ಅತ್ತರ್

ಅತ್ತರ್

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ನಲ್ಲತಂಬಿ
ಪ್ರಕಾಶಕರು
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಭುವನೇಶ್ವರಿ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦ ಮುದ್ರಣ: ೨೦೨೨

ಭರವಸೆಯ ಕಥೆಗಾರ ಕೆ.ನಲ್ಲತಂಬಿ ಬರೆದ ಕಥೆಗಳ ಸಂಕಲನ -’ಅತ್ತರ್’. ನಾವು ಕಂಡ ಜಗತ್ತೇ ನಲ್ಲತಂಬಿ ಅವರ ಕಕ್ಷೆಯಲ್ಲಿ ಕೌತುಕ ಹುಟ್ಟಿಸಿ ಹೊಸ ವೇಷ ತೊಟ್ಟು ನಮಗೆ ಗೋಚರವಾಗುತ್ತದೆ. ಅವರ ಕ್ಯಾಮೆರಾ ಕಣ್ಣುಗಳು ಅಷ್ಟು ಸೃಜನಶೀಲ ಮತ್ತು ಸುಂದರ! ಪ್ರಸ್ತುತ ಲೋಕರೂಢಿ ವ್ಯಾಪಾರ ಸಂಬಂಧಗಳಲ್ಲಿನ ಅನೇಕ ಸೂಕ್ಷ್ಮ ವಿಚಾರಗಳು ಈ ಸಂಕಲನದ ಕಥಾವಸ್ತುಗಳಾಗಿವೆ. ಅದನ್ನು ಸಮಕಾಲೀನತೆಯ ಏಕಾವಳಿ ಎಂದು ಬಣ್ಣಿಸಬಹುದು ಎನ್ನುತ್ತಾರೆ ಲೇಖಕ ಶ್ರೀಧರ ಬನವಾಸಿ. ಅವರು ಕೆ.ನಲ್ಲತಂಬಿಯವರ “ಅತ್ತರ್‌” ಕೃತಿಗೆ ಬರೆದ ಬೆನ್ನುಡಿ ಹಾಗೂ ಕೃತಿಯ ಆಯ್ದ ಭಾಗ ನಿಮ್ಮ ಓದಿಗಾಗಿ…

“ಕೆ.ನಲ್ಲತಂಬಿ ಅವರು ಇಷ್ಟವಾಗುವುದೇ ಅವರ ಪ್ರತಿ ಕತೆಗಳಲ್ಲಿನ ಪರಿಪುಷ್ಪ ರೊಮ್ಯಾಂಟಿಕ್ ಅನುಭವಗಳಿಂದ ಅವರು ಸೃಜಿಸುವ ಪಾತ್ರಗಳು ಕಲ್ಪನೆಯೂ, ಸಹಜವೂ ಎಂಬಂತೆ ಅನುಭವ ಮೂಡಿಸಿ ವಾಸ್ತವದಲ್ಲಿದ್ದುಕೊಂಡೇ ಪ್ರಾಮಾಣಿಕವಾಗಿ ಓದುಗರೊಂದಿಗೆ ತಮ್ಮನ್ನು ತೆರೆದುಕೊಳ್ಳುತ್ತವೆ ಅಷ್ಟೇ ನಿಷ್ಕಲ್ಮಷವಾಗಿ ತಮ್ಮ ಭಾವನೆಗಳನ್ನು ನಿವೇದಿಸಿಕೊಳ್ಳುತ್ತವೆ. ಅದರಿಂದ ಓದುಗರ ಮನಸ್ಸು ಬದುಕಿನ ಮಧುರ ನೆನಪುಗಳ ಏಕತಾನತೆಯ ಕಡೆಗೆ ಜಾರುತ್ತದೆ. ಅವರ ಕತೆಗಳಲ್ಲಿನ ಪಾತ್ರಗಳ ರಂಜನೆ ಅತಿಶಯೋಕ್ತಿ ಎನಿಸುವುದಿಲ್ಲ; ಕಥಾನಿರೂಪಣೆ ಪಾದರಸದಷ್ಟೇ ಚುರುಕು. ಆಯಾ ಕತೆಗಳ ಹಿನ್ನೆಲೆ, ಕತೆ ಘಟಿಸುವ ಸ್ಥಳಗಳನ್ನು ಅಷ್ಟೇ ಸುಂದರವಾಗಿ ಅವರ ನಿರೂಪಣೆಯಲ್ಲಿ ಚಿತ್ರಿಸುತ್ತಾರೆ. ಕೆಲವೊಮ್ಮೆ ನಾವು ಕಂಡ ಜಗತ್ತೇ ನಲ್ಲತಂಬಿ ಅವರ ಕಕ್ಷೆಯಲ್ಲಿ ಕೌತುಕ ಹುಟ್ಟಿಸಿ ಹೊಸ ವೇಷ ತೊಟ್ಟು ನಮಗೆ ಗೋಚರವಾಗುತ್ತದೆ. ಅವರ ಕ್ಯಾಮೆರಾ ಕಣ್ಣುಗಳು ಅಷ್ಟು ಸೃಜನಶೀಲ ಮತ್ತು ಸುಂದರ! ಪ್ರಸ್ತುತ ಲೋಕರೂಢಿ ವ್ಯಾಪಾರ ಸಂಬಂಧ ಗಳಲ್ಲಿನ ಅನೇಕ ಸೂಕ್ಷ್ಮ ವಿಚಾರಗಳು ಈ ಸಂಕಲನದ ಕಥಾವಸ್ತುಗಳಾಗಿವೆ ಅದನ್ನು ಸಮಕಾಲೀನತೆಯ ಏಕಾವಳಿ ಎಂದು ಬಣ್ಣಿಸಬಹುದು. ಕೆ.ನಲ್ಲತಂಬಿ ಅವರು ಕನ್ನಡ ಮತ್ತು ತಮಿಳು ಈ ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಬರೆಯುವ ನಿಷ್ಣಾತರು. ಅನುವಾದ ಅವರ ಬರವಣಿಗೆಯ ಭಾಗವಾಗಿದ್ದರೂ ಅವರ ಕತೆ, ಕವಿತೆಗಳು ಕಾರ್ಮಿಂಚಿನಂತೆ ಆಗಾಗ ಓದುಗರನ್ನು ಬೆರಗುಗೊಳಿಸುತ್ತಲೇ ಇರುತ್ತವೆ. ಅದೇ ಅವರ ಗೈರತ್ತು. ಈ ಸಂಕಲನದ ಎಲ್ಲ ಕತೆಗಳು ಉಭಯ ಭಾಷೆಗಳಲ್ಲಿ ಅವರಿಂದ ರಚನೆಯಾಗಿ, ಈ ರಾಜ್ಯಗಳ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಈಗಾಗಲೇ ಅವರ ಕರ್ತೃತ್ವದ ಹಿರಿಮೆ, ಅನುವಾದದ ಚಿಲುಮೆ ಎರಡು ರಾಜ್ಯಗಳಲ್ಲಿ ಪಸರಿಸಿದೆ. ಅವರ ಕತೆಗಳ ಪಾತ್ರ ವೈಶಿಷ್ಟ್ಯತೆಯು ದಕ್ಷಿಣ ಭಾರತದ ಹಲವು ಸಂಸ್ಕೃತಿಗಳ ಸಮ್ಮಿಲನದಂತೆ ಕಾಣುತ್ತದೆ; ಸಂಕಲನದ ಅಂತಃಸತ್ವವು ಓದುಗನ ಮನಸ್ಸನ್ನು ಪ್ರಫುಲ್ಲಗೊಳಿಸುವುದರಲ್ಲಿ ಉತ್ಪ್ರೇಪೆಕ್ಷೆಯಿಲ್ಲ.” ಎಂದಿದ್ದಾರೆ ಶ್ರೀಧರ ಬನವಾಸಿ.

ನಲ್ಲತಂಬಿಯವರ ಕಥೆಗಳತ್ತ ಗಮನಿಸಿದರೆ ಅವುಗಳ ಕಥಾ ವಸ್ತು ಓದುಗರನ್ನು ಬಹಳವಾಗಿ ಹಿಡಿದಿಡುತ್ತದೆ. ಉದಾಹರಣೆಗೆ ಈ ಸಾಲುಗಳನ್ನು ಗಮನಿಸಿ - “ಆಕಾಶ ಮುಟ್ಟಲು ಹವಣಿಸುತ್ತಿರುವ ಮರಗಳ ನಡುವೆ ನಡೆಯುತ್ತಿದ್ದೆವು. ಮರದ ಸಾಂದ್ರತೆಯನ್ನು ಸೀಳಿಕೊಂಡು ಬಂದ ಕಿರಣಗಳು ತಂಪಾದ ಕಾಡನ್ನು ಬೆಚ್ಚಗಾಗಿಸಿತ್ತು. ಅವಳು ತನ್ನ ಕೈಬೆರಳುಗಳನ್ನು ನನ್ನ ಬೆರಳುಗಳೊಂದಿಗೆ ಪೋಣಿಸಿದಾಗ ಬಿಗಿಯಾಗಿ ಹಿಡಿದುಕೊಳ್ಳುವ ಧೈರ್ಯವಾಗಲಿ, ಸಡಿಲಗೊಳಿಸಿ ಬಿಡಿಸಿಕೊಳ್ಳುವ ಮನಸ್ಸಾಗಲಿ ಆಗಲಿಲ್ಲ. ಅವಳು ಬಿಗಿಯಾಗಿ ಹಿಡಿದಾಗ ಮಂಜಿನ ಗೆಡ್ಡೆಯೊಂದು ಬೆಂಕಿಗೆ ಬಿದ್ದ ಹಾಗಿತ್ತು.

ನಿನ್ನೆಯಷ್ಟೇ ಪರಿಚಯವಾದವಳು, ಬಹಳ ವರ್ಷಗಳ ಸಲಿಗೆ ಎಂಬಂತೆ ನನ್ನ ತೋಳನ್ನು ಬಳಸಿ ಹಿಡಿದುಕೊಂಡು ಈ ದಟ್ಟವಾದ ಕಾಡಿನೊಳಗೆ ಹಕ್ಕಿಗಳ ಚಿಲಿಪಿಲಿಯ ಕೇಳುತ್ತ ನಡೆಯುತ್ತಿದ್ದಳು.

ನಿನ್ನೆ ರಾತ್ರಿ ರೆಸಾರ್ಟಿನ ಬಾರಿನಲ್ಲಿ ನನ್ನ ಮೇಜಿನ ಎದುರು ಬಂದು ನಿಂತು ನಾನು ಅವಳ ನೀಲಿ ಕಣ್ಣು, ನೀಳ ಮೂಗು, ರೇಶಿಮೆ ಎಳೆಯಂತಹ ಬಂಗಾರದ ಕೂದಲು, ಕೆಂಪು ತುಟಿಯನ್ನು ನೋಡುತ್ತಿದ್ದೆ. Excuse Me ಎಂದು ನನ್ನ ಅನುಮತಿ ಇಲ್ಲದೆ ನನ್ನ ಬಾಯಿಂದ ಹೊರಟ ಮಾತಿಗೆ, yes ಎಂದ ಅವಳ ಕಾನ್ಫಿಡೆನ್ಸಿಗೆ ದಂಗಾಗಿ ಮೌನವಾಗಿದ್ದೆ. ಕೈಯಲ್ಲಿದ್ದ ವೈನ್ ಗ್ಲಾಸನ್ನು ತುಟಿಗೊತ್ತಿ ಮುಗುಳ್ನಕ್ಕಳು. ತುಟಿ ಮತ್ತಷ್ಟು ರಸ ತುಂಬಿಕೊಂಡು ರಂಗೇರಿತು.

ಹಾರುತ್ತಿದ್ದ ಚಿಟ್ಟೆಗಳನ್ನು ಹಿಡಿಯಲು ಅವಳು ಓಡಿದಾಗ, ಅವಳ ಕಾಲು ಮಗುವಾಯಿತು. ಅವಳು ಅಟ್ಟಿಸಿದಷ್ಟೂ ಅವು ಹಾರುತ್ತಿದ್ದವು. ಆಗ ಒಂದು ಜೆನ್ ಕಥೆಯ ನೆನಪಾಗಿ, ‘ಅಟ್ಟಿಸಿಕೊಂಡು ಹೋಗಬೇಡ, ಈ ಕಲ್ಲಿನ ಮೇಲೆ ಕಣ್ಣು ಮುಚ್ಚಿಕೊಂಡು ಕುಳಿತುಕೋ ಅದು ನಿನ್ನ ಬಳಿ ಬರುತ್ತದೆ’ ಎಂದೇ. ಎಂದು ಅಲ್ಲೇ ಇದ್ದ ಸಣ್ಣ ಬಂಡೆಯ ಮೇಲೆ ಹೋಗಿ ಕಣ್ಣು ಮುಚ್ಚಿ ಕುಳಿತಳು. ಐವತ್ತು ನಿಮಿಷಗಳಾದವು. ನಾನು ನೋಡುತ್ತಿರುವಾಗಲೇ ಒಂದು ಚಿಟ್ಟೆ ಅವಳ ಬಳಿ ಹೋಗಿ ನಿಧಾನವಾಗಿ ಒಂದು ಸುತ್ತು ಸುತ್ತಿ, ಅವಳ ಕೈ ಮೇಲೆ ಕುಳಿತಿತು. ಅದರ ಮೃದು ಸ್ಪರ್ಶವನ್ನು ಅವಳ ನುಣ್ಣನೆಯ ಚರ್ಮ ಅವಳಿಗೆ ಹೇಳಿರಬೇಕು, ಮೆಲ್ಲಗೆ ಕಣ್ಣು ತೆರೆದು ಓರೆಗಣ್ಣಲ್ಲಿ ಚಿಟ್ಟೆಯನ್ನು ನೋಡಿದಳು. ಅವಳ ಕಣ್ಣಂತೆ ಆ ಚಿಟ್ಟೆ ನೀಲಿ. ಅಂಚಿನ ಸುತ್ತ ಇದ್ದ ಕಪ್ಪು ಗೆರೆಗಳು ಅವಳ ರೆಪ್ಪೆಯಂತೆ ಕಂಡವು. ಓರೆಗಣ್ಣಲ್ಲಿ ಚಿಟ್ಟೆಯನ್ನು ನೋಡುತ್ತ, ಮುಗುಳ್ನಗುತ್ತ ಕದಲದೆ ಕುಳಿತಿದ್ದಳು. ಚಿಟ್ಟೆ ಸ್ವಲ್ಪ ಸಮಯ ಕುಳಿತಿದ್ದು ಮೆಲ್ಲಗೆ ಎದ್ದು ಹಾರಿ ಹೋಯಿತು. ಅವಳು ವಾವ್...... ಎನ್ನುತ್ತ ಎದ್ದು ಓಡಿಬಂದು ನನ್ನನ್ನು ಬಿಗಿಯಾಗಿ ಅಪ್ಪಿಕೊಂಡಳು. ‘ಹೀಗೊಂದು ಜೆನ್ ಕಥೆ ಇರುವುದು ನನಗೆ ಗೊತ್ತೇ ಇಲ್ಲ’ ಎಂದಳು. ನಾನೋ ಕಾಡಿನ ಅಪ್ಪುಗೆಯಲ್ಲಿ ಕಳೆದುಹೋಗಿದ್ದೆ.

ಸಿಂಗಪುರದ ಸೀಮೆ ಬಡಾವಣೆಯಿಂದ ವುಡ್ಲೇಂಡ್ಸ್ ಬಡಾವಣೆಯಲ್ಲಿರುವ ರೈಲು ನಿಲ್ಧಾಣವನ್ನು ಕಾರಿನಲ್ಲಿ ತಲುಪಲು ಸಂಜೆಯ ‘ರಶ್ ಅವರಿ’ನಲ್ಲಿ ಸುಮಾರು ಗಂಟೆಗಳೇ ಬೇಕು. ಸಂಜೆ ಏಳು ಗಂಟೆಗೆ ಮಲೇಶಿಯಾದ ಜೆರಾಂತುತ್ ಎಂಬ ಚಿಕ್ಕ ಊರನ್ನು ಹಾದು ಹೋಗುವ ರೈಲನ್ನು ಹಿಡಿಯಲು ಹೊರಟಿದ್ದೆ. ವುಡ್ಲೇಂಡ್ಸ್ ರೈಲು ನಿಲ್ದಾಣವನ್ನು ಬಂದು ತಲುಪಿದಾಗ ರೈಲು ಹೊರಡಲು ಹತ್ತು ನಿಮಿಷಗಳು ಮಾತ್ರ ಉಳಿದಿತ್ತು. ಸಿಂಗಪುರದ ಎಮಿಗ್ರೇಷನ್ ಮತ್ತು ಮಲೇಶಿಯಾದ ಇಮಿಗ್ರೇಷನ್ ತಪಾಸಣೆಗಳನ್ನು ಮುಗಿಸಿ, ಏದುಸಿರುಬಿಡುತ್ತಾ, ಸೂಟ್ಕೇಸನ್ನು ಎಳೆದುಕೊಂಡು ಓಡುತ್ತಾ ಗಡಿಬಿಡಿಯಲ್ಲಿ ನನ್ನ ಕಂಪಾಟ್ಮೆಂಟನ್ನು ಹುಡುಕಿ ಹತ್ತುವುದಕ್ಕೂ, ರೈಲು ಹೊರಡುವುದಕ್ಕೂ ಸರಿಯಾಗಿತ್ತು. ತಡವಾಗಿದ್ದರೆ....ಆ ಆತಂಕದಲ್ಲೇ ಬೆವರನ್ನು ಒರಸಿಕೊಳ್ಳುತ್ತ, ಬಾಟಲಿ ತೆಗೆದು ನೀರು ಕುಡಿದೆ.

ಏಳು ಗಂಟೆಗಳ ಪ್ರಯಾಣದ ನಂತರ ಬೆಳಗಿನ ಜಾವ 2:15ಕ್ಕೆ ಜೆರಾಂತುತ್ ತಲುಪಿ, ಮತ್ತೆ ಎರಡೇ ನಿಮಿಷದಲ್ಲಿ ರೈಲು ಮುಂದೆ ಹೊರಡುತ್ತದೆ. ಬೇಯಿಸಿದ ತರಕಾರಿಗೆ ಸ್ವಲ್ಪ ಉಪ್ಪು, ಮೆಣಸು, ಟಮೇಟೋ ಕೆಚ್ಚಪ್ ಬೆರಸಿ ಚಪಾತಿಯಲ್ಲಿ ಸುರುಳಿ ಸುತ್ತಿ ತಂದಿದ್ದನ್ನು ಬಿಯರ್ ಕ್ಯಾನ್ ಜತೆ ಸವಿಯುತ್ತ ಹಸಿವಾರಿಸಿಕೊಂಡೆ. ತಮನ್ ನೆಗಾರದ ರೈನ್ ಫಾರೆಸ್ಟ್ಗೆ ರಜೆ ಕಳೆಯಲು ಮೂರು ದಿನಗಳು ಬಂದಿದ್ದೆ. ಎಷ್ಟು ವರ್ಷಗಳ ಕನಸು ಈಗ ಈಡೇರುತ್ತಿದೆ. ಅಲ್ಲಿಯ ದಟ್ಟ ಕಾಡುಗಳು, ತೆಂಬೆಲಿಂಗ್ ನದಿಯ ಮೇಲೆ ಜೆಟ್ಟಿ ಬೋಟಿನಲ್ಲಿ ಪ್ರಯಾಣ, ಇವೆಲ್ಲ ನಿಜವಾಗಲಿದೆ. ಕನಸುಗಳಿಗೆ ಬಹಳ ಶಕ್ತಿ ಇರುತ್ತದಂತೆ, ತೀವ್ರವಾಗಿ ಬಯಸಿದರೆ ಅದನ್ನು ದೊರಕಿಸಿಕೊಡಲು ನಮಗೆ ನೆರವಾಗಿಯೇ ಕೆಲಸಮಾಡುತ್ತದಂತೆ. ಮೊಬೈಲ್ ಫೋನಿನಲ್ಲಿ ಬೆಳಗಿನ ಜಾವ 1:45ಕ್ಕೆ ಆಲಾರಂ ಇಟ್ಟು ಮಲಗಿದೆ. ಏಸಿ ಕೋಚ್, ಮೆತ್ತನೆಯ ಫೋಮ್ ಹಾಸಿಗೆ, ಹೊದೆಯಲು ಕಂಬಳಿ, ಮಂದ ಬೆಳಕು. ತೊಟ್ಟಿಲು ತೂಗಿದಂತೆ ರೈಲಿನ ಓಟ, ಲಾಲಿಯಂತೆ ರೈಲಿನ ಡಗಡಗ ಡಗ, ಕೂ.... ಯಾವಾಗ ಕಣ್ಣು ಸೆಳೆಯಿತೋ ತಿಳಿಯಲಿಲ್ಲ.” ಮುಂದಿನದ್ದನ್ನು ನೀವು ಕಥಾ ಸಂಕಲನದಲ್ಲೇ ಓದಬೇಕು.