ಅತೀ ಗಣ್ಯ ವ್ಯಕ್ತಿಗಳ ಭದ್ರತೆಯ ಸುತ್ತ…

ಅತೀ ಗಣ್ಯ ವ್ಯಕ್ತಿಗಳ ಭದ್ರತೆಯ ಸುತ್ತ…

ಉನ್ನತ ಹುದ್ದೆಗಳಲ್ಲಿರುವ ಪ್ರಮುಖ ರಾಜಕೀಯ, ಸರಕಾರಿ, ಸಾಮಾಜಿಕ, ವೈಜ್ಞಾನಿಕ ಕ್ಷೇತ್ರಗಳ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸಲು ಒಂದು ವ್ಯವಸ್ಥೆ ಇದೆ. ಈ ಹಿಂದೆ ನಮ್ಮ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಭದ್ರತಾ ಲೋಪದಿಂದಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಆ ದಿನಗಳ ನಂತರ ಅತೀ ಗಣ್ಯ ವ್ಯಕ್ತಿಗಳ ಭದ್ರತೆಯ ವಿಷಯದಲ್ಲಿ ಯಾವುದೇ ಸರಕಾರಗಳು ರಾಜಿ ಮಾಡಿಕೊಳ್ಳುತ್ತಿಲ್ಲ. ಎಸ್ ಜಿ ಪಿ ಕಮಾಂಡೋ, ಝಡ್ ಪ್ಲಸ್ ಭದ್ರತೆ, ಝಡ್ ಶ್ರೇಣಿಯ ಭದ್ರತೆ, ವೈ ಶ್ರೇಣಿಯ ಭದ್ರತೆ, ಪೋಲೀಸ್ ಭದ್ರತೆ ಹೀಗೆ ಹಲವಾರು ಬಗೆಯ ಭದ್ರತಾ ವ್ಯವಸ್ಥೆಗಳು ನಮ್ಮ ದೇಶದಲ್ಲಿವೆ.

ನಮ್ಮ ದೇಶದಲ್ಲಿ ಪ್ರಮುಖವಾಗಿ ಅತೀ ಗಣ್ಯರೆಂದು ಕರೆಯಿಸಿಕೊಳ್ಳುವವರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಭಯ ಸದನಗಳ ಸ್ಪೀಕರ್ ಗಳು, ಸರ್ವೋಚ್ಛ ನ್ಯಾಯಾಲಯಗಳ ನ್ಯಾಯಾಧೀಶರು, ಸಂಪುಟದ ಪ್ರಭಾವೀ ಖಾತೆಗಳ ಸಚಿವರು, ವಿರೋಧ ಪಕ್ಷದ ನಾಯಕರು, ಮಾಜಿ ಪ್ರಧಾನಿಗಳು ಹೀಗೆ ಪಟ್ಟಿ ಮುಂದುವರೆಯುತ್ತದೆ. ಕೆಲವು ವ್ಯಕ್ತಿಗಳು ಸರಕಾರದ ಯಾವುದೇ ಹುದ್ದೆಯಲ್ಲಿ ಇಲ್ಲದೇ ಹೋದರೂ ಅವರಿಗೆ ಸಮಾಜದಲ್ಲಿರುವ ಸ್ಥಾನ, ಪ್ರಾಧಾನ್ಯತೆ ಮತ್ತು ಬೆದರಿಕೆಗೆ ಹೊಂದಿಕೊಂಡು ಭದ್ರತೆಯನ್ನು ನೀಡಲಾಗುತ್ತದೆ. ಕೆಲವು ವ್ಯಕ್ತಿಗಳು ಕೈಗೊಳ್ಳುವ ತೀರ್ಮಾನಗಳು ಅಥವಾ ಭಾಷಣಗಳಿಂದ ಅವರಿಗೆ ಬೆದರಿಕೆ ಇರಬಹುದು. ಅಂತಹ ಜೀವ ಬೆದರಿಕೆ ಇರುವ ವ್ಯಕ್ತಿಗಳಿಗೂ ಭದ್ರತೆಯನ್ನು ನೀಡಬೇಕಾಗುತ್ತದೆ. ಕೆಲವು ಬಾರಿ ಗುಪ್ತಚರ ಇಲಾಖೆಯ ಮುಖ್ಯಸ್ಥರಿಗೆ, ಮಾಜಿ ನ್ಯಾಯಾಧೀಶರಿಗೆ, ಮಾಜಿ ಅಧಿಕಾರಿಗಳಿಗೆ ಭದ್ರತೆ ನೀಡಬೇಕಾಗುತ್ತದೆ. 

ಯಾವ ವ್ಯಕ್ತಿಗೆ, ಯಾವ ರೀತಿಯ ಭದ್ರತೆಯನ್ನು ನೀಡಬೇಕು ಎನ್ನುವುದನ್ನು ನಿರ್ಧಾರ ಮಾಡುವುದು ಕೇಂದ್ರ ಗೃಹ ಸಚಿವಾಲಯ. ಇವರ ತೀರ್ಮಾನದಂತೆ ಆಯಾ ವ್ಯಕ್ತಿಗೆ ಬೇರೆ ಬೇರೆ ದರ್ಜೆಯ ಭದ್ರತೆಯನ್ನು ಕಲ್ಪಿಸಲಾಗುತ್ತದೆ. ಕೆಲವು ಬಾರಿ ಆ ವ್ಯಕ್ತಿಯೇ ಭದ್ರತೆ ಬೇಕು ಅಂದಾಗ ಅದಕ್ಕೆ ಸೂಕ್ತವಾಗಿ ವ್ಯವಸ್ಥೆ ಮಾಡುವ ಅಥವಾ ಅವರ ಬೇಡಿಕೆಯನ್ನು ತಿರಸ್ಕರಿಸುವ ಅಧಿಕಾರ ಗೃಹ ಇಲಾಖೆಗೆ ಇದೆ. ನಮ್ಮ ದೇಶದಲ್ಲಿ ಹಲವು ಸ್ತರಗಳ ಭದ್ರತಾ ವ್ಯವಸ್ಥೆಯನ್ನು ನೀಡುವ ಪಡೆಗಳು ಇವೆ. ಇಂಡೋ - ಟಿಬೇಟಿಯನ್ ಬಾರ್ಡರ್ ಪೋಲೀಸ್, ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ ( ಸಿ ಐ ಎಸ್ ಎಫ್), ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ಸ್ (ಎನ್ ಎಸ್ ಜಿ), ಕೇಂದ್ರೀಯ ಮೀಸಲು ಪೋಲೀಸ್ ಪಡೆ (ಸಿ ಆರ್ ಪಿ ಎಫ್) ಮೊದಲಾದವರನ್ನು ಅತೀ ಗಣ್ಯ ವ್ಯಕ್ತಿಗಳ ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ.

ನಮ್ಮಲ್ಲಿ ಪ್ರಸ್ತುತ ವಿಶೇಷ ಭದ್ರತಾ ದಳ, ಎಕ್ಸ್, ವೈ, ಝಡ್, ಝಡ್ ಪ್ಲಸ್ ಮೊದಲಾದ ಭದ್ರತಾ ಶ್ರೇಣಿಗಳು ಇವೆ. ಝಡ್ ಪ್ಲಸ್ ಎನ್ನುವುದು ನಮ್ಮ ದೇಶದ ಅತ್ಯುನ್ನದ ಭದ್ರತಾ ಶ್ರೇಣಿಯ ವ್ಯವಸ್ಥೆ ಎನ್ನಬಹುದು. ಇದರಲ್ಲಿ ಹತ್ತು ಮಂದಿ ಕಮಾಂಡೋಗಳು ಸೇರಿದಂತೆ ೫೫ ಮಂದಿ ಭದ್ರತಾ ಸಿಬ್ಬಂದಿಗಳು ಇರುತ್ತಾರೆ. ಝಡ್ ದರ್ಜೆಯಲ್ಲಿ ೪-೫ ಕಮಾಂಡೋಗಳು ಸೇರಿದಂತೆ ೨೨ ಮಂದಿ ಭದ್ರತಾ ಸಿಬ್ಬಂದಿಗಳು ಇರುತ್ತಾರೆ. ವೈ ಪ್ಲಸ್ ದರ್ಜೆಯಲ್ಲಿ ಒಬ್ಬರು ಅಥವಾ ಇಬ್ಬರು ಕಮಾಡೋಗಳು ಸೇರಿದಂತೆ ೧೧ ಮಂದಿ ಭದ್ರತಾ ಸಿಬ್ಬಂದಿಗಳು, ವೈ ದರ್ಜೆಯಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಸೇರಿ ೧೦ ಜನ ಭದ್ರತಾ ಸಿಬ್ಬಂದಿಗಳು ಹಾಗೂ ಎಕ್ಸ್ ದರ್ಜೆಯಲ್ಲಿ ಇಬ್ಬರು ಸಶಸ್ತ್ರ ಸಿಬ್ಬಂದಿಗಳು ಇರುತ್ತಾರೆ. 

ಬ್ಲೂ ಬುಕ್ ಮತ್ತು ಯೆಲ್ಲೋ ಬುಕ್ ಎಂದರೇನು?: ಅತೀ ಗಣ್ಯ ವ್ಯಕ್ತಿಗಳು ಅಂದರೆ ವಿವಿಐಪಿಗಳ ಸಾಲಿಗೆ ಸೇರಿದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿಗಳಿಗೆ ನೀಡುವ ಭದ್ರತೆಯ ಸಂಪೂರ್ಣ ವಿವರ, ಅವರ ಅಧಿಕೃತ ಪ್ರವಾಸಗಳ ಬಗ್ಗೆ, ಆ ಸಂದರ್ಭದಲ್ಲಿ ಅವರು ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಬ್ಲೂ ಬುಕ್ ನಲ್ಲಿ ನಮೂದಿಸಲಾಗುತ್ತದೆ. ಯೆಲ್ಲೋ ಬುಕ್ ನಲ್ಲಿ ಇವರನ್ನು ಹೊರತು ಪಡಿಸಿದ ಉಳಿದ ದರ್ಜೆಯ ಭದ್ರತೆಯನ್ನು ಹೊಂದಿರುವ ಗಣ್ಯ ವ್ಯಕ್ತಿಗಳ ಭದ್ರತಾ ವ್ಯವಸ್ಥೆ, ಅವರಿಗೆ ನೀಡುವ ಸೌಕರ್ಯಗಳ ಬಗ್ಗೆ ನಮೂದಿಸಲಾಗುತ್ತದೆ. ಬ್ಲೂ ಬುಕ್ ಮತ್ತು ಯೆಲ್ಲೋ ಬುಕ್ ಅನ್ನು ಆಯಾ ಭದ್ರತಾ ದರ್ಜೆ ಹೊಂದಿದ ವ್ಯಕ್ತಿಗಳ ಸೌಕರ್ಯ ಮತ್ತು ರಕ್ಷಣಾ ವಿವರಗಳನ್ನು ಹೊಂದಿರುವ ಕೈಪಿಡಿ ಎನ್ನಬಹುದಾಗಿದೆ.

ಏನಿದು ಎಸ್ ಪಿ ಜಿ?: ಇಂದಿರಾ ಗಾಂಧಿಯವರು ಪ್ರಧಾನಿ ಹುದ್ದೆಯಲ್ಲಿ ಇರುವಾಗಲೇ ತಮ್ಮ ಅಂಗರಕ್ಷಕರಿಂದಲೇ ಹತ್ಯೆಯಾಗುತ್ತಾರೆ. ಆ ಸಮಯದಲ್ಲಿ ಪ್ರಧಾನಿಯೊಬ್ಬರಿಗೆ ನೀಡಬೇಕಾದ ಭದ್ರತೆಯ ಬಗ್ಗೆ ಅಮೂಲಾಗ್ರವಾಗಿ ವಿಚಾರ ವಿಮರ್ಶೆ ಮಾಡಿ ೧೯೮೫ರಲ್ಲಿ ಸ್ಥಾಪನೆ ಮಾಡಿದ ಭದ್ರತಾ ದಳವೇ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ ಪಿ ಜಿ). ಈ ದಳವು ಕೇಂದ್ರ ಸರಕಾರದ ಗುಪ್ತಚರ ವಿಭಾಗ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೋಲೀಸ್ ಇಲಾಖೆಯ ಜೊತೆಗೂಡಿ ಸುರಕ್ಷತಾ ಕಾರ್ಯ ನಡೆಸುತ್ತದೆ. ಈ ದಳದಲ್ಲಿ ಕೆಲಸ ಮಾಡುವವರು ಅತ್ಯಂತ ಸಮರ್ಥರೂ, ಚುರುಕು ವ್ಯಕ್ತಿಗಳೂ ಆಗಿರುತ್ತಾರೆ. ಈ ದಳವು ಎಂ ಐ - ೧೭ ಹೆಲಿಕಾಪ್ಟರ್, ಇಂಡಿಯಾ ವನ್ ವಿಶೇಷ ವಿಮಾನಗಳನ್ನು ಉಪಯೋಗಿಸುತ್ತದೆ. ಪ್ರಧಾನಿಯವರ ವಿಶೇಷ ಭದ್ರತೆಯನ್ನು ಎಸ್ ಜಿ ಪಿ ಕಮಾಂಡೋ ದಳವು ನೋಡಿಕೊಳ್ಳುತ್ತದೆ. ಇವರ ಬಳಿ ಮರ್ಸೆಡಿಸ್ ಮೆಬ್ಯಾಕ್ ಎಸ್ ೬೫೦, ೮ ಟೊಯೊಟಾ ಫಾರ್ಚನರ್, ಮರ್ಸೆಡಿಸ್ ಬೆಂಜ್, ಸ್ಪ್ರಿಂಟರ್ ಆಂಬುಲೆನ್ಸ್ ಮೊದಲಾದ ವಾಹನಗಳೂ ಇವೆ. ರಸ್ತೆಯ ಮೂಲಕ ಪ್ರಧಾನಿಗಳು ಸಾಗುವಾಗ ಈ ವಾಹನಗಳನ್ನು ಬಳಸಲಾಗುತ್ತದೆ. ಇದರ ಜೊತೆಗೆ ಅತ್ಯುತ್ತಮ ತಂತ್ರಜ್ಞಾನದ ಬಂದೂಕುಗಳನ್ನು ಬಳಸಲಾಗುತ್ತದೆ. ಈ ಭದ್ರತೆಗೆ ಸರಕಾರ ವೆಚ್ಚ ಮಾಡುವ ಹಣ ಎಷ್ಟು ಗೊತ್ತೇ ದಿನಕ್ಕೆ ಸುಮಾರು ೧.೧೮ ಕೋಟಿ ರೂ.!

ಭಾರತದಲ್ಲಿ ಪ್ರಸ್ತುತ ಎಸ್ ಜಿ ಪಿ ಭದ್ರತೆಯನ್ನು ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿಯವರಿಗೆ ಮಾತ್ರ ಒದಗಿಸಲಾಗುತ್ತಿದೆ. ಉಳಿದಂತೆ ೨೧ ಮಂದಿಗೆ ಝೆಡ್ ಪ್ಲಸ್ ಹಾಗೂ ೨೬ ಮಂದಿಗೆ ಝಡ್ ಶ್ರೇಣಿಯ ಭದ್ರತೆಯನ್ನು ನೀಡಲಾಗುತ್ತಿದೆ. ಇದರಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಗೃಹ ಸಚಿವ ಅಮಿತ್ ಶಾ, ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್ ಮೊದಲಾದವರು ಸೇರಿದ್ದಾರೆ. ಈ ಶ್ರೇಣಿಯ ಭದ್ರತೆಗಾಗಿ ಸರಕಾರ ಒಂದು ದಿನಕ್ಕೆ ೧.೫ ಲಕ್ಷ ಹಣವನ್ನು ವೆಚ್ಚ ಮಾಡುತ್ತಿದೆ.   

ನಮ್ಮ ದೇಶ ಮಾತ್ರವಲ್ಲ ವಿಶ್ವದ ಬಹುತೇಕ ರಾಷ್ಟ್ರಗಳು ಭದ್ರತಾ ವ್ಯವಸ್ಥೆಗಾಗಿ ಅಪಾರ ಹಣವನ್ನು ವೆಚ್ಚ ಮಾಡುತ್ತವೆ. ಬ್ರಿಟನ್ ನಲ್ಲಿ ಪ್ರಧಾನಿಯ ಭದ್ರತೆಗೆ ಲಂಡನ್ ನ ಮೆಟ್ರೋಪಾಲಿಟನ್ ಪೋಲೀಸ್ ವ್ಯವಸ್ಥೆ ಇರುತ್ತದೆ. ಅಮೇರಿಕದಲ್ಲಿ ಸಿಕ್ರೇಟ್ ಸರ್ವಿಸ್ ಎಂಬ ಸಂಸ್ಥೆ ಅಲ್ಲಿನ ಅಧ್ಯಕ್ಷರ ರಕ್ಷಣಾ ಭಾರವನ್ನು ಹೊತ್ತಿದೆ. ರಷ್ಯಾದಲ್ಲಿ ಪ್ರಸಿಡೆನ್ಶಿಯಲ್ ಸೆಕ್ಯುರಿಟಿ ಸರ್ವಿಸ್ ವ್ಯವಸ್ಥೆ ಅಲ್ಲಿಯ ರಾಷ್ಟ್ರಪತಿ, ಪ್ರಧಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆಯನ್ನು ಒದಗಿಸುತ್ತಿದೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ