ಅತೃಪ್ತಿ

ಅತೃಪ್ತಿ

ಕವನ

ಓ ಮನುಜನೇ, ಎಂದು ಕಾಣುವುದು ನಿನ್ನಲಿ ತೃಪ್ತಿ?
ದಿನವೂ ಬೆಳೆಯುತಿದೆ ನಿನ್ನ ಬೇಡಿಕೆಗಳ ವ್ಯಾಪ್ತಿ.
ಭೂಮಂಡಲವೇ ನಿನಗಿದ್ದರೂ, ನಿನಗಿಲ್ಲ ಸಂತೃಪ್ತಿ,
ಈ ಮೋಹಕೆ ಬಂಧಿಯಾದ ನಿನಗೆ ಎಲ್ಲಿದೇ ಮುಕ್ತಿ?

ಭೂಭಾಗವನೇ ಖಂಡಗಳಾಗಿ ವಿಂಗಡಿಸಿರುವೆ.
ಖಂಡಗಳನು ದೇಶಗಳಾಗಿ ವಿಭಜಿಸಿರುವೆ.
ನಿನ್ನ ಪ್ರಾಂತ್ಯಕೆ ಗಡಿ ರೇಖೆಯನು ಗುರುತಿಸಿರುವೆ.
ಪ್ರತಿಕ್ಷಣವೂ ಗಡಿಯನ್ನುಲ್ಲಂಘನೆಯ ಮಾಡಲು ಸಂಚು ಹೂಡುತಿರುವೆ.

ಅನ್ಯ ಜನಾಂಗವೆಂದು ಇವರ ದ್ವೇಷಿಸುತಿರುವೆ.
ಇವರು ಜೀವಿಸುವ ಹಕ್ಕನು ಕಸಿದುಕೊಳ್ಳುತಿರುವೆ.
ಉಗ್ರವಾದಿಯ ರೂಪವ ತಾಳಿ, ಇವರಲಿ ಭೀತಿ ಹುಟ್ಟಿಸಿರುವೆ.
ಎಲ್ಲರ ಮೃತ್ಯುವಾಗಿ ಇಡಿಶಾಪಕ್ಕೊಳಗಾದರೂ, ಮಹಾಸಾಧಕನೆಂದು ಬೀಗುತಿರುವೆ.

ನಿನ್ನ ಸಂತತಿಯ ವೃಧ್ಧಿಗಾಗಿ, ಅರಣ್ಯ ಸಂಪತ್ತನು ನಾಶಮಾಡುತಿರುವೆ.
ಅನ್ಯ ಜೀವ ಸಂಕುಲಗಳ ವಾಸಸ್ಥಾನವ ಕಸಿದುಕ್ಕೊಳ್ಳುತಿರುವೆ.
ನಗರೀಕರಣ ಗೋಜಿನಲಿ, ಜಲಮೂಲವ ಬರಿದು ಮಾಡುತಿರುವೆ.
ಸೃಷ್ಠಿಯಲಿ ಬುದ್ಧಿಜೀವಿ ನೀನಾದರೂ, ಪ್ರಕೃತಿ ಉಳಿವಿಗೆ ಏನೂ ಮಾಡದಿರುವೆ.

ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು, ಹೆತ್ತವರ ಪೋಷಣೆಯಿರಲು.
ವಾಸಕೆ ನೆರಳಾಗಿ, ಪೋಷಕರು ಶ್ರಮದಿಂದ ಕಟ್ಟಿದ ಗೂಡಿರಲು.
ಪ್ರೀತಿಯ ನಿಧಿಯಾಗಿ, ತುಂಬು ಕುಟುಂಬವು ನಿನ್ನದಾಗಿರಲು.
ಬಾಳ ಸುಗುಮ ಪಯಣಕೆ, ನಿನ್ನ ಸಂಸಾರವು ಬೆನ್ನೆಲುಬಾಗಿರಲು.

ಗುರಿಯ ಸೇರುವ ಮಾರ್ಗವ ತೋರಲು, ಮಾರ್ಗದರ್ಶಕರಿರಲು.
ಎಲ್ಲವೂ ಸುಸೂತ್ರದಿ ಸಾಗಲು, ದೈವ ಪ್ರೇರಣೆಯಿರಲು.
ಆ ತೃಪ್ತಿಯೇ ನಿನ್ನ ಸ್ಥಿತಿ ನೋಡಿ ನಾಚಿ ನೀರಾಗಲು,
ಮಾಸದಿರದು ನಿನ್ನ ಮೊಗದಲಿರುವ ಆ ನಿರಾಶೆಯ ಅಳಲು.

ಸೃಷ್ಠಿಯ ವರದಾನವು ನಿನಗೆ, ನೀ ಬುದ್ಧಿಜೀವಿ.
ನಿನ್ನ ದುರ್ಬುದ್ಧಿಯು ಮಾಡಿದೆ, ನಿನ್ನ ಮೂಕಜೀವಿ.
ತೃಪ್ತಿ ಅತೃಪ್ತಿಯ ಅಂತರವ ಅರಿಯಬಲ್ಲ, ನೀ ಜ್ಞಾನಜೀವಿ.
ಅತೃಪ್ತನಾಗಿ ಉಳಿದರೆ, ನೀನಾಗುವೆ ನಿರ್ಜೀವಿ.

ಕಾಣಿಸದೆ ಜೀವಿಸಲು ಹವಣಿಸುತಿರುವ ಅಸಹಾಯಕರ ಆ ರೋಧನ.
ಮನವು ಪರಿವರ್ತನೆಯಾಗಲಿ ಕಂಡು ಇವರ ಜೀವನದ ಪ್ರತ್ಯಕ್ಷ ದರ್ಶನ.
ಒಲಿದುದಕೆ ತೃಪ್ತಿ ತೋರುವುದು ನಿನ್ನಲ್ಲಾಗಬೇಕಾದ ಪರಿವರ್ತನ.
ಈ ಪರಿವರ್ತನೆಯಾಗಲಿ, ದಯಪಾಲಿಸುವಾತನು ಮತ್ತಷ್ಟು ನೀಡಲು ಪ್ರೇರಣ.