ಅತ್ಯಂತ ಶಾಂತಿಯುತ " ಪ್ರೀತ್ಯಾಗ್ರಹ "

ಅತ್ಯಂತ ಶಾಂತಿಯುತ " ಪ್ರೀತ್ಯಾಗ್ರಹ "

ಮಾನವೀಯ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜದ ನಿರ್ಮಾಣಕ್ಕಾಗಿ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇಂದು ಮತ್ತೊಂದು ಜಾಗೃತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಅತ್ಯಂತ ಶಾಂತಿಯುತ " ಪ್ರೀತ್ಯಾಗ್ರಹ " ಇದು. ಮಾಧ್ಯಮಗಳ ಸಂಯಮಕ್ಕಾಗಿ ಮತ್ತು ವಿವೇಚನಾ ಶಕ್ತಿಯ ವಿಶಾಲತೆಗಾಗಿ ಪ್ರೀತಿಯ ಮನಸ್ಸುಗಳ " ಆತ್ಮಾವಲೋಕನ ಸತ್ಯಾಗ್ರಹ " ದ ಅಂಗವಾಗಿ ದಿನಾಂಕ 11/05/2022  ಹಮ್ಮಿಕೊಂಡಿರುವ ಕಾರ್ಯಕ್ರಮದ ಅಂಗವಾಗಿ ಮಾಧ್ಯಮಗಳಿಗೆ ಸಲ್ಲಿಸುತ್ತಿರುವ ಒಂದು  ಮನವಿ...ನಿಮ್ಮ ಗಮನಕ್ಕಾಗಿ....

***

ಪ್ರೀತಿಯ ಮಾಧ್ಯಮ ಮಿತ್ರರೇ,

ಭಾರತ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ ಸಂವಿಧಾನಾತ್ಮಕ ಮಾಧ್ಯಮ ಸ್ವಾತಂತ್ರ್ಯವನ್ನು ಗೌರವಿಸುತ್ತಾ, ನಿಮ್ಮಲ್ಲಿ ನಮ್ಮದೊಂದು ಪ್ರೀತಿ ಪೂರ್ವಕ ಕಳಕಳಿಯ ಮನವಿ.

ಆಧುನಿಕ ತಂತ್ರಜ್ಞಾನದ ಸಹಾಯದಿಂದ ಟೆಲಿವಿಷನ್ ಸುದ್ದಿ ಮಾಧ್ಯಮಗಳು ಇಂದು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದಿವೆ. ಅದಕ್ಕೆ ಅಭಿನಂದನೆಗಳು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದೇ ಮಾಧ್ಯಮಗಳು ಒಟ್ಟು ಸುದ್ದಿ ಪ್ರಸಾರದ ಗುಣಮಟ್ಟದಲ್ಲಿ ಅತಿರೇಕದ ವರ್ತನೆ ಪ್ರದರ್ಶಿಸುತ್ತಿವೆ ಎಂಬ ಭಾವನೆ ಜನ ಸಾಮಾನ್ಯರಲ್ಲಿ ಮೂಡುತ್ತಿದೆ. ಇದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ದಯವಿಟ್ಟು ಇದರ ಬಗ್ಗೆ ಒಂದು ಸಮಗ್ರ ಆತ್ಮಾವಲೋಕನ ಮಾಡಿಕೊಳ್ಳಬೇಕೆಂಬುದು ನಮ್ಮ ಮನವಿ.

ಅತ್ಯಂತ ಗಹನವಾದ ಮತ್ತು ಮಹತ್ತರವಾದ ಸಾರ್ವಜನಿಕ ಅಭಿಪ್ರಾಯ ರೂಪಿಸುವ ವಿಷಯಗಳಲ್ಲಿ ನೀವು ಏರ್ಪಡಿಸುವ ಚರ್ಚೆಗಳ ಗುಣಮಟ್ಟ ದಿನದಿಂದ ದಿನಕ್ಕೆ ತೀರಾ ಕೆಳಹಂತಕ್ಕೆ ಇಳಿಯುತ್ತಿದೆ. ಕೂಗಾಟ ಹಾರಾಟ ಚೀರಾಟ ವಕೀಲಿಕೆ ವಾದ ವಿವಾದ ತಾಳ್ಮೆಗೆಟ್ಟ ಜೋರು ಧ್ವನಿ ಸುಳ್ಳು ಮಾಹಿತಿಗಳ ಸಮರ್ಥನೆ  ವಿಜೃಂಭಿಸಿ ಜನರ ಯೋಚನಾ ಶಕ್ತಿಯೇ ಮಲಿನವಾಗುತ್ತಿರುವ ಮನಸ್ಥಿತಿ ನಮ್ಮ ಗಮನಕ್ಕೆ ಬಂದಿದೆ. ಚರ್ಚೆಗಳೆಂದರೆ ವಾಗ್ಯುದ್ದಗಳು ಎಂಬ ತಪ್ಪು ಅಭಿಪ್ರಾಯ ಮೂಡುತ್ತಿದೆ. ಇದರಲ್ಲಿ ಭಾಗವಹಿಸುವ ವಿಷಯ ತಜ್ಞರ ಗುಣಮಟ್ಟ ಸಹ ಸಮಾಧಾನಕರವಾಗಿಲ್ಲ. ದಯವಿಟ್ಟು ಈ ಬಗ್ಗೆ ಗಂಭೀರ ಆತ್ಮಾವಲೋಕನಕ್ಕೆ ನಮ್ಮ ಮನವಿ.

ವೇಗ ಮತ್ತು ಸ್ಪರ್ಧೆಗೆ ಮಹತ್ವ ನೀಡುವ ಭರದಲ್ಲಿ ಸುದ್ದಿಯ ನಿಖರತೆ ಮತ್ತು ವಾಸ್ತವತೆಗೆ ಧಕ್ಕೆಯಾಗುತ್ತಿರುವ ಸಾಧ್ಯತೆ ಕಾಣುತ್ತಿದೆ. ಅನೇಕ ರಾಜಕಾರಣಿಗಳು ಮತ್ತು ಸಮಾಜದ ಜನಪ್ರಿಯ ವ್ಯಕ್ತಿಗಳು ಇದನ್ನು ಮನಗಂಡು ಮಾಧ್ಯಮಗಳನ್ನೇ ದಿಕ್ಕು ತಪ್ಪಿಸಿ ತಮ್ಮ ಲಾಭಕ್ಕಾಗಿ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಾಕಷ್ಟು ಒಳಮರ್ಮ ನಮ್ಮ ಗಮನಕ್ಕೆ ಬಂದಿದೆ. ಒಮ್ಮೆ ಮಾಧ್ಯಮಗಳ ನಂಬಿಕೆಯ ಮೇಲೆ ಅನುಮಾನ ಪ್ರಾರಂಭವಾದರೆ ಅದು ಅವಸಾನದ ಮೊದಲ ಸೂಚನೆ. ದಯವಿಟ್ಟು ಇದನ್ನು ನಿರ್ಲಕ್ಷಿಸದೆ ಒಮ್ಮೆ ದೀರ್ಘವಾಗಿ ಪರಾಮರ್ಶಿಸಬೇಕಾಗಿ ವಿನಂತಿ.

ವೈಚಾರಿಕತೆಗೆ ಬದಲಾಗಿ ಮೌಢ್ಯಕ್ಕೆ, ತಾಳ್ಮೆಗೆ ಬದಲಾಗಿ ಆಕ್ರೋಶಕ್ಕೆ, ಪ್ರೀತಿಗೆ ಬದಲಾಗಿ ದ್ವೇಷಕ್ಕೆ, ತ್ಯಾಗಿಗಳಿಗೆ ಬದಲಾಗಿ ಸ್ವಾರ್ಥಿಗಳಿಗೆ, ಶಾಂತಿಗೆ ಬದಲಾಗಿ ಅಶಾಂತಿಗೆ, ವಿವೇಚನೆಗೆ ಬದಲಾಗಿ ತತ್ತಕ್ಷಣದ ಗ್ರಹಿಕೆಗೆ, ಒಳ್ಳೆಯದರ ಬದಲು ವಿಕೃತ ಸುದ್ದಿಗಳಿಗೆ ಹೆಚ್ಚು ಮಹತ್ವ ಮತ್ತು ಆದ್ಯತೆ ಕಲ್ಪಿಸುತ್ತಿರುವ ಭಾವನೆ ನಮ್ಮಲ್ಲಿ ಮೂಡುತ್ತಿದೆ. " ರವಿ ಕಾಣದ್ದನ್ನ ಕವಿ ಕಂಡ. ಕವಿ ಕಾಣದ್ದನ್ನ ಪತ್ರಕರ್ತ ಕಂಡ " ಎಂಬ ಅತ್ಯಂತ ಸೂಕ್ಷ್ಮ ಸಂವೇದನೆಯ ಪತ್ರಿಕಾ ಆಶಯಕ್ಕೆ ಇದು ಸಂಪೂರ್ಣ ವಿರೋಧದ ನಿಲುವು. ಮಾಧ್ಯಮ ಲೋಕದ ಸ್ಪರ್ಧೆ ಎಷ್ಟೇ ತೀವ್ರವಾಗಿದ್ದರೂ ಈ ಸಮಾಜ ಮತ್ತು ಸಂವಿಧಾನ ವಿರೋಧಿ ನಿಲುವುಗಳು ಭವಿಷ್ಯದಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಪಟ್ಟ ಭದ್ರ ಹಿತಾಸಕ್ತಿಗಳು ದಾಳವಾಗಿ ಉಪಯೋಗಿಸಿಕೊಳ್ಳಬಹುದು. ದಯವಿಟ್ಟು ಎಚ್ಚರಿಕೆ ವಹಿಸಬೇಕೆಂದು ಒಂದು ಸವಿನಯ ಪ್ರಾರ್ಥನೆ.

ಮಾನವೀಯ ಮೌಲ್ಯಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸಬೇಕಾದ ಬಹುದೊಡ್ಡ ಜವಾಬ್ದಾರಿ ಶಿಕ್ಷಣದ ನಂತರ ಮಾಧ್ಯಮ ಕ್ಷೇತ್ರಕ್ಕೆ ಇದೆ. ಆದರೆ ಅದರಲ್ಲಿ ‌ಟೆಲಿವಿಷನ್ ಸುದ್ದಿ ಮಾಧ್ಯಮಗಳು ಸಂಪೂರ್ಣ ವಿಫಲವಾಗಿವೆ ಮತ್ತು ವಿರುದ್ಧ ಮೌಲ್ಯಗಳಿಗೆ ಹೆಚ್ಚಿನ ಮಾನ್ಯತೆ ಕೊಡುತ್ತಿವೆ ಎಂಬ ಗಂಭೀರ ಆರೋಪ ನಮ್ಮೆಲ್ಲರದಾಗಿದೆ. ಇದನ್ನು ದಯವಿಟ್ಟು ಸಾವಕಾಶವಾಗಿ ಪರಿಶೀಲಿಸಿ. ಮೌಲ್ಯಗಳ ನಾಶಕ್ಕೆ ಮಾಧ್ಯಮಗಳೂ ಕಾರಣ ಎಂದು ಮುಂದಿನ ಜನಾಂಗ ಶಪಿಸದಿರಲಿ ಎಂಬ ಕಾಳಜಿಯಿಂದ ಈ ಮನವಿ.

ಬಹುತೇಕ ಎಲ್ಲಾ ಕ್ಷೇತ್ರಗಳು ಕಲ್ಮಶವಾಗುತ್ತಿರುವ - ಎಲ್ಲಾ ಕ್ಷೇತ್ರಗಳು ವ್ಯಾಪಾರಿಕರಣವಾಗುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ಜನರ ಆಶಾಕಿರಣ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಮಾಧ್ಯಮ ರಂಗ. ಇದನ್ನು ಸಮಾಜದ ಕಾವಲುಗಾರ ಎಂದೇ ಕರೆಯಲಾಗುತ್ತದೆ. ಕಾವಲುಗಾರರೇ ಎಚ್ಚರ ತಪ್ಪಿದರೆ ಅಥವಾ ಕಾವಲುಗಾರರೇ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡರೆ ಅಥವಾ ಕಾವಲುಗಾರರೇ ತಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿಗಾಗಿ ಮೂಲ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಇಡೀ ಸಮಾಜ ಅಧೋಗತಿಯತ್ತ ಸಾಗುವುದು ನಿಶ್ಚಿತ. ಈಗ ಆ ಪ್ರಕ್ರಿಯೆ ಪ್ರಾರಂಭವಾಗಿದೆ ಎಂಬ ಭಯ ನಮ್ಮನ್ನು ಕಾಡಲಾರಂಭಿಸಿದೆ. ಅದಕ್ಕಾಗಿಯೇ ಸಾಮಾನ್ಯ ನಾಗರಿಕರಾದ ನಾವು ಅತ್ಯಂತ ವಿನಯದಿಂದ ಈ ಪ್ರೀತ್ಯಾಗ್ರಹ ಮನವಿ ಮಾಡಲು ನಿಮ್ಮ ಬಾಗಿಲ ಬಳಿ ನಿಂತಿದ್ದೇವೆ. ದಯವಿಟ್ಟು ನಿರ್ಲಕ್ಷಿಸದೆ ಒಮ್ಮೆ ಮತ್ತೊಮ್ಮೆ ಮಗದೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂಬ ಸವಿನಯ ಪ್ರಾರ್ಥನೆ.

ಮಾಧ್ಯಮಗಳು ಮಾಹಿತಿಯ ಕಣಜಗಳು, ಮಾಧ್ಯಮಗಳು ಶೈಕ್ಷಣಿಕ ಕೇಂದ್ರಗಳು, ಮಾಧ್ಯಮಗಳು ಜ್ಞಾನ ವಿಕಾಸದ ಸಾಧನಗಳು, ಮಾಧ್ಯಮಗಳು ಸಂಸ್ಕೃತಿಯ ವಾಹಕಗಳು, ಮಾಧ್ಯಮಗಳು ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳು, ಮಾಧ್ಯಮಗಳು ಶೋಷಿತರ ಧ್ವನಿ ತರಂಗಗಳು. ಮಾಧ್ಯಮ ಮಿತ್ರರೇ ದಯವಿಟ್ಟು ಸಾಮಾನ್ಯ ಜನರಾದ ನಮ್ಮ ಮನವಿಯನ್ನು ನಿರ್ಲಕ್ಷಿಸದೆ ಒಮ್ಮೆ ಪರಿಶೀಲಿಸಿ ಆತ್ಮಾವಲೋಕನ ಮಾಡಿಕೊಳ್ಳಿ.

ಹೌದು, ಇದು ಯಾರೋ ಒಬ್ಬರಿಂದ ಅಥವಾ ಒಂದು ವಾಹಿನಿಯಿಂದ ಸಾಧ್ಯವಿಲ್ಲ. ಕನಿಷ್ಠ ಕರ್ನಾಟಕದ ಎಲ್ಲಾ ಪ್ರಮುಖ ಟೆಲಿವಿಷನ್ ಸುದ್ದಿ ಮಾಧ್ಯಮಗಳ ಮುಖ್ಯಸ್ಥರು, ಸಂಪಾದಕರು, ವರದಿಗಾರರು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲರೂ ಒಟ್ಟಾಗಿ ಒಂದು ಸಭೆ ಸೇರಿಸಿ ವೇಗ ಮತ್ತು ಸ್ಪರ್ಧೆಯ ನಡುವೆಯೂ ಮಾಧ್ಯಮ ಸಂಯಮಕ್ಕಾಗಿ ಪಾಲಿಸಬೇಕಾದ ಕೆಲವು ಅಂಶಗಳನ್ನು ಗುರುತಿಸಿ ಅನುಷ್ಠಾನಕ್ಕೆ ಪ್ರಯತ್ನಗಳು ನಡೆಯಲಿ. ಮಾಧ್ಯಮದ ಪಾವಿತ್ರ್ಯತೆ ಮುಂದೆಯೂ ಉಳಿಯಲಿ ಎಂಬ ಸದಾಶಯ ನಮ್ಮದು. ದಯವಿಟ್ಟು ಅನ್ಯಥಾ ಭಾವಿಸದೆ ಈ ಬಗ್ಗೆ ಗಮನಹರಿಸಬೇಕೆಂದು ನಮ್ಮ ಮನವಿ.

ಸಾಂಕೇತಿಕವಾಗಿ ಒಂದು ದಿನದ ಈ ಕಾರ್ಯಕ್ರಮದ ವಿವರ ಹೀಗಿದೆ...

ದಿನಾಂಕ ‌11/05/2022 - ಬುಧವಾರ.

ಸ್ಥಳ        : ಪಬ್ಲಿಕ್ ಟಿವಿ. ಸಮಯ : ಬೆಳಗ್ಗೆ 9/30 ರಿಂದ 11  ಗಂಟೆ

ಸ್ಥಳ ‌‌‌‌‌       : ಸುವರ್ಣ ಟಿವಿ. ಸಮಯ : ಬೆಳಗ್ಗೆ 11/30 ರಿಂದ 1 ಗಂಟೆ

ಸ್ಥಳ          : ಬಿಟಿವಿ. ಸಮಯ.  : ಮಧ್ಯಾಹ್ನ  2  ರಿಂದ 3/30 ಗಂಟೆ

ಸ್ಥಳ          : ಟಿವಿ 9 ಸಮಯ.   : ಸಂಜೆ  4  ರಿಂದ 5/30 ಗಂಟೆ

ದಿಕ್ಕಾರವಿರುವುದಿಲ್ಲ - ಪ್ರತಿಭಟನೆ ಇರುವುದಿಲ್ಲ - ಆಕ್ರೋಶವಿರುವುದಿಲ್ಲ - ಕೂಗಾಟ ಇರುವುದಿಲ್ಲ. ಕೇವಲ ಪ್ರೀತಿಯ ಮತ್ತು ವಿನಯ ಪೂರ್ವಕ ಸತ್ಯಾಗ್ರಹ ಮಾತ್ರ. ಸತ್ಯಾಗ್ರಹದ ಸಮಯದಲ್ಲಿ ಮಾಧ್ಯಮ ಲೋಕದಿಂದ ನಮ್ಮ ನಿರೀಕ್ಷೆಯ ಭಿತ್ತಿಚಿತ್ರಗಳ ಪ್ರದರ್ಶನ ಮಾಡಲಾಗುವುದು. ಇದು ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ನಮ್ಮ ಸ್ಪಂದನೆ. ಮಾಧ್ಯಮದ ಅಪರಿಮಿತ ಸ್ವಾತಂತ್ರ್ಯವನ್ನು ಗೌರವಿಸುತ್ತಾ, ಪ್ರೋತ್ಸಾಹಿಸುತ್ತಾ… ಭವಿಷ್ಯದ ಉತ್ತಮ ಸಮಾಜಕ್ಕಾಗಿ ಇದು ನಮ್ಮ ನಿಮ್ಮ ಸಣ್ಣ ‌ಕೊಡುಗೆ.. ಇದನ್ನು ಮಾಧ್ಯಮ ಮಿತ್ರರಿಗೆ ನಿರಂತರವಾಗಿ ತಲುಪಿಸುವ ಪ್ರಯತ್ನ ಎಲ್ಲರೂ ಮಾಡೋಣ… ಪ್ರೀತಿಯ ಮನಸ್ಸುಗಳ ಪರವಾಗಿ.

ಎಂ. ಯುವರಾಜ್.+91 80508 02019

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ