂತಿಲ್ಲ. ನಾನೂ ರಾಯರ ಭಕ್ತನಾದ್ದರಿಂದ, ರಾಯರ ಮಹಿಮೆಯ ಬಗ್ಗೆ ಮಾತಾಡುವ ಈ ಕತೆ ಮನಗೆದ್ದಿತು. ಅನೂಹ್ಯವಾದ ಮುಕ್ತಾಯವನ್ನು ಹೊಂದಿರುವ ಈ ಕತೆ, ತನ್ನೊಳಗಿನ ಸತ್ವದಲ್ಲಿ ಉತ್ಕೃಷ್ಟವಾಗಿದೆ ಎನಿಸಿತು.

4. ಜಾಹ್ನವಿ: ಬಿಗಿಯಾದ ನಿರೂಪಣೆಯನ್ನು ಹೊಂದಿದ, ಓದುಗನನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಕತೆಯಿದು. ಮನಸ್ಸಿನ ತಪ್ಪು ಕಲ್ಪನೆಗಳಿಂದ ಆಗಬಹುದಾದ ಗಂಡಾಂತರಗಳ ಬಗ್ಗೆ ಲೇಖಕಿ ಜಾಣ್ಮೆಯಿಂದ ಕತೆ ಹೆಣೆದಿದ್ದಾರೆ.

5. ಶರ್ಮಿಷ್ಠಾ: ಸ್ವಾರ್ಥ ಮತ್ತು ಸಂಬಂಧಗಳ ನಡುವಿನ ಘರ್ಷಣೆಯನ್ನು ಸೂಕ್ಷ್ಮವಾಗಿ ಹೇಳುವ ಕತೆಯಿದು. ಇಲ್ಲಿ ಶರ್ಮಿಷ್ಠಾಳ ಕೌಟುಂಬಿಕ ಹಿನ್ನಲೆಯನ್ನು ನನ್ನ ಕೌಟುಂಬಿಕ ಹಿನ್ನಲೆಯ ಜೊತೆ ಹೋಲಿಸಿಕೊಂಡೆ. ಪೂರ್ತಿಯಲ್ಲದಿದ್ದರೂ, ಒಂದಿಷ್ಟು ಸಾಮ್ಯತೆಗಳು ಕಂಡವು. ಆದ್ದರಿಂದಲೇ ಈ ಕತೆ, ಒಂದಿಷ್ಟು ಬೇಸರವನ್ನೂ ತಂದಿತು.

ಈ ಎಲ್ಲ ಕತೆಗಳ ಮಧ್ಯೆ, ಹಾಸ್ಯದ ನಿರೂಪಣೆಯಿರುವ ಒಂದೆರಡು ಕತೆಯಿದ್ದಿದ್ದರೆ ಈ ಸಂಕಲನ ಮತ್ತಷ್ಟು ಪೂರ್ಣತೆಯಿಂದ ಕೂಡಿರುತ್ತಿತ್ತು ಎನಿಸಿತು. ಲೇಖಕಿಯವರ ಮುಂದಿನ ಎಲ್ಲ ಯೋಜನೆಗಳಿಗೂ ಶುಭವಾಗಲಿ.

-ನಾಗೇಂದ್ರ ಎ ಆರ್